ಬೆಂಗಳೂರು : ದಾವಣಗೆರೆ ಉಪಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆಯಿಂದ ಆರಂಭವಾದ ಕಿಚ್ಚು ದಿನ ಕಳೆದಂತೆ ಕೈ ಸುಡುತ್ತಿದೆ. ಜಬ್ಬಾರ್ ಬಳಿಕ ಜಮೀರ್ ಸುತ್ತ ಈ ದಾವಣಗೆರೆ ರಾಜಕೀಯ ಗಿರಕಿ ಹೊಡೆಯುತ್ತಿದೆ. ಹೀಗಾಗಿ ರಾಜ್ಯದ ಮುಸ್ಲಿಂ ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್ ಹೈಕಮಾಂಡ್ಗೆ ರಾಜ್ಯದ ಬೆಳವಣಿಗೆಗಳ ಬಗ್ಗೆ ಪತ್ರ ಬರೆದಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಇನ್ನೂ ಈ ನಡುವೆಯೇ ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿದ್ದರಾಮಯ್ಯರ ಬಗ್ಗೆ ನೀಡಿರುವ ಹೇಳಿಕೆಯು ನಾನಾ ಆಯಾಮಗಳಲ್ಲಿ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುವಂತಾಗಿದೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ಮನುಷ್ಯನ ಮೇಲೆ ಪ್ರಭಾವ ಬೀರಬೇಕು ಅಂದ್ರೆ ಆಸ್ತಿಕರಾಗಿರಬೇಕು ಅಂತಲೇ ಅಲ್ಲ. ಆಗಿದ್ಯೋ ಇಲ್ವೋ ನನಗೆ ಗೊತ್ತಿಲ್ಲ, ಯೋಚನೆ ಮಾಡ್ತಿದ್ದೇನೆ. ನನ್ನನ್ನ ಸಿಎಂ ಕರೆದು ಮಾತನಾಡಿಸಿದ್ರು. ನಾನು, ಸಿಎಂ ಇಬ್ಬರೂ ಮಾಟ ಮಂತ್ರ ನಂಬಲ್ಲ. ಆದರೆ ಗಟ್ಟಿಯಾಗಿ ನಿಲ್ಲಿ ಅಂತ ಹೇಳಿಸಿಕೊಳ್ಳುವಷ್ಟು ಸಿಎಂ ಅಸಹಾಯಕರಲ್ಲ. ಆದರೆ ಮಾಟ ಮಂತ್ರದ ಬಗ್ಗೆ ಜನ ಮಾತಾಡುತ್ತಿದ್ದಾರೆ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಇದನ್ನೂ ಓದಿ : ಹ್ಯಾಕರ್ ಶ್ರೀಕಿ ನಂಟು, ನಲಪ್ಪಾಡ್ ಬುಡಕ್ಕೆ ಬಿಟ್ ಕಾಯಿನ್ ಬೆಂಕಿ : ಇಡಿ ರೇಡ್ಗೆ ಸಿಎಂ ಏನಂದ್ರು..?
ಸಿಎಂ ಕೆಲ ವಿಚಾರದಲ್ಲಿ ನಡೆದುಕೊಂಡಿದ್ದಕ್ಕೆ ಹಾಗೆ ಮಾತನಾಡ್ತಾರೆ. ಯಾರಾದರೂ ಮಾಟ ಮಂತ್ರ ಮಾಡಿಸಿರಬಹುದೇನೋ ಅಂತ. ನನ್ನ ಮೇಲೆಯೂ ಹಿಂದೆ ಮಾಟಮಂತ್ರ ಆಗಿತ್ತು. ನಾನು ಚುನಾವಣೆ ನಿಂತಾಗೆಲ್ಲಾ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು. ಕೇರಳದಲ್ಲಿ ಮಾಟ ಮಂತ್ರ ಮಾಡ್ತಾರಂತೆ ಅದನ್ನ ನೋಡೋಣ ಅಂತ ಇದ್ದೇನೆ ಎಂದು ರಾಜಣ್ಣ ವ್ಯಂಗ್ಯದ ಧಾಟಿಯಲ್ಲಿ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಮೇ ತಿಂಗಳಲ್ಲಿ ಕೆಲವು ರಾಜಕೀಯ ಬೆಳವಣಿಗೆಗಳು ಆಗಲಿವೆ, ರಾಜಕಾರಣ ಪರಿಶುದ್ಧ ಆಗಬೇಕಾದ್ರೆ ಬದಲಾವಣೆಗಳು ಆಗಬೇಕು ಎನ್ನುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ. ನೋಟಿಸ್ ಕೊಟ್ಟು ಕೇಳೋದು ಸೌಜನ್ಯ. ಆರೋಪಕ್ಕೆ ನೋಟಿಸ್ ಕೊಡಲೇಬೇಕು ಅಂತಿಲ್ಲ. ಮೌಖಿಕವಾಗಿ ಆದರೂ ಮಾಹಿತಿ ಪಡೆದುಕೊಳ್ಳಬಹುದಿತ್ತು ಎಂದು ನಜೀರ್ ಅಹ್ಮ,ದ್, ಅಬ್ದುಲ್ ಜಬ್ಬಾರ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಕ್ರಮ ಕೈಗೊಂಡಿರುವುದಕ್ಕೆ ಬೇಸರ ಹೊರಹಾಕಿದ್ದಾರೆ.
ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದೆ. ಇದನ್ನ ಒಪ್ಪೋಣ. ಜಮೀರ್ ಮೇಲೆ ಕ್ರಮದ ವಿಚಾರ ಬಂದಾಗ ನೋಡೋಣ. ಆದರೆ ಸಮುದಾಯದಲ್ಲಿ ಕಾಂಗ್ರೆಸ್ಗೆ ಜಮೀರ್ ಮೇಲೆ ಕೋಪ ಎಂದು ಭಾವನೆ ಬರಬಾರದು. ಊಹೆ ಮಾಡಿಕೊಳ್ಳಬಾರದು. ಕಾಂಗ್ರೆಸ್ನಿಂದ ಮುಸ್ಲಿಮರಿಗೆ, ಮುಸ್ಲಿಮರಿಂದ ಕಾಂಗ್ರೆಸ್ಗೆ ಸಹಾಯ ಆಗಿದೆ ಎಂದು ರಾಜಣ್ಣ ಪ್ರಸಕ್ತ ವಿದ್ಯಮಾನಗಳ ಜೊತೆಗೆ ಬೆಳವಣಿಗೆಗಳ ಬಗ್ಗೆ ಹೇಳಿರುವುದು ತೀವ್ರ ಕುತೂಹಲ ಮೂಡುವಂತಾಗಿದೆ.






