ಬೆಳಗಾವಿ: ನಾವಗೆ ಗ್ರಾಮದ ಹೊರ ವಲಯದಲ್ಲಿರುವ ಸ್ನೇಹಂ ಟಿಕ್ಸೊ ಟೇಪ್ ಕಾರ್ಖಾನೆ(ಅಂಟು) ಯಲ್ಲಿ ಕಳೆದ ರಾತ್ರಿ ಸಂಭವಿಸಿದ ಭಾರೀ ಪ್ರಮಾಣದ ಬೆಂಕಿ ಅವಘಡದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ.ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.ಮಾರ್ಕಂಡೇಯ ನಗರದ ಯಲ್ಲಪ್ಪ (20) ಮೃತಪಟ್ಟ ಕಾರ್ಮಿಕ. ಅವರ ಮೃತದೇಹ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಲಿಫ್ಟ್ ನಲ್ಲಿ ಪತ್ತೆಯಾಗಿದೆ.
ಅವಘಡದ ವೇಳೆ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ ಯಲ್ಲಪ್ಪ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕೆಲವು ಎಲುಬುಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.ಕಾರ್ಮಿಕರಾದ ಬೆಳಗಾವಿ ತಾಲೂಕಿನ ಕವಳವಾಡಿಯ ಮಾರುತಿ ನಾರಾಯಣ ಕರವೇಕರ (32), ಜುನೇಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (35) ಹಾಗೂ ರಾಝವಾಡಿಯ ರಂಜಿತ್ ದಶರಥ ಪಾಟೀಲ (39) ಎಂಬವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಮೂವರ ಸ್ಥಿತಿಯೂ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕೆಎಲ್ಇ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.ಸ್ನೇಹಂ ಟಿಕ್ಸೊ ಟೇಪ್ ಕಾರ್ಖಾನೆಯ ಲಿಫ್ಟ್ನಲ್ಲಿ ಮಂಗಳವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದರಿಂದ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡಿ ಕಾರ್ಖಾನೆಯನ್ನು ಆವರಿಸಿದೆ.
ಬೆಂಕಿ ನಿಯಂತ್ರಣಕ್ಕೆ ಅಗ್ನಿಶಾಮಕ ದಳ ಹರಸಾಹಸಟಿಕ್ಸೊ ಟೇಪ್ ಗೆ ಬಳಸುವ ಕಚ್ಚಾ ಸಾಮಗ್ರಿಗಳು ಹೆಚ್ಚು ದಹನಕಾರಿಯಾಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಯನ್ನು ಆವರಿಸಿತ್ತು. ಅಲ್ಲದೆ ಬೆಂಕಿ ಕೆನ್ನಾಲಗೆ ಎಷ್ಟು ಭೀಕರವಾಗಿತ್ತೆಂದರೆ ಅಗ್ನಿಶಾಮಕ ವಾಹನಗಳು ಹತ್ತಿರ ಹೋಗಲೂ ಹರಸಾಹಸ ಪಡಬೇಕಾಯಿತು.
ಬೆಳಗಾವಿ ಅಷ್ಟೇ ಅಲ್ಲದೇ ವಿಜಯಪುರ, ಬಾಗಲಕೋಟೆ,ಧಾರವಾಡದಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಎಸ್ ಡಿಆರ್ ಎಫ್ ಕೂಡ ಸಾಥ್ ನೀಡಿದೆ.ಈ ರೀತಿ ಇಡೀ ರಾತ್ರಿ ಸೇರಿದಂತೆ 12 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಂಪೂರ್ಣವಾಗಿ ನಂದಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.ಈ ನಡುವೆ ಕಾರ್ಖಾನೆಯಲ್ಲಿನ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಕಾರ್ಖಾನೆಯ ಮಾಲಕ ಅನೀಶ ಮೇತ್ರಾಣಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.