ನವದೆಹಲಿ : ದೇಶದಲ್ಲಿನ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಇಂದಿಗೂ ಅನ್ನದಾತ ಜಾತಕ ಪಕ್ಷಿಯಂತೆ ಕಾಣುತ್ತಿದ್ದಾನೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಹಲವಾರು ನಿರೀಕ್ಷೆಗಳನ್ನು ಹೊಂದಿದ್ದ ರೈತರು ಅದರಲ್ಲೇ ಕಾಲ ಕಳೆಯುವಂತಾಗಿದೆ. ಇನ್ನೂ ಪ್ರಮುಖವಾಗಿ ಖುದ್ದು ಪ್ರಧಾನಿಯೇ ಬೆಂಬಲ ಬೆಲೆ ನೀಡುವ ಬಗ್ಗೆ ಭರವಸೆ ನೀಡಿದ್ದರೂ ಇದುವರೆಗೂ ಕಾರ್ಯರೂಪಕ್ಕೆ ಬರದಿರುವುದು ರೈತರಲ್ಲಿ ನಿರಾಸೆಗೆ ಕಾರಣವಾಗಿದೆ.

ಇದಕ್ಕಾಗಿಯೇ ಸಮಿತಿಯಿದ್ದರೂ ಉಪಯೋಗಕ್ಕೆ ಇಲ್ಲ ಎನ್ನುವ ಸ್ಥಿತಿಯಿದೆ. ಕಾರಣ 54 ಲಕ್ಷ ರೂಪಾಯಿಗಳಷ್ಟು ಹಣವನ್ನು ವಿನಿಯೋಗಿಸಿರುವ ಸಮಿತಿಯು ವರದಿಯನ್ನು ಮಾತ್ರ ಸಿದ್ಧಪಡಿಸಿಲ್ಲ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಸಮಿತಿಯು ಸಭೆಯ ಮೇಲೆ ಸಭೆಗಳನ್ನು ನಡೆಸಿದ್ದು ಬಿಟ್ಟರೆ ಅದರ ಲಾಭವೇನು ಎಂಬುವುದು ತಿಳಿದಿಲ್ಲ. ಅಲ್ಲದೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದರೂ ಸಹ ಈ ಬಗ್ಗೆ ಆರ್‌ಟಿಐ ಅಡಿಯಲ್ಲಿ ಯಾವುದೇ ಮಾಹಿತಿ ಲಭ್ಯವಾಗದಿರುವುದು ವ್ಯವಸ್ಥೆಯ ಬಗ್ಗೆ ಹಲವು ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ದೇಶದಲ್ಲಿನ ಪ್ರತಿಯೊಬ್ಬ ರೈತ ತಾನು ಬೆಳೆದ ಬೆಳೆಗೆ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆಯ (MSP) ನಿಗದಿಗಾಗಿ ಹಲವು ವರ್ಷಗಳಿಂದಲೂ ವ್ಯಾಪಕ ಬೇಡಿಕೆ, ಒತ್ತಡಗಳಿದ್ದರೂ ಸಹ ಅದು ಅಧಿಕೃತವಾಗಿ ಜಾರಿಗೆ ಬರದಿರುವುದು ರೈತರ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಅಲ್ಲದೆ ಈ ಬೇಡಿಕೆಯ ಈಡೇರಿಕೆಗಾಗಿ ಪ್ರತಿಭಟನೆಗಳು ನಿಂತಿಲ್ಲ, ಆದರೆ ಸರ್ಕಾರ ತನ್ನ ಜವಾಬ್ದಾರಿಯನ್ನು ಮಾತ್ರ ಮರೆತಂತೆ ಕಾಣುತ್ತಿದೆ.
ಇದನ್ನೂ ಓದಿ : ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ನಲ್ಲೂ ಪವನ್ ಕಲ್ಯಾಣ್ ಹೀರೋ!
ಕಳೆದ 2022ರ ಜುಲೈ ತಿಂಗಳ 18ರಂದು ರಚನೆಯಾಗಿರುವ ಬೆಂಬಲ ಬೆಲೆ ನಿಗದಿ ಸಮಿತಿಯು ಒಟ್ಟು ಈವರೆಗೆ 6 ಹಾಗೂ 42 ಉಪ ಸಮಿತಿಗಳ ಸಭೆಗಳನ್ನು ನಡೆಸಿದೆ. ಇನ್ನೂ ಈ ವರ್ಷದ ಸಭೆಯು ಮೇ 14 ರಂದು ಜರುಗಿತ್ತು. ಇದೇ ವಿಚಾರಕ್ಕೆ ಮಾಹಿತಿ ಹಕ್ಕಿನಡಿಯಲ್ಲಿ ಕೇಳಲಾಗಿದ್ದ ಮಾಹಿತಿಗೆ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣದ ಸಚಿವಾಲಯವು ಸಮರ್ಪಕವಾಗಿರುವ ಉತ್ತರವನ್ನು ನೀಡದೆ ಜಾರಿಕೊಂಡಿದೆ.
ಸಮಿತಿಯ ವ್ಯಾಪ್ತಿಗೆ ಸಂಬಂಧಿಸಿದ ಕಾರ್ಯಕಲಾಪಗಳು, ಸಭೆಗಳ ಮಾಹಿತಿಗಳೆಲ್ಲವೂ ಗೌಪ್ಯವಾಗಿರುತ್ತವೆ. ಸಮಿತಿಯ ಸಭೆಗೆ ಅಧ್ಯಕ್ಷರು ಹಾಗೂ ಸದಸ್ಯರಷ್ಟೇ ಭಾಗಿಯಾಗುತ್ತಾರೆ ಎಂದು ನಿರ್ದಿಷ್ಟ ಮಾಹಿತಿಯನ್ನು ನೀಡಲು ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ (Central Public Information Officer) ಮುಂದೆ ಬರಲಿಲ್ಲ.

ಅಲ್ಲದೆ ಕಳೆದ ಮೇ 17 ರವರೆಗಿನ ಒಟ್ಟು ಖರ್ಚು 53,97,280 ರೂಪಾಯಿಗಳಾಗಿದ್ದು, ಏಪ್ರಿಲ್ 2 ರಂದು ನಡೆದ ಒಂದೇ ಸಭೆಗೆ 62,380 ರೂ.ಗಳಷ್ಟು ವೆಚ್ಚವಾಗಿದೆ ಎಂಬ ಮಾಹಿತಿ ನೀಡಿದ್ದು, ಸಮಿತಿಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಕಳೆದ 2021ರಲ್ಲಿ ರೈತರ ಐತಿಹಾಸಿಕ ಹೋರಾಟದ ಸಮಯದಲ್ಲಿ ಕನಿಷ್ಠ ಬೆಂಬಲ ಬೆಲೆ (Minimum Supporting Price) ಕೇಂದ್ರ ಸರ್ಕಾರ ಜಾರಿಯ ಬಗ್ಗೆ ಹೇಳಿತ್ತು. ಆದರೆ ಇದುವರೆಗೂ ಯಾವುದೇ ರೀತಿಯ ಘೋಷಣೆಗಳು ಹೊರಬೀಳದಿರುವುದು ರೈತರು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸುವ ಸನ್ನಿವೇಶ ನಿರ್ಮಾಣವಾಗಿದೆ.





