ಭಾರತದ ಎರಡನೆಯ ಅತಿ ದೊಡ್ಡ ಶ್ರೀಮಂತ ಗೌತಮ್ ಅದಾನಿಗೆ ಭಾರೀ ಆಘಾತ ಎದುರಾಗಿದೆ. ತನ್ನ ಸಮೂಹ ಸಂಸ್ಥೆಗಳಿಗೆ ಹೂಡಿಕೆ ಮಾಡಿದ್ದ ಮೂರು ವಿದೇಶಿ ಖಾತೆಗಳನ್ನು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ಮುಟ್ಟುಗೋಲು ಹಾಕಿಕೊಂಡಿದೆ. ಈ ವಿಚಾರ ಬಹಿರಂಗವಾದ ಬೆನ್ನಲ್ಲೇ ಸೋಮವಾರದ ಬೆಳಗ್ಗಿನ ವಹಿವಾಟಿನಲ್ಲಿ ‘ಅದಾನಿ ಎಂಟರ್ಪ್ರೈಸಸ್’ ಷೇರು ಮೌಲ್ಯವು ಸುಮಾರು ಶೇ 25ರಷ್ಟು ಕುಸಿತ ಕಂಡಿದೆ.
ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಮೂರು ವಿದೇಶೀ ಫಂಡ್ಸ್ಗಳಾದ Albula ಇನ್ವೆಸ್ಟ್ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಹಾಗೂ ಎಪಿಎಂಎಸ್ ಇನ್ವೆಸ್ಟ್ಮೆಂಟ್ ಫಂಡ್ ಖಾತೆಗಳನ್ನು ಮುಟ್ಟುಗೋಲು ಹಾಕಿದೆ. ಇವುಗಳ ಬಳಿ ಅದಾನಿ ಗ್ರೂಪ್ನ ನಾಲ್ಕು ಕಂಪನಿಯ 43,500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಶೇರು ಇದೆ.
ಅಕೌಂಟ್ ಫ್ರೀಜ್ ಆಗಿರುವ ಕಾರಣ ನಿಧಿಗಳಿಗೆ ಅಸ್ತಿತ್ವದಲ್ಲಿರುವ ಯಾವುದೇ ಸೆಕ್ಯೂರಿಟಿಗಳನ್ನು ಮಾರಾಟ ಮಾಡಲು ಅಥವಾ ಯಾವುದೇ ಹೊಸ ಸೆಕ್ಯೂರಿಟಿಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಕೂಡ ಠೇವಣಿದಾರರ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಅದಾನಿ ಗ್ರೂಪ್ನಲ್ಲಿ ಹೂಡಿಕೆ ಮಾಡಿದ ವಿದೇಶಿ ನಿಧಿಗಳನ್ನು ಸ್ಥಗಿತಗೊಳಿಸಿದ ಪರಿಣಾಮ ಅದಾನಿ ಷೇರುಗಳು ಶೇಕಡಾ 5ರಿಂದ 25ರಷ್ಟು ಕುಸಿತಗೊಂಡಿವೆ. ಕಂಪನಿಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಮೂರು ವಿದೇಶಿ ನಿಧಿಗಳ ಖಾತೆಗಳನ್ನು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಸ್ಥಗಿತಗೊಳಿಸಿದ ನಂತರ ಅದಾನಿ ಕಂಪೆನಿಗಳ ಷೇರುಗಳು ತೀವ್ರ ಕುಸಿತಗೊಂಡಿವೆ.
ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಲಾಭದಾಯಕ ಮಾಲೀಕತ್ವದ ಬಗ್ಗೆ ಈ ವಿದೇಶಿ ನಿಧಿಗಳು ಮಾಹಿತಿಯನ್ನು ಸಾಕಷ್ಟು ಬಹಿರಂಗಪಡಿಸದ ಕಾರಣ ಮೂರು ಖಾತೆಗಳ ಸ್ಥಗಿತವಾಗಿದೆ ಎಂದು ವಿದೇಶಿ ಹೂಡಿಕೆದಾರರನ್ನು ನಿಭಾಯಿಸುವ ಕಸ್ಟೋಡಿಯನ್ ಬ್ಯಾಂಕುಗಳ ಅಧಿಕಾರಿಗಳು ತಿಳಿಸಿದ್ದಾರೆ. ಪಿಎಂಎಲ್ಎ ಸಾಮಾನ್ಯವಾಗಿ ಮಾಹಿತಿ ಹಾಗೂ ಕ್ರಮದ ಬಗ್ಗೆ ಗ್ರಾಹಕರಿಗೆ ಮೊದಲು ಎಚ್ಚರಿಕೆ ನೀಡುತ್ತಾರೆ. ಇದಕ್ಕೆ ಅವರು ಸ್ಪಂದಿಸದಿದ್ದರೆ ಅಥವಾ ಅನುಸರಿಸಲು ವಿಫಲವಾದರೆ ಖಾತೆಗಳನ್ನು ಮುಟ್ಟುಗೋಲು ಹಾಕಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಸದ್ದು ಮಾಡಿದ ಸುಚೇತ ದಲಾಲ್ ಟ್ವೀಟ್
ಅದಾನಿ ಸಮೂಹದ ಷೇರುಗಳು ಕುಸಿತಗೊಳ್ಳುತ್ತಿದ್ದಂತೆಯೇ ಎರಡು ದಿನಗಳ ಹಿಂದೆ ವಾಣಿಜ್ಯ ಪತ್ರಕರ್ತೆ ಸುಚೇತ ದಲಾಲ್ ಅವರು ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.
ಸುಚೇತ ಅವರು ಅಂಬಾನಿ ಕಂಪನಿಯ ಹೆಸರನ್ನು ಉಲ್ಲೇಖಿಸದೇ ಕಂಪನಿಯ ಒಳಗೆ ನಡೆದಿರುವ ಲಾಭಿ ಕುರಿತು ಹಾಗೂ ಷೇರುಗಳ ಪರವಾಗಿ ಸಂಭವನೀಯ ಹಗರಣದ ಬಗ್ಗೆ ಸುಳಿವಿರುವ ನೀಡಿದ್ದರು. ಈ ಟ್ವೀಟ್ನಲ್ಲಿ ಕಂಪನಿಯ ಹೆಸರು ಉಲ್ಲೇಖಿಸದೇ ಇದ್ದರೂ ವಾಣಿಜ್ಯ ಕ್ಷೇತ್ರದ ಮಾಹಿತಿ ಇರುವವರಿಗೆ ಮೇಲ್ನೋಟಕ್ಕೆ ಅದಾನಿ ಗ್ರೂಪ್ ಎಂದು ಮನದಟ್ಟಾಗುತ್ತದೆ.





