ಟೋಲ್ ಗಳಲ್ಲಿ ವಾಹನಗಳ ಸುಗಮ ಮತ್ತು ಸುಲಲಿತ ಸಂಚಾರಕ್ಕಾಗಿ ರೂಪಿಸಿರುವ ಫ್ಯಾಸ್ಟ್ಯಾಗ್ (FASTag) ಕಡ್ಡಾಯ ಅಳವಡಿಕೆ ಜಾರಿ ಮಾಡುವುದನ್ನು ಕೇಂದ್ರ ಸರ್ಕಾರ ಎರಡುವಾರಗಳ ಮಟ್ಟಿಗೆ ಮುಂದೂಡಿದೆ. ಇನ್ನೂ ಫಾಸ್ಟ್ಯಾಗ್ ಪಡೆಯದ ವಾಹನ ಮಾಲೀಕರು ಮತ್ತು ಚಾಲಕರ ಪಾಲಿಗೆ ಇದು ಸ್ವಾಗತಾರ್ಹ ನಿರ್ಧಾರ. ಪೂರ್ವ ನಿರ್ಧಾರಿತ ವೇಳಾಪಟ್ಟಿಯಂತೆ ಡಿಸೆಂಬರ್ 1 ರಿಂದಲೇ ಫಾಸ್ಟ್ಯಾಗ್ ಕಡ್ಡಾಯ ಅಳವಡಿಕೆ ನಿಯಮವು ಜಾರಿ ಆಗಬೇಕಿತ್ತು. ಕೇಂದ್ರ ಸರ್ಕಾರದ ಮಾರ್ಪಡಿತ ಆದೇಶದಂತೆ ಈ ಆದೇಶವು ಡಿಸೆಂಬರ್ 15ರಿಂದ ಜಾರಿಯಾಗಲಿದೆ.
ಒಂದು ವೇಳೆ ಡಿಸೆಂಬರ್ 15ರ ನಂತರವೂ ಫಾಸ್ಟ್ಯಾಗ್ ಅವಳಡಿಕೆ ಮಾಡಿಕೊಳ್ಳದೇ ಇದ್ದರೆ ನೀವು ಫಾಸ್ಟ್ಯಾಗ್ ಮೀಸಲಾದ ಲೇನ್ ನಲ್ಲಿ ಪ್ರವೇಶ ಮಾಡಿದರೆ ದುಪ್ಪಟ್ಟು ಶುಲ್ಕವನ್ನು ವಸೂಲು ಮಾಡಲಾಗುತ್ತದೆ. ಅಂದರೆ, ಟೋಲ್ ಶುಲ್ಕ 100 ರುಪಾಯಿ ಇದ್ದರೆ, ನೀವು ಫಾಸ್ಟ್ಯಾಗ್ ಪಡೆಯದೇ ಅದಕ್ಕೆ ಮೀಸಲಾದ ಲೇನ್ ನಲ್ಲಿ ಪ್ರವೇಶ ಮಾಡಿದಾಗ 200 ರುಪಾಯಿ ಪಾವತಿಸಬೇಕಾಗುತ್ತದೆ.
ಇನ್ನೂ ಫಾಸ್ಟ್ಯಾಗ್ ಅಳವಡಿಸಿಕೊಳ್ಳದ ವಾಹನಗಳಿಗೆ ಒಂದು ಲೇನ್ ಮೀಸಲಾಗಿರುತ್ತದೆ. ಆ ಲೇನ್ ನಲ್ಲಿ ಫಾಸ್ಟ್ಯಾಗ್ ಅಳವಡಿಸಿಕೊಂಡಿರುವ ವಾಹನಗಳೂ ಪ್ರವೇಶಿಸಬಹುದಾಗಿರುತ್ತದೆ.
ವಾಹನ ಚಾಲಕರ ಅನುಕೂಲಕ್ಕಾಗಿ ಕಡ್ಡಾಯ ಅವಳಡಿಕೆ ಜಾರಿಯನ್ನು ಎರಡು ವಾರಗಳ ಕಾಲ ಮುಂದೂಡಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದ್ದರೂ ಎಲ್ಲಾ ವಾಹನ ಮಾಲೀಕರಿಗೂ ಫಾಸ್ಟ್ಯಾಗ್ ಉಪಕರಣ ಒದಗಿಸುವಲ್ಲಿ ಸರ್ಕಾರದ ವೈಫಲ್ಯವೂ ಇದೆ. ಹೀಗಾಗಿ ವಾಹನ ಚಾಲಕರ ಹೆಸರಿನಲ್ಲಿ ತನ್ನ ಲೋಪವನ್ನು ಮುಚ್ಚಿಕೊಂಡಂತಿದೆ.
ಫಾಸ್ಟ್ಯಾಗ್ ಎಂಬುದು ಒಂದು ವಿದ್ಯುನ್ಮಾನ ಉಪಕರಣವಾಗಿದ್ದು, ವಾಹನಗಳಲ್ಲಿ ಇದನ್ನು ಅವಳಡಿಸಿಕೊಂಡಿದ್ದರೆ, ಟೋಲ್ ಗಳಲ್ಲಿ ವಾಹನ ಸಾಗುವಾಗ ವಾಹನ ನಿಲ್ಲಿಸದೇ ಎಲೆಕ್ಟ್ರಾನಿಕ್ ರೂಪದಲ್ಲಿ ಟೋಲ್ ಶುಲ್ಕವನ್ನು ತನ್ನಿಂತಾನೆ ಪಾವತಿ ಮಾಡುವ ಒಂದು ಸುಲಭ ವಿಧಾನ. ಫಾಸ್ಟ್ಯಾಗ್ ಒಂದು ರೀತಿಯಲ್ಲಿ ಮೆಟ್ರೋ ಕಾರ್ಡ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.. ನಿಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಪ್ರೀಪೇಯ್ಡ್ ಮೊತ್ತ ಇರುತ್ತದೆ. ನೀವು ಟೋಲ್ ನಲ್ಲಿ ಸಾಗಿದಾಗಲೆಲ್ಲ ಅದು ಟೋಲ್ ಶುಲ್ಕ ಕಡಿತವಾಗುತ್ತದೆ. ಅಂದರೆ, ನೀವು ಟೋಲ್ ಪ್ರವೇಶ ಮಾಡಿದ್ದು ಮತ್ತು ಟೋಲ್ ನಿಂದ ಹೊರಹೋಗಿದ್ದು ದಾಖಲಾಗುತ್ತದೆ ಮತ್ತು ಅಷ್ಟು ದೂರಕ್ಕೆ ನಿಗದಿತ ಟೋಲ್ ಶುಲ್ಕ ನಿಮ್ಮ ಪ್ರೀಪೇಯ್ಡ್ ಖಾತೆಯಿಂದ ಕಡಿತವಾಗುತ್ತದೆ.
ಫಾಸ್ಟ್ಯಾಗ್ ಅಳವಡಿಕೆ ಕಡ್ಡಾಯ ಮಾಡಲು ಸರಾಗ ಮತ್ತು ಸುಲಲಿತ ಸಂಚಾರ ವ್ಯವಸ್ಥೆಯ ಜತೆಗೆ ಟೋಲ್ ಗಳಲ್ಲಿ ಹೆಚ್ಚು ಪಾರದರ್ಶಕತೆ ಕಾಪಾಡಿಕೊಳ್ಳಲು ಮತ್ತು ಡಿಜಿಟಲ್ ಪಾವತಿಯನ್ನು ಜನಪ್ರಿಯಗೊಳಿಸುವ ಉದ್ದೇಶವೂ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಖಾಸಗಿಯವರಿಗೆ ಗುತ್ತಿಗೆ ನೀಡಿರುವ ಟೋಲ್ ಪ್ಲಾಜಾಗಳಲ್ಲಿ ತೆರಿಗೆ ವಂಚಿಸಲು ತಪ್ಪು ಲೆಕ್ಕ ನೀಡಲಾಗುತ್ತಿತ್ತು. ವಾಸ್ತವಿಕವಾಗಿ ಸಾಗುವ ವಾಹನಗಳ ಲೆಕ್ಕ ತೋರಿಸದೇ ಕಡಮೆ ವಾಹನಗಳು ಸಂಚರಿಸಿರುವಂತೆ ಲೆಕ್ಕ ನೀಡಲಾಗುತ್ತಿತ್ತು. ಫಾಸ್ಟ್ಯಾಗ್ ಅಳವಡಿಕೆಯಿಂದಾಗಿ ಹೆಚ್ಚು ಪಾರದರ್ಶಕವಾಗಲಿದ್ದು, ತೆರಿಗೆ ವಂಚನೆಯನ್ನು ತಡೆಯಬಹುದಾಗಿದೆ.
ಫಾಸ್ಟ್ಯಾಗ್ ಅವಳವಡಿಕೆ ಕಡ್ಡಾಯ ಜಾರಿಯನ್ನು ಎರಡುವಾರಗಳ ಮಟ್ಟಿಗೆ ಮುಂದೂಡಿರುವ ಬಗ್ಗೆ ಪ್ರಕಟಣೆ ನೀಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ‘ನಾಗರಿಕರು ತಮ್ಮ ವಾಹನಗಳಿಗೆ ಫಾಸ್ಟ್ಯಾಗ್ ಅವಳಡಿಸಿಕೊಳ್ಳಲು ಮತ್ತಷ್ಟು ಕಾಲಾವಕಾಶ ನೀಡುವ ಸಲುವಾಗಿ ಫಾಸ್ಟ್ಯಾಗ್ ಅಳವಡಿಸಿಕೊಳ್ಳದೇ ಫಾಸ್ಟ್ಯಾಗ್ ಗೇಟ್ ನಲ್ಲಿ ಪ್ರವೇಶಿಸುವ ವಾಹನಗಳಿಗೆ ದುಪ್ಪಟ್ಟು ಶುಲ್ಕವಿಧಿಸುವ ನಿರ್ಧಾರವನ್ನು ಡಿಸೆಂಬರ್ 1ರ ಬದಲಿಗೆ ಡಿಸೆಂಬರ್ 15ರಿಂದ ಜಾರಿಗೊಳಿಸಲಾಗುತ್ತದೆ’ ಎಂದು ತಿಳಿಸಿದೆ.
ಇದುವರೆಗೆ ಸುಮಾರು 75 ಲಕ್ಷ ಫಾಸ್ಟ್ಯಾಗ್ ವಿತರಿಸಲಾಗಿದೆ. ನವೆಂಬರ್ 26ರಂದು ಒಂದೇ ದಿನ ಗರಿಷ್ಠ ಅಂದರೆ 1,35,583 ಫಾಸ್ಟ್ಯಾಗ್ ವಿತರಿಸಲಾಗಿದೆ. ಈ ದಿನಗಳಲ್ಲಿ ಸರಾಸರಿ ನಿತ್ಯ 1 ಲಕ್ಷ ಫಾಸ್ಟ್ಯಾಗ್ ವಿತರಿಸಲಾಗುತ್ತಿದೆ. ಜುಲೈನಲ್ಲಿ ಫಾಸ್ಟ್ಯಾಗ್ ವಿತರಣೆ ಆರಂಭವಾದಾಗ ನಿತ್ಯ 8000 ವಿತರಿಸಲಾಗುತ್ತಿತ್ತು. ಫಾಸ್ಟ್ಯಾಗ್ ಅಳವಡಿಕೆ ಶುಲ್ಕವನ್ನು ರದ್ದು ಮಾಡಿ, ಉಚಿತವಾಗಿ ಅಳವಡಿಕೆ ಮಾಡಿಕೊಡುವ ನಿರ್ಧಾರವನ್ನು ನವೆಂಬರ್ 21ರಂದು ಪ್ರಕಟಿಸಲಾಯಿತು. ಅಂದಿನಿಂದ ಫಾಸ್ಟ್ಯಾಗ್ ಅವಳಡಿಕೆ ತ್ವರಿತಗೊಂಡಿದೆ. ಕೇಂದ್ರ ಭೂಸಾರಿಗೆ ಸಚಿವಾಲಯವು ಆರಂಭದಲ್ಲಿ ಎಲ್ಲಾ ಲೇನ್ ಗಳನ್ನು ಫಾಸ್ಟ್ಯಾಗ್ ಲೇನ್ ಗಳಾಗಿ ಪರಿವರ್ತಿಸಲು ನಿರ್ಧರಿಸಿತ್ತಾದರೂ ವಾಹನ ಮಾಲೀಕರಿಗೆ ಅನುಕೂಲವಾಗಲೆಂದು ಒಂದು ಲೇನ್ ಅನ್ನು ಹೈಬ್ರಿಡ್ ಲೇನ್ ಆಗಿ ಉಳಿಸಿಕೊಳ್ಳಲು ನಿರ್ಧರಿಲಾಗಿದೆ. ಇಲ್ಲಿ ನಗದು, ಡೆಬಿಟ್, ಕ್ರೆಡಿಟ್ ಕಾರ್ಡ್, ಮತ್ತಿತರ ವಿಧಾನದ ಮೂಲಕ ಪಾವತಿ ಮಾಡಬಹುದಾಗಿದೆ.
ಫಾಸ್ಟ್ಯಾಗ್ ಅಳವಡಿಸಿಕೊಂಡವರು ತಮ್ಮ ಖಾತೆಗೆ ಮೊಬೈಲ್ ರಿಚಾರ್ಚ್ ಮಾಡುವಂತೆಯೇ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಮೂಲಕ ರಿಚಾರ್ಜ್ ಮಾಡಬಹುದಾಗಿದೆ. ಜುಲೈನಲ್ಲಿ ನಿತ್ಯ 8.8 ಲಕ್ಷದಷ್ಟಿದ್ದ ಫಾಸ್ಟ್ಯಾಗ್ ಶುಲ್ಕ ಪಾವತಿಯು ನವೆಂಬರ್ ನಲ್ಲಿ 12 ಲಕ್ಷಕ್ಕೆ ಮುಟ್ಟಿದೆ ಎಂದು ಭೂಸಾರಿಗೆ ಸಚಿವಾಲಯ ತಿಳಿಸಿದೆ. ಫಾಸ್ಟ್ಯಾಗ್ ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಅಥವಾ ನೆರವು ಬಯಸುವವರು ಟೋಲ್ ಫ್ರೀ ನಂಬರ್ ‘1033’ಕ್ಕೆ ಕರೆ ಮಾಡಬಹುದು.