ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಮತ್ತು ಭಾರೀ ಸಂಭಾವನೆ ಪಡೆಯುವ ಸಿನಿತಾರೆಯರು ಕೆಲವೊಮ್ಮೆ ವಿವಾದಗಳಲ್ಲೂ ಸಿಲುಕುತ್ತಾರೆ. ಇದೀಗ ಬಾಲಿವುಡ್‌ನ ಮೂವರು ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಇಂತಹದ್ದೇ ಕಾನೂನು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ “ಪ್ರತಿ ಪದದಲ್ಲೂ ಕೇಸರಿ” ಎಂಬ ಪ್ರಚಾರದ ಮೂಲಕ ಗ್ರಾಹಕರನ್ನು ದಾರಿತಪ್ಪಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ನಟರು ಹಾಗೂ ವಿಮಲ್ ಪಾನ್ ಮಸಾಲಾ ಸಂಸ್ಥೆಯ ಮಾಲೀಕ ವಿಮಲ್ ಅಗರ್ವಾಲ್ ಅವರಿಗೆ ನೋಟಿಸ್ ಹಾಗೂ ಸಮನ್ಸ್ ಜಾರಿ ಮಾಡಿದೆ.

ದೂರುದಾರರ ಪ್ರಕಾರ, ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥಗಳಲ್ಲಿ ಒಂದಾದ ಕೇಸರಿಯು ಅತಿ ಕಡಿಮೆ ಬೆಲೆಯ ಪಾನ್ ಮಸಾಲಾ ಪ್ಯಾಕೆಟ್‌ನಲ್ಲಿ ಲಭ್ಯವಿದೆ ಎಂಬ ಸಂದೇಶವನ್ನು ಜಾಹೀರಾತು ನೀಡುತ್ತಿದೆ. ಇದು ಗ್ರಾಹಕರನ್ನು ತಪ್ಪುದಾರಿಗೆಳೆಯುವ ಜೊತೆಗೆ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿದೆ.

ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜುಲೈ 9ರಂದು ನಟರಾದ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಹಾಗೂ ವಿಮಲ್ ಅಗರ್ವಾಲ್ ನ್ಯಾಯಾಲಯಕ್ಕೆ ಖುದ್ದಾಗಿ ಅಥವಾ ತಮ್ಮ ವಕೀಲರ ಮೂಲಕ ಹಾಜರಾಗುವಂತೆ ಸೂಚಿಸಿದೆ.
ಪಾನ್ ಮಸಾಲಾ ಹಾಗೂ ಪರೋಕ್ಷ ತಂಬಾಕು ಜಾಹೀರಾತುಗಳ ವಿರುದ್ಧ ದೇಶದ ವಿವಿಧ ನ್ಯಾಯಾಲಯಗಳು ಮತ್ತು ಗ್ರಾಹಕ ವೇದಿಕೆಗಳಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಕ್ಷೇತ್ರದಲ್ಲಿ ಸಿನಿತಾರೆಯರ ಪಾತ್ರದ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ.

ಕೆಲ ನಟರು ಸಾರ್ವಜನಿಕ ಟೀಕೆಗಳ ನಂತರ ಇಂತಹ ಜಾಹೀರಾತುಗಳಿಂದ ದೂರ ಉಳಿದ ಉದಾಹರಣೆಗಳೂ ಇವೆ.ಈಗ ಜುಲೈ 9ರಂದು ನಡೆಯಲಿರುವ ವಿಚಾರಣೆಯಲ್ಲಿ ನಟರು ಮತ್ತು ಕಂಪನಿ ಮಾಲೀಕರು ಯಾವ ರೀತಿಯ ವಾದ ಮಂಡಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.






