ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್ ಪ್ರದೇಶ ಸಮಿತಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮತ್ತು ಮಾಧ್ಯಮ ಸಂಯೋಜಕ ಸಲೀಂ ಡಿ.ಕೆ ಶಿವಕುಮಾರ್ ಒಬ್ಬ ಕಲೆಕ್ಷನ್ ಗಿರಾಕಿ ಎಂದು ಮಾತಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿರೋದು ಗೊತ್ತಿರುವ ವಿಚಾರ. ಈ ಸ್ಫೋಟಕ ಮಾತುಗಳು ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಭಾರೀ ಸದ್ದು ಮಾಡಿದ್ದು ಅಷ್ಟೇ ಸತ್ಯ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಬ್ಬ ಕಲೆಕ್ಷನ್ ಗಿರಾಕಿ. ಈತನದ್ದು ದೊಡ್ಡ ಸ್ಕ್ಯಾಮ್. ಪಟ್ಟು ಹಿಡಿದು ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆಗೆದುಕೊಂಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಬಗ್ಗೆ ಮಾತಾಡಿದ್ದರು.
ಎಷ್ಟೋ ವರ್ಷಗಳಿಂದ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಭ್ರಷ್ಟಾಚಾರ ಎಂಬುದು ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಇದಕ್ಕೆ ಆಡಳಿತಾರೂಢ ಬಿಜೆಪಿ ಸೇರಿದಂತೆ ಯಾವ ವಿರೋಧ ಪಕ್ಷಗಳು ಹೊರತಲ್ಲ. ಹಾಗಾಗಿ ಸಹಜವಾಗಿಯೇ ಸಲೀಂ-ಉಗ್ರಪ್ಪ ನಡುವಣ ಸಂಭಾಷಣೆ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ರಾಜ್ಯ ಉಪಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ವಿರುದ್ಧದ ಪ್ರಚಾರಕ್ಕೆ ಬಿಜೆಪಿಗೊಂದು ಅಸ್ತ್ರ ಸಿಕ್ಕಂತಾಗಿದೆ.
ಸ್ವಪಕ್ಷದವರೇ ಡಿ.ಕೆ ಶಿವಕುಮಾರ್ ಮಾಡಿದ ಪರ್ಸೆಂಟೇಜ್ ಗಿರಾಕಿ ವಿವಾದವನ್ನು ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿದೆ. ಈಗಾಗಲೇ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಹಲವರು ಡಿಕೆಶಿ ಕಾಲೆಳೆಯುತ್ತಿದ್ದಾರೆ. ಸೊಗಡು ಶಿವಣ್ಣ ಅಂತೂ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಲ್ಲಿ ಡಿಕೆ ಬೇನಾಮಿ ಆಸ್ತಿ ಇದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಸಲೀಂ-ಉಗ್ರಪ್ಪ ಪಿಸುಮಾತಲ್ಲೇ ಡಿಕೆಶಿಗೆ ಕಲೆಕ್ಷನ್ ಗಿರಾಕಿ ಪಟ್ಟ ಕಟ್ಟಿ ಕ್ಷಮೆ ಕೇಳಿ, ಸ್ಪಷ್ಟನೆ ಕೊಟ್ಟು ವಿವಾದಕ್ಕೆ ತೆರೆ ಎಳೆಯೋ ಯತ್ನವೇನೋ ಮಾಡಿದ್ದಾರೆ. ಆದರೆ, ವಿರೋಧಿ ಪಡೆಯಂತೂ ಇದನ್ನೇ ಹಿಡ್ಕೊಂಡು ದಿನವೂ ಡಿಕೆಶಿ ಕಾಲೆಳೆಯುತ್ತಿದೆ. ಅದ್ರಲ್ಲೂ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಪಕ್ಷದ ನಾಯಕರೇ ಡಿಕೆಶಿ ಬಗ್ಗೆ ಟೀಕಿಸಿ ಮಾತನಾಡಿ ಬಿಜೆಪಿಗೆ ಆಹಾರ ಒದಗಿಸಿಬಿಟ್ಟಿದ್ದಾರೆ. ಅದ್ರ ಮುಂದುವರಿದ ಭಾಗವಾಗಿ ಮಾಜಿ ಸಚಿವ ಸೊಗಡು ಶಿವಣ್ಣ, ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಲ್ಲಿ ಡಿಕೆಶಿ ಬೇನಾಮಿ ಆಸ್ತಿಯ ಆರೋಪ ಮಾಡಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಬೇನಾಮಿ ಆಸ್ತಿ ಇದೆ ಎಂದ ಶಿವಣ್ಣ, ಡಿಕೆಶಿ ಆಲಿಬಾಬಾ ಡಿಕೆಶಿ ಆಲಿಬಾಬಾ – 40 ಮಂದಿ ಕಥೆ ರೀತಿ ಡಕಾಯತಿ ಮಾಡ್ತಿದ್ದಾರೆ. ಡಿಕೆ ವಿರುದ್ಧ ಸಿಬಿಐ ತನಿಖೆಯಾಗಬೇಕು ಅಂತ ಆಗ್ರಹಿಸಿದ್ರು.
ಹೀಗೆ ಸೊಗಡು ಶಿವಣ್ಣ ಹೇಳಿದ ಬೇನಾಮಿ, ಆಲಿಬಾಬಾ ಕಥೆಗೆ ಡಿಕೆಶಿ ಫುಲ್ ಗರಂ ಆಗಿದ್ದಾರೆ. ಸೊಗಡು ಹೇಳಿಕೆಗೆ ತಿರುಗೇಟು ನೀಡಿರುವ ಡಿ.ಕೆ ಶಿವಕುಮಾರ್, ಮೆಂಟಲ್ ಆಸ್ಪತ್ರೆಯಲ್ಲಿ ಇರಬೇಕಾದವರು. ರಾಜಕೀಯವಾಗಿ ಅವನಿಗೆ ಜಾಗ ಇಲ್ಲ, ಹೀಗಾಗಿ ಈ ತರ ಮಾತಾಡ್ತಿದ್ದಾರೆ. ಸೊಗಡು ಶಿವಣ್ಣಗೆ ಎಲ್ಲಾ ಗಿಫ್ಟ್ ಕೊಡ್ತೀನಿ ಎಂದಿದ್ದಾರೆ.
ಹೊತ್ತಿ ಉರಿಯುತ್ತಿರುವ ಸಲೀಂ-ಉಗ್ರಪ್ಪ ಹಚ್ಚಿದ ಕಿಡಿಗೆ ಬಿಜೆಪಿ ತುಪ್ಪ ಸುರಿದು ಛೇಡಿಸ್ತಿರೋದಕ್ಕೆ ಡಿಕೆಶಿ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ. ಇದೆಲ್ಲದರ ನಡುವೆ ಪಿಸುಮಾತು ವಿಚಾರವಾಗಿ ಡಿ.ಕೆ ಶಿವಕುಮಾರ್ ಬಳಿ ಹೈಕಮಾಂಡ್ ಸ್ಪಷ್ಟನೆ ಕೇಳಿದೆ.
ಪಿಸುಮಾತಿನ ವಿಚಾರವನ್ನ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಪಕ್ಷಕ್ಕೆ ಯಾವುದೇ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಶಿಸ್ತು ಪಾಲನ ಸಮಿತಿ ಅಗತ್ಯ ತುರ್ತು ಕ್ರಮ ತೆಗೆದುಕೊಂಡಿದೆ ಅಂತ ಡಿಕೆಶಿ ಉತ್ತರ ನೀಡಿದ್ದಾರೆ. ಇಬ್ಬರ ಹೇಳಿಕೆಗಳಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗಿಲ್ಲ. ಪಕ್ಷದ ನಾಯಕರೆಲ್ಲರೂ ಒಗ್ಗಟ್ಟಿನಿಂದ ಜೊತೆಗೆ ಇದ್ದೇವೆ. ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನಮ್ಮ ಚಿತ್ತ ಬೈ ಎಲೆಕ್ಷನ್ ಮೇಲಿದೆ, ಯಾವುದೇ ಗೊಂದಲಗಳಿಲ್ಲ ಅಂತ ಹೈಕಮಾಂಡ್ಗೆ ರಿಪೋರ್ಟ್ ಕೊಟ್ಟಿದ್ದಾರೆ.
ಇನ್ನೊಂದೆಡೆ ಬಿಜೆಪಿ ಮಾತ್ರ ಹಾನಗಲ್ ಮತ್ತು ಸಿಂದಗಿ ಎಲೆಕ್ಷನ್ನಲ್ಲಿ ಡಿಕೆಶಿ ವಿಚಾರವನ್ನೇ ಟಾರ್ಗೆಟ್ ಮಾಡುತ್ತಿದೆ. ಎಂ.ಪಿ ರೇಣುಕಾಚಾರ್ಯ, ಪ್ರಲ್ಹಾದ್ ಜೋಶಿ ಸೇರಿದಂತೆ ಡಿ.ಕೆ ಶಿವಕುಮಾರ್ ವಿಚಾರ ಪ್ರಸ್ತಾಪಿಸಿದ್ದಾರೆ. ಜೆಡಿಎಸ್ ಕೂಡ ಡಿಕೆಶಿ ವಿಚಾರವನ್ನೇ ಹಿಡಿದು ಬೈ ಎಲೆಕ್ಷನ್ ಪ್ರಚಾರ ಮಾಡುತ್ತಿದೆ.
ಬೈ-ಎಲೆಕ್ಷನ್ ಹೊತ್ತಿನ ಪರ್ಸೆಂಟೇಜ್ ಚರ್ಚೆ ಕಾಂಗ್ರೆಸ್ಗೆ ಮುಜುಗರ ತಂದಿಟ್ಟಿದೆ. ಅದ್ರಿಂದ ಪಾರಾಗಲು ಕೈ ಪಾಳಯ ಯತ್ನಿಸ್ತಿದೆ. ಆದ್ರೆ ಕಮಲ ಕಲಿಗಳು ನಿತ್ಯವೂ ಪರ್ಸೆಂಟೇಜ್ ವಿಚಾರ ಪ್ರಸ್ತಾಪಿಸ್ತಿರೋದು ಕಾಂಗ್ರೆಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿರೋದಂತೂ ಸುಳ್ಳಲ್ಲ.