ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರುವ ಬೆನ್ನಲ್ಲೇ, ಅವರ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಟ್ರೋಲಿಂಗ್ ಮತ್ತು ಅವಹೇಳನಕಾರಿ ಪೋಸ್ಟ್ಗಳ ಗುರಿಯಾಗುತ್ತಿದ್ದಾರೆ. ಕೆಲ ಕಿಡಿಗೇಡಿಗಳು ನಕಲಿ ಖಾತೆಗಳನ್ನು ಸೃಷ್ಟಿಸಿ ವಿಜಯಲಕ್ಷ್ಮಿ ಅವರ ಬಗ್ಗೆ ಅಸಭ್ಯ ಹಾಗೂ ಅವಹೇಳನಕಾರಿ ಕಾಮೆಂಟ್ಗಳನ್ನು ಹರಿಬಿಡುತ್ತಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ನಿಂದನೆ ಮತ್ತು ಕಿರುಕುಳದ ವಿರುದ್ಧ ವಿಜಯಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದರು. ಆದರೂ ಟ್ರೋಲಿಂಗ್ ನಿಲ್ಲದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗೆ ‘ಜಲಗಾರ ಯುನಿವರ್ಸಿಟಿ’ ಹೆಸರಿನ ಖಾತೆಯೊಂದರಲ್ಲಿ ನಟ ಧನ್ವೀರ್ ಜೊತೆಗಿನ ವಿಜಯಲಕ್ಷ್ಮಿ ಅವರ ವಿಡಿಯೊವನ್ನು ಹಂಚಿಕೊಂಡು, ಅದರ ಜೊತೆಗೆ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ.ವೈರಲ್ ಆಗಿರುವ ಈ ಪೋಸ್ಟ್ಗಳಲ್ಲಿ ವಿಜಯಲಕ್ಷ್ಮಿ ಅವರ ವೈಯಕ್ತಿಕ ಜೀವನವನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕ ಟೀಕೆಗಳನ್ನು ಮಾಡಲಾಗಿದ್ದು, ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಈ ಸೈಬರ್ ಕಿರುಕುಳದ ಬಗ್ಗೆ ವಿಜಯಲಕ್ಷ್ಮಿ ಪೊಲೀಸರ ಗಮನಕ್ಕೂ ತಂದಿದ್ದಾರೆ.

ನಕಲಿ ಖಾತೆಗಳನ್ನು ಬಳಸಿಕೊಂಡು ಅವಹೇಳನಕಾರಿ ಪೋಸ್ಟ್ಗಳು ಹಾಗೂ ಕಾಮೆಂಟ್ಗಳನ್ನು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಸೈಬರ್ ಪೊಲೀಸರು ಸಂಬಂಧಿತ ಖಾತೆಗಳ ಪತ್ತೆ ಹಾಗೂ ತನಿಖೆ ಆರಂಭಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮತ್ತು ಸೈಬರ್ ಕಿರುಕುಳದ ವಿರುದ್ಧ ಕಠಿಣ ಕ್ರಮ ಅಗತ್ಯ ಎಂಬ ಚರ್ಚೆಯೂ ಈ ಬೆಳವಣಿಗೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ.






