ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿರುವಿತಾಂಕುರ್ ದೇವಸ್ವಂ ಬೋರ್ಡ್ (ಟಿಡಿಬಿ) ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಯಾತ್ರಾ ಋತುವಿನಲ್ಲಿ ಜನಸಂದಣಿ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ಬೋರ್ಡ್ ಸಿದ್ಧತೆ ನಡೆಸಿದೆ.
ಟಿಡಿಬಿ ಅಧ್ಯಕ್ಷ ಕೆ ಜಯಕುಮಾರ್ ಅವರು ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ್ದು, ಯಾತ್ರಾ ಋತುವಿಗೆ ಅಗತ್ಯವಾದ ಪೂರ್ವಸಿದ್ಧತೆಗಳು ಈಗಾಗಲೇ ಆರಂಭವಾಗಿವೆ ಎಂದು ತಿಳಿಸಿದ್ದಾರೆ. ಭಕ್ತರಿಗೆ ನೀಡಲಾಗುವ ಹಲವು ಸೇವೆಗಳು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ವೇಗವಾಗಿ ಸಾಗುತ್ತಿದೆ ಎಂದರು.

ಶಬರಿಮಲೆಯ ವಿವಿಧ ವ್ಯವಸ್ಥೆಗಳನ್ನು ಸಂಪೂರ್ಣ ಡಿಜಿಟಲ್ ಮಾದರಿಗೆ ಪರಿವರ್ತಿಸುವ ಗುರಿಯನ್ನು ಬೋರ್ಡ್ ಹೊಂದಿದೆ. ನಗದು ವಹಿವಾಟುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಆನ್‌ಲೈನ್ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಬದಲಾವಣೆ ಕೇವಲ ಹಣಕಾಸು ವ್ಯವಹಾರಗಳಿಗೆ ಮಾತ್ರ ಸೀಮಿತವಾಗದೆ, ಆಡಳಿತಾತ್ಮಕ ಸೇವೆಗಳಿಗೂ ವಿಸ್ತರಿಸಲಿದೆ.ಜನಸಂದಣಿ ನಿಯಂತ್ರಣಕ್ಕಾಗಿ ಜೂನ್ 20ರಂದು ಕೊಚ್ಚಿಯಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದ್ದು, ದೇಶದ ಪ್ರಮುಖ ಎಐ ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. ಯಾತ್ರಿಕರ ಹರಿವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಉದ್ದೇಶದಿಂದ ಈ ಕಾರ್ಯಾಗಾರ ಮಹತ್ವ ಪಡೆದಿದೆ.

ನಿಲಕ್ಕಲ್, ಪಂಪಾ, ಮರಕೂಟಂ ಮತ್ತು ಸನ್ನಿಧಾನಂ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಯಾತ್ರಿಕರ ಸಂಖ್ಯೆಯನ್ನು ಎಐ ತಂತ್ರಜ್ಞಾನದ ಮೂಲಕ ನೈಜ ಸಮಯದಲ್ಲಿ ವಿಶ್ಲೇಷಿಸಿ, ಅದರ ಆಧಾರದ ಮೇಲೆ ಜನಸಂದಣಿ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುತ್ತದೆ. ಇದರಿಂದ ಯಾವ ಸಮಯದಲ್ಲಿ ಎಷ್ಟು ಭಕ್ತರಿಗೆ ಮುಂದುವರಿಯಲು ಅವಕಾಶ ನೀಡಬೇಕು ಎಂಬುದನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಾಗಲಿದೆ.
ಎಐ ಆಧಾರಿತ ಈ ಹೊಸ ವ್ಯವಸ್ಥೆಯಿಂದ ಭಕ್ತರ ಸುರಕ್ಷತೆ ಹೆಚ್ಚುವುದರ ಜೊತೆಗೆ ದರ್ಶನ ವ್ಯವಸ್ಥೆ ಇನ್ನಷ್ಟು ಸುಗಮವಾಗಲಿದೆ ಎಂಬ ವಿಶ್ವಾಸವನ್ನು ತಿರುವಿತಾಂಕುರ್ ದೇವಸ್ವಂ ಬೋರ್ಡ್ ವ್ಯಕ್ತಪಡಿಸಿದೆ.





