• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಳಸಮಾಜಕ್ಕೆ ತಲುಪದ ಬಜೆಟ್‌ ಎಂಬ ಪ್ರಹಸನ

ನಾ ದಿವಾಕರ by ನಾ ದಿವಾಕರ
July 27, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ತಳಸಮಾಜಕ್ಕೆ ತಲುಪದ ಬಜೆಟ್‌ ಎಂಬ ಪ್ರಹಸನ
Share on WhatsAppShare on FacebookShare on Telegram

ನವ ಉದಾರವಾದಿ ಕಾರ್ಪೋರೇಟೀಕರಣ ಹಾದಿಯಲ್ಲಿ ಬಜೆಟ್‌ ಒಂದು ಸಾಂತ್ವನದ ಹೆಜ್ಜೆ ಮಾತ್ರ

ADVERTISEMENT

ನಾ ದಿವಾಕರ

ಭಾಗ 2

ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಬಜೆಟ್‌ ಎಂಬ ಪ್ರಕ್ರಿಯೆ ಸಮಾಜದ ಎರಡು ವರ್ಗಗಳಲ್ಲಿ ಅತಿಯಾದ ಉತ್ಸಾಹವನ್ನು ಉಂಟುಮಾಡುತ್ತದೆ. ಮೊದಲನೆಯದು ತಮ್ಮ ಬಂಡವಾಳದ ವಿಸ್ತರಣೆಗಾಗಿ ಆಳ್ವಿಕೆಯ ಆರ್ಥಿಕ ನೀತಿಯನ್ನೇ ಅವಲಂಬಿಸುವ ಕಾರ್ಪೋರೇಟ್‌ ಮಾರುಕಟ್ಟೆ. ಎರಡನೆಯದು ಅಭಿವೃದ್ಧಿ ರಾಜಕಾರಣದ ಪ್ರಧಾನ ಫಲಾನುಭವಿಗಳಾದ ಸಮಾಜದ ಮಧ್ಯಮ ವರ್ಗದ ಜನತೆ. ಈ ಎರಡೂ ವರ್ಗಗಳನ್ನು ಸಂತೃಪ್ತಗೊಳಿಸಿಬಿಟ್ಟರೆ, ಎಲ್ಲ ಮಾಧ್ಯಮಗಳೂ ಭಟ್ಟಂಗಿಗಳಂತೆ ಬಜೆಟ್‌ ಎಂಬ ಕಡತದ ಉತ್ಸವ ನಡೆಸಲು ಮುಂದಾಗಿಬಿಡುತ್ತವೆ. ಸಾರ್ವಜನಿಕ ವೇದಿಕೆಯಲ್ಲಿ ನಿಂತಾಗಲೇ ನೆಲ ನೋಡದ ವಿದ್ವತ್‌ ವಲಯ-ವಿದ್ವಾಂಸರ ಕೂಟ ಟಿವಿ ವಾಹಿನಿಗಳ ಕೋಣೆಗಳಲ್ಲಿ ಕುಳಿತು ಈ ಹಣಕಾಸು ಸಮತೋಲನದ ವಾರ್ಷಿಕ ಕಸರತ್ತನ್ನು ತಮ್ಮ ಮೂಗಿನ ನೇರಕ್ಕೆ, ಸರ್ಕಾರದ ಮುನ್ನೋಟಕ್ಕೆ ಚ್ಯುತಿಯಾಗದ ಹಾಗೆ ವಿಶ್ಲೇಷಿಸುತ್ತಾರೆ. ಇದು ಕಳೆದ ಮೂರು ದಶಕಗಳ  ನವ ಉದಾರವಾದಿ ಯುಗದಲ್ಲಿ ಭಾರತ ಕಂಡಿರುವ ವಾಸ್ತವ. 2024 ಇದಕ್ಕೆ ಹೊರತಾಗಿರಲು ಸಾಧ್ಯವೇ ಇಲ್ಲ.

 ಸಾಮಾಜಿಕ ಕಾಳಜಿಯ ಕೊರತೆ

 ಪ್ರತಿಬಾರಿಯಂತೆ ಈ ಸಲವೂ ಬಜೆಟ್‌ನಲ್ಲಿ ಯುವ ಸಮೂಹ, ಮಹಿಳೆಯರು,ರೈತರು ಮತ್ತು ಬಡಜನತೆಯನ್ನು ಕೇಂದ್ರೀಕರಿಸಲಾಗಿದ್ದರೂ, ವಾಸ್ತವವಾಗಿ ಹೊಸತೇನನ್ನೂ ಕಾಣಲಾಗುವುದಿಲ್ಲ. ಈ ಸಮೂಹಗಳಿಗೆ ನಿರ್ಣಾಯಕವಾಗಿ ಪರಿಣಮಿಸುವಂತಹ ಸಾಮಾಜಿಕ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಒದಗಿಸಿರುವ ಹಣಕಾಸು ಅನುದಾನದಲ್ಲಿ ತೀವ್ರ ಹೆಚ್ಚಳ ಕಂಡುಬರುತ್ತಿಲ್ಲ. ಉದಾಹರಣೆಗೆ ಶಾಲಾ ಶಿಕ್ಷಣಕ್ಕೆ ಕೇವಲ 5000 ಕೋಟಿ ರೂ, ಉನ್ನತ ಶಿಕ್ಷಣಕ್ಕೆ 3000 ಕೋಟಿ ರೂ ಹೆಚ್ಚಿಸಲಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಅಧಿಕ ಶುಲ್ಕ ಹಾಗೂ ಸ್ವಯಂ ಹಣಕಾಸು ಯೋಜನೆಯ ಮೂಲಕ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಂಜೂರಾಗಿರುವ ಮೊತ್ತದಲ್ಲಿ ಕಳೆದ ವರ್ಷಕ್ಕಿಂತಲೂ ಕೇವಲ 1500 ಕೋಟಿ ರೂ ಹೆಚ್ಚಳವಾಗಿದೆ. ನರೇಗಾ ಯೋಜನೆಗೆ ಮಂಜೂರಾಗಿರುವ ಮೊತ್ತವು ಕಳೆದ ಬಜೆಟ್‌ನ ಪರಿಷ್ಕೃತ ಅಂದಾಜಿನಷ್ಟೇ ನಿಧಿಯನ್ನು ಮೀಸಲಿರಿಸಲಾಗಿದೆ. ಪ್ರಸಕ್ತ ಜನಸಂಖ್ಯೆಯ ಆಧಾರದಲ್ಲಿ ಆಹಾರ ಸಬ್ಸಿಡಿ ಮೊತ್ತವನ್ನು ಹೆಚ್ಚಿಸುವ ಅವಶ್ಯಕತೆ ಇದ್ದು, ಬಜೆಟ್‌ನಲ್ಲಿ ಇದನ್ನೂ ನಿರ್ಲಕ್ಷಿಸಲಾಗಿದೆ.

 ದುರ್ಬಲ ವರ್ಗಗಳಿಗಾಗಿಯೇ ರೂಪಿಸಲಾಗಿರುವ ಹಲವು ಯೋಜನೆಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಶಾಲೆಗಳಲ್ಲಿ ಬಿಸಿಯೂಟ ಒದಗಿಸುವ ಪೋಷಣ್‌ ಯೋಜನೆಗೆ ಮೀಸಲಾಗಿರುವ 12647 ಕೋಟಿ ರೂಗಳು 2022-23ರ 12681 ಕೋಟಿ ರೂಗಳ ವೆಚ್ಚಕ್ಕಿಂತಲೂ ಕಡಿಮೆಯಾಗಿದೆ. ಆರು ವರ್ಷದ ಕೆಳಗಿನ ಮಕ್ಕಳು, ವಯಸ್ಕ ಹೆಣ್ಣುಮಕ್ಕಳು ಹಾಗೂ ಮೊಲೆಯೂಡಿಸುವ ಗರ್ಭಿಣಿ ಮಹಿಳೆಯರಿಗಾಗಿ ರೂಪಿಸಲಾಗಿರುವ ಸಕ್ಷಮ್‌ ಅಂಗನವಾಡಿ ಯೋಜನೆಗಾಗಿ 21200 ಕೋಟಿ ರೂ ಒದಗಿಸಲಾಗಿದೆ. 2023-24ರ ಬಜೆಟ್‌ ಅಂದಾಜಿನಲ್ಲಿ ಇದು 20554 ಕೋಟಿ ರೂಗಳಷ್ಟಿತ್ತು. ಈ ಅಲ್ಪ ಹೆಚ್ಚಳವನ್ನು ಗಮನಿಸಿದಾಗ 2018 ರಿಂದಲೂ ನಿರೀಕ್ಷಿಸಲಾಗುತ್ತಿರುವ ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಿಸುವ ಯಾವುದೇ ಸಾಧ್ಯತೆಗಳು ಇಲ್ಲ ಎಂದೇ ತೋರುತ್ತದೆ. ಆರೋಗ್ಯ ಕ್ಷೇತ್ರವನ್ನೂ ಮತ್ತೊಮ್ಮೆ ಕಡೆಗಣಿಸಲಾಗಿದೆ.

  ಸಾಮಾನ್ಯವಾಗಿ ಯಾವುದೇ ಬಜೆಟ್‌ನಲ್ಲಿ ಮಂಜೂರಾದ ಯೋಜನೆಗಳ ವೆಚ್ಚವನ್ನು ಹಿಂದಿನ ಬಜೆಟ್‌ ಅಂದಾಜಿನೊಡನೆ ಹೋಲಿಸಿ ನೋಡಲಾಗುತ್ತದೆ.  ಕಳೆದ ವರ್ಷದ ಪರಿಷ್ಕೃತ ಅಂದಾಜಿನೊಡನೆ ಹೋಲಿಸಿದಾಗ ವಾಸ್ತವ ಚಿತ್ರಣ ಗೋಚರಿಸುವುದಿಲ್ಲ. ಎಕೆಂದರೆ ಪರಿಷ್ಪೃತ ಅಂದಾಜು ನೈಜ ವೆಚ್ಚದ ಪ್ರಮಾಣವನ್ನು ಸೂಚಿಸುತ್ತದೆ. ಇದು ಕಾರ್ಯಕ್ರಮದ ಅನುಷ್ಠಾನದಲ್ಲಿ ಇರುವ ಲೋಪದೋಷಗಳಿಂದ ಕಡಿಮೆಯಾಗಿರುವ ಸಾಧ್ಯತೆಗಳು ಇರುತ್ತವೆ. ಈ ದೃಷ್ಟಿಯಿಂದ ಪ್ರಸಕ್ತ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒದಗಿಸಲಾಗಿರುವ ಮೊತ್ತವನ್ನು 2023-24ರ ಬಜೆಟ್‌ಗೆ ಹೋಲಿಸಿದಾಗ ಕೇವಲ ಶೇಕಡಾ 1.98ರಷ್ಟು ಹೆಚ್ಚಾಗಿರುವುದು ಕಂಡುಬರುತ್ತದೆ.  ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಶೇಕಡಾ 1.16, ಪ್ರಧಾನ ಮಂತ್ರಿ- ಜನ ಆರೋಗ್ಯ ಯೋಜನೆಗೆ (ಪಿಎಮ್‌ಜೆಎಐ) ಶೇಕಡಾ 1.14ರಷ್ಟು ಹೆಚ್ಚಳವಾಗಿದೆ. ಆಯುಷ್ಮಾನ್‌ ಭಾರತ್‌ ಎಂಬ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ತಳಮಟ್ಟದವರೆಗೂ ಕೊಂಡೊಯ್ಯಬೇಕಾದರೆ ಈ ಮೊತ್ತ ಅತ್ಯಲ್ಪ ಎನಿಸದಿರದು. ಸರ್ಕಾರದ ಅನುದಾನದಿಂದಲೇ ಕಾರ್ಯಗತವಾಗುವ ಪಿಎಂಜೆಎವೈ ಕಾರ್ಯಕ್ರಮದ ಮೂಲಕ ವಿಕಸಿತ ಭಾರತ 2030ರ ವೇಳೆಗೆ ಉದ್ದೇಶಿತ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಬೇಕಾದರೆ ಈ ಅಲ್ಪಪ್ರಮಾಣದ ಮೊತ್ತ ಸಾಕಾಗುವುದಿಲ್ಲ.

 ಅಸಮಾನತೆಗಳ ಮೂಲ ನೆಲೆ

 ಈ ಬಜೆಟ್‌ನಲ್ಲಿ ರೈತರು ಮತ್ತು ಬಡಜನತೆಯ ಏಳ್ಗೆಗಾಗಿ ಹೆಚ್ಚಿನ ಒತ್ತುನೀಡಲಾಗಿದೆ ಎಂದು ವಿತ್ತಸಚಿವರು ಹೇಳಿದ್ದರೂ, ಕೃಷಿ ಕ್ಷೇತ್ರದಲ್ಲಿ ರೈತರಿಗೆ ಭರವಸೆ ನೀಡುವಂತಹ ಯಾವುದೇ ಕಾರ್ಯಕ್ರಮಗಳನ್ನು ಘೋಷಿಸಲಾಗಿಲ್ಲ. ರಸಗೊಬ್ಬರ ಸಬ್ಸಿಡಿ ಪ್ರಮಾಣವು ಪ್ರತಿ ವರ್ಷವೂ ಇಳಿಮುಖವಾಗುತ್ತಿದ್ದು ಈ ಬಾರಿಯೂ ಇದೇ ಹಾದಿಯನ್ನು ಅನುಸರಿಸಲಾಗಿದೆ. 2022-23ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿ ಮೊತ್ತ  2.5 ಲಕ್ಷ ಕೋಟಿ ರೂ  ಇದ್ದುದು ಈ ವರ್ಷದ ಬಜೆಟ್‌ನಲ್ಲಿ 1.64 ಲಕ್ಷ ಕೋಟಿ ರೂಗಳಿಗೆ ಇಳಿಕೆಯಾಗಿದೆ. ಜೊತೆಗೆ ರೈತ ಸಮುದಾಯದ ದೀರ್ಘಕಾಲಿಕ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಯಾವುದೇ ಪ್ರಸ್ತಾವನೆಯನ್ನು ಕಾಣಲಾಗುವುದಿಲ್ಲ. ಬಡಜನತೆಗೆ ನೀಡಲಾಗುತ್ತಿದ್ದ ಉಚಿತ ಪಡಿತರಕ್ಕಾಗಿ ಸಬ್ಸಿಡಿ ಮೊತ್ತವನ್ನು 2.05 ಲಕ್ಷ ಕೋಟಿ ರೂಗಳಿಗೆ ಇಳಿಸಲಾಗಿದ್ದು 2022-23ಕ್ಕೆ ಹೋಲಿಸಿದರೆ ಇದು 70 ಸಾವಿರ ಕೋಟಿ ರೂ ಕಡಿಮೆಯಾಗಿದೆ.

 ದೇಶದಲ್ಲಿ ಆರ್ಥಿಕ ಅಸಮಾನತೆ ತೀವ್ರವಾಗುತ್ತಿರುವುದನ್ನು ಎಲ್ಲ ಅರ್ಥಶಾಸ್ತ್ರಜ್ಞರೂ ಸ್ಪಷ್ಟವಾಗಿ ಗುರುತಿಸಿದ್ದಾರೆ. ಮತ್ತೊಂದೆಡೆ ಜನಸಾಮಾನ್ಯರಿಂದ ಸಂಗ್ರಹವಾಗುವ ತೆರಿಗೆಯ ಪ್ರಮಾಣವು ಕಾರ್ಪೋರೇಟ್‌ ತೆರಿಗೆಯನ್ನೂ ಮೀರಿಸಿರುವುದನ್ನು ಅಂಕಿಅಂಶಗಳೇ ಹೇಳುತ್ತವೆ. 2019-20ರ ವಾರ್ಷಿಕ ಅವಧಿಯಲ್ಲಿ ಆದಾಯ ತೆರಿಗೆ ಸಂಗ್ರಹದ ಪ್ರಮಾಣ  4.92 ಲಕ್ಷ ಕೋಟಿರೂಗಳಷ್ಟಿದ್ದರೆ, ಕಾರ್ಪೋರೇಟ್‌ ತೆರಿಗೆಯು 5.56 ಲಕ್ಷ ಕೋಟಿರೂಗಳಷ್ಟಿತ್ತು. 2019ರಲ್ಲಿ ಕಾರ್ಪೋರೇಟ್‌ ತೆರಿಗೆ ದರದಲ್ಲಿ ಶೇಕಡಾ 8ರಷ್ಟು ಕಡಿತ ಮಾಡಿದ ನಂತರ ಕಾರ್ಪೋರೇಟ್‌ ತೆರಿಗೆ ಸಂಗ್ರಹವೂ ಕಡಿಮೆಯಾಗುತ್ತಿದ್ದು 2023-24ರ ವೇಳೆಗೆ ಇದು ಆದಾಯ ತೆರಿಗೆಗಿಂತಲೂ ಕಡಿಮೆಯಾಗಿದೆ. ಈ ವರ್ಷದ ಅಂಕಿಅಂಶಗಳ ಅನುಸಾರ ಆದಾಯ ತೆರಿಗೆ 11.56 ಲಕ್ಷ ಕೋಟಿರೂಗಳಷ್ಟಿದ್ದರೆ ಕಾರ್ಪೋರೇಟ್‌ ತೆರಿಗೆ 10.42 ಲಕ್ಷ ಕೋಟಿ ರೂಗಳಷ್ಟಾಗಿದೆ. ಅಂದರೆ ಈ ದೇಶದ ಮಧ್ಯಮ ವರ್ಗಗಳು ಮತ್ತು ಜಿಎಸ್‌ಟಿ ಮೂಲಕ ಬಡಜನತೆ ಶ್ರೀಮಂತ ಕಾರ್ಪೋರೇಟ್‌ಗಳಿಗಿಂತಲೂ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದ್ದಾರೆ.

 ಒಂದು ಅಂದಾಜಿನ ಪ್ರಕಾರ ಭಾರತದಲ್ಲಿರುವ ಉದ್ಯಮಗಳ ಪೈಕಿ ಶೇಕಡಾ 5ರಷ್ಟು ಕಂಪನಿಗಳು ಶೇಕಡಾ 97ರಷ್ಟು ಕಾರ್ಪೋರೇಟ್‌ ತೆರಿಗೆ ಪಾವತಿ ಮಾಡುತ್ತವೆ. ಅವುಗಳ ಪೈಕಿ ಅತಿ ದೊಡ್ಡ 150 ಉದ್ದಿಮೆಗಳು ಶೇಕಡಾ 40ರಷ್ಟು ತೆರಿಗೆ ಪಾವತಿಸುತ್ತವೆ. ಉಳಿದ ಕಂಪನಿಗಳೆಲ್ಲವೂ ಶೂನ್ಯ ತೆರಿಗೆ ಘೋಷಿಸುತ್ತವೆ. ತಜ್ಞರ ಅಭಿಪ್ರಾಯದಲ್ಲಿ ಇದಕ್ಕೆ ಉದ್ದಿಮೆಗಳಿಗೆ ನೀಡಿರುವ ವಿನಾಯಿತಿಗಳು ಒಂದು ಕಾರಣವಾದರೆ ಮತ್ತೊಂದು ಕಾರಣ ಎಂಎಸ್‌ಎಂಇ ಉದ್ದಿಮೆಗಳ ಮೇಲೆ ಇರುವ ಹೆಚ್ಚಿನ ಒತ್ತಡವೂ ಇರಬಹುದು. ಮತ್ತೊಂದು ಅಂಕಿಅಂಶದ ಪ್ರಕಾರ ದೇಶದ  30 ಸಾವಿರಕ್ಕೂ ಹೆಚ್ಚು ಉದ್ದಿಮೆಗಳು ಕಳೆದ ವರ್ಷ 14 ಲಕ್ಷ ಕೋಟಿ ರೂಗಳಿಗಿಂತಲೂ ಹೆಚ್ಚುವರಿ ಲಾಭ ಗಳಿಸಿವೆ. ಈ ಕಾರ್ಪೋರೇಟ್‌ ಉದ್ದಿಮೆಗಳು ಗಳಿಸಿರುವ 200 ಲಕ್ಷಕೋಟಿ ರೂಗಳಿಂದ ಪಾವತಿಸಲಾಗಿರುವ ತೆರಿಗೆ ಕೇವಲ 10 ಲಕ್ಷ ಕೋಟಿ ರೂ ಮಾತ್ರ. ದೇಶದ ಸಾಮಾನ್ಯ ಜನತೆ ತಮ್ಮ ದುಸ್ತರ ಬದುಕಿನ ನಡುವೆಯೇ ಇದಕ್ಕಿಂತಲೂ ಹೆಚ್ಚಿನ ತೆರಿಗೆ ಪಾವತಿ ಮಾಡಿದ್ದಾರೆ. ಕಾರ್ಪೋರೇಟ್‌ ತೆರಿಗೆಯನ್ನು ಹೆಚ್ಚಿಸುವುದಿರಲಿ, 2016ರಲ್ಲಿ ರದ್ದುಪಡಿಸಲಾದ ಸಂಪತ್ತಿನ ತೆರಿಗೆಯನ್ನೂ ಸಹ ಮತ್ತೊಮ್ಮೆ ಜಾರಿಗೊಳಿಸುವ ಉದ್ದೇಶ ಸರ್ಕಾರಕ್ಕೆ ಇದ್ದಂತಿಲ್ಲ.

 ಇದು ಬಿಜೆಪಿ ಸರ್ಕಾರದ ಮತ್ತು ಸಾಮಾನ್ಯವಾಗಿ ಭಾರತದ ಆಳುವ ವರ್ಗಗಳ ನವ ಉದಾರವಾದಿ ಆರ್ಥಿಕತೆಯ ಲಕ್ಷಣಗಳನ್ನು ಸೂಚಿಸುತ್ತದೆ. ಕಾರ್ಪೋರೇಟ್‌ ತೆರಿಗೆಯಲ್ಲಿ ಶೇಕಡಾ 8ರಷ್ಟು ಕಡಿತಗೊಳಿಸಿದ್ದರಿಂದ ಐದು ವರ್ಷಗಳಲ್ಲಿ 8 ಲಕ್ಷ ಕೋಟಿ ರೂ ನಷ್ಟವಾಗಿರುವುದಾಗಿ ಅಂದಾಜು ಮಾಡಲಾಗಿದೆ. ಇಷ್ಟೆಲ್ಲಾ ರಿಯಾಯಿತಿಗಳ ಹೊರತಾಗಿಯೂ, ಬಂಡವಾಳಿಗರ ಸಂಪತ್ತಿನಲ್ಲಿ ಶೇಕಡಾ 120ರಷ್ಟು ಹೆಚ್ಚಳವಾಗಿದ್ದರೂ ದೇಶದಲ್ಲಿ ಉದ್ಯೋಗಾವಕಾಶಗಳು ಏಕೆ ಹೆಚ್ಚಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರವೇ ದೊರೆಯುವುದಿಲ್ಲ.  ಮೂಲ ಸೌಕರ್ಯಗಳನ್ನೇ ಕೇಂದ್ರೀಕರಿಸಿದ ಮಾರುಕಟ್ಟೆ ನೀತಿಗಳು ಉತ್ಪಾದನಾ ಕ್ಷೇತ್ರವನ್ನು ಕಡೆಗಣಿಸಿರುವುದೇ ಇದಕ್ಕೆ ಕಾರಣವಾಗಿದೆ. ಈ ಲೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳೂ ಸಹ ಅಲ್ಪಕಾಲಿಕ ಪರಿಣಾಮಗಳನ್ನು ಬೀರುವಂತಹುದೇ ಆಗಿದೆ. ಇದೇ ಸಮಯದಲ್ಲಿ ಕೇಂದ್ರದಲ್ಲಿ ಖಾಲಿ ಇರುವ 9.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಯಾವುದೇ ಭರವಸೆಯನ್ನೂ ಸಹ ನೀಡಲಾಗಿಲ್ಲ.

 ಶ್ರೀಸಾಮಾನ್ಯನ ವಾಸ್ತವ ನೆಲೆಗಟ್ಟು

 ಹಾಗಾಗಿ 2024-25ರ ವಾರ್ಷಿಕ ಬಜೆಟ್‌ ಮೇಲ್ನೋಟಕ್ಕೆ ಆಶಾದಾಯಕವಾಗಿ ಕಾಣುವುದಾದರೂ, ಆಂತರಿಕವಾಗಿ ದೇಶ ಎದುರಿಸುತ್ತಿರುವ ನಿರುದ್ಯೋಗ, ಬಡತನ ಮತ್ತು ಉದ್ಯೋಗಾವಕಾಶಗಳ ಕೊರತೆಯನ್ನು ನೀಗಿಸುವ ಯಾವುದೇ ದೀರ್ಘಕಾಲಿಕ ಪರಿಹಾರೋಪಾಯಗಳನ್ನು ಸೂಚಿಸುವುದಿಲ್ಲ. ವಿಕಸಿತ ಭಾರತ ತನ್ನ 2047ರ ಅಮೃತ ಕಾಲದ ಗುರಿಯನ್ನು ಯಶಸ್ವಿಯಾಗಿ ತಲುಪಬೇಕಾದರೆ ದೇಶದ ತಳಮಟ್ಟದ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳ ನಿವಾರಣೆಯಾಗಬೇಕಿದೆ. ಇದು ನವ ಉದಾರವಾದಿ ಆರ್ಥಿಕತೆಯಲ್ಲಿ ಸುಲಭ ಸಾಧ್ಯವಲ್ಲ. ಏಕೆಂದರೆ ಶಿಕ್ಷಣ, ಆರೋಗ್ಯ, ಸಾರ್ವಜನಿಕ ಸಾರಿಗೆ, ರೈಲ್ವೆ-ವಿಮಾನಯಾನ ಮತ್ತಿತರ ಎಲ್ಲ ಜನಾವಶ್ಯಕ ವಲಯಗಳನ್ನೂ ಕಾರ್ಪೋರೇಟೀಕರಣಕ್ಕೊಳಪಡಿಸುತ್ತಿರುವ ಆರ್ಥಿಕ ನೀತಿಗಳು ಬಡ ಜನತೆಯನ್ನು ಶಾಶ್ವತವಾಗಿ ನಿಕೃಷ್ಟ ಬದುಕಿಗೇ ಸೀಮಿತಗೊಳಿಸುತ್ತವೆ. ಮೂಲ ಸಂಪತ್ತು ಮತ್ತು ಸಂಪನ್ಮೂಲಗಳ ಸಮಾನ ಹಂಚಿಕೆಯ ಮಾತು ಒತ್ತಟ್ಟಿಗಿರಲಿ, ಉತ್ಪಾದಿತ ಸಂಪತ್ತು ಮತ್ತು ಅದರಿಂದ ಸೃಷ್ಟಿಯಾಗುವ ಆರ್ಥಿಕ ಸಂಪನ್ಮೂಲಗಳ ನ್ಯಾಯಯುತ ವಿತರಣೆಗೂ ಸಹ ನವ ಉದಾರವಾದ ಅವಕಾಶ ನೀಡುವುದಿಲ್ಲ.

 ಈ ಗಗನ ಕುಸುಮವನ್ನು ಎಟುಕಿಸಿಕೊಳ್ಳುವ ಪ್ರಯತ್ನದಲ್ಲೇ ಭಾರತದ ಶ್ರೀಸಾಮಾನ್ಯರು ತಮ್ಮ ದೈನಂದಿನ ಬದುಕಿನ ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ಮುಖ್ಯವಾಹಿನಿಯ ಯಾವುದೇ ರಾಷ್ಟ್ರೀಯ-ಪ್ರಾದೇಶಿಕ ಪಕ್ಷಗಳೂ ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯನ್ನು ಪೋಷಿಸುವ ಆರ್ಥಿಕ ನೀತಿಗಳನ್ನು ವಿರೋಧಿಸುವುದಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಹಾಗಾಗಿಯೇ ವಾರ್ಷಿಕ ಬಜೆಟ್‌ಗೆ ವ್ಯಕ್ತವಾಗುವ ರಾಜಕೀಯ ವಿರೋಧ ಅಥವಾ ಭಿನ್ನಾಭಿಪ್ರಾಯಗಳಲ್ಲೂ, ರಾಜಕೀಯ ಧ್ವನಿಯ ಹೊರತಾಗಿ, ಯಾವುದೇ ಸತ್ವ ಇರುವುದಿಲ್ಲ. ಜನಪರ ಕಾಳಜಿಯೂ ಕಾಣಲಾಗುವುದಿಲ್ಲ. ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಬಜೆಟ್‌ನಲ್ಲಿ ವಿಶೇ಼ಷ ನೆರವು ನೀಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇಡೀ ಮೊತ್ತವನ್ನು ಮೂಲ ಸೌಕರ್ಯಗಳಿಗೆ ಬಳಸುವುದು ಈ ಕಾರ್ಪೋರೇಟ್‌ ನೀತಿಯ ವಿಸ್ತರಣೆಯಾಗಿ ಕಾಣುತ್ತದೆ. ಐಟಿ ಕ್ಷೇತ್ರದಲ್ಲಿ ದಿನದ ದುಡಿಮೆಯ ಅವಧಿಯನ್ನು 14 ಗಂಟೆಗಳಿಗೆ ಹೆಚ್ಚಿಸುವ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ನಿರ್ಧಾರವೂ ಇದರ ಒಂದು ಭಿನ್ನ ಆಯಾಮವಾಗಿ ಕಾಣುತ್ತದೆ.

 ಕಾರ್ಪೋರೇಟ್‌ ಪ್ರೇರಿತ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸಹಜವಾಗಿ ಆಗಬಹುದಾದ ವ್ಯತ್ಯಯಗಳಿಗೆ ಭಾರತ ಸಾಕ್ಷಿಯಾಗುತ್ತಿರುವುದು ಸ್ಪಷ್ಟ. ತಳಮಟ್ಟದ ಸಮಾಜದ ದೃಷ್ಟಿಯಿಂದ ಇಲ್ಲಿ ಸಂಭವಿಸಬಹುದಾದ ಪಲ್ಲಟಗಳಿಗೆ, ಸಾಮಾಜಿಕ-ಆರ್ಥಿಕ ಸಂಕಷ್ಟಗಳಿಗೆ, ಜಟಿಲ ಸವಾಲುಗಳಿಗೆ ಪರಿಹಾರವಾಗಿ ಸರ್ಕಾರಗಳು ಬಜೆಟ್‌ ಮೂಲಕ ಕೆಲವು ಮೇಲ್ಪದರದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತವೆ. 2024-25ರ ಕೇಂದ್ರ ಬಜೆಟ್‌ನಲ್ಲೂ ಇದೇ ಚಾಣಾಕ್ಷತನವನ್ನು ಗುರುತಿಸಬಹುದು. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಬಜೆಟ್‌ ಎಂದರೆ ಅದು ಜನಸಾಮಾನ್ಯರ ಪಾಲಿಗೆ ಆಶಾಭಾವನೆಯನ್ನು ಸೃಷ್ಟಿಸುವ ಅಥವಾ ತಾತ್ಕಾಲಿಕ ಸಾಂತ್ವನ ಒಂದು ಆರ್ಥಿಕ ಪ್ರಕ್ರಿಯೆ ಮಾತ್ರ. ಉದಾತ್ತ ಅಥವಾ ಜನಪರ ಎನ್ನಿಸುವ ಯಾವುದೇ ಯೋಜನೆಗಳು ತಳಮಟ್ಟಕ್ಕೆ ತಲುಪುವ ವೇಳೆಗೆ ಜನತೆಯ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿರುತ್ತದೆ. ಅಂತಿಮವಾಗಿ ಈ ಅನುಷ್ಠಾನದ ಜವಾಬ್ದಾರಿ ಇರುವುದು ಅಧಿಕಾರಶಾಹಿಯ ಮೇಲೆ. ಅಧಿಕಾರಶಾಹಿಯ ಒಲವು ಇರುವುದು ಕಾರ್ಪೋರೇಟ್‌ ಮಾರುಕಟ್ಟೆಯ ಕಡೆಗೆ.

 ಇದು ಈ ದೇಶದ ಶ್ರಮಜೀವಿ ವರ್ಗಗಳು ಎದುರಿಸಬೇಕಾದ ಕಟು ವಾಸ್ತವ. ಹೊಸ ಕ್ರಿಮಿನಲ್‌ ಕಾಯ್ದೆಗಳು, ನೂತನ ಕಾರ್ಮಿಕ ಸಂಹಿತೆಗಳು ಹಾಗೂ ಆಡಳಿತಾತ್ಮಕ ಕ್ರಮಗಳು ನವ ಉದಾರವಾದಿ ಅರ್ಥವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲೇ ರೂಪುಗೊಂಡಿರುವುದರಿಂದ, ಭಾರತದ ದುಡಿಯುವ ವರ್ಗಗಳು, ರೈತ ಸಮುದಾಯ ಹಾಗೂ ಅವಕಾಶ ವಂಚಿತ ಜನತೆ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವುದರ ಮೂಲಕವೇ ಅಂತಿಮ ನ್ಯಾಯ ಪಡೆಯಬೇಕಿದೆ. ವಾರ್ಷಿಕ ಬಜೆಟ್‌ ಈ ಉತ್ಕರ್ಷವನ್ನು ಕಡಿಮೆ ಮಾಡುವ ಒಂದು ಪ್ರಕ್ರಿಯೆ ಮಾತ್ರ. 2024ರ ಲೋಕಸಭಾ ಚುನಾವಣೆಗಳಲ್ಲಿ ಮತದಾರರು ತಮ್ಮೊಳಗಿನ ಹತಾಶೆಯನ್ನು ಮತದಾನದ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಹತಾಶೆಯನ್ನು ಶಮನ ಮಾಡುವ ಒಂದು ಪ್ರಯತ್ನ 2024-25ರ ಬಜೆಟ್.‌ ಇದನ್ನೂ ಮೀರಿದ ನಿರೀಕ್ಷೆ ಅನಗತ್ಯ ಎನಿಸುತ್ತದೆ.

-೦-೦-೦-

Tags: BJPBudget2024Congress PartyNaa Divakaranirmala seetharamanನರೇಂದ್ರ ಮೋದಿಬಿಜೆಪಿ
Previous Post

ದೆಹಲಿ ಪ್ರವೇಶಕ್ಕೆ ಅನುಮತಿ ನೀಡದಿದ್ದರೆ ರೈತರನ್ನು ಲಾಹೋರ್‌ ಗೆ ಕಳಿಸಬೇಕೆ ? ಪಂಜಾಬ್‌ ಮುಖ್ಯ ಮಂತ್ರಿ ಪ್ರಶ್ನೆ

Next Post

ತುಂಬಿ ತುಳುಕುತ್ತಿದೆ ಕಾವೇರಿಯ ಒಡಲು ! ನದಿ ಪಾತ್ರದ ಜನರಲ್ಲಿ ಆತಂಕ!

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
Next Post
ತುಂಬಿ ತುಳುಕುತ್ತಿದೆ ಕಾವೇರಿಯ ಒಡಲು ! ನದಿ ಪಾತ್ರದ ಜನರಲ್ಲಿ ಆತಂಕ!

ತುಂಬಿ ತುಳುಕುತ್ತಿದೆ ಕಾವೇರಿಯ ಒಡಲು ! ನದಿ ಪಾತ್ರದ ಜನರಲ್ಲಿ ಆತಂಕ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada