ಬೆಂಗಳೂರು : ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಲು ಮುಂದಾಗಿರುವ ಫ್ಲಿಪ್ ಕಾರ್ಟ್ ಸಂಸ್ಥೆ ವಿರುದ್ಧ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ, ನವದೆಹಲಿ ಇವರಿಗೆ ಸೆಕ್ಷನ್ 19/1 ಎ ಅಡಿ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಲಾಗುತ್ತಿದೆ. ಜೊತೆಗೆ ಈ ವಿಚಾರವನ್ನು ಪ್ರಧಾನಿ ಮೋದಿಯವರಿಗೆ ಇ ಮೇಲ್ ಮುಖಾಂತರ ಕಳಿಸುತ್ತಿದ್ದೇನೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಣ ಮಾಡುವ ಭರದಲ್ಲಿ ಫ್ಲಿಪ್ ಕಾರ್ಟ್ ಎನ್ನುವ ಸಂಸ್ಥೆ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡಲು ಮುಂದಾಗಿದೆ. ರೈತ ಸಮುದಾಯವನ್ನು ಧ್ವಂಸ ಮಾಡುವಂತಹ ಕೃತ್ಯಕ್ಕೆ ಕೈ ಹಾಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಇಡೀ ದೇಶದಾದ್ಯಂತ ದಂಗೆ ಏಳಬೇಕಾದ ಪರಿಸ್ಥಿತಿ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.
ಮಾರುಕಟ್ಟೆಯನ್ನು ಆವರಿಸಿಕೊಳ್ಳಬೇಕು ಎಂದು ಮಾಡುತ್ತಿರುವ ಸ್ಪರ್ಧೆಯಿಂದ ರೈತರಿಗೆ ಹೊಡೆತ ಬೀಳುತ್ತದೆ. ಇದಕ್ಕಾಗಿಯೇ ಸುಮಾರು 2 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಸಾರ್ವಜನಿಕರ ಶೇರಿನ ಹಣ ಬಳಸಿ ಹೀಗೆ ದುರ್ಬಳಕೆ ಮಾಡಿಕೊಳ್ಳುತ್ತಾ ಇರುವುದು ಸೂಕ್ತವಲ್ಲ ಎಂದು ಕಿಡಿಕಾರಿದ್ದಾರೆ.

ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಹಾಲು ಒಕ್ಕೂಟ ಸಂಸ್ಥೆಗಳನ್ನು ನಾಶ ಮಾಡುವ ಪ್ರಕ್ರಿಯೆ ಇದಾಗಿದೆ. ಎಂಎನ್ ಸಿಗಳು ರೈತರ ಹಿತವನ್ನು ಹಾಳು ಮಾಡುವ ಕೆಲಸ ಮಾಡುತ್ತಿವೆ. ಕಡಿಮೆ ದರಕ್ಕೆ ಎಷ್ಟು ದಿನ ಹಾಲನ್ನು ನೀಡುತ್ತಾರೆ ಎಂದು ಜಾಹಿರಾತಿನಲ್ಲಿ ತಿಳಿಸಬೇಕು. ರೈತ ಸಂಕುಲವನ್ನ ಹಾಳು ಮಾಡುತ್ತಿರುವ ಈ ಕೆಲಸದಿಂದ ಫ್ಲಿಪ್ ಕಾರ್ಟ್ ಸಂಸ್ಥೆ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಜ್ಯೋತಿಷಿ ವೇಣುಸ್ವಾಮಿ
ಈಗಾಗಲೇ 14.5 ಲಕ್ಷ ಲೀಟರ್ ಹಾಲು ಮಾರಾಟ ಆಗಿದೆ. ಈಗಾಗಲೇ ಎಲ್ಲಾ ಕಡೆ ಜಾಹಿರಾತು ನೀಡಿದೆ. ಸಾರ್ವಜನಿಕರ ಹಣವನ್ನು ಹೂಡಿಕೆ ಮಾಡಿ ಗ್ರಾಹಕರನ್ನು ಆಕರ್ಷಣೆ ಮಾಡಲಾಗುತ್ತಿದೆ. ಆ ಕಂಪನಿಯವರು ಎಷ್ಟು ದಿನ ಈ ರೀತಿ ಹಾಲು ಕೊಡುತ್ತಾರೆ ಎಂಬುದನ್ನು ಬಹಿರಂಗಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ನಂದಿನಿ ಹಾಲು ಮಾತ್ರ ಇಲ್ಲ. ಅನೇಕ ಕಂಪನಿಗಳಿವೆ. ಬಮುಲ್ ಒಕ್ಕೂಟಕ್ಕೆ 40- 50 ಸಾವಿರ ಲೀಟರ್ ಹಾಲು ಮಾರಾಟ ಕಡಿಮೆಯಾಗಿದೆ. ಎಷ್ಟು ದಿನದಿಂದ ಇದು ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬೇಕು. ಇದರ ಹಿಂದೆ ಬೇರೆ ಯಾವುದಾದರೂ ಸಂಸ್ಥೆಗಳು ಇವೆಯೇ ಎಂಬ ಬಗ್ಗೆಇನ್ನೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಡಿಕೆ ಸುರೇಶ್ ತಿಳಿಸಿದ್ದಾರೆ.
ಇದರ ಬಗ್ಗೆ ಒಂದೆರಡು ಜಾಹೀರಾತು ನೋಡಿದೆ. ಈ ಕುರಿತು ಅಧಿಕಾರಿಗಳ ಬಳಿಯೂ ಚರ್ಚೆ ನಡೆಸುವೆ. ವ್ಯಾಪಾರದ ಹೆಸರಿನಲ್ಲಿ ರೈತ ಸಂಕುಲಕ್ಕೆ ಬೆಂಕಿ ಇಡುವುದು ತರವಲ್ಲ. ದೇಶದ ಒಳಗೆ ಇರುವವರೇ ಹೀಗೆ ಮಾಡುವುದು ಎಷ್ಟು ಸರಿ ರೈತರಿಗೆ ನಾವು 38, 39, 40 ರೂಪಾಯಿ ಹಣವನ್ನು ಪಾವತಿ ಮಾಡುತ್ತಿದ್ದೇವೆ. ಇವರು ಒಂದು ರೂಪಾಯಿಗೆ ಕೊಡುವುದಕ್ಕೆ ಹೇಗೆ ಸಾಧ್ಯವಾಗುತ್ತದೆ. ಯಾರಿಂದ ಖರೀದಿ ಮಾಡುತ್ತಿದ್ದಾರೆ. ಎಲ್ಲಿಂದ ಹಾಲು ಬರುತ್ತಿದೆ ಎಂದು ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳು ಈ ವಿಚಾರವಾಗಿ ರಾಷ್ಟ್ರದ ಗಮನ ಸೆಳೆಯಬೇಕು. ರೈತರ ಪರವಾಗಿ ನಿಲ್ಲಬೇಕು. ರೈತರು ಹೋರಾಟಕ್ಕೆ ಇಳಿಬೇಕು ಎಂದು ಕರೆ ನೀಡುತ್ತಿದ್ದೇನೆ. ಸರ್ಕಾರ ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಎಂದು ಡಿಕೆ ಸುರೇಶ್ ಆಗ್ರಹಿಸಿದ್ದಾರೆ.

ರೈತರು ಯಾರಿಗೆ ಹಾಲು ಮಾರಾಟ ಮಾಡುತ್ತಾರೆ ಎಂಬುದು ತಿಳಿಯುವುದಿಲ್ಲ. ಬಲ್ಕ್ ಮಿಲ್ಕ್ ಉತ್ಪಾದಕರ ಬಳಿ ಸೇರಿದಂತೆ ಎಲ್ಲಿ ಅವರು ಹಾಲು ತೆಗೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಾಗುವುದಿಲ್ಲ. ಅಥವಾ ಹಾಲಿನ ಪೌಡರ್ ಬೆರೆಸುತ್ತಿದ್ದಾರಾ ಎಂದು ತಿಳಿಯಲು ಸ್ಯಾಂಪಲ್ ತರಿಸುತ್ತಿದ್ದೇನೆ. ಅದನ್ನು ಲ್ಯಾಬ್ ನಲ್ಲಿ ಪರಿಶೀಲನೆ ಮಾಡಲು ತಿಳಿಸಿದ್ದೇನೆ. ಸಹಕಾರಿ ಸಂಘಗಳು ಒಮ್ಮೆ ಮುಗ್ಗರಿಸಿದರೆ ಇದರ ನೇರ ಪರಿಣಾಮ ರೈತರ ಮೇಲೆ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಸದರು ನೀರಾವರಿ ವಿಚಾರಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡಲಿ..
“ಶಾಸಕರು ಹಾಗೂ ಸಂಸತ್ ಸದಸ್ಯರು ಈ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ಸಂಸದರು ಪ್ರತಿಭಟಿಸುತ್ತಿಲ್ಲ. ಲೋಕಸಭಾ ಅಧಿವೇಶನದಲ್ಲಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಬೇಕು. ಮೇಕೆದಾಟು, ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಬಗ್ಗೆ ಮಾತನಾಡಬೇಕು ಎಂದು ಸುರೇಶ್ ಒತ್ತಾಯಿಸಿದ್ದಾರೆ
“ಕರ್ನಾಟಕಕ್ಕೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಇದಕ್ಕೆ ದೊಡ್ಡ ದನಿ ಎತ್ತಬೇಕಿರುವುದು ಸಂಸತ್ ಸದಸ್ಯರ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ.
ಯುದ್ಧ ನಡೆಯುತ್ತಿರುವ ಕಾರಣಕ್ಕೆ ನಾವು ಅದರ ಭಾಗ ಅಲ್ಲದೆ ಇದ್ದರೂ ನಮ್ಮ ಮೇಲೆ ಪರಿಣಾಮ ಬಿದ್ದೇ ಬೀರುತ್ತದೆ. ಕೇಂದ್ರ ಸರ್ಕಾರ ಒಳ್ಳೆಯ ಬಾಂಧವ್ಯ ಇಟ್ಟುಕೊಂಡು ಮಿತ್ರ ರಾಷ್ಟ್ರಗಳ ಜೊತೆ ಮಾತನಾಡಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ವಿದೇಶಾಂಗ ನೀತಿ ವೈಫಲ್ಯ ಕಂಡಿದೆ. ಆದರೂ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಅವಾಂತರಗಳು, ಬೆಲೆ ಏರಿಕೆ ಆಗದಂತೆ ತಡೆಯಬೇಕು. ಆಡಳಿತದಲ್ಲಿ ಇದ್ದಾಗ ರಾಷ್ಟ್ರದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಹೇಳಿಕೆಗಳಿಗೆ ಸೀಮಿತ ಆಗುವುದು ಬೇಡ. ಆರೋಪ ಪ್ರತ್ಯಾರೋಪ ಮಾಡುವುದು ಬೇಡ. ಪ್ರಧಾನಿಯವರಾಗಲಿ, ಜೋಶಿಯವರಾಗಲಿ 60 ಡಾಲರ್ ಇದ್ದಾಗ ಗ್ಯಾಸ್ ಬೆಲೆ ಯನ್ನು ಇಳಿಕೆ ಮಾಡಲಿಲ್ಲ ಎಂದು ಡಿಕೆ ಸುರೇಶ್ ಟೀಕಿಸಿದ್ದಾರೆ.






