ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (DRDO) ಅಭಿವೃದ್ದಿ ಪಡಿಸಿರುವ ಕರೋನಾ ವೈರಸ್ ನಿರೋಧಕ ಔಷಧವನ್ನು DRDO ಇಂದು ಬಿಡುಗಡೆಗೊಳಿಸಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೆಹಲಿಯ ಕೆಲವು ಆಸ್ಪತ್ರೆಗಳಿಗೆ ಸುಮಾರು 10,000 ಡೋಸ್‌ಗಳನ್ನು ವಿತರಿಸಲಿದ್ದಾರೆ.
2-deoxy-D-glucose ಅಥವಾ 2-DG ಎಂದು ಕರೆಯಲ್ಪಡುವ ಈ ಔಷಧಿಯನ್ನು ಹೈದರಾಬಾದ್ ಮೂಲದ ಕಂಪೆನಿ ಡಾ.ರೆಡ್ಡಿ’ಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ DRDO ಲ್ಯಾಬ್ ಅಭಿವೃದ್ಧಿಪಡಿಸಿದೆ. ದೇಶದ ಉನ್ನತ ಔಷಧ ನಿಯಂತ್ರಕ (Drugs Controller General of India -DCGI) ಯಿಂದ ಈ ಔಷಧವನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ.
ಔಷಧವು ತನ್ನ ಎರಡನೇ ಮತ್ತು ಮೂರನೇಯ ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆ ಮೂಡಿಸುವಂತಹ ಫಲಿತಾಂಶಗಳನ್ನು ತೋರಿಸಿದೆ. ಕಳೆದ ವರ್ಷದ ಮೇ ಹಾಗೂ ಅಕ್ಟೋಬರ್ ನಡುವೆ ನಡೆದ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಕೋವಿಡ್ ರೋಗಿಗಳಿಗೆ ಈ ಔಷಧಿ ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ. ಕೋವಿಡ್ ರೋಗಿಗಳ ಆಸ್ಪತ್ರೆಯ ವಾಸ್ತವ್ಯದ ಅಗತ್ಯತೆಯನ್ನು ಕಡಿಮೆ ಮಾಡಲು ಮತ್ತು ಪೂರಕ ಆಮ್ಲಜನಕಕ್ಕೆ ಅವರ ಅವಲಂಬನೆಯನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿ ಎಂದು ಪ್ರಯೋಗದಲ್ಲಿ ಕಂಡುಬಂದಿದೆ.
ಔಷಧದಲ್ಲಿರುವ ಒಂದು ರೀತಿಯ ಹುಸಿ ಗ್ಲೂಕೋಸ್ ಅಣುವು ವೈರಸ್ ಅನ್ನು ಅದರ ಮೂಲದಲ್ಲಿಯೇ ತಡೆಯುತ್ತದೆ ಎಂದು ಔಷಧಿ ಅಭಿವೃದ್ದಿಪಡಿಸಿರುವ ರಕ್ಷಣಾ ಸಂಸ್ಥೆ ಹೇಳಿದೆ. ಪುಡಿ ರೂಪದಲ್ಲಿ ಔ಼ಷದಿ ಬರಲಿದ್ದು, ಅದನ್ನು ನೀರಿನೊಂದಿಗೆ ಸೇವಿಸಬೇಕಾಗುತ್ತದೆ.
COVID-19 ಗೆ ಚಿಕಿತ್ಸೆ ನೀಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ವಿಶ್ವದಾದ್ಯಂತದ ಕೆಲವೇ ಔಷಧಿಗಳಲ್ಲಿ 2-ಡಿಜಿ ಒಂದಾಗಿದ್ದು, ಇದುವರೆಗೂ ನಿರ್ದಿಷ್ಟ ಚಿಕಿತ್ಸಾ ವಿಧಾನಗಳಿಲ್ಲದ ಕಾರಣ ವೈದ್ಯರು, Remdevisir, Ivermectin, ಪ್ಲಾಸ್ಮಾ ಥೆರಪಿ ಹಾಗೂ ಕೆಲವು ಸ್ಟಿರಾಯಿಡ್‌ಗಳ ಮೊರೆಯನ್ನೂ ಹೋಗುತ್ತಿದ್ದಾರೆ. ಈ ಔಷಧಿಯ ಮೇಲೆ ಭಾರೀ ನಿರೀಕ್ಷೆಗಳಿಡಲಾಗಿದೆ.
ಭಾರತದಲ್ಲಿ ದಿನವೊಂದಕ್ಕೆ 3 ಲಕ್ಷಕ್ಕೂ ಅಧಿಕ ಹೊಸ ಕರೋನಾ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಹಾಗೂ ದೇಶದ ಆರೋಗ್ಯ ಕ್ಷೇತ್ರದ ಸೀಮಿತ ಸಾಮರ್ಥ್ಯದಿಂದಾಗಿ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಈ ನಡುವೆ ಕೋವಿಡ್ ಚಿಕಿತ್ಸೆಗೆಂದು ಬಳಸುವ ಸ್ಟಿರಾಯಿಡ್‌ಗಳಿಂದ ಕಪ್ಪು ಶಿಲೀಂಧ್ರ ಸೋಂಕು ಕೂಡಾ ಕಾಣಿಸತೊಡಗಿದ್ದು, ಹೊಸ ಹೊಸ ಸವಾಲುಗಳನ್ನು ಭಾರತೀಯ ಆರೋಗ್ಯ ಕ್ಷೇತ್ರ ಎದುರಿಸುತ್ತಿದೆ. ಇದೀಗ, ಕರೊನಾ ಸೋಂಕಿನ ವಿರುದ್ಧವೇ ತಯಾರಿಸಲಾದ ನಿರ್ದಿಷ್ಟ ಔಷಧಿ ಬರುತ್ತಿರುವುದು ಆರೋಗ್ಯ ಕ್ಷೇತ್ರದ ವಲಯದಲ್ಲಿ ಹೊಸ ಹುರುಪನ್ನು ನೀಡುವ ಮುನ್ಸೂಚನೆಯನ್ನು ನೀಡಿದೆ.