ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ಆಗಸ್ಟ್ 13ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.

ರಾಜ್ಯದ ವಿವಿಧ ಕನ್ಪಡಪರ ಸಂಘಟನೆಗಳ ಸಭೆ ನಡೆಸಿದ ಬಳಿಕ ಒಮ್ಮತದ ನಿರ್ಧಾರ ಕೈಗೊಂಡ ಬಳಿಕ ಮಾಹಿತಿ ನೀಡಿರುವ ವಾಟಾಳ್, ಆಗಸ್ಟ್ 13 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಇಡೀ ಕರ್ನಾಟಕ ಸ್ಥಬ್ದವಾಗಿರಲಿದೆ ಎಂದು ತಿಳಿಸಿದ್ದಾರೆ.
ನಮ್ಮ ಹೋರಾಟಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರಿ ನೌಕರರ ಸಂಘ, ಕಾರ್ಮಿಕ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಬೆಂಬಲ ನೀಡಿದ್ದಾರೆ. ಇವರೆಲ್ಲರೂ ಬಂದ್ನಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಓಲಾ, ಊಬರ್, ಸಂಘಗಳು ಬಂದ್ಗೆ ಬೆಂಬಲ ನೀಡಿವೆ ಎಂದು ಮಾಹಿತಿ ನೀಡಿದ್ದಾರೆ. ಈ ಬಂದ್ಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಂಬಲಿಸಬೇಕೆಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಆಗಸ್ಟ್ ಸಾರಿಗೆ, ಹೋಟೆಲ್, ಚಿತ್ರಮಂದಿರ ಅಂಗಡಿ ಮುಂಗಟ್ಟು ಬಂದ್ ಮಾಡಬೇಕು. ಆಗಸ್ಟ್ 13ರಂದು ಏರ್ಪೋರ್ಟ್ಗೆ ಮುತ್ತಿಗೆ ಹಾಕುತ್ತೇವೆ, ವಿಮಾನ ಹಾರಾಟ ನಿಲ್ಲಿಸಬೇಕು. ನಮ್ಮನ್ನು ಜೈಲಿಗೆ ಹಾಕುವುದಾದರೆ ಹಾಕಲಿ, ತೊಂದರೆ ಏನಿಲ್ಲ, ಆದರೆ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಯಲು ಬಿಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರೆದಿರುವ ಸರ್ವಪಕ್ಷಗಳ ಸಭೆಯಲ್ಲಿ ನಾವು ಯಾರೂ ಕೂಡ ಬಾಗವಹಿಸುವುದಿಲ್ಲ. ಅವರು ತಮಗೆ ಬೇಕಾದವರನ್ನು ಕರೆದಿದ್ದಾರೆ, ಅವರವರ ಹೊಂದಾಣಿಕೆಯಾಗಿದೆಷ್ಟೇ, ನಮ್ಮನ್ನು ಯಾರನ್ನೂ ವಿಶ್ವಾಸಕ್ಕೆ ಪಡೆದಿಲ್ಲ. ಆ ಸಭೆಯಿಂದ ಏನೂ ಆಗುವುದಿಲ್ಲ ಅದೆಲ್ಲ ಹೆಸರಿಗಷ್ಟೇ ಎಂದು ವಾಟಾಳ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಶಿಕ್ಷಕರೇ ಕಾರಣ? ಸಿಬಿಐ ತನಿಖೆಯಲ್ಲಿ ಸ್ಫೋಟಕ ಮಾಹಿತಿ!
ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ CWRC, CWMA ಆದೇಶ ವಿರೋಧಿಸಿ ರಾಜ್ಯದಲ್ಲಿ ಭುಗಿಲೆದ್ದಿರುವ ರೈತರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಈ ಮೂಲಕ ಕನ್ನಡ ಪರ ಸಂಘಟನೆಗಳು ಹಾಗೂ ರೈತಸಂಘಟನೆಗಳು ಮುಂದಾಗಿವೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳು ಕರೆ ನೀಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ, ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿವೆ.






