ಮಹಾರಾಷ್ಟ್ರದ ನಾಸಿಕ್ನ ಝಾಕಿರ್ ಹುಸೇನ್ ಆಸ್ಪತ್ರೆಗೆ ಆಮ್ಲಜನಕ ಪೂರೈಕೆಯ ವೇಳೆ ಆಮ್ಲಜನಕ ಸೋರಿಕೆಯಾಗಿದ್ದು, ಸೋರಿಕೆಯಿಂದಾಗಿ ವೆಂಟಿಲೇಟರ್ನಲ್ಲಿದ್ದ 20 ಕೋವಿಡ್ ರೋಗಿಗಳೂ ಸೇರಿದಂತೆ ಒಟ್ಟು 22 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲದೆ, ಇನ್ನೂ 158 ಕೋವಿಡ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಸಾವನ್ನಪ್ಪಿದ್ದವರ ಸಂಖ್ಯೆಯನ್ನು ಧೃಡೀಕರಿಸಿದ ಜಿಲ್ಲಾಧಿಕಾರಿ ಸುರಜ್ ಮಂಧಾರೆ, ಮೃತಪಟ್ಟವರೆಲ್ಲರೂ ಗಂಭೀರ ಅನಾರೋಗ್ಯಕ್ಕೆ ಈಡಾಗಿದ್ದವರು ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಸರ್ಕಾರ, ಅಪಘಾತದ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆದೇಶಿಸಿದೆ. ಹಾಗೂ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರುಪಾಯಿಗಳನ್ನು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಘೋಷಿಸಿದೆ.
“ನಾಸಿಕ್ ಅನಿಲ ಸೋರಿಕೆ ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು. ಇದು ಆಘಾತಕಾರಿ ಮತ್ತು ನೋವಿನ ಸಂಗತಿಯಾಗಿದೆ, ”ಎಂದು ಅವರು ಹೇಳಿದ್ದಾರೆ.
“ಈ ಅಪಘಾತಕ್ಕೆ ಕಾರಣರಾದವರನ್ನು ಬಿಡಲಾಗುವುದಿಲ್ಲ. ಆದರೆ, ಈ ದುರದೃಷ್ಟಕರ ಘಟನೆಯನ್ನು ಯಾರೂ ರಾಜಕೀಯಗೊಳಿಸಬಾರದು. ಇದು ಮಹಾರಾಷ್ಟ್ರಕ್ಕೆದುರಾದ ಆಘಾತ. ನಾಸಿಕ್ ದುರಂತದ ಬಗ್ಗೆ ಮಹಾರಾಷ್ಟ್ರವು ಶೋಕಿಸುತ್ತಿದೆ,” ಎಂದು ಅವರು ಹೇಳಿದ್ದಾರೆ.





