ದೇಶದ ಶೇ.5ರಷ್ಟು ಜನರು ಮಾತ್ರ ಕಾರು ಬಳಸುತ್ತಿದ್ದು, ಶೇ.95ರಷ್ಟು ಜನರು ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ ಮಾಡುವುದಿಲ್ಲ ಎಂದು ಉತ್ತರ ಪ್ರದೇಶ ಸಚಿವ ಉಪೇಂದ್ರ ತಿವಾರಿ ಹೇಳಿದ್ದಾರೆ. ಪೆಟ್ರೋಲ್ ಮತ್ತು ಇಂಧನ ಬೆಲೆಗಳು ಸತತ ಎರಡನೇ ದಿನ ಏರಿಕೆಯಾಗಿ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿರುವ ಹೊತ್ತಲ್ಲಿಯೇ ಸಚಿವರು ಈ ರೀತಿ ಬೇಜವಾಬ್ದಾರಿ ಹೇಳಿಕೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಶ್ಚಿಮ ಉತ್ತರ ಪ್ರದೇಶದ ಜಲೌನ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಸಚಿವ ಉಪೇಂದ್ರ ತಿವಾರಿ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕುರಿತು ಕೇಳಲಾದ ಪ್ರಶ್ನೆಗೆ ತುಸು ಗರಂ ಆಗಿದ್ದರು, ಈ ದೇಶದಲ್ಲಿ ಕೇವಲ ಶೇ.5ರಷ್ಟು ಜನರು ಮಾತ್ರ ಕಾರು ಬಳಸುತ್ತಾರೆ. ಅವರಿಗೆ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಸಂಬಂಧಪಟ್ಟಿರುತ್ತದೆ. ಆದರೆ ಈ ದೇಶದ ಶೇ.95ರಷ್ಟು ಜನ ಸ್ವಂತ ವಾಹನ ಬಳಸದೇ ಇರುವುದರಿಂದ ಅವರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಸಂಬಂಧವೇ ಇರುವುದಿಲ್ಲ ಎಂದಿದ್ದಾರೆ.
ಅಲ್ಲದೆ, ೨೦೧೪ ರಲ್ಲಿದ್ದ ದೇಶದ ಜನರ ತಲಾ ಆದಾಯಕ್ಕೆ ಹೋಲಿಸಿದರೆ, ಮೋದಿಜಿ ಮತ್ತು ಯೋಗಿಜಿ ಸರ್ಕಾರಗಳು ರಚನೆಯಾದ ನಂತರ ತಲಾ ಆದಾಯವು ದ್ವಿಗುಣಗೊಂಡಿದೆ” ಎಂದು ಹೇಳಿದ್ದಾರೆ. ವಾಸ್ತವದಲ್ಲಿ ಇಂಧನ ದರ ಅಷ್ಟೇನು ಏರಿಕೆಯಾಗಿಲ್ಲ ಎಂದು ತಿಳಿಯುತ್ತದೆ ಎಂಬುವುದಾಗಿ ತಿವಾರಿ ಪ್ರತಿಪಾದಿಸಿದ್ದಾರೆ. ಹಾಗೆಯೇ ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್ ದರ ಗರಿಷ್ಠ ಪಟ್ಟ ತಲುಪಿದೆ ಎಂಬ ಬಾಲಿಶ ಹೇಳಿಕೆಯನ್ನು ವಿಪಕ್ಷಗಳು ಜನರ ಬಳಿ ಹಬ್ಬಿಸಬಾರದು ಎಂದು ತಿಳಿಸಿದ್ದಾರೆ.
ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ, ಕುಸಿಯುತ್ತಿರುವ ರೂಪಾಯಿ ಇಂಧನ ಬೆಲೆ ಹೆಚ್ಚಿಸಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ತೈಲ ಬೆಲೆಗಳು ಎಷ್ಟಿತ್ತು ಮತ್ತು ಆಗಿನ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಾವು ಗಮನಿಸಬೇಕು. ನಾವು ಕೊರೊನಾ ಮಹಾಮಾರಿ ಹಾವಳಿ ಸಮಯದಲ್ಲೂ ದೇಶದ ಜನರಿಗೆ ಉಚಿತವಾಗಿ ಲಸಿಕೆ ನೀಡಿದ್ದೇವೆ. ಇದು ಕಡಿಮೆ ಸಾಧನೆ ಏನಲ್ಲ. ಕೇವಲ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿದೆ ಎಂಧದು ಬೊಬ್ಬೆ ಹೊಡೆಯುವ ವಿಪಕ್ಷಗಳಿಗೆ ಕೇಂದ್ರ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರವನ್ನು ಟೀಕೆ ಮಾಡಲು ಬೇರೆ ವಿಷಯಗಳೇ ಇಲ್ಲ ಎಂದು ತಿವಾರಿ ವಾಗ್ದಾಳಿ ನಡೆಸಿದ್ದಾರೆ.
“ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಗೆ ಸಂಬಂಧಿಸಿದಂತೆ, ಈಗ ಬೆರಳೆಣಿಕೆಯಷ್ಟು ಜನರು ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತಾರೆ ಮತ್ತು ಪೆಟ್ರೋಲ್ ಅಗತ್ಯವಿದೆ. ಪ್ರಸ್ತುತ ಸಮಾಜದಲ್ಲಿ 95 ಪ್ರತಿಶತ ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ” ಎಂದು ತಿವಾರಿ ಹೇಳಿದರು. ಮೆಟ್ರೋ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 103.18 ತಲುಪಿದ್ದು ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 112.44 ಮತ್ತು ಡೀಸೆಲ್ ದರ 103.26 ರಷ್ಟಿದೆ. ಸಾಂಕ್ರಾಮಿಕದ ಆರ್ಥಿಕ ಪ್ರಭಾವದಿಂದ ಈಗಾಗಲೇ ತತ್ತರಿಸಿರುವ ಜನರ ಜೇಬು ಸುಡುವುದರ ಜೊತೆಗೆ, ಇಂಧನ ಬೆಲೆಗಳ ತೀವ್ರ ಏರಿಕೆಯು ಹೆಚ್ಚಿನ ಸಾರಿಗೆ ವೆಚ್ಚದಿಂದಾಗಿ ಸರಕುಗಳ ಬೆಲೆಯನ್ನು ಹೆಚ್ಚಿಸಿದೆ.
ಕೇಂದ್ರ ಸರ್ಕಾರವು ಸಂಗ್ರಹಿಸುವ ತೆರಿಗೆಗಳಿಂದ ಉಚಿತ ಲಸಿಕೆಗಳಿಗೆ ಹಣ ಬರುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ ಈ ತಿಂಗಳ ಆರಂಭದಲ್ಲಿ ಹೇಳಿದ್ದರು. ಇಂಧನ ಬೆಲೆಗಳು ಹೆಚ್ಚಿಲ್ಲ ಆದರೆ ವಿಧಿಸಿದ ತೆರಿಗೆಯನ್ನು ಒಳಗೊಂಡಿದೆ. ನೀವು ಉಚಿತ ಲಸಿಕೆ ತೆಗೆದುಕೊಂಡಿರಬೇಕು, ಹಣ ಎಲ್ಲಿಂದ ಬರುತ್ತದೆ? ನೀವು ಹಣವನ್ನು ಪಾವತಿಸಿಲ್ಲ, ಈ ರೀತಿ ಸಂಗ್ರಹಿಸಲಾಗಿದೆ ಮತ್ತು “ಸರ್ಕಾರವು 100 ಕೋಟಿಗೂ ಹೆಚ್ಚು ಜನರಿಗೆ ಉಚಿತ ಲಸಿಕೆಗಳನ್ನು ನೀಡಿದೆ. ಇದು ಉಚಿತ ಕೊವಿಡ್ ಚಿಕಿತ್ಸೆಯನ್ನು ನೀಡಿದೆ. ಮನೆಮನೆಗೆ ಔಷಧಗಳನ್ನು ವಿತರಿಸಲಾಗುತ್ತಿದೆ” ಎಂದು ಸಚಿವರು ಹೇಳಿದ್ದಾರೆ.
ಸಮಾಕಿಜಿಕ ಜಾಲತಾಣದಲ್ಲಿ ತಿವಾರಿ ಹೇಳಿಕೆಯನ್ನಿ ಟ್ವೀಟಿಗರು ಟೀಕಿಸಿದ್ದು, ಐಎಂಎಫ್ ನ ಗೀತಾ ಗೋಪಿನಾಥ್ ಐಎಂಎಫ್ ತೊರೆಯುತ್ತಿದ್ದಾರೆ. ಸಚಿವ ಉಪೇಂದ್ರ ತಿವಾರಿ ಅವರನ್ನು ಐಎಂಎಫ್ ನ ಮುಖ್ಯ ಅರ್ಥಶಾಸ್ತ್ರಜ್ಞರನ್ನಾಗಿ ನೇಮಿಸಬೇಕು ಎಂದು ಟೀಕಿಸಿದ್ದಾರೆ.
2012 -14 ರಲ್ಲಿ ಪೆಟ್ರೋಲ್ ದರ ಎಷ್ಟಿತ್ತು? ಮತ್ತು ಈಗ ಎಷ್ಟಿದೆ?
2012-13 ರಲ್ಲಿ ಬಿ ಜೆ ಪಿ ಪಕ್ಷವು ಅಂದಿನ ಯುಪಿ ಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಾಯಿತೆಂದು ತೀವ್ರ ಪ್ರತಿಭಟನೆ ಮಾಡಿತ್ತು. ಆಗ ಗುಜರಾತಿನ ಮುಖ್ಯ ಮಂತ್ರಿಯಾಗಿದ್ದ ನರೇಂದ್ರ ಮೋದಿಯವರೇ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದರು. ಅಂದು ಅವರು ನೀಡಿದ್ದ ಹೇಳಿಕೆಗಳನ್ನು ಒಮ್ಮೆ ರಿವೈಂಡು ಮಾಡಿ ನೋಡಿ. ಅಂದಿನ ಯುಪಿಎ ಸರ್ಕಾರವನ್ನು, ಮನಮೋಹನಸಿಂಗರನ್ನು ಕೆಟ್ಟದಾಗಿ ಟೀಕಿಸಿದ್ದರು. ತಾವು ಅಧಿಕಾರಕ್ಕೆ ಬಂದ ಕೂಡಲೇ ದೇಶದ ಸಂಕಷ್ಟವನ್ನೆಲ್ಲ ತೊಡೆದು ಹಾಕಿ ಸ್ವರ್ಗ ಸೃಷ್ಟಿಸುತ್ತೇವೆ ಎಂದು ಪದೇ ಪದೇ ಹೇಳಿದರು. ಆದರೆ ವಾಸ್ತವತೆಯೇ ಬೇರೆಯಾಗಿದೆ.
2014 ರಂದೀಚೆ, ಅಂದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರ ಗರಿಷ್ಠ ಮಟ್ಟ ತಲುಪಿದೆ. 2012 – ಕಚ್ಚಾ ತೈಲ ದರ ಒಂದು ಬ್ಯಾರಲ್ ಗೆ 125.45 ಡಾಲರ್ ಇತ್ತು. ಆ ಸಂದರ್ಭದಲ್ಲಿ 71.13 ಪೆಟ್ರೋಲ್ ದರ ಇದ್ದರೆ ಡೀಸೆಲ್ ದರ 40.91 ಇತ್ತು. 2013 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 107.97 ಇದ್ದಾಗ ಪೆಟ್ರೋಲ್ ದರ 71.13 ಇತ್ತು ಹಾಗೂ ಡೀಸೆಲ್ ದರ 46.13 ಇತ್ತು. 2014 ರಲ್ಲಿ ಕಚ್ಚಾ ತೈಲ ದರ ಬ್ಯಾರಲ್ ಗೆ 105.52 ಡಾಲರ್ ಇದ್ದಾಗ ಪೆಟ್ರೋಲ್ ದರ 80.11 ಹಾಗೂ ಡೀಸೆಲ್ ದರ 55.48 ಇತ್ತು. ಇದಾದ ಬಳಿಕ 2015 ರಲ್ಲಿ ಕಚ್ಚಾ ತೈಲ ದರ 84.16, 2016 ರಲ್ಲಿ 46.17, 2018 ರಲ್ಲಿ 56.43, 2019 ರಲ್ಲಿ 49.88, 2020 ರಲ್ಲಿ 63.93 ಹಾಗೂ ಇದೀಗ ಬ್ಯಾರಲ್ ಗೆ 69 ಡಾಲರ್ ಇದೆ ಆದರೂ ಪೆಟ್ರೋಲ್ ಡೀಸೆಲ್ ದರ ಏರಿಕೆ ಆಗುತ್ತಿದೆ
ಇದೇ ತೈಲ ಮಾರಾಟದಿಂದ 2013ರಲ್ಲಿ ಸರ್ಕಾರಕ್ಕೆ 52,537 ಕೋಟಿ ರುಪಾಯಿ ಆದಾಯ ಹರಿದು ಬಂದರೆ, 2019-20ರಲ್ಲಿ 2.13 ಲಕ್ಷ ಕೋಟಿ ರುಪಾಯಿ ಬಂದಿದೆ. 2020-21ರ ಕಳೆದ 11 ತಿಂಗಳಿನಲ್ಲಿ 2.94 ಲಕ್ಷ ಕೋಟಿ ರುಪಾಯಿ ಸರ್ಕಾರದ ಬೊಕ್ಕಸಕ್ಕೆ ಸೇರಿದೆ.
ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಪ್ರಮುಖ ಮಹಾ ನಗರಗಳಲ್ಲಿ 22-10-2021 ಶುಕ್ರವಾರದ ತೈಲ ದರ ಹೀಗಿದೆ –
- ರಾಷ್ಟ್ರ ರಾಜಧಾನಿ ಹೊಸದಿಲ್ಲಿ – ಪೆಟ್ರೋಲ್: 106.89 ರೂ, ಡೀಸೆಲ್: 95.62 ರೂ
- ಪಶ್ಚಿಮ ಬಂಗಾಳದ ಕೋಲ್ಕೊತ್ತಾ – ಪೆಟ್ರೋಲ್ : 107.44 ರೂ, ಡೀಸೆಲ್ : 98.73 ರೂ
- ಮಹಾರಾಷ್ಟ್ರ ರಾಜಧಾನಿ ಮುಂಬಯಿ – ಪೆಟ್ರೋಲ್ : 112.78 ರೂ, ಡೀಸೆಲ್ : 103.63 ರೂ
- ತಮಿಳುನಾಡು ರಾಜಧಾನಿ ಚೆನ್ನೈ – ಪೆಟ್ರೋಲ್ : 104.01 ರೂ, ಡೀಸೆಲ್ : 100.01 ರೂ
- ಸಿಲಿಕಾನ್ ಸಿಟಿ ಬೆಂಗಳೂರು – ಪೆಟ್ರೋಲ್: 110.61 ರೂ, ಡೀಸೆಲ್: 101.49 ರೂ
ಕೆಲವು ಟೀಕೆಗಳ ಲಿಂಕ್ ಇಲ್ಲಿವೆ –