ಸಾರಿಗೆ ನೌಕರರು ತಮ್ಮ ಬೇಡಿಕೆ ಮುಂದಿಟ್ಟುಕೊಂಡು ನಡೆಸುತ್ತಿರುವ ಅನಿರ್ದಿಷ್ಟವಧಿಯ ಪ್ರತಿಭಟನೆ ಮುಂದುವರೆದಿದ್ದು, ನೌಕಕರು ಮತ್ತು ಸರ್ಕಾರದ ನಡುವಿನ ಹಗ್ಗಾಜಗ್ಗಾಟದ ಮಧ್ಯೆ ಪ್ರಯಾಣಿಕರು ಸಮಸ್ಯೆಗೆ ಸಿಲುಕಿದ್ದು, ಇದೀಗಾ ಹೈಕೋರ್ಟ್ ತಕ್ಷಣವೇ ಬಸ್ ಸೇವೆ ಆರಂಭಿಸುವಂತೆ ಪ್ರತಿಭಟನಾ ನಿರತ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ.
ನ್ಯಾಯಮೂರ್ತಿ ಎ ಎಸ್ ಓಕ್ ನೇತೃತ್ವದ ವಿಭಾಗೀಯ ಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಕೋವಿಡ್ ಸಮಸ್ಯೆ ತಲೆದೂರಿದ್ದು, ಇಂತಹ ಸಮಯದಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಇದು ಸಾರ್ವಜನಿಕ ಮೂಲಭೂತ ಹಕ್ಕಿಗೆ ದಕ್ಕೆಯಾಗಲಿದೆ ಎಂದು ಹೈಕೋರ್ಟ್ ತಿಳಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಶೇಕಡಾ 44 ರಷ್ಟು ಬಸ್‌ಗಳು ಚಲಿಸುತ್ತಿವೆ. ಕರೋನಾ ಎರಡನೇ ಅಲೆ ಜನಸಾಮಾನ್ಯರನ್ನು ಸಾಕಷ್ಟು ತೊಂದರೆಗೀಡು ಮಾಡಿದ್ದು, ಬಸ್ ಮುಷ್ಕರದಿಂದ ಜನ ಲಸಿಕೆ ಕೇಂದ್ರಗಳಿಗೂ ತೆರಳಲು ಕಷ್ಟವಾಗುತ್ತಿದೆ, ಇಂತಹ ಸಮಯದಲ್ಲಿ ಸರ್ಕಾರಿ ಬಸ್‌ಗಳ ಸೇವೆ ಅತೀ ಅಗತ್ಯವಾಗಿದೆ ಎಂದು ಕೋರ್ಟ್ ತಿಳಿಸಿದೆ.

ಸಾರಿಗೆ ನೌಕರರು ಕೂಡಲೇ ಮುಷ್ಕರವನ್ನು ಕೈಬಿಟ್ಟು, ತಮ್ಮ ಬೇಡಿಕೆಯನ್ನು ಕಾಯ್ದಿರಿಸಿ, ತಕ್ಷಣ ಸೇವೆಗೆ ಹಾಜರಾಗಬೇಕೆಂದು ಸಂಬಂಧಪಟ್ಟ ಸಾರಿಗೆ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್ ವಿಚಾರಣೆಯನ್ನು ಏಪ್ರಿಲ್ 22 ಕ್ಕೆ ಮುಂದೂಡಿದೆ.





