ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ರಾವ್ (ಪ್ರದೋಷ್) ಅವರನ್ನು ಮಾಫಿ ಸಾಕ್ಷಿ (ಅಪ್ರೂವರ್) ಆಗಿ ಪರಿಗಣಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ರಾಜ್ಯ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.

ಪ್ರದೋಷ್ ಸಾಕ್ಷಿ ಹೇಳಿಕೆ ದಾಖಲಿಸುವುದು ಬುಧವಾರಕ್ಕೆ ನಿಗದಿಯಾಗಿರುವುದರಿಂದ ತುರ್ತು ವಿಚಾರಣೆ ನಡೆಸಬೇಕೆಂದು ಕೋರಿದ್ದಾರೆ. ಹೈಕೋರ್ಟ್ ತುರ್ತು ವಿಚಾರಣೆಗೆ ಒಪ್ಪಿಗೆ ನೀಡದೆ, ಅರ್ಜಿಯನ್ನು ಬುಧವಾರ (ಸೆಪ್ಟೆಂಬರ್ 2) ವಿಚಾರಣೆಗೆ ಮುಂದೂಡಿದೆ.
ಸೆಷನ್ಸ್ ನ್ಯಾಯಾಲಯ ಪ್ರದೋಷ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಪರಿಗಣಿಸಿ, ಸೆಪ್ಟೆಂಬರ್ 2ರಂದು ಹೇಳಿಕೆ ದಾಖಲಿಸಲು ಸಮನ್ಸ್ ನೀಡಿದೆ. ನಟ ದರ್ಶನ್ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ, ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಮತ್ತು ವಿಚಾರಣೆ ತುರ್ತಾಗಿ ನಡೆಸಬೇಕು ಎಂದು ಕೋರಿದ್ದಾರೆ. ಹೈಕೋರ್ಟ್ ಈ ಅರ್ಜಿಯನ್ನು ಬುಧವಾರ ವಿಚಾರಣೆಗೆ ತೆಗೆದುಕೊಳ್ಳಲಿದೆ. ಈ ಬೆಳವಣಿಗೆಯು ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ತಿರುವು ಪಡೆಯುವ ಸಾಧ್ಯತೆಯಿದೆ. ಪ್ರದೋಷ್ ಹೇಳಿಕೆ ಪ್ರಾಸಿಕ್ಯೂಷನ್ಗೆ ಬಲವಾದ ಸಾಕ್ಷ್ಯವಾಗಬಹುದು. ಆದರೆ ದರ್ಶನ್ ಮತ್ತು ಇತರೆ ಆರೋಪಿಗಳು ಅವರನ್ನು ಕ್ರಾಸ್-ಎಕ್ಸಾಮಿನ್ ಮಾಡುವ ಹಕ್ಕನ್ನು ಹೊಂದಿದ್ದಾರೆ.
ಪ್ರಕರಣ ನಡೆದುಕೊಂಡು ಬಂದಿದ್ದು ಹೇಗೆ..?
ಕಳೆದ 2024ರ ಜೂನ್ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ (33)ಯನ್ನು ಅಪಹರಿಸಿ, ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ (ಆರೋಪಿ ಸಂಖ್ಯೆ 2), ಪವಿತ್ರಾ ಗೌಡ ಸೇರಿದಂತೆ ಹಲವು ಜನರನ್ನು ಬಂಧಿಸಲಾಗಿತ್ತು. ಪ್ರದೋಷ್ ರಾವ್ (40, ಸಾಫ್ಟ್ವೇರ್ ವೃತ್ತಿ) ಪ್ರಕರಣದ 14ನೇ ಆರೋಪಿಯಾಗಿದ್ದರು.ಆಗಸ್ಟ್ ತಿಂಗಳಲ್ಲಿ ಪ್ರದೋಷ್ ಸೆಕ್ಷನ್ 307 ಸಿಆರ್ಪಿಸಿ ಅಡಿಯಲ್ಲಿ ಮಾಫಿ ಸಾಕ್ಷಿಯಾಗಲು 11 ಪುಟಗಳ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ :
ಅಲ್ಲದೆ ಇದರಲ್ಲಿ ಅವರು ಘಟನೆಯ ವಿವರಗಳು, ಸಾಕ್ಷಿ ನಾಶ ಮತ್ತು ಸಹ ಆರೋಪಿಗಳ ಪಾತ್ರದ ಬಗ್ಗೆ ಪೂರ್ಣ ಸತ್ಯ ಹೇಳುವುದಾಗಿ ತಿಳಿಸಿದ್ದರು. ಪ್ರಾಸಿಕ್ಯೂಷನ್ ಇದಕ್ಕೆ ಒಪ್ಪಿಗೆಯನ್ನೂ ನೀಡಿತ್ತು. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಇದಕ್ಕೆ ಆಕ್ಷೇಪಿಸಿದ್ದರು. ಆದರೆ 59ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ (ಸಿಸಿಹೆಚ್-59) ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಸಹಆರೋಪಿಗಳಿಗೆ ಮಾಫಿ ಸಾಕ್ಷಿ ಅರ್ಜಿ ವಿಚಾರಣೆಯಲ್ಲಿ ಭಾಗವಹಿಸುವ ಹಕ್ಕಿಲ್ಲ ಎಂದು ತಿಳಿಸಿ, ಆಗಸ್ಟ್ 25ರಂದು ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಅಂಗೀಕರಿಸಿದ್ದರು. ಷರತ್ತುಗಳೊಂದಿಗೆ ಕ್ಷಮಾದಾನ ನೀಡಲಾಗಿದೆ. ಸುಳ್ಳು ಹೇಳಿದರೆ ಅಥವಾ ಸತ್ಯ ಮರೆಮಾಡಿದರೆ ಮತ್ತೆ ಆರೋಪಿಯಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದಕ್ಕೂ ಮೊದಲು ನಟ ದರ್ಶನ್ ಸಹಆರೋಪಿಯಾಗಿ ವಾದ ಮಂಡಿಸಲು ಅವಕಾಶ ಕೋರಿ ಹೈಕೋರ್ಟ್ಗೆ ಹೋಗಿದ್ದರು. ಆಗಸ್ಟ್ 13ರಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಅದನ್ನು ತಿರಸ್ಕರಿಸಿದ್ದರು. ಸಹಆರೋಪಿಗಳಿಗೆ ಮಾಫಿ ಸಾಕ್ಷಿ ಅರ್ಜಿ ಹಂತದಲ್ಲಿ ಹಕ್ಕಿಲ್ಲ; ಸಾಕ್ಷಿ ಹೇಳಿಕೆ ದಾಖಲಾದ ನಂತರವೇ ಕ್ರಾಸ್-ಎಕ್ಸಾಮಿನೇಷನ್ ಹಕ್ಕು ಇದೆ ಎಂದು ತಿಳಿಸಿದ್ದರು.






