ಕೇಂದ್ರ ಸರ್ಕಾರದ ಘೋಷಣೆಯಂತೆ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಇದೆ. ಈಗಾಗಲೇ ಕೋವಿನ್ ಆಪ್ ಮೂಲಕ ಬುಧವಾರದಿಂದಲೇ ಆನ್ ಲೈನ್ ನೋಂದಣಿಗೆ ಚಾಲನೆ ನೀಡಲಾಗಿದೆ. ಮೊದಲ ದಿನವೇ ದೇಶಾದ್ಯಂತ ಬರೋಬ್ಬರಿ 1.33 ಕೋಟಿ ಮಂದಿ ನೋಂದಾಯಿಸಿಕೊಂಡಿದ್ದಾರೆ.
ಈ ಹಿಂದಿನ 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ಮೇಲ್ಪಟ್ಟವರ ಲಸಿಕೆ ಅಭಿಯಾನದ ವೇಳೆ ಮೊದಲ ದಿನ ಆನ್ ಲೈನ್ ಹೆಸರು ನೋಂದಣಿಗೆ ಹೋಲಿಸಿದರೆ ಈಗಿನ ಪ್ರಮಾಣ ಹಲವು ಪಟ್ಟು ಹೆಚ್ಚಾಗಿದೆ. ಆ ಎರಡು ಗುಂಪಿನ ನಾಗರಿಕರ ಲಸಿಕೆ ಅಭಿಯಾನಕ್ಕೆ ಆನ್ ಲೈನ್ ನೋಂದಣಿಯನ್ನು ಕಡ್ಡಾಯಗೊಳಿಸಿರಲಿಲ್ಲ. ಆನ್ ಲೈನ್ ಮತ್ತು ಆಫ್ ಲೈನ್ ನೋಂದಣಿಗೆ ಅವಕಾಶವಿದ್ದಿದ್ದರಿಂದ, ಈವರೆಗೆ ದೇಶದಲ್ಲಿ ಆಗಿರುವ ಸುಮಾರು 15 ಕೋಟಿ ಲಸಿಕೆ ನೀಡಿಕೆಯ ಪೈಕಿ, ಸುಮಾರು 2.90 ಕೋಟಿ ಮಂದಿ ಮಾತ್ರ ಆನ್ ಲೈನ್ ನೋಂದಣಿ ಮಾಡಿಕೊಂಡಿದ್ದರು. ಉಳಿದವರು ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋಗಿ ಅಲ್ಲಿ ನೋಂದಣಿ ಮಾಡಿಸಿ ಲಸಿಕೆ ಪಡೆದಿದ್ದರು.
ಆದರೆ, ಈ ಬಾರಿ ಸರ್ಕಾರ 18ವರ್ಷದಿಂದ 45 ವರ್ಷ ವಯೋಮಾನದವರು ಲಸಿಕೆ ಪಡೆಯಲು ಆನ್ ಲೈನ್ ನೋಂದಣಿ ಕಡ್ಡಾಯಗೊಳಿಸಿದೆ. ಜೊತೆಗೆ ಲಸಿಕೆಯ ವೆಚ್ಚವನ್ನು ಜನರೇ ಭರಿಸಬೇಕು ಎಂದೂ ಹೇಳಿದೆ. ಆದರೂ ಮೊದಲ ದಿನದ ಭಾರೀ ಸಂಖ್ಯೆಯ ನೋಂದಣಿ, ಹಲವು ಪ್ರಶ್ನೆಗಳನ್ನು ಎತ್ತಿದೆ.
ಮೊದಲನೆಯದಾಗಿ ದೇಶದಲ್ಲಿ ಸದ್ಯ 18-45 ವರ್ಷ ವಯೋಮಾನದ ಸುಮಾರು 60 ಕೋಟಿ ಜನರಿದ್ದಾರೆ. ದೇಶದ ಜನಸಂಖ್ಯೆಯ ಶೇ.50ರಷ್ಟು ಪ್ರಮಾಣದಲ್ಲಿರುವ ಈ ಅಪಾರ ಸಂಖ್ಯೆಯ ಜನಸಮುದಾಯಕ್ಕೆ ಸಂಪೂರ್ಣ ಲಸಿಕೆ ನೀಡುವಷ್ಟು ಲಸಿಕೆಗಳು ದೇಶದಲ್ಲಿ ಲಭ್ಯವಿವೆಯೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಎದ್ದಿದೆ. ಏಕೆಂದರೆ, ಕರ್ನಾಟಕವೂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಮೊದಲ ಡೋಸ್ ತೆಗೆದುಕೊಂಡಿರುವವರಿಗೇ ಎರಡನೇ ಡೋಸ್ ನೀಡಲು ಕೂಡ ಲಸಿಕೆ ಲಭ್ಯವಿಲ್ಲ. ಬುಧವಾರ ಮತ್ತು ಗುರುವಾರ ರಾಜ್ಯದ ಹಲವು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಹೋದ, ಆನ್ ಲೈನ್ ಮೂಲಕ ನೋಂದಾಯಿಸಿಕೊಂಡು, ಸಮಯ ನಿಗದಿ ಖಚಿತಪಡಿಸಿಕೊಂಡವರೂ ಸೇರಿದಂತೆ ಸಾವಿರಾರು ಮಂದಿ ವಾಪಸು ಹೋಗಿದ್ದಾರೆ. ಜನರನ್ನು ತಾಸುಗಟ್ಟಲೆ ಕಾಯಿಸಿ, ಕೊನೇ ಕ್ಷಣದಲ್ಲಿ ಲಸಿಕೆ ಬಂದಿಲ್ಲ ಎಂದು ಆರೋಗ್ಯ ಸಹಾಯಕರು ಜನರನ್ನು ವಾಪಸು ಕಳಿಸಿರುವ ಪ್ರಕರಣಗಳು ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದ ಸಾಗರ, ಉಡುಪಿ ಜಿಲ್ಲೆಯ ಕೆಲವು ಕೇಂದ್ರಗಳು ಸೇರಿದಂತೆ ಹಲವು ಕಡೆ ವರದಿಯಾಗಿವೆ.
ಈ ನಡುವೆ ಗುರುವಾರ ಕರ್ನಾಟಕಕ್ಕೆ ಐದು ದಿನಗಳ ಬಳಿಕ ಕೇವಲ 30 ಸಾವಿರ ವಯಾಲ್ ಲಸಿಕೆ ಕೇಂದ್ರದಿಂದ ಸರಬರಾಜಾಗಿದೆ ಎನ್ನಲಾಗಿದ್ದು, ಆ ಪ್ರಮಾಣ ರಾಜ್ಯದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಒಂದು ದಿನದ ಮಟ್ಟಿಗೆ ಮಾತ್ರ ಸಾಕಾಗಬಹುದು ಎನ್ನಲಾಗಿದೆ. ಹಾಗಾಗಿ, ಸದ್ಯಕ್ಕೆ 45 ಮತ್ತು 60 ವರ್ಷ ಮೇಲ್ಪಟ್ಟ ಗುಂಪಿನ ನಾಗರಿಕರಿಗೇ ಲಸಿಕೆ ನೀಡಲು ಆಡಳಿತ ವ್ಯವಸ್ಥೆ ಬಹುತೇಕ ಕೈಚೆಲ್ಲಿದೆ. ಖಾಸಗೀ ಲಸಿಕೆ ಕೇಂದ್ರಗಳಲ್ಲಿ ಕೂಡ ಬಹುತೇಕ ಕಡೆ ಲಸಿಕೆ ಲಭ್ಯವಿಲ್ಲ ಎಂಬ ಫಲಕ ನೇತಾಡುತ್ತಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಒಂದು ಡೋಸ್ ಪಡೆದಿರುವವರಿಗೆ ಮತ್ತೊಂದು ಡೋಸ್ ಲಸಿಕೆ ಸಿಗುವುದೇ ಅಥವಾ ಇಲ್ಲವೇ ಎಂಬ ಆತಂಕ ಎದುರಾಗಿದೆ.
ಈ ನಡುವೆ, ದೇಶದಲ್ಲಿ ಕರೋನಾ ವ್ಯಾಪಕವಾಗಿ ಹರಡುತ್ತಿರುವುದು ಮತ್ತು ಸಾವು ನೋವಿನ ಪ್ರಮಾಣ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಸಹಜವಾಗೇ, ಲಸಿಕೆಯ ಕುರಿತು ಜನಸಾಮಾನ್ಯರಲ್ಲಿ ಇದ್ದ ಉದಾಸೀನ ಮತ್ತು ಆತಂಕಗಳನ್ನು ದೂರಮಾಡಿದೆ. ಹಾಗಾಗಿ ಬಹುತೇಕ ಮಂದಿ ಆರಂಭದಲ್ಲಿ ಲಸಿಕೆ ಕುರಿತು ಆಸಕ್ತಿ ವಹಿಸದೇ ಇದ್ದವರೂ ಈಗ ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಜೊತೆಗೆ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಪಡೆದವರಲ್ಲಿ ಕರೋನಾ ಮಾರಣಾಂತಿಕವಾಗಿ ಪರಿಣಮಿಸುವುದಿಲ್ಲ. ಅದರಲ್ಲೂ ಎರಡನೇ ಅಲೆಗೆ ಕಾರಣವಾಗಿರುವ ರೂಪಾಂತರ ವೈರಸ್ ವಿರುದ್ಧ ಈ ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬ ಕೆಲವು ವರದಿಗಳ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಲಸಿಕೆ ಪಡೆಯಲು ಉತ್ಸುಕರಾಗಿದ್ದಾರೆ.
ಹಾಗಾಗಿ ಸಹಜವಾಗೇ ಈ ಬೆಳವಣಿಗೆಗಳು ಕೂಡ, ಲಸಿಕೆ ಅಭಿಯಾನದ ಆರಂಭದಲ್ಲಿ ಕಂಡುಬಂದಿದ್ದ ಜನರ ನಿರಾಸಕ್ತಿಯ ಪ್ರತಿಕ್ರಿಯೆಗೆ ಬದಲಾಗಿ ಈಗ ಸ್ವಯಂಪ್ರೇರಿತರಾಗಿ ಲಸಿಕಾ ಕೇಂದ್ರಗಳಿಗೆ ಜನ ಎಡತಾಕುವಂತೆ ಮಾಡಿವೆ.
ಆದರೆ, ಲಸಿಕೆ ನೀಡಿಕೆಯ ಕುರಿತು ಲಸಿಕೆ ಉತ್ಸವ(ಟೀಕಾ ಉತ್ಸವ್)ದಂತಹ ಪ್ರದರ್ಶನ ಕಾರ್ಯತಂತ್ರಗಳಿಗೆ ನೀಡಿದಷ್ಟು ಆದ್ಯತೆಯನ್ನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಲಸಿಕೆಯ ಉತ್ಪಾದನೆ, ಸರಬರಾಜು, ಬೇಡಿಕೆಯ ಕುರಿತ ಯೋಜನೆ ಮತ್ತು ಅಂದಾಜಿಗೆ ನೀಡಲಿಲ್ಲ ಎಂಬುದು ಈಗ ಬಹಿರಂಗವಾಗುತ್ತಿದೆ. ಕರೋನಾ ಸೋಂಕಿನ ವಿರುದ್ದ ಈಗಾಗಲೇ ದೇಶದ ದಿಗ್ವಿಜಯ ಸಾಧಿಸಿಬಿಟ್ಟಿದೆ ಎಂದು ಕಳೆದ ಜನವರಿಯಲ್ಲಿ ಹೇಳಿದ್ದ ಮೋದಿಯವರು, ಅದೇ ಹೊತ್ತಿಗೆ 137 ಕೋಟಿ ಭಾರತೀಯರಿಗೆ ಲಸಿಕೆ ನೀಡುವ ಮೂಲಕ ಕರೋನಾದ ವಿರುದ್ಧ ಸಮರ ಗೆಲ್ಲುವ ಮಾತು ಆಡಿದ್ದರು. ಅದರಂತ ಜನವರಿ 16ರಿಂದ ಆರಂಭವಾದ ಲಸಿಕೆ ಅಭಿಯಾನದಲ್ಲಿ ಮೊದಲ ಹಂತದಲ್ಲಿ 65 ವರ್ಷ ಮೇಲ್ಪಟ್ಟವರು, ನಂತರ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭಿಸಲಾಗಿತ್ತು. ಆದರೆ, ಈವರೆಗೆ ದೇಶದಲ್ಲಿ ಲಸಿಕೆ ನೀಡಿರುವುದು ಕೇವಲ 15 ಕೋಟಿ ಮಂದಿಗೆ ಮಾತ್ರ ! ಅದರಲ್ಲೂ ಎರಡೂ ಡೋಸ್ ಪಡೆದು ಸಂಪೂರ್ಣ ಲಸಿಕೆ ಪಡೆದಿರುವವರ ಪ್ರಮಾಣ ಕೇವಲ 1.8 ಶೇಕಡ ಮಾತ್ರ!!
ಈ ನಡುವೆ, ದೇಶದ ಶೇ.1.8ರಷ್ಟು ಮಂದಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡುವ ಹೊತ್ತಿಗಾಗಲೇ ಲಸಿಕೆಗಳು ಖಾಲಿಯಾಗಿವೆ. ಲಸಿಕೆ ಇಂದು ನೀಡಲಾಗುವುದಿಲ್ಲ ಎಂಬ ಫಲಕಗಳನ್ನು ಲಸಿಕಾ ಕೇಂದ್ರಗಳ ಮುಂದೆ ತೂಗುಹಾಕುವ ಸ್ಥಿತಿ ನಿರ್ಮಾಣವಾಗಿದೆ. ಲಸಿಕೆ ಅಭಿಯಾನ ದೇಶದಲ್ಲಿ ಆರಂಭವಾಗುವ ಮುನ್ನವೇ ಕೋಟ್ಯಂತರ ಡೋಸ್ ಲಸಿಕೆಯನ್ನು ವಿದೇಶಗಳಿಗೆ ಕಳಿಸುವ ಮೂಲಕ ಪ್ರಧಾನಿ ಮೋದಿಯವರ ‘ವಿಶ್ವನಾಯಕ’ ವರ್ಚಸ್ಸು ವೃದ್ಧಿಗೆ ತೋರಿದ ಆಸಕ್ತಿಯನ್ನು ದೇಶದ ಜನರಿಗೆ ಲಸಿಕೆ ನೀಡಲು ತೋರಲಿಲ್ಲ ಎಂಬುದಕ್ಕೂ ಈ ಲಸಿಕೆ ಕೊರತೆ ಸಾಕ್ಷಿಯಾಗಿದೆ.
ಲಸಿಕೆ ಕೊರತೆಯ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ ಆನ್ ಲೈನ್ ಮೂಲಕ ನೋಂದಣಿಯಾದ ಬಹುತೇಕರಿಗೆ ಲಸಿಕೆಯ ದಿನಾಂಕವನ್ನು ನಿಗದಿ ಮಾಡಿ ಖಚಿತಪಡಿಸಲಾಗಿಲ್ಲ. ಜೊತೆಗೆ ಕೇಂದ್ರ ಸರ್ಕಾರ ಈ ಮೊದಲು ಘೋಷಿಸಿದಂತೆ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸುವುದು ಕೂಡ ಅನುಮಾನವಿದ್ದು, ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಮೇ 15ರ ಬಳಿಕ ಆ ಗುಂಪಿನವರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿವೆ. ಹೀಗೆ ಆನ್ ಲೈನ್ ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಯೂ ಲಸಿಕೆ ದಿನಾಂಕ ಖಚಿತಪಡಿಸದೇ ಇರುವುದು ಮತ್ತು ಮೇ 1ರಿಂದ ಲಸಿಕೆ ನೀಡುವ ಸರ್ಕಾರದ ಈ ಹಿಂದಿನ ಘೋಷಣೆ ಸದ್ದಿಲ್ಲದೆ ಬದಿಗೆ ಸರಿದಿರುವುದರ ಹಿಂದೆ ಲಸಿಕೆ ಕೊರತೆಯ ಬಲವಾದ ಕಾರಣವಿದೆ ಎನ್ನಲಾಗುತ್ತಿದೆ. ಅಲ್ಲದೆ, ಲಸಿಕೆ ಕೊರತೆಯನ್ನು ಗ್ರಹಿಸಿಯೇ ಸರ್ಕಾರ, 18 ವರ್ಷ ಮೇಲ್ಪಟ್ಟವರಿಗೆ ಆನ್ ಲೈನ್ ನೋಂದಣಿ ಕಡ್ಡಾಯ ಮತ್ತು ಹಣ ತೆತ್ತು ಲಸಿಕೆ ಪಡೆಯಬೇಕು ಎಂಬ ನಿಯಮಗಳನ್ನು ಹೇರಿದೆ. ಆ ಮೂಲಕ ಲಸಿಕೆ ಪಡೆಯಲು ಉಂಟಾಗಬಹುದಾದ ದಿಢೀರ್ ನೂಕುನುಗ್ಗಲನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಅಥವಾ ಕನಿಷ್ಟ ಮುಂದೂಡುವ ತಂತ್ರ ಸರ್ಕಾರದ್ದು ಎನ್ನಲಾಗುತ್ತಿದೆ.
ಅಂದರೆ, ಕರೋನಾ ತಡೆ ಮತ್ತು ನಿರ್ವಹಣೆಯ ವಿಷಯದಲ್ಲಿ ಕಳೆದ ವರ್ಷದ ಆರಂಭದಿಂದ ಈ ವರ್ಷದ ಎರಡನೇ ಅಲೆಯ ಕುರಿತು ದಿವ್ಯ ನಿರ್ಲಕ್ಷ್ಯದ ವರೆಗೆ ಪ್ರಧಾನಿ ಮೋದಿ ಸರ್ಕಾರ ವಹಿಸಿದ ಉದಾಸೀನ ಮತ್ತು ಅಸಡ್ಡೆಗಳ ಸರಣಿ ಅನಾಹುತಗಳು, ಲಸಿಕೆಯ ವಿಷಯದಲ್ಲಿ ಕೂಡ ಮುಂದುವರಿದಿವೆ. ಯಾವುದೇ ಪೂರ್ವತಯಾರಿ, ಅಂದಾಜು, ಯೋಜನೆ, ಯೋಜಿತ ಕಾರ್ಯಯೋಜನೆಗಳೇ ಇಲ್ಲದೆ, ಕರೋನಾದಂತಹ ವಿಪತ್ತನ್ನು ಎದುರಿಸುವುದು ತೀರಾ ಉಡಾಫೆ ಮತ್ತು ಪೆದ್ದುತನದ ಪರಮಾವಧಿ. ಈಗ ಭಾರತದಲ್ಲಿ ಸಂಭವಿಸುತ್ತಿರುವ ಸಾವು-ನೋವಿನ ಹಿಂದೆ ಕೂಡ ಇಂತಹ ಉಡಾಫೆ ಮತ್ತು ಪೆದ್ದುತನಗಳ ಬಳುವಳಿ ದೊಡ್ಡದಿದೆ. ಕನಿಷ್ಟ ಕರೋನಾಕ್ಕೆ ತುತ್ತಾಗದೇ ಉಳಿದವರ ಜೀವ ಭದ್ರತೆಗೆ ಅಗತ್ಯ ಪ್ರಮಾಣದ ಲಸಿಕೆ ವ್ಯವಸ್ಥೆ ಮಾಡುವಲ್ಲಿ ಕೂಡ ಸರ್ಕಾರ ಗಂಭೀರ ಯತ್ನಗಳನ್ನು ಮಾಡುತ್ತಿಲ್ಲ ಎಂಬುದಕ್ಕೆ ಕಳೆದ ಎರಡು ಮೂರು ದಿನಗಳಿಂದ ಜನ ಲಸಿಕೆ ಕೇಂದ್ರಗಳಲ್ಲಿ ಕಾದು ವಾಪಸ್ಸಾಗುತ್ತಿರುವುದೇ ಜ್ವಲಂತ ನಿದರ್ಶನ.