ಕನ್ನಡ ಚಿತ್ರರಂಗದ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಡೀಪ್ಫೇಕ್ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ನಡೆಸಿದ ತನಿಖೆಯಲ್ಲಿ, ವಿಡಿಯೋ ಹಂಚಿಕೊಂಡಿದ್ದ ಬಹುತೇಕ ಖಾತೆದಾರರು ಕರ್ನಾಟಕದವರಲ್ಲದೆ ಹೊರರಾಜ್ಯದವರಾಗಿರುವುದು ಬೆಳಕಿಗೆ ಬಂದಿದೆ.

ನಟಿ ರುಕ್ಮಿಣಿ ವಸಂತ್ ಅವರು ನೀಡಿದ್ದ ದೂರಿನಲ್ಲಿ ಇನ್ಸ್ಟಾಗ್ರಾಂ, ಎಕ್ಸ್ ಹಾಗೂ ಫೇಸ್ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನು ಉಲ್ಲೇಖಿಸಿದ್ದರು. ಈ ಖಾತೆಗಳ ತಾಂತ್ರಿಕ ಮಾಹಿತಿ ಪರಿಶೀಲಿಸಿದ ಪೊಲೀಸರಿಗೆ, ಅವುಗಳ ನಿರ್ವಹಣೆ ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲದ ವ್ಯಕ್ತಿಗಳಿಂದ ನಡೆದಿರುವ ಸಾಧ್ಯತೆ ಕಂಡುಬಂದಿದೆ.ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಬಳಸುತ್ತಿದ್ದ ಕೆಲವು ಖಾತೆಗಳನ್ನು ಬಂದ್ ಮಾಡಲಾಗಿದೆ. ಆದರೆ ಖಾತೆಗಳ ಹಿಂದಿರುವ ನಿಜವಾದ ವ್ಯಕ್ತಿಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಸೈಬರ್ ತಜ್ಞರ ನೆರವಿನಿಂದ ಪೊಲೀಸರು ಮುಂದುವರಿಸಿದ್ದಾರೆ.

ಕೆಲವು ದಿನಗಳ ಹಿಂದೆ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಡೀಪ್ಫೇಕ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನಟಿ, ಸಿಸಿಬಿ ಸೈಬರ್ ಕ್ರೈಂ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದರು.ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿರುವ ಪೊಲೀಸರು, ಡಿಜಿಟಲ್ ಟ್ರೇಲ್, ಐಪಿ ವಿಳಾಸಗಳು ಹಾಗೂ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಸಂಗ್ರಹಿಸಿ ಆರೋಪಿಗಳ ಜಾಲವನ್ನು ಭೇದಿಸಲು ಮುಂದಾಗಿದ್ದಾರೆ. ಡೀಪ್ಫೇಕ್ ತಂತ್ರಜ್ಞಾನ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.






