ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯರು ಅನಗತ್ಯ ವಿದೇಶ ಪ್ರವಾಸ, ವಿದೇಶದಲ್ಲಿ ಮದುವೆ ಹಾಗೂ ವಿದೇಶದಿಂದ ಚಿನ್ನ ಖರೀದಿಸುವುದನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ. ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವ ಮೂಲಕ ದೇಶದ ಆರ್ಥಿಕತೆ ಹಾಗೂ ಸ್ವಾವಲಂಬನೆಗೆ ಮತ್ತಷ್ಟು ಬಲ ನೀಡಬೇಕು ಎಂದು ಅವರು ಕರೆ ನೀಡಿದ್ದಾರೆ.
ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್ಗೆ ತೆರಳಿರುವ ಪ್ರಧಾನಿ ಮೋದಿ, ಸೆಲ್ಫಿ ಶೈಲಿಯ ವಿಡಿಯೋ ಮೂಲಕ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.ಭಾರತ ಪ್ರಸ್ತುತ ಶೇ.7.8ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಿದೆ ಎಂದು ತಿಳಿಸಿದ ಮೋದಿ, ಇದೇ ವೇಗವನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದರು.

“ಕೇವಲ ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದರೆ ಹೋಗಬೇಡಿ. ವಿದೇಶದಲ್ಲಿ ಮದುವೆಯಾಗುವ ಬದಲು ಭಾರತದಲ್ಲೇ ಮದುವೆ ಮಾಡಿಕೊಳ್ಳಿ. ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನವನ್ನೂ ಖರೀದಿಸಬೇಡಿ” ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಸ್ವದೇಶಿ ವಸ್ತುಗಳ ಬಳಕೆ ಹಾಗೂ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಿದಷ್ಟು, ಭಾರತದ ಆರ್ಥಿಕತೆ ಮತ್ತಷ್ಟು ಬಲಿಷ್ಠವಾಗಲಿದೆ. ಸ್ವಾತಂತ್ರ್ಯದ 100 ವರ್ಷ ಪೂರ್ಣಗೊಳ್ಳುವ ವೇಳೆಗೆ ಯುವ ಪೀಳಿಗೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನೀಡಲು ಇದು ನೆರವಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದೇ ವೇಳೆ ತಮ್ಮ ಟೀಕಾಕಾರರ ವಿರುದ್ಧವೂ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ದೇಶದೊಳಗಿನ ಕೆಲವರು ಹತಾಶೆಯ ವಾತಾವರಣದಲ್ಲಿ ಮುಳುಗಿ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂತಹ ಸವಾಲುಗಳ ನಡುವೆಯೂ ಭಾರತ ಶೇ.7.8ರ ಆರ್ಥಿಕ ಬೆಳವಣಿಗೆ ಸಾಧಿಸಿದೆ. ಇದೇ ವೇಗವನ್ನು ಮುಂದುವರಿಸಿಕೊಂಡು ದೇಶವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಪ್ರಧಾನಿ ಹೇಳಿದ್ದಾರೆ.






