ಬೆಂಗಳೂರು : ಮಹಿಳಾ ಉದ್ಯೋಗಿಗಳು ಮತ್ತು ವಿದ್ಯಾರ್ಥಿನಿಯರ ಮುಟ್ಟಿನ ರಜೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಮನಿಸಿದ್ದೇನೆ, ಘನವೆತ್ತ ಕೋರ್ಟ್ ಅಭಿಪ್ರಾಯಪಟ್ಟಿರುವಂತೆ, ನಾಲ್ಕೈದು ದಿನಗಳ ರಜೆ ಮತ್ತು ಅದನ್ನು ಕಾನೂನನ್ನಾಗಿ ರೂಪಿಸಿ ಜಾರಿಗೆ ತರುವುದು ಪ್ರಾಯೋಗಿಕವಾಗಿ ಸಾಧುವಲ್ಲ. ಅಲ್ಲದೇ ರಾಜ್ಯ ಸರ್ಕಾರವು ಪ್ರತಿ ತಿಂಗಳು ಒಂದು ದಿನದ ವೇತನಸಹಿತ ರಜೆಯನ್ನು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಅನ್ವಯಿಸಿ ರೂಪಿಸಿರುವ ನೀತಿಯಯನ್ನು ಪ್ರಶಂಶಿಸಿರುವುದನ್ನು ಸ್ವಾಗತಿಸಿದ್ದಾರೆ.
ನಮ್ಮ ರಾಜ್ಯದ ಮುಟ್ಟಿನ ರಜೆ ನೀತಿಯ ಕುರಿತು, ನಾವು ಸಂಬಂಧಿಸಿದ ಎಲ್ಲ ತಜ್ಞರು, ಉದ್ಯೋಗದಾತರು, ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವೈದ್ಯರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ವ್ಯಾಪಕ ಚರ್ಚೆ ಮಾಡಿ, ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸೂಕ್ತ ನೀತಿಯೊಂದನ್ನು ಜಾರಿಗೆ ತಂದಿದ್ದೇವೆ ಎಂದು ಲಾಡ್ ತಿಳಿಸಿದ್ದಾರೆ.
ಇದನ್ನೂ ಓದಿ : ಟೆನಿಸ್ ಆಟಗಾರ್ತಿ ಶಿಲ್ಪಾರಂತೆ ಮಂಡ್ಯ ನೆಲದಿಂದ ಇನ್ನಷ್ಟು ಪ್ರತಿಭೆಗಳು ಹೊರಬರಲಿ : ಮನ್ಸುಖ್ ಮಾಂಡವೀಯ ಕರೆ..
ಘನ ನ್ಯಾಯಾಲಯದ ಇನ್ನುಳಿದ ಅಭಿಪ್ರಾಯಗಳಾದ, ʻʻರಾಷ್ಟ್ರಮಟ್ಟದಲ್ಲಿ ಕಾನೂನು ರೂಪಿಸಿದರೆ ಮಹಿಳೆಯರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ ಹಾಗೂ ಯುವತಿಯರ ಕೀಳರಿಮೆಗೆ ಕಾರಣವಾಗುತ್ತದೆʼಎಂಬ ವಿಷಯದ ಕುರಿತು ಎಲ್ಲ ಭಾಗೀದಾರರು ಮತ್ತು ಸರ್ಕಾರಗಳ ಮಟ್ಟದಲ್ಲಿ ವ್ಯಾಪಕ ಚರ್ಚೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.
ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ, ದೇಶದ ಮಹಿಳೆಯರಿಗೆ ಸೂಕ್ತವಾಗುವಂತೆ ಋತುಚಕ್ರ ರಜೆನೀತಿ ರೂಪಿಸಿದರೆ ಅದು ಉತ್ತಮವಾಗುತ್ತದೆ ಎಂದು ಸಚಿವ ಸಂತೋಷ್ ಲಾಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಮುಟ್ಟಿನ ರಜೆಯನ್ನು ನಾಲ್ಕೈದು ದಿನಗಳಿಗೆ ವಿಸ್ತರಿಸಿ ರಾಷ್ಟ್ರವ್ಯಾಪಿ ಅನ್ವಯವಾಗುವಂತೆ ಕಾನೂನು ರೂಪಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.






