ಬೆಂಗಳೂರು : ಮಹಿಳಾ ಪಿಎಸ್ಐ ಸವಿತಾ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಶ್ರೀರಂಗಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸತ್ರ ಜೆಎಂಎಫ್ಸಿ (JMFC) ನ್ಯಾಯಾಲಯ ಜಾಮೀನನ್ನು ರದ್ದುಗೊಳಿಸಿದೆ.

ಈ ಘಟನೆಯ ನಂತರ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಐಶ್ವರ್ಯಾ ಕೂಡ ಪ್ರತಿದೂರು ದಾಖಲು ಮಾಡಿದ್ದರು. ಆದರೆ ಮಂಡ್ಯ ಡಿವೈಎಸ್ಪಿ (DySP) ನೇತೃತ್ವದಲ್ಲಿ ನಡೆದ ತನಿಖೆಯ ಬಳಿಕ ಈ ಬೆಳವಣಿಗೆ ನಡೆದಿದೆ.
ತುಮಕೂರು ಗ್ರಾಮಾಂತರದ ಶಾಸಕ ಸುರೇಶ್ ಗೌಡ ಪುತ್ರಿ ಮಹಿಳಾ ಪಿಎಸ್ಐಗೆ ಕಪಾಳ ಮೋಕ್ಷ ಮಾಡಿದ್ದರು. ಈ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು, ಅಧಿಕಾರಿಣಿಯ ಮೇಲೆ ಕೈ ಮಾಡಿದ್ದ ಶಾಸಕನ ಪುತ್ರಿಯ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.
ಏನಿದು ಪ್ರಕರಣ?
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಮಾರಮ್ಮ ದೇವಸ್ಥಾನದಲ್ಲಿ ಕಳೆದ ಆಗಸ್ಟ್ 12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮತ್ತು ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಭದ್ರತೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕಾಗಿ ಮಹಿಳಾ ಪಿಎಸ್ಐ ಸವಿತಾ ಬಿ. ಪಾಟೀಲ್ ಸೇರಿದಂತೆ ಪೊಲೀಸರು ಕರ್ತವ್ಯದಲ್ಲಿದ್ದರು.
ಇದನ್ನೂ ಓದಿ : ಅಪ್ರಾಪ್ತೆಯ ಮದುವೆಯಾಗಿ ಲೈಂಗಿಕ ಸಂಪರ್ಕ ಹೊಂದುವುದು ಪೋಕ್ಸೋ ಕಾಯ್ದೆಯಡಿ ಅಪರಾಧ : ಹೈಕೋರ್ಟ್ ತೀರ್ಪು ಶ್ಲಾಘನೀಯ..!
ಈ ವೇಳೆ ದೇವರ ದರ್ಶನಕ್ಕಾಗಿ ಬಂದಿದ್ದ ಶಾಸಕ ಸುರೇಶ್ಗೌಡ ಪುತ್ರಿ ಐಶ್ವರ್ಯಾ ಸರತಿ ಸಾಲಿನಲ್ಲಿ ಕಾಯದೆ ಗರ್ಭಗುಡಿ ಪ್ರವೇಶಿಸಲು ಮುಂದಾದರು ಎಂಬ ಆರೋಪವಿದೆ. ಕರ್ತವ್ಯದಲ್ಲಿದ್ದ ಪಿಎಸ್ಐ ಸವಿತಾ ಜನದಟ್ಟಣೆ ಇರುವುದರಿಂದ ಸ್ವಲ್ಪ ಸಮಯ ಕಾಯುವಂತೆ ಸೂಚಿಸಿದ್ದರು. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾತಿನ ಚಕಮಕಿ ತೀವ್ರಗೊಂಡ ವೇಳೆ ಐಶ್ವರ್ಯಾ ಪಿಎಸ್ಐ ಸವಿತಾ ಅವರಿಗೆ ಕಪಾಳಮೋಕ್ಷ ಮಾಡಿ, ಅವಾಚ್ಯವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಂತರ ಪಿಎಸ್ಐ ಕೂಡ ಐಶ್ವರ್ಯಾಳನ್ನು ಹೊಡೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಕಂಡುಬಂದಿವೆ. ಘಟನೆಯ ವಿಡಿಯೋಗಳು ಕೆಲವು ದಿನಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಮತ್ತೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.






