ಜನರ ಜೀವ ಹಿಂಡಿ ಹಿಪ್ಪೆ ಮಾಡಿದ ಕೊರೋನಾಗೆ ಎಷ್ಟು ಮಂದಿ ಬಲಿಯಾಗಿದ್ದಾರೆ ಎಂಬ ಲೆಕ್ಕವನ್ನು ಬಿಬಿಎಂಪಿ ಸಿದ್ಧ ಮಾಡಿಕೊಂಡಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಈವರೆಗೆ ಸೇರಿದಂತೆ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಕೊರೋನಾ ಡೆತ್ ಆಡಿಟ್ ವರದಿಯನ್ನು ಪಾಲಿಕೆ ತಯಾರಿಸಿದೆ. ಅಲ್ಲದೆ ಈ ಸಾವುಗಳಿಗೆಲ್ಲಾ ಏನು ಪ್ರಮುಖ ಕಾರಣ ಎಂಬ ಟಿಪ್ಪಣಿಯನ್ನೂ ಉಲ್ಲೇಖಿಸಿದೆ.
ಬಿಬಿಎಂಪಿ ರೆಡಿ ಮಾಡಿದೆ ಕರೋನಾ ಡೆತ್ ಆಡಿಟ್ ವರದಿ.!!
ಕೊರೋನಾ ಎರಡನೇ ಡೋಸ್ ಪಡೆಯಲು ಜನರಿಂದ ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಕೊರೋನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಸಾವನ್ನಪ್ಪಿದ್ದವರ ಲೆಕ್ಕವನ್ನು ಪಾಲಿಕೆ ಸಿದ್ಧ ಮಾಡಿಕೊಂಡಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ ನಿಜಕ್ಕೂ ಹೌಹಾರಿಸುವಂತಿದೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಕೊರೋನಾ ಕಿತ್ತುಕೊಂಡಿದ್ದು 10 ಸಾವಿರಕ್ಕೂ ಅಧಿಕ ಜೀವಗಳನ್ನು ಎಂದರೆ ನಂಬಲೇ ಬೇಕು. ಅದರಲ್ಲೂ ಬೆಂಗಳೂರಿನಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟವರೇ ಹೆಚ್ಚಾಗಿ ಕೊರೋನಾಗೆ ಉಸಿರು ಚೆಲ್ಲಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ 16,307 ಮಂದಿಯನ್ನು ಬಲಿ ಪಡೆದ ಕೊರೋನಾ.!!
ಬಿಬಿಎಂಪಿ ನಡೆಸಿರುವ ಕೊರೋನಾ ಡೆತ್ ಆಡಿಟ್ ನಲ್ಲಿ ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊರೋನಾಗೆ 16,307 ಬಲಿಯಾಗಿದ್ದಾರೆ ಎಂದು ಗೊತ್ತಾಗಿದೆ. ಈ ಪೈಕಿ 4,480 ಮೊದಲ ಅಲೆಯಲ್ಲಿ ಹಾಗು 11,827 ಮಂದಿ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ 70 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿ ಕೋವಿಡ್ ಕಬಂಧಬಾಹುವಿಗೆ ಸಿಕ್ಕಿ ಉಸಿರು ಕಳೆದುಕೊಂಡಿದ್ದಾರೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಒಟ್ಟಾರೆ 5,453 ಮಂದಿ 70 ವರ್ಷ ಮೇಲ್ಪಟ್ಟವರು ಸಾವನ್ನಪ್ಪಿದ್ದಾರೆ. ಈ ಪೈಕಿ ಪರುಷರೇ ಹೆಚ್ಚು.
ಜನರ ನಿರ್ಲಕ್ಷ್ಯ.. ತಡವಾಗಿ ಚಿಕಿತ್ಸೆ.. ಕೊರೋನಾ ಕೇಕೆ.!!
ಇನ್ನು ಇಷ್ಟೊಂದು ಮಂದಿಯ ಕೊರೋನಾ ಸಾವಿಗೆ ಪ್ರಮುಖ ಕಾರಣವಾಗಿದ್ದು ಅವರ ನಿರ್ಲಕ್ಷ್ಯ ಮತ್ತು ಸೋಂಕಿನ ಗುಣ ಲಕ್ಷಣಗಳು ಕಾಣಿಸಿಕೊಂಡರೂ ಶೀಘ್ರವೇ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯದೇ ಇದ್ದಿದ್ದು ಎಂದು ಪಾಲಿಕೆ ಡೆತ್ ಆಡಿಟ್ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ವಾಸ್ತವದಲ್ಲಿ ಎರಡನೇ ಅಲೆಯ ಹೊತ್ತಿಗೆಲ್ಲಾ ಜನರು ಕೊರೋನಾವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಹೀಗಿದ್ರೂ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಸೂಕ್ತ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸಾಧ್ಯವಾಗದೇ ಇದ್ದಿದ್ದೇ ಇಷ್ಟೊಂದು ಸಾವಿಗೆ ಕಾರಣ ಎನ್ನಬಹುದು. ಆಕ್ಸಿಜನ್, ಬೆಡ್ ಹಾಗೂ ರೆಮಿಡಿಸ್ವಿರ್ ಔಷಧಿ ಸೂಕ್ತ ಸಮಯಕ್ಕೆ ಸಿಗದೆ ಇದ್ದಿದ್ದೇ ಇದಕ್ಕೆ ಸೂಕ್ತ ಉದಾಹರಣೆ. ಜನರ ನಿರ್ಲಕ್ಷ್ಯದ ಜೊತೆಗೆ ಸರ್ಕಾರ ಹಾಗೂ ಪಾಲಿಕೆ ಅಸಮರ್ಥತೆ ಕೂಡ ಈ ಸಾವಿಗೆ ಹೊಣೆಯಾಗಿದೆ.
ಒಟ್ಟಾರೆ ಕೊರೋನಾಗೆ ಈವರೆಗೆ 16,307 ಮಂದಿಗೆ ಬಲಿಯಾಗಿರುವುದಾಗಿ ಬಿಬಿಎಂಪಿ ವರದಿ ಸಿದ್ಧ ಮಾಡಿಕೊಂಡಿದೆ. ಅದರಲ್ಲೂ ಅದಕ್ಕೆ ಕೊಟ್ಟ ಕಾರಣದಲ್ಲಿ ಜನರೇ ಇದಕ್ಕೆ ಹೊಣೆ ಎಂದಿದೆ. ಆದರೆ ವಾಸ್ತವದಲ್ಲಿ ಜನರ ನಿರ್ಲಕ್ಷ್ಯದ ಜೊತೆಗೆ ಬಿಬಿಎಂಪಿಯ ಆಡಳಿತ ವೈಫಲ್ಯತೆಯೂ ಸಮನಾಗಿ ಕಾರಣವಾಗಿದೆ. ಸದ್ಯ ಸಾವಿನ ಪ್ರಮಾಣ ಕಡಿಮೆಯಾಗಿದೆ ನಿಜ. ಆದರೂ ಜನರ ನಿರ್ಲಕ್ಷ್ಯ ಮಾಡದೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆಯುವ ಅಗತ್ಯವಿದೆ. ಅಂದಹಾಗೆ, ಮೊದಲ ಮತ್ತು ಎರಡನೇ ಅಲೆಯ ಡೆತ್ ಆಡಿತ್ ವರದಿಯನ್ನು ಬಿಬಿಎಂಪಿ ಮುಂದಿನ ವಾರ ಬಿಡುಗಡೆ ಮಾಡಲಿದೆ.
– ಕರ್ಣ