ಕಳೆದ ವಾರ ದೇಶದಲ್ಲಿ ಕರೋನಾ ಸೋಂಕಿಗೆ ಒಳಗಾಗಿರುವವರ ಸಂಖ್ಯೆ 5.2 ಮಿಲಿಯನ್ ದಾಟಿದೆ. ಇದು ಇಡೀ ಪ್ರಪಂಚದಲ್ಲೇ ವಾರವೊಂದರಲ್ಲಿ ಅತಿಹೆಚ್ಚು ಕರೋನಾ ಪ್ರಕರಣಗಳು ಕಂಡುಬಂದ ದಾಖಲೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಆದರೂ ದೇಶದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕರೋನಾ ಲಸಿಕೆ ಕೊರತೆಯ ಬಗ್ಗೆ ವಾಗ್ಯುದ್ಧಗಳು ನಡೆಯುತ್ತಿವೆ. ಆಕ್ಸಿಜನ್ ವಿತರಣೆ ಬಗ್ಗೆ ಜಗಳ ಆಗುತ್ತಿವೆ. ಇಂಥ ಜಗಳ ಎಲ್ಲೆಡೆಗಳಿಗಿಂತ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆಯೇ ಹೆಚ್ಚು.

ಇಂಥ ಮಹಾರಾಷ್ಟ್ರದಿಂದ ಆಘಾತಕಾರಿಯಾಗುವ ಸುದ್ದಿಯೊಂದು ಹೊರಬಿದ್ದಿದೆ. ಅದೇನಂದರೆ ಮಹಾಮಾರಿ ಕೊರೊನಾಗೆ ಮಹಾರಾಷ್ಟ್ರದಲ್ಲಿ ಪ್ರತ್ರಿ ಗಂಟೆಗೆ 20 ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹಾಗೆ ಜೀವ ಕಳೆದುಕೊಳ್ಳುವವರ ಪೈಕಿ ಅವರ ‘ರೋಗನಿರೋಧಕ ಶಕ್ತಿ’, ‘ಆರ್ಥಿಕ ಶಕ್ತಿ’ ಕಡಿಮೆ ಇತ್ತು, ‘ಚಿಕಿತ್ಸೆಗೆ ಸ್ಪಂದಿಸಲಿಲ್ಲ ಅಥವಾ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ’ ಎನ್ನುವುದಕ್ಕಿಂತ ಮಿಗಿಲಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತನ್ನ ಪ್ರಜೆಗಳನ್ನು ಪ್ರಾಣಸಂಕಟದಿಂದ ಪಾರುಮಾಡುವ ಇಚ್ಛಾಶಕ್ತಿ ಇರಲಿಲ್ಲ ಎನ್ನುವುದೇ ಹೆಚ್ಚು ಸತ್ಯ.

ಕರೋನಾ ಮೊದಲ ಅಲೆ ಮೊದಲ ಬಾರಿಗೆ ಪತ್ತೆಯಾಗಿದ್ದು ಕೇರಳದಲ್ಲಿ. ಆದರೆ ವ್ಯಾಪಕವಾಗಿ ಹೆಚ್ಚಾಗಿದ್ದು ಮಹಾರಾಷ್ಟ್ರದಲ್ಲಿ. ಎರಡನೇ ಅಲೆಯಲ್ಲೂ ದೇಶದಲ್ಲೇ ಅತಿಹೆಚ್ಚು ಬಾಧೆಗೆ ಒಳಗಾಗಿರುವುದು ಮಹಾರಾಷ್ಟ್ರ. ದೇಶದ ಮಟ್ಟಿಗೆ ಹೇಳುವುದಾದರೆ ಮೊದಲ ಅಲೆ ಬಂದು ಅಪ್ಪಳಿಸಿದಾಗ ಪೂರ್ವ ತಯಾರಿ ಇರಲಿಲ್ಲ, ಮಾಹಿತಿ ಇರಲಿಲ್ಲ, ಪರಿಣಾಮವಾಗಿ ಹತ್ತು ಹಲವು ತಪ್ಪುಗಳಾದವು. ಹಾಗಾಗಿ ಸಂಪೂರ್ಣವಾಗಿ ಸರ್ಕಾರವನ್ನು ದೂರುವಂತಿರಲಿಲ್ಲ. ಆದರೆ ಎರಡನೇ ಅಲೆ ಬಂದಿರುವಾಗಲೂ ಸರ್ಕಾರಗಳು ಸುಮ್ಮನಿದ್ದು ಬೇಜವಾಬ್ದಾರಿತನ ಪ್ರದರ್ಶಿಸತೊಡಗಿವೆ. ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಗಳನ್ನು ಸದೃಢಗೊಳಿಸದೆ ಹೊಣಗೇಡಿಗಳಾಗಿವೆ. ಇದಕ್ಕೆ ದೇಶದ ಮಟ್ಟಿಗೆ ಕೇಂದ್ರ ಸರ್ಕಾರ ಹೇಗೆ ಜವಾಬ್ದಾರಿಯೋ ಅದೇ ರೀತಿ ಮೊದಲ ಅಲೆಯಲ್ಲಿ ಪೆಟ್ಟು ತಿಂದೂ ಎಚ್ಚೆತ್ತುಕೊಳ್ಳದೆ ಈಗ ಕಣ್ಣು ಬಾಯಿ ಬಿಡುತ್ತಿರುವ ಮಹಾರಾಷ್ಟ್ರ ಸರ್ಕಾರವೂ ಅಷ್ಟೇ ಜವಾಬ್ದಾರಿ.
ಮಹಾರಾಷ್ಟ್ರದಲ್ಲಿ ಪ್ರತ್ರಿ ಗಂಟೆಗೆ 20 ಜನರು ಬಲಿಯಾಗುತ್ತಿದ್ದಾರೆ ಎನ್ನುವುದರ ಜೊತೆಗೆ ಇಡೀ ದೇಶದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದರೆ ಒಂದು ವಾರದಿಂದ ಮಹಾರಾಷ್ಟ್ರ ಒಂದರಲ್ಲೇ ಪ್ರತಿ ದಿನ 65 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಈ ಹಂತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಿದರಷ್ಟೇ ಪರಿಸ್ಥಿತಿ ನಿಭಾಯಿಸಲು ಸಾಧ್ಯ. ಆದರೆ ಅಂತಹ ವಾತಾವರಣ ಕಂಡುಬರುತ್ತಿಲ್ಲ.
ಪರಿಸ್ಥಿತಿ ನಿಭಾಯಿಸಬೇಕೆಂದು ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ ವಿಧಿಸಲಾಗಿದೆ. ಆದರೆ ಜನತಾ ಕರ್ಫ್ಯೂ ಪರಿಣಾಮಕಾರಿ ಆಗಿಲ್ಲ ಎನ್ನುವುದು ಅದು ಜಾರಿಯಾದ ಮೇಲೆ ಏರುಮುಖದಲ್ಲಿ ಸಾಗುತ್ತಿರುವ ಕರೋನಾ ಪೀಡಿತರ ಸಂಖ್ಯೆಯಿಂದ ಸಾಬೀತಾಗಿದೆ. ಮಹಾರಾಷ್ಟ್ರದಲ್ಲಿ ಕರೋನಾ ವ್ಯಾಪಕವಾಗಿ ಹರಡಲು ಅಲ್ಲಿರುವ ‘ಫ್ಲೋಟಿಂಗ್ ಪಾಪುಲೇಷನ್’ ಕಾರಣ. ಮುಂಬೈ, ಪುಣೆ, ನಾಗಪುರಗಳಂತಹ ಮಹಾನಗರಗಳು ಕಾರಣ. ಅಲ್ಲಿ ಕರೋನಾ ಸೋಂಕು ಹರಡುವುದು ಹೆಚ್ಚಾದರೆ ಅಲ್ಲಿಂದ ದೇಶದ ಮೂಲೆ ಮೂಲೆಗೆ ಹೋಗುವ ಜನರಿಗೂ ಹರಡಲಿದೆ. ಒಂದರ್ಥದಲ್ಲಿ ಇದು ಮಹಾರಾಷ್ಟ್ರದ ಸಮಸ್ಯೆ ಮಾತ್ರವಲ್ಲ. ಈ ಕಾರಣಕ್ಕಾದರೂ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಮಹಾರಾಷ್ಟ್ರದಲ್ಲಿ ಕೊರೋನಾವನ್ನು ನಿಯಂತ್ರಣ ಮಾಡಲೇಬೇಕು.
ಆದರೆ ಕೇಂದ್ರ ಸರ್ಕಾರದ ಕಡೆಯಿಂದ ಅಂತಹ ಯಾವೊಂದು ಸಣ್ಣ ಸುಳಿವು ಕಾಣಸಿಗುತ್ತಿಲ್ಲ.
ವಿಶೇಷ ಎಂದರೆ ಕರೋನಾದ ಎರಡನೇ ಅಲೆಯನ್ನೇ ಸಮರ್ಥವಾಗಿ ನಿರ್ವಹಿಸದ ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ‘ಶೀಘ್ರವೇ ಮೂರನೇ ಅಲೆಯು ಬರಲಿದೆ’ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು ‘ಈಗ ಕರೋನಾ ಲಸಿಕೆಗಳು ಪ್ರಯೋಜನಕ್ಕೆ ಬಾರದಿದ್ದರೂ, ಮುಂದಿನ ಅಲೆಯ ವೇಳೆ ಉಪಯೋಗಕ್ಕೆ ಬರಬಹುದು’ ಎಂದು ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಒಂದೆಡೆ ಕೇಂದ್ರ ಸರ್ಕಾರದ ಜೊತೆ ಲಸಿಕೆಗಳನ್ನು ಕೊಡಿ ಎಂದು ಜಗಳ ಮಾಡುತ್ತಾ ಇನ್ನೊಂದೆಡೆ ‘ಲಸಿಕೆಗಳು ಪ್ರಯೋಜನಕ್ಕೆ ಬರದಿದ್ದರೆ ಮುಂದೆ ಕೆಲಸಕ್ಕೆ ಬರಲಿವೆ’ ಎಂದು ಹೇಳುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಸರ್ಕಾರದ ಧೋರಣೆ ಹೇಗಿದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.





