ಇಂದು ಕನ್ನಡ ಚಿತ್ರರಂಗದ ನಟ ದರ್ಶನ್(Darshan) ಹುಟ್ಟುಹಬ್ಬ. ಸದ್ಯ ಅವರು ಜೈಲಿನಲ್ಲಿರುವ ಕಾರಣ ಈ ವರ್ಷ ಅವರ ಹುಟ್ಟುಹಬ್ಬದ ಯಾವುದೇ ಆಚರಣೆ ಇಲ್ಲ. ಆದರೆ ಅವರ ಅಭಿಮಾನಿಗಳು ಮಾತ್ರ ಪ್ರತಿ ವರ್ಷದಂತೆ ಈ ವರ್ಷವೂ ಆರ್ಆರ್ ನಗರದ ನಿವಾಸದ ಬಳಿ ಆಗಮಿಸಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬದ ದಿನ ಬೆಳಗ್ಗಿನಿಂದಲೇ ಅವರ ಮನೆಯ ಬಳಿ ಬಂದು ಶುಭಾಶಯ ಕೋರುತ್ತಿದ್ದಾರೆ.

ದರ್ಶನ್ ಇಲ್ಲದೇ ಇದ್ದರೂ ಅವರ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮನ್ನು ಭೇಟಿಯಾಗುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ದರ್ಶನ್ ನಿವಾಸದ ಬಳಿ ಆಗಮಿಸಿದ್ದಾರೆ. ಈ ವೇಳೆ ಕೆಲ ಅಭಿಮಾನಿಗಳು ಮನೆ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಅಭಿಮಾನಿಗಳನ್ನು ತಡೆಯಲು ಪ್ರಯತ್ನಿಸಿದರು. ಇದರಿಂದ ಕೆಲಕಾಲ ಪೊಲೀಸ್ ಮತ್ತು ಅಭಿಮಾನಿಗಳ ನಡುವೆ ವಾಗ್ವಾದ ನಡೆದಿದ್ದು, ಪೊಲೀಸ್ ದರ್ಶನ್ ಅಭಿಮಾನಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ.

ದರ್ಶನ್ ಮನೆ ಗೇಟ್ ಬಳಿ ನಿಂತಿದ್ದ ಪೊಲೀಸರನ್ನು ತಳ್ಳಿ ಒಳನುಗ್ಗಲು ಒಬ್ಬ ಅಭಿಮಾನಿ ಯತ್ನಿಸಿದ್ದಾನೆ. ಆತ ಮದ್ಯಪಾನ ಮಾಡಿಕೊಂಡು ಪದೇ ಪದೇ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಕರ್ತವ್ಯದಲ್ಲಿದ್ದ ಎಎಸ್ಐ ಯೋಗ ನರಸಯ್ಯ ರಾಜು ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಈ ದೃಶ್ಯ ಸ್ಥಳದಲ್ಲಿದ್ದ ಕೆಲವರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದರ್ಶನ್ ಬಂಧನದಲ್ಲಿರುವ ಕಾರಣ, ಈ ಬಾರಿ ಸಾರ್ವಜನಿಕರ ಭೇಟಿ ಸಾಧ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅಭಿಮಾನಿಗಳು ಶಾಂತಿ ಕಾಪಾಡಬೇಕು ಮತ್ತು ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.







