ಬೆಂಗಳೂರು: ಒಂದೆಡೆ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿ ರಾಜ್ಯದ ಒಂದಿಷ್ಟು ಜನ ಉಚಿತ ವಿದ್ಯುತ್ ಪಡೆಯುತ್ತಿದ್ದರೆ, ಇನ್ನೊಂದೆಡೆ ಮತ್ತೊಂದಿಷ್ಟು ಜನ ಹೆಚ್ಚಾಗುತ್ತಿರುವ ವಿದ್ಯುತ್ ದರ ಏರಿಕೆಯಿಂದ ಹೈರಾಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂನ ವಾರ್ಷಿಕ ಲಾಭ ಗ್ರಾಹಕರಿಗೆ ಸಿಗಲಿ ಎನ್ನುವ ಹೊಸ ಬೇಡಿಕೆಯನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ((FKCCI) ಬೆಸ್ಕಾಂ ಮುಂದಿಟ್ಟಿದೆ.

ಬೆಸ್ಕಾಂ ವಾರ್ಷಿಕ ಕಾರ್ಯಕ್ಷಮತಾ ಪರಿಶೀಲನೆ ವೇಳೆ ನಿಯಂತ್ರಣ ಅನುಸರಣೆ, ಗ್ರಾಹಕ ರಕ್ಷಣೆ ಹಾಗೂ ಎಂಎಸ್‌ಎಂಇಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕು ಎಂದು ಎಫ್‌ಕೆಸಿಸಿಐ ಒತ್ತಾಯಿಸಿದೆ.

2024–25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತಾ ಪರಿಶೀಲನೆ ಹಾಗೂ ಟ್ರೂಯಿಂಗ್-ಅಪ್ ಅರ್ಜಿ ಕುರಿತು ಬೆಸ್ಕಾಂ ಸಲ್ಲಿಸಿದ ಮನವಿಯ ಸಾರ್ವಜನಿಕ ವಿಚಾರಣೆಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC ) ಮುಂದೆ ಎಫ್‌ಕೆಸಿಸಿಐ ತನ್ನ ಆಕ್ಷೇಪಣೆಗಳನ್ನು ಮಂಡಿಸಿದೆ.

ದರ ನಿಯಮಾವಳಿಗಳ ಪ್ರಕಾರ ಅಗತ್ಯವಿರುವ ಪರಿಶೋಧಿತ ಹಣಕಾಸು ಲೆಕ್ಕಪತ್ರಗಳನ್ನು ಬೆಸ್ಕಾಂ ಸಲ್ಲಿಸಿಲ್ಲ ಎಂದು ಎಫ್‌ಕೆಸಿಸಿಐ ತಿಳಿಸಿದೆ. ಪಾರದರ್ಶಕತೆ ಕೊರತೆಯಿಂದ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

110 ಕೋಟಿ ರೂ ಉಳಿತಾಯ
ವಿತರಣಾ ನಷ್ಟವನ್ನು ಅನುಮೋದಿತ ಮಟ್ಟಕ್ಕಿಂತ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಬೆಸ್ಕಾಂ ಸುಮಾರು 110.05 ಕೋಟಿ ರೂ. ಉಳಿತಾಯ ಗಳಿಸಿದೆ. ಆದರೆ ಈ ಲಾಭವನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳುವ ಪ್ರಸ್ತಾವ ಸಲ್ಲಿಸಿಲ್ಲ. ಈ ಮೊತ್ತದ ಪ್ರಯೋಜನ ಗ್ರಾಹಕರಿಗೆ ನೀಡಬೇಕು ಎಂದು ಎಫ್‌ಕೆಸಿಸಿಐ ಒತ್ತಾಯಿಸಿದೆ.

ಸಮಗ್ರ ಅಧ್ಯಯನದ ಕೊರತೆ
ನ್ಯಾಯಸಮ್ಮತ ದರ ನಿಗದಿಗೆ ಅಗತ್ಯವಾದ ‘ಕಾಸ್ಟ್ ಆಫ್ ಸರ್ವಿಸ್’ ಅಧ್ಯಯನ ಬೆಸ್ಕಾಂ ನಡೆಸಿಲ್ಲ ಎಂದು ಆರೋಪಿಸಲಾಗಿದೆ. ಇಂತಹ ಅಧ್ಯಯನವಿಲ್ಲದೆ ನಿಗದಿ ಶುಲ್ಕ ಅಥವಾ ಬೇಡಿಕೆ ಶುಲ್ಕಗಳಲ್ಲಿ ಬದಲಾವಣೆ ಮಾಡುವುದು ಅನ್ಯಾಯಕ್ಕೆ ಕಾರಣವಾಗಬಹುದು ಎಂದು ಎಫ್‌ಕೆಸಿಸಿಐ ಅಭಿಪ್ರಾಯಪಟ್ಟಿದೆ. ಒಟ್ಟಾರೆ, ಬೆಸ್ಕಾಂ ದರ ನಿಗದಿ ಹಾಗೂ ಹಣಕಾಸು ವಿಚಾರಗಳಲ್ಲಿ ಸ್ಪಷ್ಟತೆ ಮತ್ತು ನಿಯಮಾನುಸರಣೆ ಪಾಲಿಸಬೇಕು ಎಂದು ಎಫ್‌ಕೆಸಿಸಿಐ ಆಗ್ರಹಿಸಿದೆ.






