ನಮ್ಮ ದೇಶದಲ್ಲಿ ಸಾಂವಿಧಾನಿಕವಾಗಿ ದುರ್ಬಲ ಹಾಗೂ ಕೆಳವರ್ಗದವರಿಗೆ ಮೀಸಲಾತಿ ಕಲ್ಪಿಸಿಕೊಡುತ್ತಿರುವುದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವವನ್ನು ಪರಿಪಾಲಿಸಲು. ಏಕೆಂದರೆ, ಜಾತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆಯಲ್ಲಿ ಶತಮಾನಗಳಿಂದ ನಲುಗಿದ ಕೆಳವರ್ಗಗಳು ಇಂದಿಗೂ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿಲ್ಲ.ಇದಕ್ಕೆ ಕಾರಣ ನಮ್ಮನ್ನಾಳುವ ಸರ್ಕಾರಗಳು ಮೀಸಲಾತಿಯ ಸವಲತ್ತನ್ನು ಲಾಭಿಗಳಿಗೆ ಮಣಿದು ಶೋಷಣೆಗೆ ಒಳಗಾಗದ ಹಿಂದುಳಿದ ವರ್ಗಗಳಿಗೂ ಮತ್ತು ಮೇಲ್ವರ್ಗದವರಿಗೂ ಕಲ್ಪಿಸಿಕೊಟ್ಟಿರುವುದು ಮತ್ತು ಮೀಸಲಾತಿ ಪಡೆದುಕೊಂಡು ಅಭಿವೃದ್ದಿ ಹೊಂದಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರೂ ಇನ್ನೂ ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿರುವುದೇ ಆಗಿದೆ. ಮೀಸಲಾತಿಯು ಸಮರ್ಪಕವಾಗಿ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕಾದರೆ ಕೆನೆಪದರ ತೆಗೆಯಲೇಬೇಕಿದೆ. ಇಲ್ಲದಿದ್ದರೆ ಮೀಸಲಾತಿಯನ್ನು ಅನುಭವಿಸುತ್ತಿರುವವರು ತಮ್ಮದೇ ಸಮುದಾಯದ ಕಡೆಯ ವ್ಯಕ್ತಿಯ ಹಕ್ಕನ್ನು ನಿರಾಕರಿಸಿ ತಾವು ಅನುಭವಿಸುತ್ತಿದ್ದಾರೆ.
ಇಲ್ಲಿ ಶ್ರೀಮಂತ ಶ್ರೀಮಂತನಾಗುತ್ತಲೇ ಹೋಗುತ್ತಾನೆ, ಬಡವ ಬಡವನಾಗೇ ಇರುತ್ತಾನೆ.ದೇಶದ ಸರ್ವೋಚ್ಚ ನ್ಯಾಯಾಲಯವೂ ಕೂಡ ಮೊಕದ್ದಮೆಯೊಂದರ ವಿಚಾರಣೆಯ ವೇಳೆ ಬುಧವಾರ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಇರುವ ಬಲಾಢ್ಯರು ಅದೇ ಸಮುದಾಯದ ಹಿಂದುಳಿದಿರುವವರಿಗೆ ಸವಲತ್ತನ್ನು ನೀಡಲು ತಡೆ ಆಗಿದ್ದಾರೆ ಎಂದು ಹೇಳಿದೆ. ಅಲ್ಲದೆ, ಸರ್ಕಾರವು ಈ ಪಟ್ಟಿಯನ್ನು ಪರಿಷ್ಕರಿಸುವುದು ಕರ್ತವ್ಯ ಎಂದೂ ಹೇಳಿದೆ. ಹಿಂದಿನ ಆಂಧ್ರ ಪ್ರದೇಶ ಸರ್ಕಾರವು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಹಿಂದುಳಿದ ಪ್ರದೇಶಗಳಲ್ಲಿ ಶೇಕಡಾ 100ರಷ್ಟು ಉದ್ಯೋಗ ಮೀಸಲಾತಿಯನ್ನು ಕಲ್ಪಿಸಿಕೊಟ್ಟಿತ್ತು. ರಾಜ್ಯ ಸರ್ಕಾರದ ಈ ನಿರ್ಧಾರವನ್ನುಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಇಂದಿರಾ ಬ್ಯಾನರ್ಜಿ, ವಿನೀತ್ ಸರನ್, ಎಂ.ಆರ್. ಷಾ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು ಈಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದೊಳಗೆ ಶ್ರೀಮಂತರು ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದ ವರ್ಗಗಳಿವೆ ಎಂದು ಅಭಿಪ್ರಾಯಪಟ್ಟರು. ಆದ್ದರಿಂದ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಕಾಯ್ದಿರಿಸಿದ ವರ್ಗಗಳೊಳಗೆ ಅರ್ಹತೆ ಪಡೆಯಲು ಸ್ಪರ್ಧೆ ಏರ್ಪಟ್ಟಿದೆ ಎಂದೂ ಅದು ಹೇಳಿದೆ.ಈ ಪಟ್ಟಿಗಳನ್ನು ಪರಿಷ್ಕರಿಸಲು ಸರ್ಕಾರವು ಪರಿಗಣಿಸಲಿದೆ ಎಂದು ತೆಲಂಗಾಣ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲ ರಾಜೀವ್ ಧವನ್ ಅವರು ಮಂಡಿಸಿದ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು.
ಆದರೆ, ಮೂಲ ಶೇಕಡಾವಾರು ಮೀಸಲಾತಿಗೆ ತೊಂದರೆಯಾಗದಂತೆ ಇದನ್ನು ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಕಳೆದ 70 ವರ್ಷಗಳಿಂದ ಮೀಸಲಾತಿಯಸವಲತ್ತನ್ನು ಪಡೆದಿರುವವರನ್ನು ಪರಿಷ್ಕೃತ ಪಟ್ಟಿಯಿಂದ ಹೊರಗಿಟ್ಟು ಮೀಸಲಾತಿಯ ಸೌಲಭ್ಯವನ್ನೇ ಪಡೆಯದ ಜನತೆಗೆ ಇದನ್ನು ವರ್ಗಾಯಿಸಬೇಕಿದೆ ಎಂದೂ ಕೋರ್ಟು ಅಭಿಪ್ರಾಯ ಪಟ್ಟಿದೆ. ನಂತರ ಇಂದ್ರ ಸಾಹ್ನಿ(ಸುಪ್ರಾ) ಪ್ರಕರಣದಲ್ಲಿ ಗಮನಿಸಿದಂತೆ ಮತ್ತುಸಾಂವಿಧಾನಿಕವಾಗಿ ಇಂತಹ ಪರಿಷ್ಕರಣೆ ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಸಂವಿಧಾನದ 341(1) ನೇ ವಿಧಿಯ ಅನ್ವಯ ರಾಷ್ಟ್ರಪತಿಗಳು ರಾಜ್ಯಪಾಲರೊಂದಿಗೆ ಸಮಾಲೋಚಿಸಿದ ನಂತರ ಜಾತಿ, ಜನಾಂಗ, ಬುಡಕಟ್ಟು ಅಥವಾ ಜಾತಿಗಳ ಅಥವಾ ಜನಾಂಗದೊಳಗಿನ ಗುಂಪುಗಳ ಭಾಗಗಳನ್ನು ನಿರ್ದಿಷ್ಟಪಡಿಸಿದ ಜಾತಿ ವರ್ಗದಲ್ಲಿ ಸೇರಿಸಲು ರಾಷ್ಟ್ರಪತಿಗಳಿಗೆ ಅವಕಾಶ ನೀಡುತ್ತದೆ ಎಂದು ಸುಪ್ರೀಂಕೋರ್ಟ್ ಗಮನಿಸಿದೆ. ಅದು ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಆಗಿದ್ದರೂ ಪರಿಚ್ಚೇದ 341ರ 2ನೇ ವಿಧಿಯ ಅನ್ವಯ ಸಂಸತ್ತು ಯಾವುದೇ ಜಾತಿ, ಜನಾಂಗ ಅಥವಾ ಬುಡಕಟ್ಟು ಪಂಗಡವನ್ನು ಈ ಪಟ್ಟಿಯಿಂದ ಹೊರಗಿಡಲು ಅಥವಾ ಸೇರಿಸಲು ಅವಕಾಶ ನೀಡುತ್ತದೆ ಎಂದೂ ಸುಪ್ರೀಂ ಕೋರ್ಟು ಹೇಳಿದೆ.
ಸಂವಿಧಾನದ ಪರಿಚ್ಛೇಧ 342 ಮತ್ತು 342(ಎ)ಗಳು ಕ್ರಮವಾಗಿ ಪರಿಶಿಷ್ಟ ಪಂಗಡ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಇದೇ ರೀತಿಯ ನಿಬಂಧನೆಗಳನ್ನು ನೀಡುತ್ತವೆ. ಸರ್ವೋಚ್ಛ ನ್ಯಾಯಾಲಯವು ವಿಚಾರಣೆಯ ಸಮಯದಲ್ಲಿ ಇಂದ್ರ ಸಾಹ್ನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ(1992)ನಲ್ಲಿನ ತೀರ್ಪನ್ನು ಉಲ್ಲೇಖಿಸಿದೆ. ಇದರಲ್ಲಿ 9 ನ್ಯಾಯಾಧೀಶರ ಪೀಠವು ಈ ಪಟ್ಟಿಗಳನ್ನು ಪವಿತ್ರ ಮತ್ತು ಬದಲಾಯಿಸಲಾಗದು ಎಂದು ಹೇಳಿರುವುದನ್ನೂ ಗಮನಿಸಿದೆ. ಕೆಲವು ಜಾತಿಗಳು, ಸಮುದಾಯಗಳು ಅಥವಾ ವರ್ಗಗಳನ್ನು ತೆಗೆದು ಹಾಕಲು ಅಥವಾ ಸೇರಿಸಲು ರಾಜ್ಯ ಸರ್ಕಾರಗಳು ನೇಮಿಸಿದ ಆಯೋಗಗಳ ಶಿಫಾರಸುಗಳನ್ನು ಪರಿಶೀಲಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ನ್ಯಾಯಾಲಯವು ಹೇಳಿದೆ.ನ್ಯಾಯಾಲಯವು ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು ವರ್ಸಸ್ ವಿ.ರಾಕೇಶ್ ಕುಮಾರ್ ಮತ್ತು ಇತರರ ನಡುವೆ ಇದ್ದ ಪ್ರಕರಣವನ್ನೂ ಉಲ್ಲೇಖಿಸಿದೆ.
ಇದರಲ್ಲಿ ಸರ್ಕಾರಗಳು ಈ ಮೀಸಲಾತಿಯ ಪಟ್ಟಿಯನ್ನು ಕಾಲ ಕಾಲಕ್ಕೆ ಅನುಗುಣವಾಗಿ ಪರಿಶೀಲಿಸಬೇಕು ಮತ್ತು ಬದಲಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಸೂಕ್ತ ರೀತಿಯಲ್ಲಿ ಪರಿಷ್ಕರಿಸಬೇಕು ಎಂದು ಹೇಳಿತ್ತು. ಬುಧವಾರದ ವಿಚಾರಣೆಯಲ್ಲಿ ನ್ಯಾಯಾಲಯವು ಇಂದ್ರ ಸಾಹ್ನಿ ಪ್ರಕರಣದಲ್ಲಿ ಗಮನಿಸಿದಂತೆ ಮತ್ತು ಸಾಂವಿಧಾನಿಕವಾಗಿ ಪಟ್ಟಿಯನ್ನು ಪರಿಷ್ಕರಿಸಲು ಸರ್ಕಾರ ಕರ್ತವ್ಯ ನಿರತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್ನಲ್ಲಿ ಪರಿಶಿಷ್ಟ ಪಂಗಡದ ಶಿಕ್ಷಕರನ್ನು ಪ್ರತಿನಿಧಿಸಿದ ವಕೀಲ ಹರ್ಪ್ರೀತ್ ಸಿಂಗ್ ಗುಪ್ತಾ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನ್ಯಾಯಾಲಯವು ತನ್ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸುವಾಗ ಮಾತ್ರ ಕಾನೂನಿನ ಅಂಶಗಳನ್ನು ಪುನರುಚ್ಚರಿಸಿದೆ. ಪಟ್ಟಿಗಳ ಪರಿಷ್ಕರಣೆಯ ಬಗ್ಗೆ ಮಾತನಾಡುವಾಗ ನ್ಯಾಯಾಲಯವು ಹೊಸದೇನನ್ನೂ ಹೇಳಿಲ್ಲ. ಇಂದ್ರ ಸಾಹ್ನಿ ಮತ್ತು ರಾಕೇಶ್ ಕುಮಾರ್ ಅವರ ಪ್ರಕರಣದ ತೀರ್ಪಿನ ಪ್ರಕಾರ ಅವರು ಕಾನೂನನ್ನು ಪುನರುಚ್ಚರಿಸಿದ್ದಾರೆ ಎಂದು ಅವರು ಹೇಳಿದರು.
ನ್ಯಾಯಾಲಯವು ಉಲ್ಲೇಖಿಸಿರುವ ಪರಿಷ್ಕರಣೆಯ ಅಧಿಕಾರವನ್ನು ಸಂಸತ್ತು ಈಗಾಗಲೇ ಹೊಂದಿದೆ ಎಂದು ಗುಪ್ತಾ ಹೇಳಿದರು. ಅದರೆ, ಪಟ್ಟಿಗಳಿಗೆ ಸಂಬಂಧಿಸಿದಂತೆ ಕಠಿಣ ನಿಲುವುಗಳ ವಿರುದ್ಧ ನ್ಯಾಯಾಲಯವು ಎಚ್ಚರಿಕೆ ನೀಡಿದೆ ಮತ್ತು ಮೀಸಲಾತಿಯ ಪ್ರಯೋಜನಗಳು ಅರ್ಹರಿಗೆ ಮೋಸವಾಗುವುದನ್ನು ತಡೆಗಟ್ಟಲು ಅದನ್ನು ಪರಿಷ್ಕರಿಸುವ ಕರ್ತವ್ಯವನ್ನು ಸಂಸತ್ತಿಗೆ ನೆನಪಿಸಿದೆ” ಎಂದು ಅವರು ಹೇಳಿದರು.
ಸಾಂವಿಧಾನಿಕ ತಜ್ಞ ಫೈಜಾನ್ ಮುಸ್ತಫಾ ಅವರು ಪಟ್ಟಿಗಳ ಪರಿಷ್ಕರಣೆಯನ್ನು ಈಗಾಗಲೇ ಅನುಮತಿಸಲಾಗಿದೆ ಎಂದು ಪ್ರತಿಪಾದಿಸಿದರು. ಆದರೆ ನ್ಯಾಯಾಲಯಗಳು ನೀತಿ ನಿರೂಪಣೆಗೆ ಮುಂದಾಗಬಾರದು ಎಂದು ಹೇಳಿದರು. ಪಟ್ಟಿಗಳ ಪರಿಷ್ಕರಣೆಯನ್ನು ನಿಸ್ಸಂಶಯವಾಗಿ ಅನುಮತಿಸಬಹುದಾಗಿದೆ ಮತ್ತು ಇದನ್ನು ಕೈಗೊಳ್ಳಬಹುದು ಆದರೆ ಎಸ್ಸಿ/ಎಸ್ಟಿಮೀಸಲಾತಿ ದುರ್ಬಲಗೊಳ್ಳುವ ಅಪಾಯವಿದೆ ಮತ್ತು ಪಟ್ಟಿ ಪರಿಷ್ಕರಣೆಯು ಕಾರ್ಯಾಂಗದ ಕಾರ್ಯವಾಗಿದೆ ಮತ್ತು ನ್ಯಾಯಾಲಯಗಳು ಅಂತಹ ನೀತಿ ನಿರ್ಧಾರಗಳನ್ನು ಸರ್ಕಾರದ ವಿವೇಚನೆಗೆ ಬಿಡಬೇಕು ಎಂದು ಅವರು ಹೇಳಿದರು.