ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಫಿಟ್ನೆಸ್ ತರಬೇತುದಾರೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ನಗರದ ದಕ್ಷಿಣ ವಿಭಾಗದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. 34 ವರ್ಷದ ಫಿಟ್ನೆಸ್ ತರಬೇತುದಾರೆ ನೀಡಿದ ದೂರಿನನ್ವಯ ಹರಿಯಾಣದ ಸುಧೀರ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.

ಹರಿಯಾಣದ ರೇವಾರಿ ಮೂಲದ ಯುವತಿ ಬೆಂಗಳೂರಲ್ಲಿ ಫಿಟ್ನೆಸ್ ತರಬೇತುದಾರಳಾಗಿ 15 ವರ್ಷಗಳಿಂದ ವಾಸಿಸುತ್ತಿದ್ದರು. ಕಳೆದ ವರ್ಷ ಹರಿಯಾಣದಲ್ಲಿ ಕುಟುಂಬಸ್ಥರ ಮನೆಗೆ ಬಂದಾಗ ದೂರುದಾರಳನ್ನು ನೋಡಿದ್ದ ಸುಧೀರ್ ಕುಮಾರ್, ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಕಿರುಕುಳ ನೀಡಲಾರಂಭಿಸಿದ್ದ. ಆರೋಪಿತನಿಂದ ಅಪೇಕ್ಷಿಸಲಾರದಷ್ಟು ಅಶ್ಲೀಲ, ಅಸಂಬದ್ಧ ಸಂದೇಶಗಳು ಬರಲಾರಂಭಿಸಿದಾಗ ದೂರುದಾರೆ ಆತನನ್ನು ಬ್ಲಾಕ್ ಮಾಡಿದ್ದರು. ಆದರೂ ಸಹ ಬೇರೆ ಬೇರೆ ಖಾತೆಗಳ ಮೂಲಕ, ವಾಟ್ಸ್ಆ್ಯಪ್ ಮೂಲಕ ಆರೋಪಿ ತನ್ನ ಚಾಳಿ ಮುಂದುವರೆಸಿದ್ದ ಎಂದು ಯುವತಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಂತರ ಜನವರಿ 12ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ, ಬನಶಂಕರಿ 3ನೇ ಹಂತದಲ್ಲಿರುವ ಜಿಮ್ ಬಳಿ ತೆರಳಿ ಯುವತಿಯ ಕುರಿತು ಆಕೆಯ ಪರಿಚಿತರ ಬಳಿ ವಿಚಾರಿಸಿದ್ದ. ವಿಚಾರ ತಿಳಿಯುತ್ತಿದ್ದಂತೆ, ಯುವತಿ ಬೆಂಗಳೂರು ದಕ್ಷಿಣ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಸುಧೀರ್ ಕುಮಾರ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.






