ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಲವಾಗಿ ಕೇಳಿ ಬರುತ್ತಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ರಾಷ್ಟ್ರೀಯ ನಾಯಕರು ಹೇಳಿದಂತೆ ನಡೆಸುಕೊಳ್ಳುತ್ತೇನೆ ಎಂದು ರಾಜೀನಾಮೆ ನೀಡುವ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ಜುಲೈ 26ನೇ ತಾರೀಕು ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವುದು ಫಿಕ್ಸ್ ಎನ್ನಲಾಗಿದೆ. ಈ ಬಗ್ಗೆ ಖುದ್ದು ಯಡಿಯೂರಪ್ಪ ಅವರೇ ಸುಳಿವು ನೀಡಿದ ಮೇಲೆ ರಾಜ್ಯ ಸಂಪುಟ ಸಹೋದ್ಯೋಗಿಗಳಲ್ಲೂ ಆತಂಕ ಶುರುವಾಗಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಸಚಿವ ಸಂಪುಟದಲ್ಲಿ ಪಕ್ಷನಿಷ್ಠರಿಗೆ ಮಾತ್ರವಲ್ಲದೇ ಕಾಂಗ್ರೆಸ್-ಜೆಡಿಎಸ್ನಿಂದ ಬಂದಿರುವ ಮಿತ್ರ ಮಂಡಳಿಗೂ ಗೊಂದಲ ಮತ್ತು ಭಯ ಶುರುವಾಗಿದೆ. ಎಲ್ಲರೂ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ. ಹೀಗಾದರೆ ನಮ್ಮ ಕಥೆಯೇನು. ಮುಂದಿನ ಸಿಎಂ ಯಾರು ಬೇಕಾದರೂ ಆಗಬಹುದು. ಹೊಸದಾಗಿ ಸಿಎಂ ಆಗೋರು ತಮಗೆ ಬೇಕಾದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು. ಯಾರಿಗೆ ಮುಂದೆ ಸಂಪುಟದಲ್ಲಿ ಸಚಿವ ಸ್ಥಾನ ಸಿಗುತ್ತದೋ ಬೇಡವೋ ಎಂಬ ಸ್ಪಷ್ಟನೆಯೂ ಇಲ್ಲ. ಮುಂದೇನು ಮಾಡೋದು ಎಂಬ ಆಂತಕದಲ್ಲಿ ಎಲ್ಲಾ ಡಿಸಿಎಂಗಳು ಮತ್ತು ಸಚಿವರುಗಳಿದ್ದಾರೆ.
ಬಿಜೆಪಿ ಹೈಕಮಾಂಡ್ನಿಂದ ಸ್ಪಷ್ಟ ಸಂದೇಶ ಬಂದಿದೆ. ಹೀಗಾಗಿ ಇಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ರಾಜೀನಾಮೆ ಸುಳಿವು ನೀಡಿದ್ದಾರೆ. ಈ ಬೆಳವಣಿಗೆ ಸಂಪುಟ ಸಹೋದ್ಯೋಗಿಗಳನ್ನು ಆತಂಕಕ್ಕೆ ದೂಡಿದೆ. ಹಾಗಾಗಿ ಸಿಎಂ ಬದಲಾವಣೆ ಕುರಿತು ಯಾವುದೇ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿರುವ ಮಂತ್ರಿಗಳು ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚಿಂತೆಯಲ್ಲಿ ತೊಡಗಿದ್ದಾರೆ.
Also read: ಸಿಎಂ ಬದಲಾವಣೆಯ ಬಗ್ಗೆ ಮಹತ್ವದ ಸುಳಿವು ಕೊಟ್ಟ ಬಿಎಸ್.ಯಡಿಯೂರಪ್ಪ!
ಸದ್ಯ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿರುವ ಮೂವರು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದ್ದು ಹೈಕಮಾಂಡ್. ಜಾತಿ ಆಧಾರದ ಮೇರೆಗೆ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ, ಒಕ್ಕಲಿಗ ಸಮುದಾಯದ ಅಶ್ವತ್ಥ ನಾರಾಯಣ್ ಹಾಗೂ ದಲಿತ ಸಮುದಾಯದ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಆಗಿ ಆದೇಶ ಹೊರಡಿಸಿತ್ತು ಹೈಕಮಾಂಡ್. ಈ ಮೂವರು ನಾಯಕರು ಜನರನ್ನು ತಲುಪುವದಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇವರನ್ನು ಡಿಸಿಎಂ ಪೋಸ್ಟ್ನಿಂದ ಕಿತ್ತೊಗೆದು ಹೊಸಬರಿಗೆ ಅವಕಾಶ ನೀಡಲು ರಾಷ್ಟ್ರೀಯ ನಾಯಕರು ಚಿಂತಿಸಿದ್ದಾರೆ.

ಇನ್ನು, ಪರ್ಯಾಯ ನಾಯಕತ್ವ ಬೆಳೆಸುವ ಸಲುವಾಗಿಯೇ ಹೊಸಬರಿಗೆ ಡಿಸಿಎಂ ಪೋಸ್ಟ್ ನೀಡುವ ಸಾಧ್ಯತೆ ಇದೆ. ಹಾಗಾಗಿ ಯಡಿಯೂರಪ್ಪ ರಾಜೀನಾಮೆ ನಂತರ ಹೈಕಮಾಂಡ್ ಹೊಸಬರಿಗೆ ಮಣೆ ಹಾಕಲಿದೆ. ಹಾಗೆಯೇ ಹಾಲಿ ಸಚಿವರಲ್ಲೂ ತಮ್ಮನ್ನು ಯಾವಾಗ ಬೇಕಾದರೂ ಕಿತ್ತೊಗೆಯಬಹುದು ಎಂಬ ಆಂತಕ ಶುರುವಾಗಿದೆ.
ಯಡಿಯೂರಪ್ಪ ಸಂಪುಟದಲ್ಲಿರುವ ಕೆಲವು ಬಿಜೆಪಿ ಸಚಿವರಿಗೆ ಹುದ್ದೆ ಕೈತಪ್ಪುವ ಆತಂಕವಿದೆ. ಸಿಎಂ ಬದಲಾವಣೆಯಾದರೆ ಸಚಿವ ಸ್ಥಾನವೂ ಕಳೆದುಕೊಳ್ಳಬೇಕು. ಹೊಸ ಸಿಎಂ ನೇತೃತ್ವದಲ್ಲಿ ರಚನೆಯಾಗುವ ಸಂಪುಟದಲ್ಲಿ ನಮಗೆ ಅವಕಾಶ ಸಿಗೋದು ಡೌಟ್. ಹೀಗಾಗಿ ನಮ್ಮ ಪರ ಹೈಕಮಾಂಡ್ ಮಟ್ಟದಲ್ಲಿ ಯಾರು ಮಾತನಾಡುತ್ತಾರೆ? ಎನ್ನುವ ಆತಂಕದಲ್ಲಿದ್ದಾರೆ ಎಲ್ಲಾ ಸಚಿವರು.
ಬಹುತೇಕ ಸಚಿವರು ಇಲಾಖೆಯನ್ನು ಸರಿಯಾಗಿ ನಿಭಾಯಿಸಿಲ್ಲ. ಹೀಗಾಗಿ ಇಲಾಖೆ ಪ್ರಗತಿಯಲ್ಲಿ ಹಿಂದೆ ಬಿದ್ದ ಎಲ್ಲಾ ಸಚಿವರಿಗೂ ಕೋಕ್ ನೀಡಬಹುದು ಎಂದು ಹೇಳಲಾಗುತ್ತಿದೆ. ಜತೆಗೆ ಯಡಿಯೂರಪ್ಪ ಬಳದೊಂದಿಗೆ ಗುರುತಿಸಿಕೊಂಡ ಹಲವರಿಗೂ ಸಚಿವ ಸ್ಥಾನ ಕೈ ತಪ್ಪಲಿದೆ. ಬಿಎಸ್ವೈ ಆಪ್ತರನ್ನು ಸಂಪುಟದಿಂದ ದೂರವಿಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ಹಿರಿಯ ನಾಯಕರಾದ ಸಚಿವ ಕೆ.ಎಸ್ ಈಶ್ವರಪ್ಪ ಹಾಗು ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಮಂತ್ರಿ ಸ್ಥಾನದಿಂದ ಕೋಕ್ ನೀಡಬಹುದು. ಹೀಗಾಗಿ ಇಬ್ಬರೂ ನಾಯಕರು ತಮ್ಮ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಭಾರೀ ಸರ್ಕಸ್ ನಡೆಸುತ್ತಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ದೋಸ್ತಿಗಳೂ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಾಗಾಗಿ 12 ಮಂದಿ ಮಿತ್ರ ಮಂಡಳಿ ಸಚಿವರು ಹೇಗಾದರೂ ಮಾಡಿ ಸಂಪುಟದಲ್ಲೇ ಉಳಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡುತ್ತಿದ್ದಾರೆ. ಆದ್ದರಿಂದಲೇ ಸಚಿವ ಬಿಸಿ ಪಾಟೀಲ್, ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಯಡಿಯೂರಪ್ಪ ಬದಲಾದರೆ ನಮ್ಮ ಮುಂದಿನ ನಡೆಯೇನು ಎಂಬ ಕುರಿತು ಸುಧೀರ್ಘ ಸಮಾಲೋಚನೆ ಮಾಡಿದ್ದಾರೆ.





