ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ-ದಲಿತ-ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರೈತ-ದಲಿತ-ಕಾರ್ಮಿಕ-ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯು ಜನವರಿ 26 ರಂದು ಬೃಹತ್ ಪರೇಡ್ ನಡೆಸುವುದಾಗಿ ತಿಳಿಸಿದೆ.
ಜನವಿರೋಧಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಪತ್ರಿಕಾ ಪ್ರಕಟನೆ ಹೊರಡಿಸಿರುವ ರೈತ-ದಲಿತ-ಕಾರ್ಮಿಕ-ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯು ಗಣರಾಜ್ಯೋತ್ಸವದಂದು ಜನರ ಬೃಹತ್ ಪೆರೇಡ್ ಮತ್ತು ಮುಂದಿನ ಎಲ್ಲಾ ಹೋರಾಟಗಳಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದೆ.
ಸುಗ್ಗಿಯ ಸಮಯದಲ್ಲಿ ತಮ್ಮ ಹೊಲ-ಗದ್ದೆಗಳಲ್ಲಿ, ಜಾತ್ರೆ-ಹಬ್ಬಗಳಲ್ಲಿ ಸಂಭ್ರಮಿಸುತ್ತಿರಬೇಕಾದ ರೈತರು ಕಳೆದ ಎರಡು ತಿಂಗಳಿಂದಲೂ ದೆಹಲಿಯ ಬೀದಿಗಳಲ್ಲಿ ಮನೆಮಾಡಿ ಕೊರೆಯುವ ಚಳಿಯಲ್ಲಿ ಉಗ್ರ ಹೋರಾಟ ನಡೆಸಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ರೈತ-ದಲಿತ-ಕಾರ್ಮಿಕರು, ಮಹಿಳೆಯರು, ಯುವಜನರು ಐದಾರು ತಿಂಗಳಿನಿಂದ ಎಡಬಿಡದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲಿ, ಗ್ರಾಮಗಳಲ್ಲಿ ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ರೈತ ವಿರೋಧಿ, ಜನ ವಿರೋಧಿ ಕಾಯಿದೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದು ಐಕ್ಯ ಹೋರಾಟ ಸಮಿತಿ ಹೇಳಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಡೀ ಜಗತ್ತೇ ಕರೋನಾ ಹುಟ್ಟಿಸಿದ ಜೀವಭಯದಲ್ಲಿ ತತ್ತರಿಸಿದ್ದಾಗ ರೈತರು ತಮ್ಮ ಹೊಲ-ಗದ್ದೆಗಳಿಗೆ ಇಳಿದು ಸಮೃದ್ಧವಾಗಿ ಆಹಾರ ಪದಾರ್ಥಗಳನ್ನು ಬೆಳೆದುಕೊಟ್ಟು ದೇಶದಲ್ಲಿ ಹಸಿವಿನ ಹಾಹಾಕಾರ ಉಂಟಾಗದಂತೆ ನೋಡಿಕೊಂಡರು. ಸರ್ಕಾರಗಳನ್ನು ದೊಡ್ಡ ವಿಪತ್ತಿನಿಂದ ಪಾರುಮಾಡಿದರು. ಅದಕ್ಕಾಗಿ ಸರ್ಕಾರಗಳು ರೈತರಿಗೆ ಕೊಟ್ಟ ಬಳುವಳಿಯಾದರೂ ಏನು? ರೈತರ ಭೂಮಿಯನ್ನು, ರೈತರು ಬೆಳೆಯುವ ಪದಾರ್ಥಗಳನ್ನು ಕಾರ್ಪೊರೆಟ್ ಬಕಾಸುರರು ಮನಬಂದಂತೆ ದೋಚಿಕೊಳ್ಳಲು ಬಿಟ್ಟು, ರೈತರನ್ನು ಅವರ ಶಾಶ್ವತ ಗುಲಾಮರನ್ನಾಗಿ ಮಾಡುವ ಕಾಯಿದೆಗಳು! ಅದಾನಿ-ಅಂಬಾನಿಗಳಂಥ ದೈತ್ಯ ಬಂಡವಾಳಿಗರ ಮುಷ್ಟಿಯಲ್ಲಿ ಸಿಕ್ಕಿಕೊಂಡ ಸರ್ಕಾರಗಳಿಂದ ಕೋವಿಡ್ ಸಂಕಷ್ಟದ ಅಸಹಾಯಕ ಪರಿಸ್ಥಿತಿಯಲ್ಲಿ ರೈತ ವಿನಾಶದ ಕಾಯಿದೆಗಳ ಸುರಿಮಳೆ. ಸುಗ್ರೀವಾಜ್ಞೆಗಳ ಮೂಲಕ ಜನಪರ ಕಾಯಿದೆಗಳಿಗೆ ಸಾಲು ಸಾಲು ತಿದ್ದುಪಡಿಗಳು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳನ್ನೇ ಧಿಕ್ಕರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವುದು ಈ ದೇಶ ಹಿಂದೆಂದೂ ಕಂಡರಿಯದಂಥ ಜನದ್ರೋಹಿ ಕಾಯಿದೆಗಳು ಎಂಬುದನ್ನು ನಾವು ಅರಿಯಬೇಕಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 26, ಮಂಗಳವಾರ ಗಣರಾಜ್ಯೋತ್ಸವ ದಿನದಂದು ರೈತ-ಕಾರ್ಮಿಕ-ದಲಿತ ಹಾಗೂ ಸಮಸ್ತ ದುಡಿವ ಜನರ ಬೃಹತ್ ಜನಗಣರಾಜ್ಯೋತ್ಸವ ಪೆರೇಡ್ ನಡೆಯುತ್ತದೆ. ರೈತರು ಮತ್ತು ದುಡಿಯುವ ಜನತೆ ದುಡಿಮೆಯ ಸಂಕೇತವಾದ ಎತ್ತಿನ ಬಂಡಿ, ಟ್ರಾಕ್ಟರ್ ಮತ್ತಿತರ ವಾಹನಗಳ ಜೊತೆ ಸಾಗಿ ಬರುತ್ತಿದ್ದಾರೆ. ‘ಸಂಯುಕ್ತ ಹೋರಾಟ ಕರ್ನಾಟಕ’ ವೇದಿಕೆಯಡಿಯಲ್ಲಿ ರಾಜ್ಯದ ಎಲ್ಲಾ ಜನಸಂಘಟನೆಗಳಿಂದ ಜನಸಾಗರ ಬೆಂಗಳೂರಿಗೆ ಹರಿದು ಬರಲಿದೆ ಎಂದು ಸಮಿತಿಯು ತಿಳಿಸಿದೆ.
ಐಕ್ಯ ಹೋರಾಟ ಸಮಿತಿ ಹಕ್ಕೊತ್ತಾಯಗಳು
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಎಲ್ಲಾ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳು ಮತ್ತು ಕಾರ್ಮಿಕ ವಿರೋಧಿ ನಾಲ್ಕು ‘ಕೋಡ್’ಗಳನ್ನು ಕೂಡಲೇ ಕೈಬಿಡಬೇಕು.
- ರೈತರ ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ, ಲಾಭದಾಯಕ ಬೆಲೆ ನಿಗದಿಗೊಳಿಸಬೇಕು ಮತ್ತು ಇದನ್ನು ಶಾಸನಬದ್ಧಗೊಳಿಸಬೇಕು. ಎಪಿಎಂಸಿಯನ್ನು ಉಳಿಸಬೇಕು ಮತ್ತು ರೈತಸ್ನೇಹಿಯಾಗಿ ಬಲಪಡಿಸಬೇಕು.
- ಅನೇಕ ದಶಕಗಳಿಂದ ಅರ್ಜಿ ಹಾಕಿ ಕಾಯುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಮತ್ತು ತಲೆಯ ಮೇಲೊಂದು ಸೂರು ಕಟ್ಟಿಕೊಂಡಿರುವ ಬಡಜನರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು.
- ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಮತ್ತು ವೇತನ ಭದ್ರತೆ ದೊರಕಬೇಕು. ಓದಿಗೆ ತಕ್ಕ ಉದ್ಯೋಗ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗಬೇಕು.