ವಿಶ್ವದ ಅತಿ ದೊಡ್ಡ ಕ್ರೀಡಾಕೂಟವಾದ ಫಿಫಾ ವಿಶ್ವಕಪ್ 2026ಕ್ಕೆ (FIFA World Cup ) ಇಂದು ಅಧಿಕೃತ ಚಾಲನೆ ಸಿಗಲಿದೆ. ಜೂನ್ 11ರಿಂದ ಜುಲೈವರೆಗೆ ಫಿಫಾ ವಿಶ್ವಕಪ್ ನಡೆಯಲಿದ್ದು, ಮೊದಲ ಪಂದ್ಯವು ಜೂನ್ 12ರ ಭಾರತೀಯ ಕಾಲಮಾನ 12:30ಕ್ಕೆ ಆರಂಭವಾಗಲಿದೆ.

ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಜಂಟಿಯಾಗಿ ಈ ಬಾರಿಯ ಫಿಫಾ ವಿಶ್ವಕಪ್ ಮೆಗಾ ಟೂರ್ನಿ ಆಯೋಜಿಸಿದ್ದು, ಈ ಬಾರಿ ಮೂರು ದೇಶಗಳಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಮೂರು ಪ್ರತ್ಯೇಕ ಉದ್ಘಾಟನಾ ಸಮಾರಂಭಗಳು ನಡೆಯಲಿವೆ.

ಇಂದು ಜೂನ್ 11ರ ರಾತ್ರಿ 11 ಗಂಟೆಗೆ (IST) ಮೆಕ್ಸಿಕೋ ಸಿಟಿಯಲ್ಲಿ ಮೊದಲ ಉದ್ಘಾಟನಾ ಸಮಾರಂಭ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯವು ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಈ ಸಮಾರಂಭದಲ್ಲಿ ಜಾಗತಿಕ ಗಾಯಕಿ ಶಕೀರಾ ಮತ್ತು ಬರ್ನಾ ಬಾಯ್ ಈ ಬಾರಿಯ ಅಧಿಕೃತ ಗೀತೆ ‘ಡೈ-ಡೈ’ (Die-Die) ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಇನ್ನು ಜೂನ್ 12ರ ರಾತ್ರಿ 11 ಗಂಟೆಗೆ (IST) ಕೆನಡಾದಲ್ಲಿ ಎರಡನೇ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ಟೂರ್ನಿಯ ಮೂರನೇ ಪಂದ್ಯವು ಕೆನಡಾದ ಟೊರೊಂಟೊದಲ್ಲಿ ಕೆನಡಾ ಮತ್ತು ಬೋಸ್ನಿಯಾ-ಹರ್ಜೆಗೋವಿನಾ ನಡುವೆ ನಡೆಯಲಿದೆ.







