ಬೆಂಗಳೂರು: ಗಣರಾಜ್ಯೋತ್ಸವ(Republic Day) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ರಾಜ್ಯದಲ್ಲಿ ಭದ್ರತೆ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಐಎಸ್‌ಎಫ್ (CISF) ಸಿಬ್ಬಂದಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ತೆರಳುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟಿರುವ ಭದ್ರತಾ ಪಡೆಗಳು, ಸ್ಕ್ರೀನಿಂಗ್, ಲಗೇಜ್ ಪರಿಶೀಲನೆ, ಚೆಕ್-ಇನ್ ಮತ್ತು ಪ್ರವೇಶ ದ್ವಾರಗಳಲ್ಲಿ ಹೆಚ್ಚುವರಿ ತಪಾಸಣೆ ನಡೆಸುತ್ತಿವೆ. ಇದರ ಪರಿಣಾಮವಾಗಿ ಭದ್ರತಾ ತಪಾಸಣೆಗೆ ಸಾಮಾನ್ಯ ದಿನಗಳಿಗಿಂತ ಹೆಚ್ಚು ಸಮಯ ಹಿಡಿಯುವ ಸಾಧ್ಯತೆ ಇದೆ. ಹೀಗಾಗಿ ವಿಮಾನ ನಿಲ್ದಾಣ ಆಡಳಿತ ಮಂಡಳಿ ಪ್ರಯಾಣಿಕರಿಗೆ ಮಹತ್ವದ ಸೂಚನೆ ನೀಡಿದೆ.
ಇದನ್ನೂ ಓದಿ: GBA ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ: ಉಸ್ತುವಾರಿಯಾಗಿ ರಾಮ ಮಾಧವ್ ನೇಮಕ
ಗಣರಾಜ್ಯೋತ್ಸವದ ದೀರ್ಘ ವಾರಾಂತ್ಯ ಮತ್ತು ಹೆಚ್ಚುವರಿ ಭದ್ರತಾ ಕ್ರಮಗಳ ಹಿನ್ನೆಲೆಯಲ್ಲಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸೂಕ್ತವಾಗಿ ಯೋಜಿಸಿಕೊಂಡು, ಚೆಕ್-ಇನ್ ಮತ್ತು ಭದ್ರತಾ ಪ್ರಕ್ರಿಯೆಗಳಿಗೆ ಸಾಕಷ್ಟು ಸಮಯ ಮೀಸಲಿಡಬೇಕು ಎಂದು ಮನವಿ ಮಾಡಿದೆ.

ಹೆಚ್ಚುವರಿ ಭದ್ರತಾ ಕ್ರಮಗಳಿಂದ ಚೆಕ್-ಇನ್ ಕೌಂಟರ್‌ಗಳಲ್ಲಿ ಹಾಗೂ ಭದ್ರತಾ ತಪಾಸಣೆಯಲ್ಲಿ ಸಮಯ ವ್ಯಯವಾಗಲಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಆಗಮಿಸಿ ವಿಮಾನ ತಪ್ಪಿಸಿಕೊಳ್ಳುವ ಪರಿಸ್ಥಿತಿ ಬರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಗಣರಾಜ್ಯೋತ್ಸವದ ದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆ, ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಕನಿಷ್ಠ 3 ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಏರ್‌ಪೋರ್ಟ್ ಆಡಳಿತ ಮಂಡಳಿ ಮನವಿ ಮಾಡಿದೆ.






