ಬೆಂಗಳೂರು : ಪ್ರೇಮಿಗಳ ಮಧ್ಯೆ (Lovers) ಚಲಿಸುವ ಕಾರಲ್ಲೇ (Car) ಗಲಾಟೆಯಾಗಿ, ಯುವಕ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆಗೆ ಶರಣಾದ ಭೀಕರ ಘಟನೆ ತುಮಕೂರು ಜಿಲ್ಲೆಯ ಶಿರಾ (Shira) ತಾಲೂಕಿನ ಜೋಗಿಹಳ್ಳಿ ಬಳಿ ಇಂದು ನಡೆದಿದೆ.

ಈ ದುರ್ಘಟನೆಯಲ್ಲಿ ನಾಗೇಂದ್ರ ಎಂಬ (30) ಸಜೀವ ದಹನವಾದ ಪಾಗಲ್ ಪ್ರೇಮಿಯಾಗಿದ್ದಾನೆ. ತುಮಕೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಇದಕ್ಕೂ ಮುನ್ನ, ಕಾರಿನಲ್ಲಿದ್ದ ಯುವತಿ ತಲೆಗೆ ಪ್ರಿಯತಮ ನಾಗೇಂದ್ರ ಚಾಕು ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಯುವತಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿನಿಮೀಯ ರೀತಿಯಲ್ಲಿ ನಡೆದಿರುವ ಈ ಘಟನೆಯಲ್ಲಿ ಯುವಕ ಕಾರಿನಲ್ಲೇ ಸುಟ್ಟು ಕರಕಲಾಗಿದ್ದು, ಆತನೊಂದಿಗಿದ್ದ ರಮ್ಯಾ ಉಲ್ಲಾಸ್ (23) ಎಂಬ ಯುವತಿ ತೀವ್ರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಒಟಿ ಟೆಕ್ನಿಷಿಯನ್ (OT Technician) ಆಗಿ ಕೆಲಸ ಮಾಡುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ರಮ್ಯಾ ಉಲ್ಲಾಸ್ ಹಾಗೂ ನಾಗೇಂದ್ರ ಬೆಂಗಳೂರಿನಿಂದ ಅಂಕೋಲಾಕ್ಕೆ ತೆರಳಲು ಖಾಸಗಿಯಾಗಿ ಕಾರೊಂದನ್ನು ಬುಕ್ ಮಾಡಿದ್ದರು.
ಚಾಲಕನೊಂದಿಗೆ ಇವರಿಬ್ಬರು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ, ಕಾರು ತುಮಕೂರು ದಾಟುತ್ತಿದ್ದಂತೆ ನಾಗೇಂದ್ರ ಹಾಗೂ ರಮ್ಯಾ ನಡುವೆ ಮದುವೆ ವಿಚಾರಕ್ಕೆ ಕಾರಿನಲ್ಲೇ ತೀವ್ರ ಜಗಳ ಆರಂಭವಾಗಿದೆ. ಇದು ವಿಕೋಪಕ್ಕೆ ತಿರುಗಿ ನಾಗೇಂದ್ರ ಸಾವಿನಲ್ಲಿ ಅಂತ್ಯವಾಗಿದೆ. ಇನ್ನೂ ಈ ಘಟನೆಯ ಕುರಿತಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






