ಬೆಂಗಳೂರು : ಈ ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿರುವ ಕೃಷಿ ಡಿಪ್ಲೊಮಾ ಕಾಲೇಜುಗಳನ್ನ ರದ್ದುಗೊಳಿಸಿದ್ದನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮತ್ತೆ ಡಿಪ್ಲೋಮ ಕಾಲೇಜು ಪ್ರವೇಶಾತಿಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಕೃಷಿ ಡಿಪ್ಲೊಮಾ ಕಾಲೇ ಜು ಆರಂಭಕ್ಕೆ ತಜ್ಞರ ಸಮಿತಿ ರಚಿಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕೇಳಿದ ಪ್ರಶ್ನೆಗೆ ವಿಧಾನಸಭೆಯಲ್ಲಿಂದು ಉತ್ತರಿಸಿ, ನೂತನ ಕೃಷಿ ಕಾಲೇಜು ಪ್ರಾರಂಭಿಸುವ ಪ್ರಸ್ತಾವನೆಗಳನ್ನು ಪರಿಶೀಲಿಸುವ ಸಂಬಂಧ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಪರಿಣಿತ ಸಮಿತಿಯನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಮಿತಿಯು ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳ ಬಲವರ್ಧನೆ ಹಾಗೂ ಹೊಸ ಕೃಷಿ ಕಾಲೇಜುಗಳ ಸ್ಥಾಪನೆ ಮತ್ತು ಅವುಗಳ ಅಭಿವೃದ್ಧಿಗೆ ಅಗತ್ಯವಿರುವ ಅಂಶಗಳನ್ನು ಪರಿಶೀಲಿಸುತ್ತದೆ. ಈ ಸಮಿತಿಯ ಮುಂದೆ ಬ್ರಹ್ಮಾವರ ಕಾಲೇಜು ಸ್ಥಾಪನೆ ಕುರಿತು ಪ್ರಸ್ತಾವನೆ ಸಲ್ಲಿಸುವುದಾಗಿ ಚಲುವರಾಯಸ್ವಾಮಿ ವಿವರಿಸಿದ್ದಾರೆ.
ಇದನ್ನೂ ಓದಿ : ನಾವು ಸುಮ್ಮನಿರೋದಿಲ್ಲ ಅಮೆರಿಕ ಬ್ಯಾಂಕುಗಳ ಮೇಲೆ ದಾಳಿ ಮಾಡ್ತೀವಿ..
ನೂತನ ಕೃಷಿ ಕಾಲೇಜುಗಳನ್ನು ಪ್ರಾರಂಭಿಸುವ ಮುಂಚೆ ಈಗಿರುವ ಕೃಷಿ ಕಾಲೇಜುಗಳ ಬಲಬರ್ಧನೆಗೆ ಇರುವಂತಹ ಕೊರತೆಗಳನ್ನು ಗಮನಿಸಿ, ಮೂಲಭೂತ ಸೌಕರ್ಯಗಳು, ಬೋಧಕ ಸಿಬ್ಬಂದಿಯ ಪ್ರಮಾಣ ಹಾಗೂ ಈಗಿರುವ ಕೃಷಿ ಪದವೀಧರರ ಲಭ್ಯತೆ ಮತ್ತು ಬೇಡಿಕೆ ಇವುಗಳನ್ನು ಪರಿಶೀಲಿಸಲಾಗುವುದು. ಇವುಗಳ ಸಮತೋಲನದ ನಂತರ ನೂತನ ಕಾಲೇಜು ಆರಂಭಿಸಬಹುದು ಎಂದು ಹೇಳಿದ್ದಾರೆ.
ನೂತನ ಕಾಲೇಜುಗಳನ್ನು ಆರಂಭಿಸುವುದಕ್ಕೂ ಮೊದಲು ಪ್ರಸ್ತುತ ಚಾಲ್ತಿಯಲ್ಲಿರುವ ಕಾಲೇಜುಗಳನ್ನು ಬಲಪಡಿಸಬೇಕು, ಈ ಹಿನ್ನಲೆಯಲ್ಲಿ ಬ್ರಹ್ಮಾವರದ ಕೃಷಿ ಸಂಶೊಧನಾ ಕೇಂದ್ರದಲ್ಲಿರುವ 300 ಎಕರೆ ಜಾಗದಲ್ಲಿ ಹೊಸದಾಗಿ ಕೃಷಿ ಕಾಲೇಜು ಪ್ರಾರಂಭಕ್ಕೂ ಮೊದಲು ತಜ್ಞರ ಸಮಿತಿ ಒಪ್ಪಿಗೆ ಪಡೆದು, ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಚಿವ ಚಲುವರಾಯಸ್ವಾಮಿ ಸದನದ ಗಮನಕ್ಕೆ ತಂದಿದ್ದಾರೆ.






