ಒಂದು ಕಡೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕರೋನಾ ಬಿಕ್ಕಟ್ಟಿನ ಅತೀವ ಕಾರ್ಯದೊತ್ತಡದ ನಡುವೆಯೂ ದಿಢೀರನೇ ತವರು ಕ್ಷೇತ್ರ ಶಿಕಾರಿಪುರಕ್ಕೆ ತೆರಳಿದ್ದರೆ, ಮತ್ತೊಂದು ಕಡೆ ಅವರ ವಿರೋಧಿ ಬಣದ ಮುಂಚೂಣಿ ನಾಯಕರೆಂದೇ ಗುರುತಿಸಿಕೊಂಡಿರುವ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖವಾಗಿ ಹೆಸರು ಕೇಳಿಬರುತ್ತಿರುವ ಶಾಸಕ ಅರವಿಂದ್ ಬೆಲ್ಲದ್ ದೆಹಲಿಗೆ ತೆರಳಿದ್ದಾರೆ!
ಆಡಳಿತ ಪಕ್ಷದ ಈ ಬೆಳವಣಿಗೆ ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದ್ದು, ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆಯ ಹಾವುಏಣಿಯ ಆಟ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ.
ನಾಯಕತ್ವ ಬದಲಾವಣೆಯ ಚರ್ಚೆ ಬಿರುಸುಗೊಂಡಿರುವ ನಡುವೆಯೇ ಕಳೆದ ಭಾನುವಾರ ಸ್ವತಃ ಸಿಎಂ ಯಡಿಯೂರಪ್ಪ ಆ ಬಗ್ಗೆ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿ, ಪಕ್ಷದ ದೆಹಲಿಯ ವರಿಷ್ಠರು ಹೇಳಿದರೆ ಆ ಕ್ಷಣದಲ್ಲೇ ರಾಜೀನಾಮೆ ನೀಡಲು ಸಿದ್ಧ ಮತ್ತು ಪಕ್ಷದಲ್ಲಿ ತಮ್ಮನ್ನು ಬಿಟ್ಟರೆ ಮತ್ತೊಬ್ಬ ನಾಯಕರಿಲ್ಲ ಎಂಬುದು ಸುಳ್ಳು. ಸಾಕಷ್ಟು ಪರ್ಯಾಯ ನಾಯಕರಿದ್ದಾರೆ ಎಂದು ಹೇಳುವ ಮೂಲಕ ಇಡೀ ಚರ್ಚೆಗೆ ಹೊಸ ಆಯಾಮ ನೀಡಿದ್ದರು.
ಅದಾದ ಬಳಿಕ ಹಲವು ಹಿರಿಯ ಸಚಿವರು, ಸಿಎಂ ಆಪ್ತರು ಅವರ ಪರ ಹೇಳಿಕೆ ನೀಡಿ, ನಾಯಕತ್ವ ಬದಲಾವಣೆಯ ಕುರಿತ ಹೇಳಿಕೆಗಳಿಗೆ ವರಿಷ್ಠರು ಕೂಡಲೇ ಕಡಿವಾಣ ಹಾಕಬೇಕು ಮತ್ತು ಯಡಿಯೂರಪ್ಪ ನಾಯಕತ್ವದಲ್ಲಿ ಕರೋನಾ ಸಂಕಷ್ಟದಂತಹ ಬಿಕ್ಕಟ್ಟಿನ ಹೊತ್ತಲ್ಲಿ ಸುಸೂತ್ರ ಸರ್ಕಾರ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು. ಮತ್ತೊಂದು ಕಡೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಸಿಎಂ ಬೆಂಬಲಿಸಿ ಹೇಳಿಕೆ ನೀಡಿ, ಯಡಿಯೂರಪ್ಪ ಪರ ಶಾಸಕರ ಸಹಿ ಸಂಗ್ರಹ ಮಾಡುವುದಾಗಿ ಘೋಷಿಸಿದ್ದರು.
ಆದರೆ, ರೇಣುಕಾಚಾರ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಹ್ಲಾದ್ ಜೋಷಿ, ಕೆ ಎಸ್ ಈಶ್ವರಪ್ಪ, ಆರ್ ಅಶೋಕ್ ಮುಂತಾದವರು ಯಡಿಯೂರಪ್ಪ ನೇತೃತ್ವದಲ್ಲಿ ತಮ್ಮ ಸರ್ಕಾರ ಮುಂದುವರಿಯಲಿದೆ ಮತ್ತು ಈ ಅವಧಿಯನ್ನು ಅವರ ನೇತೃತ್ವದಲ್ಲೇ ಪೂರೈಸಲಾಗುವುದು. ಹಾಗಾಗಿ ಇಂತಹ ವಿಷಯದಲ್ಲಿ ಸಹಿ ಸಂಗ್ರಹದಂತಹ ಪ್ರಯತ್ನವನ್ನು ಮಾಡುವುದು ಸರಿಯಲ್ಲ ಎಂದು ಹೇಳಿದ್ದರು. ಆ ನಡುವೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಪ್ರತಿಕ್ರಿಯಿಸಿ, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಆವರೆಗಿನ ಎಲ್ಲಾ ವಿದ್ಯಮಾನಗಳಿಗೆ ತೆರೆ ಎಳೆದಿದ್ದರು.
ಆದರೆ ಅದಾದ ಬೆನ್ನಲ್ಲೇ ಶಾಸಕ ವಿ ಸುನೀಲ್ ಕುಮಾರ್, ನಾಯಕತ್ವ ಬದಲಾವಣೆಯ ವಿಷಯದಲ್ಲಿ ಯಾರೋ ಕೆಲವರ ಅಭಿಪ್ರಾಯವೇ ಬಿಜೆಪಿಯ ಶಾಸಕರ ಅಭಿಮತವಲ್ಲ. ಹಾಗಾಗಿ ಎಲ್ಲಾ ಶಾಸಕರ ಭಾವನೆಗಳಿಗೂ ಬೆಲೆ ಕೊಟ್ಟು ಶಾಸಕರ ಸಭೆ ಕರೆಯಬೇಕು ಎನ್ನುವ ಮೂಲಕ, ಶಾಸಕಾಂಗ ಪಕ್ಷದ ಸಭೆಗೆ ಒತ್ತಾಯಿಸಿದ್ದರು. ಸಹಜವಾಗೇ ಆ ಹೇಳಿಕೆ, ಬಿಜೆಪಿಯಲ್ಲಿ ಎಲ್ಲವೂ ಸರಿಹೋಗಿಲ್ಲ. ನಾಯಕತ್ವ ಬದಲಾವಣೆಯ ಕುರಿತ, ಆರ್ ಎಸ್ ಎಸ್ ಪರಿವಾರ ಹಿನ್ನೆಲೆಯ ಯಡಿಯೂರಪ್ಪ ವಿರೋಧಿ ಬಣದ ಯತ್ನಗಳು ನಿಂತಿಲ್ಲ ಎಂಬ ಸಂದೇಶ ನೀಡಿತ್ತು. ಆ ಹೇಳಿಕೆಯ ಮರುದಿನವೇ ಸ್ವತಃ ಯಡಿಯೂರಪ್ಪ ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೇ ರಾಜಧಾನಿ ತೊರೆದು ಶಿಕಾರಿಪುರಕ್ಕೆ ಎರಡು ದಿನಗಳ ಭೇಟಿಗೆ ಬಂದಿದ್ದಾರೆ.
ಶಿಕಾರಿಪುರಕ್ಕೆ ಸಿಎಂ ದೀಢೀರ್ ಭೇಟಿ ನೀಡುತ್ತಲೇ ನಾಯಕತ್ವ ಬದಲಾವಣೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿತ್ತು. ಆದರೆ, ಪ್ರವಾಸದ ನಡುವೆ ಹಾಸನದಲ್ಲಿ ಮಾತನಾಡಿದ್ದ ಯಡಿಯೂರಪ್ಪ, ಮುಂದಿನ ಎರಡು ವರ್ಷ ತಾವೇ ಸಿಎಂ ಎಂದಿದ್ದರು. ಆದರೆ, ಅವರು ಶಿವಮೊಗ್ಗ ತಲುಪುವ ಹೊತ್ತಿಗೆ ಸಾಕಷ್ಟು ಬೆಳವಣಿಗೆಗಳು ನಡೆದು, ಶಿವಮೊಗ್ಗದ ಸಿಎಂ ಆಪ್ತ ಮಠಾಧೀಶರು, ಸಿಎಂ ಪರ ಬ್ಯಾಟಿಂಗ್ ಆರಂಭಿಸಿದರು. ಕರೋನಾ ಸಂಕಷ್ಟದ ಹೊತ್ತಲ್ಲಿ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಕರೋನಾಕ್ಕಿಂತ ಭೀಕರ ಸಂಕಷ್ಟ ಎದುರಿಸಬೇಕಾಗುತ್ತದೆ ಎನ್ನುವ ಮೂಲಕ ಮಠಾಧೀಶರು, ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುವುದು ಸದ್ಯದ ಸ್ಥಿತಿಯಲ್ಲಿ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದರು.
ಅದೇ ಹೊತ್ತಿಗೆ, ಕೇಂದ್ರ ಸಂಪುಟ ವಿಸ್ತರಣೆಯ ಭಾಗವಾಗಿ ಯುವ ಸಂಸದರಿಗೆ ಅವಕಾಶ ನೀಡಲು ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು.
ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಇಳಿಸುವ ವಿಷಯದಲ್ಲಿ ವರಿಷ್ಠರು ಅಂತಿಮ ತೀರ್ಮಾನಕ್ಕೆ ಬಂದಿದ್ದು, ಅವರನ್ನು ದಕ್ಷಿಣದ ರಾಜ್ಯವೊಂದಕ್ಕೆ ರಾಜ್ಯಪಾಲರಾಗಿ ನೇಮಕ ಮಾಡಲಿದ್ದಾರೆ. ಜೊತೆಗೆ ಅವರ ಹಿರಿಯ ಪುತ್ರ ಸಂಸದ ರಾಘವೇಂದ್ರ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಮತ್ತು ಕಿರಿಯ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಸ್ಥಾನದೊಂದಿಗೆ ಪ್ರಮುಖ ಖಾತೆಯೊಂದನ್ನು ನೀಡುವ ಹೊಂದಾಣಿಕ ಸೂತ್ರ ರೂಪಿಸಲಾಗಿದೆ. ಅದಕ್ಕೆ ಸ್ವತಃ ಸಿಎಂ ಮತ್ತು ಅವರ ಪುತ್ರರೂ ಒಪ್ಪಿದ್ದಾರೆ. ಹಾಗಾಗಿ ನಾಯಕತ್ವ ಬದಲಾವಣೆ ಸನ್ನಿಹಿತ ಎಂಬ ವಿಶ್ಲೇಷಣೆಗಳೂ ಕೇಳಿಬಂದಿವೆ.
ಇದೀಗ, ಮುಖ್ಯಮಂತ್ರಿ ಹುದ್ದೆಗೆ ವರಿಷ್ಠರ ಆಯ್ಕೆ ಎಂದು ಹೇಳಲಾಗುತ್ತಿರುವ ಪ್ರಭಾವಿ ಲಿಂಗಾಯತ ನಾಯಕ ಹಾಗೂ ಸಂಘಪರಿವಾರ ಬೆಂಬಲಿತ ಅರವಿಂದ್ ಬೆಲ್ಲದ್ ದೆಹಲಿ ದೌಡಾಯಿಸಿರುವುದು ಅಂತಹ ವಿಶ್ಲೇಷಣೆಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ. ಜೊತೆಗೆ, ಕಳೆದ ವಾರ ಅರವಿಂದ್ ಬೆಲ್ಲದ್ ಅವರೊಂದಿಗೆ ದೆಹಲಿಗೆ ಹೋಗಿ ನಾಯಕತ್ವ ಬದಲಾವಣೆಯ ವಿಷಯದಲ್ಲಿ ಲಾಬಿ ನಡೆಸಿದ್ದಾರೆ ಎನ್ನಲಾಗುತ್ತಿರುವ ಸಚಿವ ಸಿ ಪಿ ಯೋಗೀಶ್ವರ್ ಕೂಡ ದೆಹಲಿಗೆ ತೆರಳಿದ್ದು, ಬೆಲ್ಲದ್ ಅವರೊಂದಿಗೆ ಅವರೂ ವರಿಷ್ಠರೊಂದಿಗೆ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಅರವಿಂದ್ ಬೆಲ್ಲದ್ ಅವರು ಇಂತಹ ಸುದ್ದಿಗಳನ್ನು ತಳ್ಳಿಹಾಕಿದ್ದು, ತಾವು ಕೌಟುಂಬಿಕ ಕಾರ್ಯಕ್ರಮದ ಸಲುವಾಗಿ ದೆಹಲಿಗೆ ಬಂದಿರುವುದಾಗಿಯೂ, ಪಕ್ಷದ ಯಾವುದೇ ನಾಯಕರನ್ನು ಭೇಟಿಯಾಗುವ ಇರಾದೆ ಇಲ್ಲವೆಂದೂ ಸ್ಪಷ್ಟಪಡಿಸಿದ್ದಾರೆ. ಬೆಲ್ಲದ್ ಅವರ ಈ ಸ್ಪಷ್ಟನೆ ನಡುವೆಯೇ, ರಾಜ್ಯದಲ್ಲಿ ಮತ್ತೊಂದು ಸುದ್ದಿ ರೆಕ್ಕೆಪುಕ್ಕ ಪಡೆದಿದ್ದು, ನಾಯಕತ್ವ ಬದಲಾವಣೆ ಶತಸಿದ್ಧ. ಯಡಿಯೂರಪ್ಪ ಮತ್ತು ಅವರ ಪುತ್ರರಿಗೆ ಸ್ಥಾನಮಾನಗಳ ಹೊಂದಾಣಿಕೆಯ ಸೂತ್ರ ಕೂಡ ಅಂತಿಮವಾಗಿದೆ. ಆ ಹಿನ್ನೆಲೆಯಲ್ಲಿ ಸಿಎಂ ಸ್ಥಾನಾಕಾಂಕ್ಷಿ ಬೆಲ್ಲದ್ ಅವರನ್ನು ವರಿಷ್ಠರೇ ಕರೆಸಿಕೊಂಡು ಮಾತುಕತೆ ನಡೆಸುತ್ತಿದ್ದಾರೆ. ಬೆಲ್ಲದ್ ಜೊತೆಗೆ ಡಿಸಿಎಂ ಅಶ್ವಥನಾರಾಯಣ ಅವರ ಹೆಸರೂ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೆಸರೂ ಪಟ್ಟಿಯಲ್ಲಿದೆ.
ಮೂವರೂ ಸಂಘಪರಿವಾರದ ಕಡೆಯವರೇ ಆಗಿರುವುದು ಮತ್ತು ಮೂವರೂ ತಮ್ಮ ತಮ್ಮ ಸಮುದಾಯಗಳಲ್ಲಿ ಮತ್ತು ಪ್ರಾದೇಶಿಕವಾಗಿ ಸಾಕಷ್ಟು ಪ್ರಭಾವ ಹೊಂದಿರುವುದರಿಂದ ಪಕ್ಷದ ಸಂಘಟನೆ ಮತ್ತು ಭವಿಷ್ಯದ ದೃಷ್ಟಿಯಿಂದ ಸೂಕ್ತ ಆಯ್ಕೆಯನ್ನು ಮಾಡುವ ಬಿಕ್ಕಟ್ಟಿನ ಸ್ಥಿತಿ ವರಿಷ್ಠರ ಮುಂದಿದೆ. ಯಡಿಯೂರಪ್ಪ ಅವರಿಗೆ ಸಿಎಂ ಗಿರಿ ತಪ್ಪುವ ಹಿನ್ನೆಲೆಯಲ್ಲಿ ಮಠಾಧೀಶರು ಮತ್ತು ಲಿಂಗಾಯತ ಮುಖಂಡರು ಅವರ ಪರ ನಿಂತು ಬಿಜೆಪಿಯ ವಿರುದ್ಧ ತಿರುಗಿಬೀಳದಂತೆ ನೋಡಿಕೊಳ್ಳುವ ಭಾಗವಾಗಿ ಈಗಾಗಲೇ ಡಿಸಿಎಂ ಅಶ್ವಥನಾರಾಯಣ ಕೂಡ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೂ, ಲಿಂಗಾಯತ ಸಮುದಾಯದ ತಮ್ಮ ಮತಬ್ಯಾಂಕ್ ಕೈತಪ್ಪದಂತೆ ನೋಡಿಕೊಳ್ಳಲು ಲಿಂಗಾಯತ ಸಮುದಾಯದ ನಾಯಕರನ್ನೇ ಸಿಎಂ ಕುರ್ಚಿಗೆ ಕೂರಿಸುವ ಅನಿವಾರ್ಯತೆ ಇದೆ. ಆದರೆ, ಅದೇ ಹೊತ್ತಿಗೆ ಸಮುದಾಯದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದರೂ, ಆಡಳಿತದ ವಿಷಯದಲ್ಲಿ ಅನನುಭವಿ ಎಂಬುದು ಬೆಲ್ಲದ್ ಅವರಿಗೆ ಹಿನ್ನಡೆ ತರಬಹುದು. ಇನ್ನು ಲಿಂಗಾಯತ ಪಕ್ಷ ಎಂಬ ಹಣೆಪಟ್ಟಿ ಹೊತ್ತಿರುವ ಬಿಜೆಪಿ ಒಕ್ಕಲಿಗರಂತಹ ಹಿಂದುಳಿದ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಲಿದೆ ಎಂಬುದನ್ನು ಸಾಬೀತು ಮಾಡುವ ಮೂಲಕ ಒಕ್ಕಲಿಗ ಮತಬ್ಯಾಂಕ್ ಖಾತರಿಪಡಿಸಿಕೊಳ್ಳಲು ಅಶ್ವಥನಾರಾಯಣ ಆಯ್ಕೆ ಸೂಕ್ತ ಎಂಬ ಮಾತನ್ನೂ ವರಿಷ್ಠರು ಪರಿಶೀಲಿಸುತ್ತಿದ್ದಾರೆ. ಈ ನಡುವೆ ಹಿರಿಯ ನಾಯಕ ಮತ್ತು ಉತ್ತರಕರ್ನಾಟಕದವರು ಎಂಬ ಹಿನ್ನೆಲೆಯಲ್ಲಿ ಪರಿವಾರ ಪ್ರಹ್ಲಾದ್ ಜೋಷಿ ಹೆಸರನ್ನೂ ಮುಂದಿಟ್ಟಿದೆ ಎನ್ನಲಾಗುತ್ತಿದೆ.
ಒಟ್ಟಾರೆ, ಸದ್ಯಕ್ಕೆ ಬಿಜೆಪಿಯ ನಾಯಕತ್ವ ಬದಲಾವಣೆಯ ವಿಷಯ ದಿನದಿಂದ ದಿನಕ್ಕೆ ಊಹಾತೀತ ತಿರುವುಗಳನ್ನು ಪಡೆಯುತ್ತಿದ್ದು, ರಾಜಕೀಯ ವದಂತಿಗಳಿಗೆ ನೀರೆರೆಯುತ್ತಲೇ ಇದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಲೀ, ವರಿಷ್ಠರಾದ ಅಮಿತ್ ಶಾ ಅವರಾಗಲೀ ಈ ವಿಷಯದಲ್ಲಿ ಈವರೆಗೆ ಯಾವ ಪ್ರತಿಕ್ರಿಯೆ ನೀಡದೆ ಮುಗುಮ್ಮಾಗಿರುವುದು ಕೂಡ ಇಂತಹ ಹತ್ತು ಹಲವು ವದಂತಿಗಳಿಗೆ ಇನ್ನಷ್ಟು ಇಂಬು ನೀಡುತ್ತಿದೆ..! ಹಾಗಾಗಿ ಬಿಜೆಪಿಯ ನಾಯಕತ್ವ ಬದಲಾವಣೆ ಎಂಬ ಸಂಗತಿ ದಿನಕ್ಕೊಂದು ತಿರುವು ಪಡೆಯುತ್ತಾ ರೋಚಕ ಪತ್ತೆದಾರಿ ಸಿನಿಮಾದಂತೆ ಸಾಗುತ್ತಲೇ ಇದೆ!