ಪರಿಸರ vs ಮಾನವ ಸಂಘರ್ಷಕ್ಕೆ ಈಗ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ ಯೋಜನೆ ಸಾಕ್ಷಿಯಾಗಿದೆ. ಯಾರ ಹಿತಾಸಕ್ತಿ ಮೇಲು? ಕಾಡಿಗೆ ಆಶ್ರಯಿಸಿದ ಪ್ರಾಣಿಗಳದ್ದೇ? ಅಥವಾ ಕೆರೆಗೆ ಆಶ್ರಯಿಸಿರುವ ಗ್ರಾಮಸ್ಥರದ್ದೇ? ಎನ್ನುವ ತಾತ್ವಿಕ ಪ್ರಶ್ನೆ ಈಗ ಎದುರಾಗಿದೆ. ಒಂದು ಕಡೆ ಕೆರೆ ಅಭಿವೃದ್ಧಿಯಾದರೆ ವ್ಯವಸಾಯ ಮಾಡುವ ತಮಗೆ ಸಹಕಾರಿಯಾಗುತ್ತದೆ, ಕೆರೆ ಇದ್ದಲ್ಲಿ ಕೆರೆಯೇ ಆಗಲಿ ಎನ್ನುವ ಗ್ರಾಮಸ್ಥರು, ಇನ್ನೊಂದೆಡೆ ಇನ್ನೇನು ತಮ್ಮ ಬದುಕಿನ ಅಸ್ತಿತ್ವವೇ ನಾಶವಾಗಲಿದೆ ಎನ್ನುವ ಕಲ್ಪನೆಯೂ ಇಲ್ಲದ ಪ್ರಾಣಿ-ಪಕ್ಷಿಗಳು.. ಈ ನಡುವೆ ಇಬ್ಬರ ನಡುವೆ ಸಮತೋಲಿತ ಬದುಕನ್ನು ಕಟ್ಟಲು ಸೋತಿರುವ ಆಡಳಿತ.!

ಈ ಸೂಕ್ಷ್ಮ ಗೊಂದಲಗಳೇನಿದ್ದರೂ, ಪರಿಸರವಾದಿಗಳು 40 ವರ್ಷದಿಂದ ಬೆಳೆದಿರುವ ಈ ಕಿರು ಅರಣ್ಯವನ್ನು ತೆರವು ಮಾಡುವುದು ನಿಸರ್ಗಬಾಹಿರ ಎನ್ನುತ್ತಿದ್ದಾರೆ.
40 ವರ್ಷಗಳ ಹಿಂದೆ ದೊಡ್ಡ ಕೆರೆಯಾಗಿದ್ದ ಯಲಹಂಕ ಹೋಬಳಿಯ ಸಿಂಗನಾಯಕನಹಳ್ಳಿಯ ಕೆರೆಯ ನೀರು ಕ್ರಮೇಣ ಬತ್ತಿ ಈಗ ಒಂದು ಕಿರು ಅರಣ್ಯವೇ ನಿರ್ಮಾಣವಾಗಿದೆ. ಆದರೆ, ಕೆರೆಯಿದ್ದ ಜಾಗದಲ್ಲಿ ಮತ್ತೆ ಕೆರೆಯನ್ನೇ ಅಭಿವೃದ್ಧಿಪಡಿಸಬೇಕೆಂದು ಸರ್ಕಾರ ಹೊರಟಿದೆ. ಸರ್ಕಾರದ ಈ ಯೋಜನೆ ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.
ಜೀವವೈವಿಧ್ಯದ ಶ್ರೀಮಂತ ಸೆಲೆಯಾಗಿರುವ ಈ ವಿಶಾಲ 270 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ 6,316 ಮರಗಳಿವೆ. ಈ ಮರಗಳಿಗೆ ಆಶ್ರಯಿಸಿಕೊಂಡು ಹಲವಾರು 15 ಕ್ಕೂ ಹೆಚ್ಚು ಪ್ರಬೇಧದ ಪಕ್ಷಿ ಸಂಕುಲಗಳಿವೆ, ಅದಕ್ಕೆ ಹೊಂದಿಕೊಂಡು. ನರಿ, ಮೊಲ ಮೊದಲಾದ ವಿವಿಧ ಸಣ್ಣಪುಟ್ಟ ಕಾಡುಪ್ರಾಣಿಗಳಿವೆ.

ಕೆರೆ ಅಭಿವೃದ್ಧಿ ಹೆಸರಲ್ಲಿ ಸಂಪೂರ್ಣ ಮರಗಳನ್ನೇ ಕಡಿದು, ಕಿರು ಅರಣ್ಯವನ್ನೇ ನಾಶ ಮಾಡಲು ಸರ್ಕಾರ ತೀರ್ಮಾನಿಸಿದೆ. ಮರ ಕಡಿಯಲು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಕೋರಿಕೆಗೆ ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಈ ಜೀವವೈವಿಧ್ಯ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.
ಇಲ್ಲಿ ಹೇರಳ ನವಿಲುಗಳಿದ್ದು, ನವಿಲುಗಳು ಸಂತಾನೋತ್ಪತ್ತಿ ಮಾಡುವ ಕಾಲವಾಗಿದ್ದು, ಅಲ್ಲಲ್ಲಿ ನವಿಲುಗಳಿಟ್ಟ ಮೊಟ್ಟೆಗಳಿವೆ. ಮರಗಳನ್ನು ಕಟಾವು ಮಾಡಿದರೆ ವಾತಾವರಣದ ಮೇಲೂ ಈ ಪ್ರಾಣಿಗಳ ಮೇಲೂ ನಕರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ಆತಂಕ.

ಕೆರೆ ಅಭಿವೃದ್ಧಿಯಾದರೆ ಸುತ್ತಲಿನ 8 ಹಳ್ಳಿ ರೈತರಿಗೆ ಲಾಭ.!!
ಪರಿಸವಾದಿಗಳು ತೀವ್ರ ವಿರೋಧ ವ್ಯಕ್ತದ ನಡುವೆಯೂ, ಸಿಂಗನಾಯಕನಹಳ್ಳಿ ಬಹುತೇಕ ಗ್ರಾಮಸ್ಥರು ಕೆರೆ ಹೂಳೆತ್ತಿ ಅಭಿವೃದ್ಧಿ ಪಡಿಸುವುದರ ಪರವಿದ್ದಾರೆ. ಈ ಸಿಂಗನಾಯಕನಹಳ್ಳಿ ಕೆರೆಯನ್ನು ಅವಲಂಬಿಸಿ ಇದರ ಸುತ್ತ ಮುತ್ತ ಎಂಟು ಹಳ್ಳಿಗಳಿದೆ. ಈ ಕೆರೆ ಅಭಿವೃದ್ಧಿಯಾದರೆ ಈ ಹಳ್ಳಿಗಳೆಲ್ಲಾ ಅಂತರ್ಜಲ ಮಟ್ಟ ಏರಲಿದೆ, ವ್ಯವಸಾಯಕ್ಕೆ ನೀರು ಸಿಗಲಿದೆ. ಈ ಕಾಡಿನಿಂದ ನಮಗೆ ಯಾವ ಉಪಯೋಗವು ಇಲ್ಲ. ಇಲ್ಲಿ ಬಹುಪಾಲು ಜಾಲಿಮರಗಳೇ ಇದೆ. ಇದರಿಂದ ವನ್ಯಜೀವಿಗಳಿಗೂ, ರೈತರಿಗೂ ಇದರಿಂದ ಯಾವುದೇ ಉಪಯೋಗವಿಲ್ಲ. ಇದರ ಬದಲು ಹೂಳೆತ್ತಿ ಕೆರೆಗೆ ನೀರು ತುಂಬಿದರೆ ರೈತರಿಗೆ ಸಹಾಯವಾಗಲಿದೆ ಎನ್ನುವುದು ಗ್ರಾಮಸ್ಥರ ವಾದ.

ಅಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿಗಳು ವಾಸವಿದೆ. ನರಿ, ನವಿಲು, ಮೊಲಗಳು ಹಾಗೂ ಸುಮಾರು 15 ಪ್ರಬೇಧದ ಹಕ್ಕಿಗಳು ವಾಸ ಮಾಡುತ್ತಿವೆ. ಸಿಂಗನಾಯಕನಹಳ್ಳಿ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ದನ, ಕರುಗಳಿಗೆ ಈ ಪ್ರದೇಶ ಮೇವಾಗಿದೆ. ಈ ಕಿರು ಅರಣ್ಯದಲ್ಲಿ ನವಿಲುಗಳ ಮೊಟ್ಟೆ ಪತ್ತೆಯಾಗಿದೆ. ಇದು ನವಿಲುಗಳು ಅತಿ ಹೆಚ್ಚು ಸಂಖ್ಯೆಯಲ್ಲಿದೆ ಎನ್ನವುದಕ್ಕೆ ಸಾಕ್ಷಿ. ಈಗಾಗಲೇ ಬೆಂಗಳೂರು ಮರಗಳಿಲ್ಲಿದೆ ಹವಾಮಾನ ವೈಪರೀತ್ಯ ಎದುರಿಸುತ್ತಿದೆ. ಇದರ ನಡುವೆ ಕಿರುಕಾಡಿನಂತೆ ಬೆಳೆದು ನಿಂತಿರುವ ಈ ಸಿಂಗನಾಯಕನಹಳ್ಳಿ ಕೆರೆಯನ್ನು ತೆರವು ಮಾಡಿದರೆ ಹೇಗೆ ಎಂದು ನಿರಂತರ ಪರಿಸರ ಸಂರಕ್ಷಣಾ ಹೋರಾಟ ನಡೆಸುತ್ತಾ ಬಂದಿರುವ ʼನಮ್ಮ ಬೆಂಗಳೂರು ಫೌಂಡೇಶನ್ʼ ಪ್ರಧಾನ ಕಾರ್ಯದರ್ಶಿ ಜೇಕಬ್ ಪ್ರಶ್ನಿಸಿದ್ದಾರೆ.
ಪರಿಸರವಾದಿಗಳ ಬೇಡಿಕೆಯಲ್ಲೂ ಬಲವಾದ ಹುರುಳಿದೆ. ತಣ್ಣಗಿನ ವಾತಾವರಣದ ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ತಾಪಾಮಾನ ಹೆಚ್ಚುತ್ತಿದೆ. ಮರಗಳ ಕಳೇಬರದ ಮೇಲೆಯೇ ವಿಪರೀತ ವೇಗದಲ್ಲಿ ಬೆಳೆದ ಈ ನಗರ ನಿಂತಿದೆ. ಹೀಗಿರುವಾಗ, ನೈಸರ್ಗಿಕವಾಗಿ ಬೆಳೆದ ಕಾಡಿನಂತಹ ತಾಣವನ್ನು ನಾಶ ಮಾಡುವುದು ಸರಿಯಲ್ಲ, ಇದು ಪ್ರತ್ಯಕ್ಷವಾಗಿ ಅಲ್ಲಿನ ಮರಗಳನ್ನೇ ಅವಲಂಬಿಸಿರುವ ಪ್ರಾಣಿ-ಪಕ್ಷಿಗಳಿಗೂ ತೊಂದರೆಯಾಗುತ್ತದೆ, ಪರೋಕ್ಷವಾಗಿ ಜನತೆಯ ಮೇಲೂ ಪರಿಣಾಮ ಬೀರುತ್ತದೆ ಎನ್ನುವುದು ಇವರ ವಾದ.

ಕಾಡುಪ್ರಾಣಿಗಳು ಮಾತ್ರವಲ್ಲ ಗೋವುಗಳ ಮೇಲೂ ಈ ಕೆರೆ ಅಭಿವೃದ್ಧಿ ತಕ್ಷಣದ ಪರಿಣಾಮ ಬೀರಲಿದೆ. ಈ ಪ್ರದೇಶದಲ್ಲಿ ನಿತ್ಯವೂ ಸಾವಿರಕ್ಕೂ ಹೆಚ್ಚು ಗೋವುಗಳು, ಆಡುಗಳು ಮೇಯುತ್ತಿರುತ್ತವೆ. ಈಗ ಈ ಕಾಡನ್ನು ನಾಶ ಮಾಡಿದರೆ ಇಲ್ಲಿ ಜಾನುವಾರುಗಳನ್ನು ಮೇಯಿಸುವುದಕ್ಕೂ ಸಮಸ್ಯೆ ಆಗಲಿದೆ. ಈ ಕಿರುಗಾಡಿಗೆ ಪರ್ಯಾಯವಾಗಿ ಬೇರೆ ಜಾಗವೂ ಇಲ್ಲದಿರುವುದರಿಂದ ಜಾನುವಾರುಗಳ ಮೇವಿಗೆ ಏನು ಮಾಡುವುದೆಂದು ಜಾನುವಾರು ಸಾಕಿಕೊಂಡವರ ಆತಂಕ!
ಮರಗಳನ್ನು ಉಳಿಸಿಕೊಂಡೇ ಮಾಡಬಹುದೇ ಕೆರೆ ಅಭಿವೃದ್ಧಿ?
ಅದಾಗ್ಯೂ, ಪರಿಸರವಾದಿಗಳು ಕೆರೆ ಅಭಿವೃದ್ಧಿಯೇ ಬೇಡ ಎನ್ನುತ್ತಿಲ್ಲ. ಬದಲಾಗಿ, ಮರಗಳನ್ನು ಹಾಗೆಯೇ ಉಳಿಸಿ ಕೆರೆ ಅಭಿವೃದ್ಧಿ ಪಡಿಸಿ ಎನ್ನುತ್ತಿದ್ದಾರೆ.
ಮರಗಳನ್ನು ಉಳಿಸಿಕೊಂಡೇ ಕೆರೆ ಅಭಿವೃದ್ಧಿಪಡಿಸಬೇಕು. 40 ವರ್ಷಗಳಿಂದ ಕಿರು ಅರಣ್ಯದಂತೆ ಬೆಳೆದಿರುವ ಈ ಮರಗಳನ್ನು ನಾಶ ಮಾಡಿದರೆ ಈ ರೀತಿಯಾದ ಮತ್ತೊಂದು ನೈಸರ್ಗಿಕ ತಾಣವನ್ನು ಕಟ್ಟಿ ಬೆಳೆಸಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ವಿಜಯ್ ನಿಶಾಂತ್ ಹೇಳಿದ್ದಾರೆ.

ಅಷ್ಟು ದೊಡ್ಡ ಪ್ರಮಾಣದ ಮರಗಳನ್ನು ಕತ್ತರಿಸದೆ ಕೆರೆ ಅಭಿವೃದ್ಧಿ ಮಾಡಬಹುದು ಎಂದು ಕೆರೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸದನ್ನು ರಚಿಸಲು ಪರಿಸರ ವ್ಯವಸ್ಥೆಯನ್ನು ಏಕೆ ನಾಶಪಡಿಸಬೇಕು ಎಂದು ನಮ್ಮ ಬೆಂಗಳೂರು ಫೌಂಡೇಶನ್ ಟ್ವೀಟ್ ಮಾಡಿದೆ.
ಒಟ್ಟಾರೆ, ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ ಯೋಜನೆ ಮಾನವ vs ಪ್ರಕೃತಿ ಸಂಘರ್ಷದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಒಂದರ ಹಿತಾಸಕ್ತಿಗೆ ಇನ್ನೊಂದರ ಹಿತಾಸಕ್ತಿಯನ್ನು ಬಲಿಕೊಡದೆ, ಪ್ರಕೃತಿ ಕಲಿಸಿಕೊಡುವ ಸಮತೋಲನದ ಪಾಠವನ್ನು ಅರಿತು ಈ ಯೋಜನೆ ಪೂರ್ಣಗೊಳಿಸಬೇಕಾದ ಕಾಳಜಿ ಸರ್ಕಾರದ ಇಲಾಖೆಗಳ ಮೇಲಿದೆ. ಸರ್ಕಾರವನ್ನು ಮನುಷ್ಯರು ರಚಿಸಿಕೊಂಡಿದ್ದರೂ, ತನ್ನ ಆಡಳಿತದ ವ್ಯಾಪ್ತಿಯ ಅರಣ್ಯ, ಪ್ರಾಣಿಗಳ ಹಿತಾಸಕ್ತಿಯನ್ನು ಕಾಪಾಡುವುದೂ ಸರ್ಕಾರಗಳ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವನ್ನು ಸರ್ಕಾರ ಮರೆತರೆ ನೆನಪಿಸಬೇಕಾದ ಜವಾಬ್ದಾರಿ ಸರ್ಕಾರವನ್ನು ರಚಿಸಿದ ನಾಗರಿಕರಾದ ನಮ್ಮ-ನಿಮ್ಮೆಲ್ಲರ ಮೇಲೂ ಇರುತ್ತದೆ.