ಬೆಂಗಳೂರು: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಡಿಯಲ್ಲಿ ರಚನೆಯಾಗಿರುವ ಐದು ಮಹಾನಗರ ಪಾಲಿಕೆಗಳಿಗೆ ಈ ವರ್ಷದ ಜೂನ್ 30ರೊಳಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ರಾಜ್ಯದಲ್ಲಿ ಆಡಳಿತ ಕಳೆದುಕೊಂಡಿರುವ ಬಿಜೆಪಿ(BJP) ಈ ಚುನಾವಣೆಯನ್ನು ಗಂಭೀರವಾಗಿ ಎದುರಿಸಲು ಮುಂದಾಗಿದ್ದು, ಸಂಘಟನಾತ್ಮಕ ಸಿದ್ಧತೆಗಳಿಗೆ ಚಾಲನೆ ನೀಡಿದೆ.

ಜಿಬಿಎ ಚುನಾವಣೆಗೆ ಪಕ್ಷದ ಸಮಗ್ರ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಚುನಾವಣಾ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಈ ನೇಮಕಾತಿ ಆದೇಶ ಹೊರಡಿಸಿರುವುದು, ಬೆಂಗಳೂರು ಪಾಲಿಕೆ ಚುನಾವಣೆಗೆ ಬಿಜೆಪಿ ಎಷ್ಟು ಪ್ರಾಮುಖ್ಯತೆ ನೀಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ
ಜಿಬಿಎ ಅಡಿಯಲ್ಲಿ ನಡೆಯಲಿರುವ ಐದು ಮಹಾನಗರ ಪಾಲಿಕೆಗಳ ಚುನಾವಣೆಗೆ ಬಿಜೆಪಿಯ ಮುಖ್ಯ ಉಸ್ತುವಾರಿಯಾಗಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಚುನಾವಣಾ ಸಹ ಉಸ್ತುವಾರಿಗಳಾಗಿ ರಾಜಸ್ಥಾನ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಸತೀಶ್ ಪೂನಿಯಾ ಹಾಗೂ ಮಹಾರಾಷ್ಟ್ರದ ಬಿಜೆಪಿ ಶಾಸಕ ಸಂಜಯ ಉಪಾಧ್ಯಾಯ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

ರಾಮ ಮಾಧವ್ ರಾಜಕೀಯ ಹಿನ್ನೆಲೆ ಏನು?
ರಾಮ ಮಾಧವ್ ಆರ್ಎಸ್ಎಸ್ನ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದವರು. ಸಂಘಟನಾತ್ಮಕ ಕೌಶಲ್ಯ, ಸೈದ್ಧಾಂತಿಕ ಬದ್ಧತೆ ಹಾಗೂ ಪ್ರಖರ ವಿಚಾರಧಾರೆಯಿಂದ ಅವರು ಪಕ್ಷದೊಳಗೆ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ನಂತರ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡು, ಜಮ್ಮು–ಕಾಶ್ಮೀರದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅವಧಿಯಲ್ಲೇ ಜಮ್ಮು–ಕಾಶ್ಮೀರದಲ್ಲಿ ಬಿಜೆಪಿ–ಪಿಡಿಪಿ ಮೈತ್ರಿ ಸರ್ಕಾರ ರಚನೆಯಾಗಿದ್ದು, ಇದು ಭಾರತೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ದಾಖಲಾಗಿತ್ತು. ಇಂತಹ ಅನುಭವಸ್ಥ ನಾಯಕನನ್ನು ಜಿಬಿಎ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಿರುವುದು, ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳನ್ನು ಬಿಜೆಪಿ ಅತ್ಯಂತ ತಂತ್ರಾತ್ಮಕವಾಗಿ ಎದುರಿಸಲು ಮುಂದಾಗಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ.







