ಬೆಂಗಳೂರು: ರಾಜ್ಯದ ಟಿಯರ್-2 ಹಾಗೂ ಟಿಯರ್-3 ನಗರಗಳು ಮತ್ತು ಪಟ್ಟಣಗಳ ಯುವಕರಿಗೆ ಉದಯೋನ್ಮುಖ ತಂತ್ರಜ್ಞಾನಗಳ ಪ್ರವೇಶವನ್ನು ವಿಸ್ತರಿಸುವ ಹಾಗೂ ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.

2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ಈ ಯೋಜನೆಯನ್ನು ಭಾರತ ಸರ್ಕಾರದ AI ಮಿಷನ್ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಉದ್ಯಮ ವಲಯಕ್ಕೆ ಅಗತ್ಯವಾದ ತಂತ್ರಜ್ಞಾನ ಕೌಶಲ್ಯಗಳನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ.

ಈ AI ಪ್ರಯೋಗಾಲಯಗಳ ಮೂಲಕ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (Artificial Intelligence), ಯಂತ್ರ ಕಲಿಕೆ (Machine Learning), ದತ್ತಾಂಶ ವಿಜ್ಞಾನ (Data Science) ಹಾಗೂ ಇತರ ಸುಧಾರಿತ ತಂತ್ರಜ್ಞಾನಗಳಲ್ಲಿ ಪ್ರಾಯೋಗಿಕ ತರಬೇತಿ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ನವೋದ್ಯಮ ಆಧಾರಿತ ಕಲಿಕೆಗೆ ಅವಕಾಶ ಒದಗಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ತಾಂತ್ರಿಕ ಸಾಮರ್ಥ್ಯ ವೃದ್ಧಿಯಾಗಿ, ಉದ್ಯೋಗಾವಕಾಶಗಳು ಹೆಚ್ಚುವುದರ ಜೊತೆಗೆ ಡಿಜಿಟಲ್ ಆರ್ಥಿಕತೆಯಲ್ಲಿನ ಅವಕಾಶಗಳಿಗೆ ಅವರು ಸಜ್ಜಾಗಲಿದ್ದಾರೆ.

ಈ ಬಗ್ಗೆ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ʼಭವಿಷ್ಯದ ಉದ್ಯೋಗ ಕ್ಷೇತ್ರವು ತಂತ್ರಜ್ಞಾನದಿಂದ ರೂಪುಗೊಳ್ಳಲಿದೆ. ಈ ಕೌಶಲ್ಯಗಳನ್ನು ಪಡೆಯುವ ಅವಕಾಶಗಳು ಕೇವಲ ಮಹಾನಗರಗಳಿಗೆ ಸೀಮಿತವಾಗದೆ, ಎಲ್ಲರಿಗೂ ಲಭ್ಯವಾಗುವುದು ಅತ್ಯಗತ್ಯ. ಈ AI ಪ್ರಯೋಗಾಲಯಗಳ ಮೂಲಕ ಟಿಯರ್-2 ಮತ್ತು ಟಿಯರ್-3 ಪ್ರದೇಶಗಳ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳ ಪ್ರಾಯೋಗಿಕ ಅನುಭವವನ್ನು ನೀಡುತ್ತಿದ್ದು, ಉದ್ಯಮ ವಲಯಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸುವ ಜೊತೆಗೆ ಡಿಜಿಟಲ್ ಆರ್ಥಿಕತೆಯಲ್ಲಿ ಅರ್ಥಪೂರ್ಣವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತಿದ್ದೇವೆʼ ಎಂದು ಹೇಳಿದರು.

ಆಯ್ಕೆಯಾದ ಕಾಲೇಜುಗಳಲ್ಲಿ ಆಧುನಿಕ AI ಸೌಲಭ್ಯಗಳನ್ನು ಒಳಗೊಂಡ ಪ್ರಯೋಗಾಲಯ ಮೂಲಸೌಕರ್ಯವನ್ನು ನಿರ್ಮಿಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ, ಸಂಶೋಧನೆ, ಕೌಶಲ್ಯ ಅಭಿವೃದ್ಧಿ ಮತ್ತು ನವೋದ್ಯಮ ಚಟುವಟಿಕೆಗಳಿಗೆ ಅಗತ್ಯವಾದ ವೇದಿಕೆಯನ್ನು ಒದಗಿಸಲಿದೆ. ಜೊತೆಗೆ ಸಮಸ್ಯೆ ಪರಿಹಾರ ಸಾಮರ್ಥ್ಯ, ಸೃಜನಶೀಲತೆ ಹಾಗೂ ತಾಂತ್ರಿಕ ಪರಿಣತಿಯನ್ನು ಬೆಳೆಸಲು ಸಹಕಾರಿಯಾಗಲಿದೆ.

ಭಾರತ ಸರ್ಕಾರದ AI ಮಿಷನ್ ಅಡಿಯಲ್ಲಿ ಪ್ರತಿ ಪ್ರಯೋಗಾಲಯಕ್ಕೆ ಮೂರು ವರ್ಷಗಳ ಅವಧಿಯಲ್ಲಿ ₹68.98 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ. ಈ ಅನುದಾನವನ್ನು ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದರೊಂದಿಗೆ ಕರ್ನಾಟಕ ಸರ್ಕಾರವು ಈ ಯೋಜನೆಗೆ ₹10 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು, ಮೊದಲ ವರ್ಷದಲ್ಲೇ ₹6.29 ಕೋಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಇದರ ಜೊತೆಗೆ, ಮೊದಲ ಹಂತದಲ್ಲಿ 23 ಶಿಕ್ಷಣ ಸಂಸ್ಥೆಗಳಲ್ಲಿ AI ಡೇಟಾ ಲ್ಯಾಬ್‌ಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ. ಮುಖ್ಯ ನಗರಗಳಾಚೆಗೂ ಸುಧಾರಿತ ತಂತ್ರಜ್ಞಾನ ಮೂಲಸೌಕರ್ಯವನ್ನು ವಿಸ್ತರಿಸುವ ಮೂಲಕ, ಕರ್ನಾಟಕವು ತನ್ನ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದು, ರಾಜ್ಯದ ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಕಲಿಯುವ ಹಾಗೂ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುವ ದಾರಿಯನ್ನು ನಿರ್ಮಿಸುತ್ತಿದೆ.






