ರಾಜ್ಯ ಬಿಜೆಪಿಯ ನಾಯಕತ್ವ ಗೊಂದಲಗಳು ಬಿಚ್ಚಿದಷ್ಟೂ ಗೋಜಲಾಗುವ ಗಾಳಿಪಟದ ನೂಲಿನ ಉಂಡೆಯಂತಾಗಿದೆ. ಆಡಳಿತದ ಪಟ ಕರೋನಾ ಎಂಬ ಬಿರುಗಾಳಿಗೆ ಸಿಕ್ಕಿ ತರಗೆಲೆಯಾಗಿರುವಾಗ, ಅದರ ಸೂತ್ರದಾರವೇ ಸಿಕ್ಕುಸಿಕ್ಕಾಗಿ, ಯಾವ ಕ್ಷಣದಲ್ಲಿ ಸೂತ್ರ ಹರಿಯುವುದೋ, ಪಟ ದಿಕ್ಕಾಪಾಲಾಗುವುದೋ ಎಂಬಂತಾಗಿದೆ.
ಭಿನ್ನಮತೀಯ ನಾಯಕರ ದೆಹಲಿ ಭೇಟಿ, ಅದರ ಬೆನ್ನಲ್ಲೇ ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ದೆಹಲಿ ಭೇಟಿ, ಬಳಿಕ ಸ್ವತಃ ಸಿಎಂ ಸಂಚಲನಕಾರಿ ಹೇಳಿಕೆ, ..ಹೀಗೆ ಕಳೆದ ಎರಡು ವಾರದ ಬಿರುಸಿನ ಬೆಳವಣಿಗೆಗಳು ನಾಯಕತ್ವ ಬದಲಾವಣೆಯ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದವು. ಬಳಿಕ, ವರಿಷ್ಠರು ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ದ ಎಂಬ ಯಡಿಯೂರಪ್ಪ ಹೇಳಿಕೆ ಮತ್ತು ಅದರ ಬೆನ್ನಲ್ಲೇ ಬಹುತೇಕ ಬಿಜೆಪಿ ಸಚಿವರು, ಶಾಸಕರು, ಸಂಸದರು ಅವರ ಪರ ಬೆಂಬಲ ವ್ಯಕ್ತಪಡಿಸಿ ಸರಣಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ನಾಯಕತ್ವ ಬದಲಾವಣೆಯ ಪ್ರಸ್ತಾಪಗಳು ಸದ್ಯಕ್ಕೆ ಹಿಂದೆ ಸರಿದಂತಾಗಿದೆ ಎಂದೇ ಅಂದಾಜಿಸಲಾಗಿತ್ತು.

ಆದರೆ, ಅದಾದ ಮಾರನೇ ದಿನ ಮುಖ್ಯ ಸಚೇತನ ವಿ ಸುನೀಲ್ ಕುಮಾರ್ ನಾಯಕತ್ವ ಬದಲಾವಣೆಯ ವಿಷಯದಲ್ಲಿ ಯಾರೋ ಒಬ್ಬಿಬ್ಬರ ಹೇಳಿಕೆಗಳೇ ಅಂತಿಮವಲ್ಲ; ಶಾಸಕಾಂಗ ಪಕ್ಷದ ಸಭೆ ಕರೆದು ಎಲ್ಲರ ಅಭಿಪ್ರಾಯ ಕೇಳಬೇಕು ಎಂಬ ಹೇಳಿಕೆ ಮೂಲಕ, ಪಕ್ಷದಲ್ಲಿ ಯಡಿಯೂರಪ್ಪ ನಾಯಕತ್ವದ ಕುರಿತು ಅಧಿಕೃತ ಬೆಂಬಲ ಪಡೆಯುವ ಪ್ರಕ್ರಿಯೆಯ ಬಗ್ಗೆ ಪ್ರಸ್ತಾಪಿಸಿದ್ದರು. ಅವರ ಆ ಹೇಳಿಕೆ ಸಹಜವಾಗಿಯೇ ನಾಯಕತ್ವ ಬದಲಾವಣೆಯ ಪ್ರಶ್ನೆಯನ್ನು ಶಾಸಕಾಂಗ ಪಕ್ಷದ ಸಭೆಯ ಮಟ್ಟಕ್ಕೆ ವಿಸ್ತರಿಸಿತ್ತು.
ಅದಾದ ಬೆನ್ನಲ್ಲೇ ಸಿಎಂ ಪುತ್ರ ಮತ್ತು ಸದ್ಯದ ರಾಜ್ಯ ರಾಜಕಾರಣದ ತೆರೆಮರೆಯ ಸೂತ್ರದಾರ ಎಂದೇ ಹೇಳಲಾಗುತ್ತಿರುವ ಬಿ ವೈ ವಿಜಯೇಂದ್ರ ಸಿದ್ದಗಂಗಾ ಮತ್ತು ಮುರುಘಾ ಮಠಗಳಿಗೆ ಭೇಟಿ ನೀಡಿ, ಸ್ವಾಮೀಜಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ವಿಜಯೇಂದ್ರ ಅವರು ಬಹುತೇಕ ಗೌಪ್ಯವಾಗಿ ಈ ಭೇಟಿಗಳನ್ನು ಮಾಡಿದ್ದು, ಮುಖ್ಯವಾಗಿ ತಮ್ಮ ತಂದೆಯ ವಿರುದ್ಧ ನಡೆಯುತ್ತಿರುವ ರಾಜಕೀಯ ಷಢ್ಯಂತ್ರಗಳು ಮತ್ತು ಮುಂದಿನ ದಿನಗಳಲ್ಲಿ ಮಠಮಾನ್ಯಗಳಿಂದ ಅವರಿಗೆ ಅಗತ್ಯಬೀಳಬಹುದಾದ ಬೆಂಬಲದ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ಮೇಲ್ನೋಟಕ್ಕೆ ವಿಜಯೇಂದ್ರ ಅವರ ಸ್ವಾಮೀಜಿಗಳ ಭೇಟಿ ತಮ್ಮ ತಂದೆಯ ಸಿಎಂ ಕುರ್ಚಿಗೆ ಪಕ್ಷದೊಳಗೇ ಇರುವ ಮತ್ತೊಂದು ಬಣದಿಂದ ಕಂಟಕ ಬಂದ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರ, ಜಾತಿ ಮಠಾಧೀಶರ ಬೆಂಬಲ ಪಡೆಯಲು ನಡೆಸಿದ ಯತ್ನ ಎನಿಸುವುದು ಸಹಜ. ಆದರೆ, ಮೂಲಗಳ ಪ್ರಕಾರ, ಈ ಭೇಟಿಗಳ ಹಿಂದೆ ಸದ್ಯದ ಸಿಎಂ ಕುರ್ಚಿಯನ್ನೂ ಮೀರಿದ ಲೆಕ್ಕಚಾರಗಳಿವೆ. ದೆಹಲಿಯಲ್ಲಿ ಮೂರು ದಿನವಿದ್ದು ನಾಯಕತ್ವ ಬದಲಾವಣೆಯ ಕುರಿತ ಪಕ್ಷದ ಒಂದು ಬಣದ ಪ್ರಯತ್ನಗಳಿಗೆ ತೆರೆ ಎಳೆಯಬೇಕು. ಬಹಿರಂಗ ಹೇಳಿಕೆ ನೀಡಿರುವವರ ಬಾಯಿಮುಚ್ಚಿಸಬೇಕು. ಹಾಗೆ ಮಾಡದೆ, ಒಂದು ವೇಳೆ ಆ ಬಣದ ಆರೋಪಗಳು, ಒತ್ತಡಗಳಿಗೆ ಮಣಿದು ನಾಯಕತ್ವ ಬದಲಾವಣೆಗೆ ಮುಂದಾದರೆ, ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಸವಾಲೆಸೆದು ಬಂದಿರುವ ವಿಜಯೇಂದ್ರ, ಆ ಮುಂದಿನ ದಾರಿಯ ನೀಲನಕಾಶೆ ಹಿಡಿದು ಮಠಮಾನ್ಯಗಳ ಯಾತ್ರೆ ಆರಂಭಿಸಿದ್ದಾರೆ ಎಂಬುದು ಆಂತರಿಕ ವಲಯದ ಮಾಹಿತಿ!
ಹೀಗೆ ವಿಜಯೇಂದ್ರ ತಮ್ಮ ತಂದೆಯ ಸದ್ಯದ ಅಧಿಕಾರದ ಕುರ್ಚಿಯನ್ನೂ ಮೀರಿ, ಭವಿಷ್ಯದ ರಾಜಕಾರಣದ ಲೆಕ್ಕಾಚಾರಗಳ ಮೇಲೆ ತಂತ್ರಗಾರಿಕೆಗಳನ್ನು ಹೆಣೆಯುತ್ತಿರುವ ಹೊತ್ತಿಗೇ, ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಪಕ್ಷದ ಹೈಕಮಾಂಡ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂಲಕ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿಕೆ ನೀಡಿದೆ. ಡ್ಯಾಮೇಜ್ ಕಂಟ್ರೋಲ್ ಮುಂದಿನ ಕ್ರಮವಾಗಿ ಅರುಣ್ ಸಿಂಗ್ ಸ್ವತಃ ಮುಂದಿನ ವಾರ ರಾಜ್ಯಕ್ಕೆ ಆಗಮಿಸುತ್ತಿದ್ದು, ಸಿಎಂ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖರೊಂದಿಗೆ ಮಾತುಕತೆ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದಾಗಿ ಹೇಳಲಾಗಿದೆ. ಆದರೆ, ಕಳೆದ ವಾರದ ದೆಹಲಿ ಭೇಟಿ ವೇಳೆ ವಿಜಯೇಂದ್ರ ಹಾಕಿದ ಸವಾಲಿನಿಂದ ಕನಲಿರುವ ಪಕ್ಷದ ವರಿಷ್ಠರು, ಯಡಿಯೂರಪ್ಪ ಮತ್ತು ಅವರ ಪುತ್ರ ವಿರುದ್ಧದ ಗಂಭೀರ ಆರೋಪಗಳು, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಭಾರೀ ಭ್ರಷ್ಟಾಚಾರ, ಆಡಳಿತ ಹಸ್ತಕ್ಷೇಪ, ಸ್ವಜನ ಪಕ್ಷಪಾತಿ ಧೋರಣೆಗಳ ವಿಷಯದಲ್ಲಿ ಅವರನ್ನು ನಿಯಂತ್ರಿಸುವುದು ಹೇಗೆ? ಪಕ್ಷದ ವರ್ಚಸ್ಸು ಕಾಯುವುದು ಹೇಗೆ? ಎಂಬ ಇಕ್ಕಟ್ಟಿಗೆ ಸಿಲುಕಿದೆ. ಹಾಗಾಗಿ ಯಡಿಯೂರಪ್ಪ ಬಿಜೆಪಿ ವರಿಷ್ಠರ ಪಾಲಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದಾರೆ.
ಈ ನಡುವೆ, ಕರೋನಾ ನಿಯಂತ್ರಣದ ಸವಾಲಿನ ಬಿರುಸಿನ ಕಾರ್ಯದೊತ್ತಡದ ನಡುವೆಯೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ತವರು ಕ್ಷೇತ್ರ ಶಿಕಾರಿಪುರಕ್ಕೆ ಭೇಟಿ ನೀಡುತ್ತಿದ್ದು, ದಿಢೀರನೇ ನಿಗದಿಯಾಗಿರುವ ಈ ಭೇಟಿಯ ವೇಳೆ ಅವರು ಎರಡು ದಿನ ಕಾಲ ಶಿಕಾರಿಪುರದಲ್ಲೇ ತಂಗಲಿದ್ದಾರೆ. ನಿಗದಿತ ವೇಳಾಪಟ್ಟಿಯಂತೆ ಶುಕ್ರವಾರ ಹಾಸನಕ್ಕೆ ಭೇಟಿ ನೀಡಿ, ಅಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ನೇರವಾಗಿ ಶಿಕಾರಿಪುರಕ್ಕೆ ತೆರಳಿ ಅಲ್ಲಿನ ತಮ್ಮ ನಿವಾಸದಲ್ಲಿ ತಂಗಲಿದ್ದಾರೆ. ಶುಕ್ರವಾರ ಮತ್ತು ಶನಿವಾರ ಎರಡೂ ದಿನ ಅವರು ಶಿಕಾರಿಪುರದಲ್ಲಿಯೇ ಇರಲಿದ್ದು, ಭಾನುವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಶಿಕಾರಿಪುರದಲ್ಲಾಗಲೀ, ಶಿವಮೊಗ್ಗದಲ್ಲಾಗಲೀ ಕೋವಿಡ್ ಕುರಿತ ಅಧಿಕಾರಿಗಳ ಸಭೆ ಹೊರತುಪಡಿಸಿ ಇನ್ನಾವುದೇ ಮಹತ್ವದ ಅಧಿಕೃತ ಅಥವಾ ಖಾಸಗೀ ಕಾರ್ಯಕ್ರಮಗಳಾಗಲೀ, ಸಭೆಗಳಾಗಲೀ ಇಲ್ಲದಿರುವಾಗಲೂ, ಸ್ವತಃ ಮುಖ್ಯಮಂತ್ರಿಗಳು ಹೀಗೆ ದಿಢೀರನೇ ಎರಡು ದಿನಗಳ ಕಾಲ ಶಿಕಾರಿಪುರಕ್ಕೆ ಭೇಟಿ ನೀಡುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಅದರಲ್ಲೂ ರಾಜಧಾನಿ ಮತ್ತು ದೆಹಲಿ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಕುರಿತ ತೆರೆಮರೆಯ ಯತ್ನಗಳು ಮತ್ತು ಅದಕ್ಕೆ ಪರ್ಯಾಯವಾಗಿ ಸಿಎಂ ಆಪ್ತ ವಲಯದ ಪ್ರತಿತಂತ್ರಗಳು ಬಿರುಸುಗೊಂಡಿರುವ ಹೊತ್ತಲ್ಲಿ, ಹೀಗೆ ಸಿಎಂ ತಮ್ಮ ಊರಿಗೆ ಭೇಟಿ ನೀಡುತ್ತಿರುವುದು ಹಲವು ಊಹಾಪೋಹಗಳಿಗೂ ಎಡೆ ಮಾಡಿದೆ.

ಸಾಮಾನ್ಯವಾಗಿ ಸಿಎಂ ಯಡಿಯೂರಪ್ಪ ಅವರು ತಮ್ಮ ಆಡಳಿತ, ಅಧಿಕಾರ ಅಥವಾ ವೈಯಕ್ತಿಕ ಬದುಕಿನ ಸವಾಲಿನ ಸಂದರ್ಭದಲ್ಲಿ, ಶಿಕಾರಿಪುರದ ತಮ್ಮ ಇಷ್ಟದೈವ ಹುಚ್ಚೂರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಹಾಗೇ ತಮ್ಮ ಸ್ವಕ್ಷೇತ್ರದ ಆಪ್ತರು ಮತ್ತು ರಾಜ್ಯದ ವಿವಿಧ ಭಾಗಗಳ ಆಪ್ತರನ್ನು ತಮ್ಮ ಮನೆಗೆ ಕರೆಸಿಕೊಂಡು ಸಮಾಲೋಚಿಸಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದು ರೂಢಿ. 2012-13ರಲ್ಲಿ ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗ ಕೂಡ ಶಿಕಾರಿಪುರದ ಹುಚ್ಚೂರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸ್ಥಳೀಯ ಆಪ್ತೇಷ್ಟರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ತಮ್ಮ ನಿರ್ಧಾರ ಘೋಷಿಸಿದ್ದರು.
ಆ ಹಿನ್ನೆಲೆಯಲ್ಲಿ, ಇದೀಗ ನಾಯಕತ್ವ ಬದಲಾವಣೆಯ ಸುತ್ತ ಭಾರೀ ಚರ್ಚೆಗಳ ನಡುವೆ, ಒಂದು ಕಡೆ ಪುತ್ರ ಬಿ ವೈ ವಿಜಯೇಂದ್ರ ಮಠಾಧೀಶರೊಂದಿಗೆ ಬಿಡುವಿಲ್ಲದ ಸಮಾಲೋಚನೆಗಳಲ್ಲಿ ಮುಳುಗಿರುವಾಗ, ಸ್ವತಃ ಸಿಎಂ ಯಡಿಯೂರಪ್ಪ ದಿಢೀರನೇ ಶಿಕಾರಿಪುರಕ್ಕೆ ಭೇಟಿ ನೀಡುತ್ತಿರುವುದು ಸಹಜವಾಗೇ ಹಲವು ಬಗೆಯ ಲೆಕ್ಕಾಚಾರಗಳಿಗೆ ಇಂಬು ನೀಡಿದೆ. ಅವು ಕೇವಲ ಊಹಾಪೋಹದ ಮೇಲೆ ನಿಂತ ಲೆಕ್ಕಾಚಾರಗಳೇ ಅಥವಾ ನಿಜವಾಗಿಯೂ ಮಹತ್ವದ್ದು ಏನಾದರೂ ನಡೆಯಲಿದೆಯೇ ಎಂಬುದನ್ನ ಕಾದುನೋಡಬೇಕಿದೆ.