ಆರ್‌ಎಸ್‌ಎಸ್ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ. ರವಿ ನೀಡಿದ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಂಘದ ಇತಿಹಾಸವನ್ನು ಉಲ್ಲೇಖಿಸಿದ ಅವರು, ಆರ್‌ಎಸ್‌ಎಸ್ ನಾಯಕರು ಹಲವು ಸಂದರ್ಭಗಳಲ್ಲಿ ಸರ್ಕಾರಗಳ ಮುಂದೆ ಕ್ಷಮೆಯಾಚಿಸಿ ಮನವಿ ಮಾಡಿಕೊಂಡಿರುವುದನ್ನು ನೆನಪಿಸಿದ್ದಾರೆ.
ಸಿ.ಟಿ. ರವಿಗೆ ಸಂಘದ ನಿಜವಾದ ಇತಿಹಾಸದ ಅರಿವು ಇಲ್ಲ ಎಂದು ಟೀಕಿಸಿದ ಖರ್ಗೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಜವಾಹರಲಾಲ್ ನೆಹರೂ ಅವರ ಕಾಲದಲ್ಲಿ ಆರ್‌ಎಸ್‌ಎಸ್ ನಿಷೇಧಕ್ಕೊಳಗಾದಾಗ ಸಂಘದ ಮುಖಂಡರು ಸರ್ಕಾರದ ಮುಂದೆ ಗೋಗರೆದಿದ್ದರು ಎಂದು ಹೇಳಿದರು. ತುರ್ತು ಪರಿಸ್ಥಿತಿಯ ವೇಳೆ ಇಂದಿರಾ ಗಾಂಧಿ ಸರ್ಕಾರಕ್ಕೂ ಸಂಘದ ಪ್ರಮುಖರು ಪತ್ರ ಬರೆದು ಮನವಿ ಮಾಡಿಕೊಂಡಿದ್ದರು ಎಂದು ಅವರು ಉಲ್ಲೇಖಿಸಿದರು.

ದೇಶದ ಕಾನೂನಿಗಿಂತ ಆರ್‌ಎಸ್‌ಎಸ್ ದೊಡ್ಡದೇ ಎಂದು ಪ್ರಶ್ನಿಸಿದ ಖರ್ಗೆ, ದೇಶದ ಪ್ರತಿಯೊಂದು ಸಂಸ್ಥೆಯೂ ನೋಂದಣಿ ಹಾಗೂ ಲೆಕ್ಕಪತ್ರಗಳನ್ನು ಸಲ್ಲಿಸಬೇಕಾಗುತ್ತದೆ. ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಸಂಸ್ಥೆಗಳವರೆಗೆ ಕಾನೂನಿನ ವ್ಯಾಪ್ತಿಗೆ ಬರುತ್ತವೆ. ದೇವಸ್ಥಾನಗಳಿಗೂ ಲೆಕ್ಕಪತ್ರ ನೀಡುವ ಜವಾಬ್ದಾರಿ ಇದೆ. ಹಾಗಿರುವಾಗ ಆರ್‌ಎಸ್‌ಎಸ್‌ಗೆ ಮಾತ್ರ ವಿನಾಯಿತಿ ಏಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಸಂಘಕ್ಕೆ ಹರಿದುಬರುವ ಸಾವಿರಾರು ಕೋಟಿ ರೂಪಾಯಿ ದೇಣಿಗೆಗಳ ಬಗ್ಗೆ ಪಾರದರ್ಶಕತೆ ಇರಬಾರದೇ? ಲೆಕ್ಕ ಕೇಳಿದಾಗ ವಿರೋಧ ವ್ಯಕ್ತಪಡಿಸುವುದು ಏಕೆ? ಎಂದು ಖರ್ಗೆ ಪ್ರಶ್ನಿಸಿದರು. ಕಾನೂನು ಎಲ್ಲರಿಗೂ ಒಂದೇ ಆಗಬೇಕು, ಆರ್‌ಎಸ್‌ಎಸ್ ಕೂಡ ಅದಕ್ಕೆ ಹೊರತಾಗಿಲ್ಲ ಎಂದು ಅವರು ಹೇಳಿದರು.ನೋಂದಣಿ ಮತ್ತು ದಾಖಲೆಗಳ ವಿಚಾರದಲ್ಲಿ ಸ್ಪಷ್ಟನೆ ನೀಡಲು ತಾವು ಕೇಶವಕೃಪಕ್ಕೆ ಬರುವುದಕ್ಕೂ ಸಿದ್ಧ ಎಂದು ಖರ್ಗೆ ತಿಳಿಸಿದರು. ಇಲ್ಲವೇ ಸಂಘದ ಮುಖಂಡರು ತಮ್ಮ ಕಚೇರಿಗೆ ಬಂದು ದಾಖಲೆಗಳನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಪಾರದರ್ಶಕತೆಗೆ ವಿರೋಧ ವ್ಯಕ್ತಪಡಿಸುವುದು ಸಂಘ ಪರಿವಾರದ ಮನೋಭಾವವನ್ನು ಬಿಂಬಿಸುತ್ತದೆ. ಸರಳ ನೋಂದಣಿ ಪ್ರಕ್ರಿಯೆಯನ್ನೇ ವಿರೋಧಿಸುವುದು ಸಂವಿಧಾನ ಹಾಗೂ ಕಾನೂನು ವ್ಯವಸ್ಥೆಯ ಬಗ್ಗೆ ಇರುವ ಅವರ ನಿಲುವನ್ನು ಬಹಿರಂಗಪಡಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.






