ಹಾನಗಲ್ನಲ್ಲಿ ಈ ಸಲ ಉದಾಸಿ ಫ್ಯಾಮಿಲಿ ರಾಜಕಾರಣಕ್ಕೆ ಹಿನ್ನಡೆ ಆಗಲಿದೆಯೇ ಎಂಬ ಪ್ರಶ್ನೆಯ ಜೊತೆಗೆ ಸದ್ಯ ಇಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ ಎಂಬ ಅಭಿಪ್ರಾಯವಿದೆ.
ಸದ್ಯದಲ್ಲೇ ಹಾವೇರಿ ಜಿಲ್ಲೆಯ ಹಾನಗಲ್ ಮತಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗಲಿದೆ. ಆದರೆ ಇಲ್ಲಿ ಎರಡು ತಿಂಗಳಿನಿಂದಲೇ ಪಕ್ಷಗಳ ಕಾರ್ಯ ಚಟುವಟಿಕೆಗಳು ಗರಿಗೆದರಿವೆ.
ಹಾನಗಲ್ ಶಾಸಕರಾಗಿದ್ದ ಬಿಜೆಪಿ ಹಿರಿಯ ನಾಯಕ ಸಿ.ಎಂ ಉದಾಸಿಯವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.
ಹಾಗೆ ನೋಡಿದರೆ ಈಗಾಗಲೇ ಈ ಚುನಾವಣೆ ಘೋಷಣೆ ಆಗಬೇಕಿತ್ತು. ಆದರೆ ಕೋವಿಡ್ ಕಾರಣಕ್ಕೆ ದೇಶದ 31 ಶಾಸಕ ಮತ್ತು 2 ಸಂಸದ ಕ್ಷೇತ್ರಗಳ ಚುನಾವಣೆಗಳನ್ನು ಚುನಾವಣಾ ಆಯೋಗ ಘೋಷಣೆ ಮಾಡಲಿಲ್ಲ. ಅನಿವಾರ್ಯವಾಗಿ ಮಮತಾ ಬ್ಯಾನರ್ಜಿಯವರ ಕಾರಣಕ್ಕೆ ಅಲ್ಲಿ ಉಪ ಚುನಾವಣೆ ಘೋಷಿಸಲೇ ಬೇಕಾಗಿತ್ತು.
ಆದರೆ 6 ತಿಂಗಳ ಒಳಗೆ ಉಪ ಚುನಾವಣೆ ನಡೆಯಬೇಕು ಎಂಬ ನಿಯಮ ಇರುವ ಕಾರಣ ಮತ್ತು ಕೋವಿಡ್ ತೀವ್ರತೆ ಕಡಿಮೆಯಾದ ಕಾರಣಗಳಿಂದ ಸದ್ಯದಲ್ಲೇ ಉಪ ಚುನಾವಣೆಗಳು ಘೋಷಣೆ ಆಗಲಿವೆ.
ಸಿ.ಎಂ ಉದಾಸಿ ನಿಧನದ ನಂತರದಲ್ಲಿ 15 ದಿನದಲ್ಲೇ ಅಚ್ಚರಿ ಎಂಬಂತೆ ಜೆಡಿಎಸ್ ಇಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಿತು. ಶಿವಮೊಗ್ಗ ಕಡೆಯ ನಿಯಾಜ್ ಶೇಖ್ರನ್ನು ಬೆಂಗಳೂರಿನ ಕಚೇರಿಯಲ್ಲಿ ಸ್ವಾಗತಿಸಿದ ಕುಮಾರಸ್ವಾಮಿ ,ಆವರನ್ನು ಹಾನಗಲ್ ಅಭ್ಯರ್ಥಿ ಎಂದು ಘೋಷಿಸಿದರು. ಶೇಖ್ ಬೇರೆ ಜಿಲ್ಲೆಯವರಾದರೂ ವಾಸ್ತವ್ಯ ಹಾನಗಲ್ನಲ್ಲೇ ಇದ್ದು ಜೆಡಿಎಸ್ ಕಾರ್ಮಿಕ ಘಟಕದ ಮುಖ್ಯಸ್ಥರಾಗಿದ್ದವರು.
ಕಾಂಗ್ರೆಸ್ನಿಂದ ಕಳೆದ ಸಲದ ಪರಾಜಿತ ಅಭ್ಯರ್ಥಿ, ಎಂಎಲ್ಸಿ ಶ್ರೀನಿವಾಸ್ ಮಾನೆಯವರಿಗೆ ಮತ್ತೆ ಟಿಕೆಟ್ ಪಕ್ಕಾ ಆಗಿದೆ.
ಕುತೂಹಲದ ವಿಷಯ ಎಂದರೆ ಬಿಜೆಪಿಯಿಂದ ಸಿ.ಎಂ ಉದಾಸಿಯವರ ಪುತ್ರ, ಹಾವೇರಿ ಸಂಸದ ಶಿವಕುಮಾರ್ ಉದಾಸಿ ಸ್ಪರ್ಧಿಸಬಹುದು ಎಂಬ ಸುದ್ದಿಗಳಿದ್ದವು. ಆದರೆ ಈಗ ಶಿವಕುಮಾರ್ ಉದಾಸಿಯವರ ಪತ್ನಿ ರೇವತಿ ಶಿವಕುಮಾರ್ ಅಖಾಡಕ್ಕೆ ಇಳಿಯಲಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ.
ಹಲವು ಬಾರಿ ಶಾಸಕರಾಗಿ, ಸಚಿವರಾಗಿದ್ದ ಮತ್ತು ಉಪ ಸಭಾಪತಿ ಆಗಿದ್ದ ದಿ. ಸಿಎಂ ಉದಾಸಿಯವರಿಗೆ ಅವರ ಸೌಜನ್ಯದ ಜೊತೆಗೆ ಲಿಂಗಾಯತ ಸಮುದಾಯದ ಬೆಂಬಲ ನೆರವಾಗಿತ್ತು. ಹಾಗಂತ ಇಲ್ಲಿ ಜಾತಿ ರಾಜಕಾರಣವನ್ನೂ ಮೀರಿ ಜನ ಮತ ಹಾಕಿದ ಉದಾಗರಣೆಗಳಿವೆ. ಕಾಂಗ್ರೆಸ್ನ ಮನೋಹರ್ ತಹಶೀಲ್ದಾರ್ ಇಲ್ಲಿಂದ ಹಲವು ಸಲ ಗೆದ್ದು ಸಚಿವರೂ ಆಗಿದ್ದಾರೆ. ಇಲ್ಲಿ ಅವರ ಬಲಿಜ ನಸಮುದಾಯದ ಮತಗಳ ಸಂಖ್ಯೆ ತುಂಬ ತುಂಬ ಕಡಿಮೆ.
ಸೀನಿಯರ್ ಉದಾಸಿಯವರ ಪ್ರಭಾವದ ಕಾರಣಕ್ಕೆ ಅವರ ಪುತ್ರ ಜೂನಿಯರ್ ಉದಾಸಿ ಸಂಸದರಾದರು. ನಂತರದಲ್ಲಿ ಮೋದಿ ‘ಅಲೆ’ಯಲ್ಲಿ ಎರಡು ಸಲ ಪುನರಾಯ್ಕೆಗೊಂಡರು. ಮೂರು ಸಲ ಸಂಸದರಾದರೂ ಕೇಂದ್ರದಲ್ಲಿ ತಮಗೆ ಸಚಿವ ಸ್ಥಾನ ಸಿಗದೇ ಇರದ ಕಾರಣಕ್ಕೆ ನಿರಾಶರಾಗಿರುವ ಶಿವಕುಮಾರ ಉದಾಸಿ ಈ ಸಲ ಉಪ ಚುನಾವಣೆ ನಿಲ್ಲುವ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳಲು ಮತ್ತು ಹಾನಗಲ್ ಕ್ಷೇತ್ರ ತಮ್ಮ ಫ್ಯಾಮಿಲಿ ಹಿಡಿತದಲ್ಲಿ ಇರುವಂತೆ ಮಾಡಲು ತಾವೇ ಸ್ಪರ್ಧಿಸಲು ನಿರ್ಧರಿಸಿದ್ದರು.
ಆದರೆ ಗೆದ್ದರೂ ಇಲ್ಲಿ ಸಚಿವ ಸ್ಥಾನ ಸಿಗದು ಮತ್ತು ಪ್ರೆಮಾಣವಚನ ಸ್ವೀಕರಿಸಿದ ವರ್ಷದೊಳಗೇ ವಿಧಾನಸಭೆ ಚುನಾವಣೆ ಬರುವುದರಿಂದ ಸಂಸದ ಸ್ಥಾನ ತ್ಯಜಿಸಲು ಹಿಂದೇಟು ಹಾಕಿದ್ದಾರೆ. ಹಾಗಂತ ಅವರು ಫ್ಯಾಮಿಲಿ ಪಾಲಿಟಿಕ್ಸ್ ಬಿಟ್ಟಿಲ್ಲ. ತಮ್ಮ ಪತ್ನಿ ರೇವತಿಯವರನ್ನು ಕಣಕ್ಕೆ ಇಳಿಸುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ರೇವತಿ ಅವರು ಎಲ್ಲ ಸಾರ್ವಜನಿಕ ಸಮಾರಂಭಗಳಲ್ಲಿ ಮಿಂಚುತ್ತಿದ್ದಾರೆ. ಸೀನಿಯರ್ ಉದಾಸಿ ಯಡಿಯೂರಪ್ಪನವರಿಗೆ ಆಪ್ತರಾಗಿದ್ದರು. ಈಗ ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯ ಸವಣೂರು-ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿದ್ದು ಶಿವಕುಮಾರ ಉದಾಸಿಗೆ ಅವರ ಬೆಂಬಲವೂ ಇದೆ.
ಹುರುಪಿನಲ್ಲಿ ಕಾಂಗ್ರೆಸ್
ಕಾಂಗ್ರೆಸ್ನಿಂದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಸದ್ಯ ಅವರಿಗೆ ಟಿಕೆಟ್ ಸಿಗುವ ಚಾನ್ಸ್ ಇಲ್ಲ. ಹುಬ್ಬಳ್ಳಿ ಮೂಲದ ಎಂಎಲ್ಸಿ ಶ್ರೀನಿವಾಸ್ ಮಾನೆ ಕಳೆದ ಸಲ ಸೀನಿಯರ್ ಉದಾಸಿ ವಿರುದ್ಧ 5 ಸಾವಿರ ಮತಗಳಿಂದ ಸೋತಿದ್ದರು. ಹೊರಗಿನವರು ಮತ್ತು ಮರಾಠಾ ಸಮುದಾಯದವರು ಎಂಬ ಸಂಗತಿಗಳ ನಡುವೆಯೂ ಅವರು ಗೆಲುವಿನ ಹತ್ತಿರಕ್ಕೆ ಬಂದಿದ್ದರು. ಆ ನಂತರ ಅವರು ಹಾನಗಲ್ನಲ್ಲೇ ಮನೆ ಮಾಡಿ ಅಲ್ಲಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿ, ಗ್ರಾಮೀಣ ಭಾಗಗಳಲ್ಲಿ ಸಂಚರಿಸುತ್ತ ಹೆಸರು ಮಾಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಅವರು ತಮ್ಮದೇ ಯೋಜನೆಯೊಂದನ್ನು ರೂಪಿಸಿ ಜನರಿಗೆ ನೆರವಾಗಿದ್ದಾರೆ. ಆದರೆ ಸಂಸದ ಶಿವಕುಮಾರ್ ಉದಾಸಿಯವರಿಗೆ ಹಾನಗಲ್ ಕ್ಷೇತ್ರದ ಸಂಪರ್ಕ ಕಡಿಮೆ. ಅವರ ವಹಿವಾಟೆಲ್ಲ ಬೆಂಗಳೂರಿನಲ್ಲೇ ಇರುವುದರಿಂದ ಅವರು ಅಲ್ಲಿಯೇ ಹೆಚ್ಚು ನೆಲೆಸುತ್ತಾರೆ. 2009, 2014 ರ ಸಂಸದ ಚುನಾವಣೆಯಲ್ಲಿ ಕಾಂಗ್ರಸ್ನಿಂದ ಸಲೀಮ್ ಅಹ್ಮದ್ ಸ್ಪರ್ಧಿಸಿದ ಕಾರಣ ಮತಗಳ ಧ್ರುವೀಕರಣವಾಗಿ ಶಿವಕುಮಾರ್ ಉದಾಸಿಯವರಿಗೆ ಲಾಭವಾಗಿತ್ತು.
ಆದರೆ ಉದಾಸಿ ಕೆಲವು ಸ್ಥಾಯಿ ಸಮಿತಿಗಳ ಸದಸ್ಯರಾಗಿ ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಅವರಂತಹ ಕಾಂಗ್ರೆಸ್ ನಾಯಕರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಕೇಂದ್ರ ಸರ್ಕಾರದ ಕೆಲವು ಯೋಜನಗಳನ್ನು ಹಾವೇರಿ ಕ್ಷೇತ್ರದಲ್ಲಿ ಜಾರಿಗೊಳಿಸಿದ್ದಾರೆ. ಇದು ಅವರ ಪ್ಲಸ್ ಪಾಯಿಂಟ್ ಇಲ್ಲಿ ಲಿಂಗಾಯತ ಮತಗಳ ಸಂಖ್ಯೆ ಜಾಸ್ತಿ ಇದ್ದು ನಂತರದಲ್ಲಿ ಒಬಿಸಿ ಮತ್ತು ಅಲ್ಪಸಂಖ್ಯಾತರ ಮತಗಳಿವೆ.
ಜೆಡಿಎಸ್: ಬಿಜೆಪಿ ಬಿ ಟೀಮ್?
ಕುಮಾರಸ್ವಾಮಿಯವರು ಆತುರದಲ್ಲಿ ನಿಯಾಜ್ ಶೇಖ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದು ಇಲ್ಲಿನ ಜನರ ಅನುಮಾನಕ್ಕೆ ಕಾರಣವಾಗಿದೆ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂಬ ಮಾತುಗಳು ಕೇಳಿ ಬರುತ್ತಿವೆ. 40 ಸಾವಿರದಷ್ಟಿರುವ ಮುಸ್ಲಿಂ ಮತಗಳನ್ನು ಒಡೆಯುವ ಸಾಹಸಕ್ಕೆ ಜೆಡಿಎಸ್ ಕೈ ಹಾಕಿದೆಯಾದರೂ ಇಲ್ಲಿ ಅದಕ್ಕೆ ಸಂಘಟನೆ ಇರಲಿ ಅಸ್ತಿತ್ವವೇ ಇಲ್ಲ. ಹಿಂದೆಯೂ ಅದು ಮೋಹನಕುಮಾರ್ ಎಂಬಾತನನ್ನು ಒಮ್ಮೆ ಮತ್ತು ಬೊಮ್ಮನಹಳ್ಳಿ ಬಾಬು ಎಂಬ ರೌಡಿಶೀಟರ್ನನ್ನು ಕಣಕ್ಕೆ ಇಳಿಸಿತ್ತು. ಇವರಿಬ್ಬರೂ ಬೆಂಗಳೂರಿಬವರು! ಅವರಿಗೆ ಡಿಪಾಸಿಟ್ಟೂ ಸಿಗಲಿಲ್ಲ. ಈಗ ನಿಯಾಜ್ ಶೇಖ್ ಹೋದಲೆಲ್ಲ ಮುಸ್ಲಿಮರು ಆಕ್ಷೇಪ ವ್ಯಕ್ತ ಮಾಡುತ್ತಿದ್ದು ಶೇಖ್ ಅವರಿಗೂ ಡಿಪಾಸಿಟ್ ಸಿಗುವುದು ಕಷ್ಟ.
ಎಐಎಂಐಎಂ ಕೂಡ ಇಲ್ಲಿ ಸ್ಪರ್ಧಿಸಲು ಬಯಸಿದೆ. ಅದು ಕಣಕ್ಕೆ ಇಳಿದರೆ ಮುಸ್ಲಿಂ ಮತಗಳು ವಿಭಜನೆಯಾಗಬಹುದು.
ಇದು ಸದ್ಯದ ಚಿತ್ರಣ. ಏನೇ ಇರಲಿ, ಒಟ್ಟಿನಲ್ಲಿ ಎಂದಿನಂತೆ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ಪೈಪೋಟಿ. ಸೀನಿಯರ್ ಉದಾಸಿ ಇಲ್ಲದ ಈ ಹೊತ್ತಿನಲ್ಲಿ ಉದಾಸಿ ಫ್ಯಾಮಿಲಿ ರಾಜಕಾರಣಕ್ಕೆ ಹಿನ್ನಡೆಯಾಗುವ ಲಕ್ಷಣಗಳಂತೂ ದಟ್ಟವಾಗಿವೆ.