ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇರಾನ್ ಸರ್ಕಾರ ಸ್ಪಷ್ಟನೆ ನೀಡಿದ್ದು, ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದೆ.
ಖಮೇನಿ ಆರೋಗ್ಯ ಹದಗೆಟ್ಟಿದೆ ಎಂಬ ವರದಿಗಳನ್ನು ಖಂಡಿಸಿರುವ ಅಧಿಕಾರಿಗಳು, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ದೇಶದ ಆಡಳಿತ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸುಪ್ರೀಂ ನಾಯಕನ ಆಪ್ತ ವಲಯದ ಅಯತೊಲ್ಲಾ ಮೊಹ್ಸೆನ್ ಕೋಮಿ ಮಾತನಾಡಿ, ವಿದೇಶಿ ಶಕ್ತಿಗಳು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿವೆ ಎಂದು ಆರೋಪಿಸಿದರು. ದೇಶದ ಪ್ರಮುಖ ಬೆಳವಣಿಗೆಗಳ ಮೇಲೆ ಖಮೇನಿ ನೇರ ನಿಗಾ ವಹಿಸಿದ್ದು, ಹಲವು ಮಹತ್ವದ ನಿರ್ಧಾರಗಳಿಗೆ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.ಇದಕ್ಕೂ ನಡುವೆ, ಇತ್ತೀಚೆಗೆ ಬಾಂಬ್ ದಾಳಿ ನಡೆದ ಕಟ್ಟಡದಲ್ಲಿ ಖಮೇನಿ ಇದ್ದರು ಎಂಬ ಮಾಹಿತಿಯನ್ನು ಕೋಮಿ ದೃಢಪಡಿಸಿದ್ದಾರೆ. ಆದರೆ ಸ್ಫೋಟ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಅವರು ಸ್ಥಳದಿಂದ ಹೊರಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ವಿವರಿಸಿದರು. ದಾಳಿಯಲ್ಲಿ ಅಲ್ಲಿದ್ದ ಕೆಲವರು ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಖಮೇನಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ದೇಶದ ಆಡಳಿತ ಹಾಗೂ ಭದ್ರತಾ ವಿಚಾರಗಳಲ್ಲಿ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಇರಾನ್ ಸರ್ಕಾರ ಸ್ಪಷ್ಟಪಡಿಸಿದೆ. ಈ ಹೇಳಿಕೆಯಿಂದ ಅವರ ಆರೋಗ್ಯದ ಕುರಿತು ಹರಡಿದ್ದ ವದಂತಿಗಳಿಗೆ ತಾತ್ಕಾಲಿಕವಾಗಿ ತೆರೆ ಬಿದ್ದಂತಾಗಿದೆ.






