ಬೆಂಗಳೂರು : ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಕ್ಕರ್ ನೀಡುವ ನಿಟ್ಟಿನಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳದ ಟಿಎಂಸಿ ಇದೀಗ ಇಬ್ಭಾಗವಾಗಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಎನ್ನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಿರುದ್ಧ ಬಂಡಾಯವೆದ್ದು ಶಾಸಕರ ಗುಂಪೊಂದು ಪ್ರತ್ಯೇಕ ಬಣವನ್ನು ರಚಿಸಿಕೊಂಡಿದೆ. ಅಲ್ಲದೆ ನಮ್ಮದೇ ಅಧಿಕೃತ ವಿಪಕ್ಷವೆಂದು ವಿಧಾನಸಭೆಯ ಸ್ಪೀಕರ್ಗೆ ಪತ್ರ ಬರೆದು ಮನವಿ ಮಾಡಿದೆ. ಸ್ಪೀಕರ್ ಈ ಪತ್ರವನ್ನು ಮನ್ನಿಸಿ ಬಂಡಾಯ ಶಾಸಕರ ಬಣಕ್ಕೆ ವಿಪಕ್ಷದ ಪಟ್ಟವನ್ನು ನೀಡಿದ್ದಾರೆ.

ಇನ್ನುಳಿದಂತೆ ಟಿಎಂಸಿಯ ಸಂಸದರು ಬಹಿರಂಗವಾಗಿ 20 ಜನರು ತಮ್ಮ ಬೆಂಬಲವನ್ನು ಎನ್ಡಿಎ ಸರ್ಕಾರಕ್ಕೆ ಘೋಷಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಜರ್ಜರಿತರಾಗಿರುವ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಡುವ ಕಠಿಣ ಸ್ಥಿತಿಗೆ ತಲುಪಿದ್ದಾರೆ. ಈ ನಡುವೆಯೇ ಮಹಾರಾಷ್ಟ್ರದಲ್ಲಿ ಇನ್ನೊಂದು ವಿಪಕ್ಷವಾಗಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿ ಬಂಡಾಯದ ಬಾವುಟ ಹಾರುವ ಲಕ್ಷಣಗಳು ದಟ್ಟವಾಗಿವೆ.
ಸದ್ಯ ಮಹಾ ಒಕ್ಕೂಟದಲ್ಲಿ (ಮಹಾಯುತಿ) ಗುರುತಿಸಿಕೊಂಡಿರುವ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ಠಾಕ್ರೆ ಬಣದ 7 ಸಂಸದರು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಈಗಾಗಲೇ ಶಿವಸೇನೆಯ ಸಂಸದರು ಈ ಕುರಿತ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ನವದೆಹಲಿಯಲ್ಲಿ ಯಾರಿಗೂ ತಿಳಿಯದಂತೆ ಗೌಪ್ಯವಾಗಿ ಠಾಕ್ರೆ ಬಣದ ಸಂಸದರು ಏಕನಾಥ ಶಿಂಧೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ : ಕೊಟ್ಟ ಮಾತಿಗೆ ತಪ್ಪಿದವರನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ : ಗೃಹಲಕ್ಷ್ಮಿ ಪರಿಷ್ಕರಣೆ ವಿರುದ್ಧ ಜೆಡಿಎಸ್ ವಾಗ್ದಾಳಿ
ಇನ್ನೂ ಒಟ್ಟು ಏಳು ಜನ ಸಂಸದರು ಠಾಕ್ರೆ ಬಣಕ್ಕೆ ಗುಡ್ ಬೈ ಹೇಳುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ಇದಕ್ಕೆ ಪೂರಕವೆಂಬಂತೆ ಶಿಂಧೆ ಪುತ್ರ ಹಾಗೂ ಸಂಸದ ಶ್ರೀಕಾಂತ್ ಶಿಂಧೆ ಶಿವಸೇನೆ ಯುಬಿಟಿಯ ಸಂಸದರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯೂ ಹೊರ ಬಿದ್ದಿದೆ.

ಈ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಡಿಸಿಎಂ ಏಕನಾಥ ಶಿಂಧೆ ಭೇಟಿಯಾಗಿ ರಾಜಕೀಯ ಬೆಳವಣಿಗೆಗಳನ್ನು ಗಮನಕ್ಕೆ ತಂದಿದ್ದಾರೆ. ಅಲ್ಲದೆ ಮುಂದಿನ ಸ್ಥಿತಿ ಗತಿಗಳ ಬಗ್ಗೆಯೂ ಮಹತ್ವದ ಚರ್ಚೆ ನಡೆಸಿದ್ದಾರೆ. ಆದರೆ ಠಾಕ್ರೆ ಬಣದಿಂದ ಶಿವಸೇನೆಯ ಶಿಂಧೆ ಬಣಕ್ಕೆ ಸೇರಿಕೊಳ್ಳುವ ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನವನ್ನು ನೀಡುವುದರ ಕುರಿತೂ ಚರ್ಚೆಗಳು ಮುಂದುವರೆದಿವೆ ಎಂಬುವುದು ಮೂಲಗಳ ಮಾಹಿತಿಯಾಗಿದೆ.
ಈ ರಾಜಕೀಯ ಬೆಳವಣಿಗೆಗಳು ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ಯಲ್ಲಿ ಆತಂಕದ ಸ್ಥಿತಿಗೆ ಕಾರಣವಾಗಿವೆ. ಕೇಂದ್ರ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಬಂಡಾಯವು ಠಾಕ್ರೆ ಬಣಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮುಂಬರುವ ಸಚಿವ ಸಂಪುಟ ವಿಸ್ತರಣೆಯ ಸುತ್ತಲಿನ ಚರ್ಚೆಯಲ್ಲಿ ಸಂಸದ ಡಾ. ಶ್ರೀಕಾಂತ್ ಶಿಂಧೆ ಹೆಸರು ಕೇಳಿ ಬರುತ್ತಿರುವುದು ಶಿಂಧೆ ನೇತೃತ್ವದ ಶಿವಸೇನೆಯ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ.

ಈ ಸಂಭಾವ್ಯ ಪಕ್ಷಾಂತರದಲ್ಲಿ ಮರಾಠವಾಡ ಪ್ರದೇಶದ ಪ್ರಮುಖ ನಾಯಕರೊಬ್ಬರು ಮುಂಚೂಣಿಯಲ್ಲಿದ್ದಾರೆ. ಮುಂಬೈನ ಇಬ್ಬರು ಸಂಸದರನ್ನು ಹೊರತುಪಡಿಸಿ, ಉಳಿದ ಏಳು ಸಂಸದರು ಯಾವುದೇ ಕ್ಷಣದಲ್ಲಿ ಶಿಂಧೆ ನೇತೃತ್ವದ ಬಣದೊಂದಿಗೆ ಸೇರ್ಪಡೆಯಾಗುವ ಸಾಧ್ಯೆತಗಳಿವೆ ಎನ್ನಲಾಗುತ್ತಿದೆ.

ಈಗಾಗಲೇ ನವದೆಹಲಿ ಪ್ರವಾಸದಿಂದ ರಾಜ್ಯಕ್ಕೆ ವಾಪಸ್ ಆಗಿರುವ ಏಕನಾಥ ಶಿಂಧೆ ತಮ್ಮ ಸ್ವಗ್ರಾಮ ದರೆಗೆ ತೆರಳಿದ್ದಾರೆ. ಖಾಸಗಿ ಕಾರ್ಯದ ನಿಮಿತ್ತ ಈ ಭೇಟಿಯಾಗಿದೆ ಎಂದರೂ ಸಹ, ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಹಾಗೂ ಸಂಚಲನಕಾರಿ ಆಟಗಳಿಗೆ ವೇದಿಕೆಯಾಗುತ್ತದೆ ಎನ್ನುವುದು ಹಿಂದಿನ ಬೆಳವಣಿಗೆಗಳನ್ನು ಗಮನಿಸಿದಾಗ ಆರ್ಥವಾಗುತ್ತದೆ. ಶಿಂಧೆ ಇಲ್ಲಿಗೆ ಬಂದಾಗ ರಾಜಕೀಯ ಚಟುವಟಿಕೆಗಳಿಗೆ ವೇಗ ಬರುತ್ತದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಶಿಂಧೆ ದೆಹಲಿಯಲ್ಲಿ ಪ್ಲ್ಯಾನ್ ಫಿಕ್ಸ್ ಮಾಡಿ ಬಂದಿದ್ದಾರೆ, ಯಾವಾಗ ಬೇಕಾದರೂ ಅದು ಕಾರ್ಯರೂಪಕ್ಕೆ ಬರಬಹುದು ಎಂಬುವುದು ಸದ್ಯ ಮಹಾರಾಷ್ಟ್ರ ರಾಜಕೀಯದಲ್ಲಿ ಸ್ಫೋಟಕ ವಿಚಾರವಾಗಿದೆ.






