ರಾಜ್ಯದ ದೌರ್ಭಾಗ್ಯ ನೋಡಿ.. ಕರೋನೋ ಮೂರನೇ ಅಲೆಯ ಭೀತಿ, ಮಕ್ಕಳ ಕಲಿಕೆಯ ಭವಿಷ್ಯದ ಆತಂಕ, ಪೆಟ್ರೋಲ್-ಡೀಸೆಲ್ ಸೇರಿದಂತೆ ದಿನಬಳಕೆ ಅಗತ್ಯವಸ್ತುಗಳ ಬೆಲೆ ಏರಿಕೆ, ಲಾಕ್ ಡೌನ್ ನಿಂದಾಗಿ ಕಳೆದುಕೊಂಡ ಕೆಲಸ, ಆದಾಯವಿಲ್ಲದೆ ಜೀವನ ನಡೆಸುವ ಸಂಕಷ್ಟಗಳ ನಡುವೆ ಜನಸಾಮಾನ್ಯರು ನಾಳೆ ಏನೋ, ಎಂತೋ ಎಂದು ಮರುಗುತ್ತಿರುವಾಗ, ಮತ ನೀಡಿ ಕಳಿಸಿದ ಜನಪ್ರತಿನಿಧಿಗಳು ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕುವುದರಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಇಳಿದಿದ್ದಾರೆ!
ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಗೆ ಕರ್ಚೀಫ್ ಹಾಕುವ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಗಳು!
ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ನಮ್ಮದೇ ಸರ್ಕಾರ ಬಂದರೆ, ರಾಮರಾಜ್ಯವೇ ಧರೆಗಿಳಿಯಲಿದೆ ಎಂಬ ಭರವಸೆಯ ಮೇಲೆ ಅಧಿಕಾರ ಸ್ವೀಕರಿಸಿದ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿಯ ಡಬ್ಬಲ್ ಎಂಜಿನ್ ಸರ್ಕಾರ, ಪೆಟ್ರೋಲ್ ಬೆಲೆಯಲ್ಲಿ ಸೆಂಚುರಿ ಬಾರಿಸಿ, ಜನತೆಗೆ ತಮ್ಮ ರಾಮರಾಜ್ಯ ಯಾವುದು ಎಂಬುದರ ರುಚಿ ತೋರಿಸಿದ್ದಾರೆ. ಕರೋನಾ ಸಂಕಷ್ಟದಲ್ಲಿರುವ ಬಡವರ ನೆರವಿಗೆ ಹಣಕಾಸು ನೆರವು ನೀಡಲು ನಾವೇನು ನೋಟು ಪ್ರಿಂಟಿಂಗ್ ಮಷಿನ್ ಇಟ್ಟುಕೊಂಡಿದ್ದೇವಾ ಎಂದು ಪ್ರಶ್ನಿಸಿದ ಸರ್ಕಾರದ ಪ್ರಮುಖರು ಇದೀಗ ಮುಖ್ಯಮಂತ್ರಿ ಬದಲಾವಣೆಯ ತರಾತುರಿಯಲ್ಲಿ ದಿನಕ್ಕೊಂದು ತಂತ್ರ ಹೆಣೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

ರಾಜ್ಯದಲ್ಲಿ ಕರೋನಾ ಎರಡನೆಯ ಅಲೆಯ ರುದ್ರ ತಾಂಡವದ ನಡುವೆ ದಿನಕ್ಕೆ ನೂರಾರು ಸಾವುಗಳು ಸಂಭವಿಸುತ್ತಿರುವಾಗ, ರಾಮರಾಜ್ಯದ ಮಾತನಾಡುವ ಬಿಜೆಪಿಯ ನಾಯಕರು ನಾಯಕತ್ವ ಬದಲಾವಣೆಗಾಗಿ ದೆಹಲಿಗೂ ಬೆಂಗಳೂರಿಗೆ ಕುಂಟಾಬಿಲ್ಲೆಯಾಡುತ್ತಿದ್ದರು. ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ, ಆ್ಯಂಬುಲೆನ್ಸ್ ಸಿಗದೆ, ಆಮ್ಲಜನಕ ಸಿಗದೆ ಜನ ಹಾದಿಬೀದಿಯ ಹೆಣವಾಗುತ್ತಿರುವಾಗ ಕೂಡ ಬಿ ಎಸ್ ಯಡಿಯೂರಪ್ಪ ಕುರ್ಚಿಯ ಕಾಲು ಎಳೆಯುವ ಆಟ ಮುಂದುವರಿದಿತ್ತು. ಕಳೆದ ಹದಿನೈದು ದಿನಗಳಿಂದ ಆ ಹಗ್ಗಜಗ್ಗಾಟ ಭರ್ಜರಿ ವೇಗ ಪಡೆದುಕೊಂಡಿತ್ತು. ನಾಯಕರ ತಂತ್ರ-ಪ್ರತಿತಂತ್ರ, ಬಣ, ಗುಂಪುಗಾರಿಕೆ, ಹೇಳಿಕೆ-ಪ್ರತಿಹೇಳಿಕೆಗಳ ನಡುವೆ ಆಡಳಿತ ವ್ಯವಸ್ಥೆ ಹಳ್ಳಹಿಡಿದು, ಜನರ ನೋವು ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಸ್ವತಃ ಆಡಳಿತ ಪಕ್ಷದ ನಾಯಕರೇ ರಾಜ್ಯದಲ್ಲಿ ಸರ್ಕಾರ ಎಂಬುದೊಂದು ಇದೆಯೇ ಎಂದು ಕೇಳುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು.
2ನೇ ಹಂತದ ಹೋರಾಟಕ್ಕೆ ಸಜ್ಜಾಗುತ್ತಿರುವ ಬಿಜೆಪಿ ಭಿನ್ನರು
ಅದು ಸಾಲದು ಎಂಬಂತೆ ಸಾವಿರಾರು ಕೋಟಿ ರೂಪಾಯಿ ಕಿಕ್ ಬ್ಯಾಕ್ ಹಗರಣ, ಟೆಲಿಫೋನ್ ಕದ್ದಾಲಿಕೆ, ಬೆಡ್ ಬ್ಲಾಕಿಂಗ್, ವ್ಯಾಕ್ಸಿನ್ ಬ್ಲಾಕಿಂಗ್ ಮೂಲಕ ಜನರ ಸಂಕಷ್ಟದ ನಡುವೆಯೂ ದುಡ್ಡು ಮಾಡುವ ಪರಮ ನೀಚ ದಂಧೆಕೋರತನಕ್ಕೆ ಬಿಜೆಪಿ ನಾಯಕರು ಇಳಿದಿದ್ದಾರೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದವು. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ವರಿಷ್ಠರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಯತ್ನ ನಡೆಸಿದ್ದರು. ಪರಿಣಾಮವಾಗಿ ಕಳೆದ ಒಂದು ವಾರದಿಂದ ಕನಿಷ್ಟ ಸಾರ್ವಜನಿಕವಾಗಿ ಆಡಳಿತ ಪಕ್ಷದ ಕುರ್ಚಿ ಕುಂಟೋಬಿಲ್ಲೆ ನಿಂತಂತೆ ಭಾಸವಾಗುತ್ತಿದೆ.
ಅರುಣ್ ಸಿಂಗ್ ಅವರನ್ನು ಭೇಟಿಯಾಗದ ಬೆಲ್ಲದ್-ಯತ್ನಾಳ್: BSY ಪರ ಹೇಳಿಕೆ ದಾಖಲಿಸಿದ 35 ಶಾಸಕರು
ಹೀಗೆ ಆಡಳಿತ ಪಕ್ಷದ ನಾಯಕತ್ವ ಬದಲಾವಣೆಯ ಸರ್ಕಸ್ ಬದಿಗೆ ಸರಿಯುತ್ತಿರುವಂತೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಹೊಸ ಪ್ರದರ್ಶನ ಶುರುವಿಟ್ಟುಕೊಂಡಿದೆ. ವಿಧಾನಸಭಾ ಚುನಾವಣೆಗೆಇನ್ನೂ ಎರಡು ವರ್ಷ ಕಾಲಾವಕಾಶವಿರುವಾಗಲೇ ಕಾಂಗ್ರೆಸ್ ನಾಯಕರ ನಡುವೆ ಸಿಎಂ ಕುರ್ಚಿಯ ಹಗ್ಗಜಗ್ಗಾಟ ಆರಂಭವಾಗಿರುವುದು ಸಹಜವಾಗೇ ರಾಜ್ಯ ರಾಜಕಾರಣದ ಬಿಸಿಬಿಸಿ ಚರ್ಚೆಯ ವಸ್ತುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಪಕ್ಷದ ರಾಜ್ಯ ಘಟಕದ ಹೊಣೆಹೊತ್ತ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳ ಬದಲಾವಣೆಗಾಗಿ ಪಟ್ಟಿ ಸಿದ್ಧಪಡಿಸಿಕೊಂಡು ಹೈಕಮಾಂಡ್ ಅನುಮೋದನೆ ಪಡೆಯಲು ದೆಹಲಿಗೆ ಹೊರಟುನಿಂತ ಹೊತ್ತಲ್ಲೇ ಮಾಜಿ ಸಚಿವ ಹಾಗೂ ಶಾಸಕ ಜಮೀರ್ ಅಹಮದ್ ಬೆಂಗಳೂರಿನಲ್ಲಿ ನೀಡಿದ ಒಂದು ಹೇಳಿಕೆ, ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ಸಿನ ಅರ್ಧ ಡಜನ್ ಗೂ ಹೆಚ್ಚಿನ ನಾಯಕರ ನಡುವೆ ತುರುಸಿನ ಪೈಪೋಟಿಗೆ ಚಾಲನೆ ನೀಡಿತು.
ನಾಯಕತ್ವ ಬಗ್ಗೆ ಚಿಂತೆಯಿಲ್ಲ; ಪಕ್ಷದ ವರ್ಚಸ್ಸೇ ಮುಖ್ಯ – BJPಯಲ್ಲಿ ಮೂರನೆ ಬಣ!
ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಜಮೀರ್ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಬ್ಯಾಟಿಂಗ್ ಮಾಡುತ್ತಿದ್ದಂತೆ ಸ್ವತಃ ಡಿ ಕೆ ಶಿವಕುಮಾರ್, ಡಾ ಜಿ ಪರಮೇಶ್ವರ್, ವಿಧಾನಪರಿಷತ್ ಪ್ರತಿ ಪಕ್ಷ ನಾಯಕ ಎಸ್ ಆರ್ ಪಾಟೀಲ್ ಸೇರಿದಂತೆ ಸಾಲು ಸಾಲು ನಾಯಕರು, ತಾವೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳೇ, ತಾವೇನೂ ಸನ್ಯಾಸಿಗಳಲ್ಲ ಎಂಬರ್ಥದ ಹೇಳಿಕೆಗಳನ್ನು ನೀಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯ ಪ್ರಶ್ನಾತೀತ ಆಯ್ಕೆಯೇನಲ್ಲ ಎಂಬ ಸಂದೇಶ ನೀಡಿದರು. ಡಿ ಕೆ ಶಿವಕುಮಾರ್ ಅವರಂತೂ ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಹೇಳಿಕೆ ನೀಡುವವ ಪಕ್ಷದ ಶಾಸಕರು ಮತ್ತು ನಾಯಕರ ವಿರುದ್ದ ಕೆಂಡಕಾರಿದರು.
ವಿವಾದ ಎಷ್ಟರಮಟ್ಟಿಗೆ ಗಂಭೀರ ಸ್ವರೂಪ ಪಡೆಯಿತೆಂದರೆ; ಸ್ವತಃ ಸಿದ್ದರಾಮಯ್ಯ ಮಾಧ್ಯಮಗಳ ಮೂಲಕ ಮುಂದಿನ ಮುಖ್ಯಮಂತ್ರಿ ಎಂದು ತಮ್ಮನ್ನು ಕರೆಯದಂತೆ ಮತ್ತು ಮುಖ್ಯಮಂತ್ರಿ ಸ್ಥಾನದ ಕುರಿತು ಯಾವುದೇ ಹೇಳಿಕೆ ನೀಡದಂತೆ ತಮ್ಮ ಬೆಂಬಲಿಗರಿಗೆ ಕರೆಕೊಡುವಂತಾಯಿತು. ಒಟ್ಟಾರೆ, ಕಳೆದ ಒಂದು ವಾರದಿಂದ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಚರ್ಚೆಯಾಗುತ್ತಿರುವ ಸಂಗತಿ ಕೇವಲ ಮುಖ್ಯಮಂತ್ರಿ ಹುದ್ದೆಗೆ ಯಾರು ಎಂಬುದಷ್ಟೇ.
ರಾಜ್ಯಪಾಲರು ಮಧ್ಯೆಪ್ರವೇಶಿಸಿ ನಿಷ್ಕ್ರಿಯ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು: ಸಿದ್ದರಾಮಯ್ಯ ಒತ್ತಾಯ
ಅಂದರೆ; ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ, ಜನರ ಸಂಕಟ ದೂರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದ್ದ ಮತ್ತು ಆಡಳಿತ ಪಕ್ಷ, ಸರ್ಕಾರದ ಮೇಲೆ ಒತ್ತಡ ಹೇರಿ ಜನಪರ ಕೆಲಸಕ್ಕೆ ಪಟ್ಟುಹಿಡಿಯಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್, ಎರಡು ವರ್ಷಗಳ ಬಳಿಕ ಬರಲಿರುವ ಚುನಾವಣೆಯಲ್ಲಿ ಅಗತ್ಯ ಬಹುಮತದೊಂದಿಗೆ ಗೆದ್ದು ಬಂದಾಗ ಮಾತ್ರ ಉದ್ಭವಿಸಬಹುದಾದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ವಿಷಯವನ್ನು ಇಟ್ಟುಕೊಂಡು ಜನರಿಗೆ ಮನರಂಜನೆ ನೀಡುತ್ತಿದೆ! ಇದು ಪ್ರತಿಪಕ್ಷವಾಗಿ ಕಾಂಗ್ರೆಸ್ ತೋರುತ್ತಿರುವ ಹೊಣೆಗಾರಿಕೆ ಮತ್ತು ಜನಪರ ಧೋರಣೆ!
ಬಿಜೆಪಿ ಭಿನ್ನರಿಗೆ ಈಶ್ವರಪ್ಪ ಮೂಲಕ ಪರೋಕ್ಷ ಸಂದೇಶ ನೀಡಿತೆ ಹೈಕಮಾಂಡ್?
ಒಂದು ಕಡೆ ಆಡಳಿತ ಪಕ್ಷ ಇರುವ ನಾಯಕರನ್ನು ಬದಲಾಯಿಸಿ, ಮತ್ತೊಬ್ಬರನ್ನು ಕೂರಿಸುವ ಸರ್ಕಸ್ ನಡೆಸುತ್ತಾ ಕಾಲಹರಣ ಮಾಡುತ್ತಿದ್ದರೆ, ಮತ್ತೊಂದು ಕಡೆ ಪ್ರತಿಪಕ್ಷ ಕೂಸು ಹುಟ್ಟುವ ಮುನ್ನೇ ಕುಲಾವಿ ಹೊಲಿಯುತ್ತಾ ಕಾಲಹರಣ ಮಾಡುತ್ತಿದೆ. ಕರ್ನಾಟಕದ ಜನರ ಪಾಲಿಗೆ ಇದಕ್ಕಿಂತ ದೌರ್ಭಾಗ್ಯದ ಸಂಗತಿ ಮತ್ತೊಂದಿದೆಯೇ?