ಕರೋನಾ ಸಾಂಕ್ರಾಮಿಕ ರೋಗ ಮೊದಲೇ ಕುಂಠಿತಗೊಂಡಿದ್ದ ದೇಶದ ಆರ್ಥಿಕ ಪ್ರಗತಿಯನ್ನು ಇನ್ನಷ್ಟು ಬರ್ಬರವಾಗಿಸಿತು. ಬಹುಮುಖ್ಯವಾಗಿ ಕರೋನಾ ಹರಡುವಿಕೆಯ ತಡೆಯಲು ದೇಶವ್ಯಾಪಿ ಹೇರಿದ ʼಲಾಕ್ಡೌನ್ʼ ಈ ಕುಸಿತಕ್ಕೆ ನೇರ ಕಾರಣವಾಯಿತು.
ಲಾಕ್ಡೌನ್ ದೇಶದ ಆರ್ಥಿಕತೆಯಯನ್ನು ನಾಶಗೊಳಿಸಿತಲ್ಲದೆ, ಕರೋನಾದ ನಾಶಕ್ಕೆ ಕಾರಣವಾಗಲಿಲ್ಲ. ಸರಿಸುಮಾರು ಮೂರು ತಿಂಗಳು ಯಾವುದೇ ಮುನ್ನೆಚ್ಚರಿಕೆ, ಯೋಜನೆಗಳಿಲ್ಲದ ಸುದೀರ್ಘ ಲಾಕ್ಡೌನ್ ಪ್ರಪಂಚದ ಇನ್ಯಾವ ದೇಶಗಳಲ್ಲೂ ಇರಲಿಲ್ಲ, ಭಾರತದ ಹೊರತಾಗಿ. ಬೇರೆ ದೇಶಗಳು ಲಾಕ್ಡೌನ್ ಮಾಡಿತ್ತಾದರೂ ಭಾರತದಷ್ಟು ಯಾವ ದೇಶವೂ ಲಾಕ್ಡೌನ್ನಿಂದ ತತ್ತರಿಸಿರಲಿಲ್ಲ.
ಮುಖ್ಯವಾಗಿ, ಏಕಾಏಕಿ ಲಾಕ್ಡೌನ್ನಿಂದ ನೇರ ಸಂಕಷ್ಟಗೊಳಗಾಗಿದ್ದು ವಲಸೆ ಕಾರ್ಮಿಕರು. ದಿನನಿತ್ಯದ ರೊಟ್ಟಿಗೆ ಅಂದಂದೇ ದುಡಿಯುವ ಮಂದಿ ಹಸಿವು, ಬಳಲಿಕೆಯಿಂದ ಬೀದಿಹೆಣಗಳಾಗುತ್ತಿದ್ದರೆ, ʼಷೋಕಿಲಾಲʼ ಎಂದು ವಿಪಕ್ಷಗಳಿಂದ ಕರೆಯಲ್ಪಡುವ ಪ್ರಧಾನಿ ಮೋದಿ ʼಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಲುʼ ಕರೆ ನೀಡಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೋದಿ ಕರೆಗೆ ಓಗೊಟ್ಟ ಭಾರತ ಗುಂಪು ಗುಂಪಾಗಿ ಚಪ್ಪಾಳೆ ತಟ್ಟುತ್ತಾ, ಗಂಟೆ, ತಟ್ಟೆ ಬಡಿಯುತ್ತಾ, ದೀಪ ಬೆಳಗಿಸಿ, ಬೆಂಕಿ ಮತ್ತು ವೈಬ್ರೇಷನ್ ಗೆ ಕರೋನಾವನ್ನು ಕೊಲ್ಲುವ ಮೂರ್ಖತನ ಪ್ರದರ್ಶಿಸಿತು. ಭಾರತದ ರಾಜಕೀಯ ನಾಯಕರುಗಳೇ ಈ ರೀತಿ ಮಾಡುವುದರಿಂದ ಕರೋನಾ ನಾಶವಾಗುತ್ತದೆಂದು ಹೇಳಿದ್ದರು, ಜನರನ್ನು ನಂಬಿಸಿದ್ದರು.
ಕೇಂದ್ರದ ಲಾಕ್ಡೌನ್ ವಿಫಲ ತಂತ್ರವೆಂದು ತಜ್ಞರು ನೀಡಿದ ಎಚ್ಚರಿಕೆ, ಲಾಕ್ಡೌನ್ ಮುಗಿದ ಬಳಿಕ ಸಾಬೀತಾಯಿತು. ದಿನವೊಂದಕ್ಕೆ ಸರಿಸುಮಾರು ಒಂದು ಲಕ್ಷದಷ್ಟು ಹೊಸ ಪ್ರಕರಣಗಳು, ಸುಮಾರು ಒಂದು ಲಕ್ಷದ ಗಡಿ ತಲುಪಿದ ಕರೋನಾ ಪೀಡಿತರ ಸಾವು, ಅರುವತ್ತು ಲಕ್ಷದಷ್ಟು ಕಂಡುಬಂದ ಒಟ್ಟು ಪ್ರಕರಣಗಳು ಕೇಂದ್ರ ಲಾಕ್ಡೌನ್ ನಿರೀಕ್ಷಿತ ಯಶಸ್ಸು ತಂದಿಲ್ಲ ಎನ್ನುವದನ್ನು ಸಾಬೀತು ಪಡಿಸಿದವು.
ಕರೋನಾ ಯುದ್ಧ 21 ದಿನಗಳಲ್ಲಿ ಮುಗಿಯುತ್ತದೆ ಎಂದು ಭರವಸೆ ನೀಡಿದ್ದ ಮೋದಿ ಮಹಾಭಾರತ ಯುದ್ಧವನ್ನು ಉಲ್ಲೇಖಿಸಿ 21 ದಿನಗಳ ಲಾಕ್ಡೌನ್ ಹೇರಿದ್ದರು. ನಿರೀಕ್ಷೆಗಳನ್ನೂ ಮೀರಿ ಕರೋನಾ ಹಬ್ಬುತ್ತಿದ್ದಂತೆ ಲಾಕ್ಡೌನ್ ವಿಸ್ತರಿಸಿಕೊಳ್ಳುತ್ತಾ ಸಾಗಿತು. ಕೊನೆಗೆ ಲಾಕ್ಡೌನ್ ಕೆಲಸ ಮಾಡುವುದಿಲ್ಲವೆಂದು ಅರಿವಾಗಿ ಅದನ್ನು ಕೈಬಿಟ್ಟಿತು.
ದೇಶದಲ್ಲಿ ಕರೋನಾ ಪ್ರಕರಣ ಏರುತ್ತಲೇ ಇದೆ. ನಿಯಂತ್ರಿಸಲು ಬಾರದ ಮೋದಿ ಮತ್ತೆ ಲಾಕ್ಡೌನ್ ಮೊರೆ ಹೋಗುವ ಹುನ್ನಾರದಲ್ಲಿದ್ದಾರೆ. ಬುಧವಾರ ನಡೆದ ಏಳು ರಾಜ್ಯಗಳ ಮುಖ್ಯಮಂತ್ರಿ ಸಭೆಯಲ್ಲಿ ಒಂದೆರಡು ದಿನ ಲಾಕ್ಡೌನ್ ಹೇರುವ ಕುರಿತಂತೆ ಸಲಹೆ ನೀಡಿದ್ದಾರೆ. ಮತ್ತೆ ಮತ್ತೆ ವಿಫಲಗೊಳ್ಳುತ್ತಿರುವ ಲಾಕ್ಡೌನನ್ನೇ ಮೋದಿ ನೆಚ್ಚಿ ಕುಳಿತಿರುವುದು ಕರೋನಾ ನಿಯಂತ್ರಿಸಲು ಅವರಿಗೆ ಸರಿಯಾದ ಯಾವ ಕಾರ್ಯತಂತ್ರವೂ ಇಲ್ಲದಿರುವುದನ್ನು ಸಾಬೀತುಪಡಿಸುತ್ತಿವೆ.
ಆದರೆ ಈ ಬಾರಿ ಏಕಾಏಕಿ ನೋಟ್ಬ್ಯಾನ್, ಲಾಕ್ಡೌನ್ ಮೊದಲಾದ ತೀರ್ಮಾನ ತೆಗೆದ ಹುಂಬ ಅಹಂ ಮೋದಿಯವರಲ್ಲಿ ಕಡಿಮೆಯಾಗಿದೆ. ಆದೇಶದ ಬದಲಾಗಿ ಸಲಹೆಯ ರೂಪಕ್ಕೆ ಹೋಗಿದ್ದಾರೆ. ಮೊದಲೇ ಪ್ರಧಾನಿಯ ಹುಂಬತನದ ನಿರ್ಧಾರಗಳಿಂದ ಸಾಕಷ್ಟು ಬಸವಳಿದಿರುವ ರಾಜ್ಯಗಳು ಮೋದಿಯ ಈ ಸಲಹೆಯನ್ನು ತಿರಸ್ಕರಿಸಿವೆ.
Also Read: ಲಾಕ್ಡೌನ್ ಇಲ್ಲದೆ ಕೋವಿಡ್ ವಿರುದ್ದ ಹೋರಾಟ ಯಶಸ್ವಿ ಆಗಲಿದೆಯೇ?
ಬಿಜೆಪಿ ಸರ್ಕಾರವೇ ಇರುವ ಕರ್ನಾಟಕ ರಾಜ್ಯ ಮೋದಿ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಅಂದರೆ ತಿರಸ್ಕರಿಸಿದೆ. ಸೆಪ್ಟೆಂಬರ್ 24ರಂದು ಬೆಂಗಳೂರು ನಗರವೊಂದರಲ್ಲೇ ನಾಲ್ಕು ಸಾವಿರಕ್ಕೂ ಹೆಚ್ಚು ಹೊಸ ಕರೋನಾ ಪ್ರಕರಣಗಳು ಪತ್ತೆಯಾದ ಬಳಿಕ, ಮೋದಿ ನೀಡಿದ ಸಲಹೆಯಿಂದ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಹೇರುವರೋ ಎಂಬ ಆತಂಕ ರಾಜ್ಯದ ಜನತೆಯಲ್ಲಿ ಸಣ್ಣದಾಗಿ ಮೂಡಿತ್ತು. ಆದರೆ ರಾಜ್ಯದ ಜನರ ಆತಂಕವನ್ನು ನಿವಾಳಿಸುವಂತೆ ವೈದ್ಯಕೀಯ ಸಚಿವ ಸುಧಾಕರ್ ಹಾಗೂ ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿಕೆ ನೀಡಿದ್ದಾರೆ.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಕೆ, ಲಾಕ್ಡೌನ್ ಕುರಿತಾದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ರಾಜ್ಯ ಸರ್ಕಾರ ಮತ್ತೊಮ್ಮೆ ಲಾಕ್ಡೌನ್ ಹೇರುವುದಿಲ್ಲ ಎಂದಿದ್ದಾರೆ. ರಾಜ್ಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವಿಲ್ಲ ಎಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ವಿಧಿಸಲು ಶಿಫಾರಸು ಮಾಡಿದ್ದಾರೆ. ಆದರೆ, ಇದು ಯಾವುದೇ ರಾಜ್ಯಕ್ಕೆ ಕಡ್ಡಾಯವಲ್ಲ. ಅಲ್ಲದೆ ಲಾಕ್ಡೌನ್ ಮತ್ತೆ ಹೇರಲು ಯಾವುದೇ ನಿರ್ದಿಷ್ಟ ಕಾರಣಗಳಿಲ್ಲ ಎಂದಿದ್ದಾರೆ.
Also Read: ಲಾಕ್ಡೌನ್ ದುರಂತಕ್ಕೆ ‘ಗಿಲಿಗಿಲಿ ಪೂ’ ಚಮತ್ಕಾರದ ಹಪಾಹಪಿ ಕಾರಣವೇ?
ಈತನ್ಮಧ್ಯೆ, ರಾಜ್ಯ ಸರ್ಕಾರವು COVID-19 ಬಗ್ಗೆ ಜಾಗೃತಿ ಮೂಡಿಸಲು ಬಯಸಿದ್ದರೂ, ಮತ್ತೊಂದು ಲಾಕ್ ಡೌನ್ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ ರವಿಯೂ ಹೇಳಿದ್ದಾರೆ. ಒಟ್ಟಾರೆ ರಾಜ್ಯದ ಎರಡು ಸಚಿವರುಗಳೇ ಲಾಕ್ಡೌನ್ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಪ್ರಧಾನಿಯ ʼಲಾಕ್ಡೌನ್ʼ ಸಲಹೆಗೆ ಕಿಮ್ಮತ್ತಿನ ಬೆಲೆ ನೀಡಿಲ್ಲ ಅನ್ನುವುದು ಋಜುವಾತಾಗಿದೆ.