• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಸಮನ್ವಯದ ಸೌಹಾರ್ದತೆ ಬೀದರ್‌ ಅಷ್ಟೂರು ಜಾತ್ರೆ!

ನಾ ದಿವಾಕರ by ನಾ ದಿವಾಕರ
October 11, 2022
in ಅಂಕಣ, ಅಭಿಮತ, ಕರ್ನಾಟಕ
0
ಸಮನ್ವಯದ ಸೌಹಾರ್ದತೆ ಬೀದರ್‌ ಅಷ್ಟೂರು ಜಾತ್ರೆ!
Share on WhatsAppShare on FacebookShare on Telegram

ಸುಡು ಬೇಸಿಗೆಯ ಬಿರು ಬಿಸಿಲಿನಲ್ಲೇ ಬೀದರ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಮಾರ್ಚ್‌ 28ರಂದು,  14 ಮತ್ತು 15ನೆಯ ಶತಮಾನದಲ್ಲಿ ಬೀದರ್‌ ಸಂಸ್ಥಾನವನ್ನು ಆಳಿದ ಬಹಮನಿ ಸಂಸ್ಥಾನದ ಸಂಭಾವ್ಯ ಉತ್ತರಾಧಿಕಾರಿ, ಸುಲ್ತಾನ್‌ ಖಲೀಲ್‌ ಶಾಹ್‌ ಬಹಮನಿ ಅವರು, ಮಡಿಯಾಲ ದೇಗುಲದ ಲಿಂಗಾಯತ ಪುರೋಹಿತ ಸೋಮಶೇಖರ್‌ ಶಿವರಾಯ ಒಡೆಯರ್‌ ಅವರನ್ನು ಸುಲ್ತಾನ್‌ ಅಹಮದ್‌ ಶಾಹ್‌ ವಲಿಯ ಗೋರಿಯ ಹೆಬ್ಬಾಗಿಲಿನಲ್ಲೇ ಸ್ವಾಗತಿಸಿದ್ದರು. ಕಾಲಾನುಕ್ರಮದಲ್ಲಿ ನೆನೆಗುದಿಗೆ ಸರಿದಿರುವ ವಿಧಿ ವಿಧಾನ ಆಚರಣೆಗಳನ್ನು ಮತ್ತೊಮ್ಮೆ ಸಾಂಕೇತಿಕವಾಗಿ ಆಚರಿಸಿದ ಖಲೀಲ್‌ ಶಾಹ್‌ ಸೋಮಶೇಖರ್‌ ಶಿವರಾಯ ಅವರಿಗೆ ಅಹಮದ್‌ ಶಾಹ್‌ ಅವರ ಉರುಸ್‌ ( ವಾರ್ಷಿಕ ಸ್ಮರಣೆಯ ದಿನ)ನ ಐದನೆಯ ದಿನದಂದು ಭಿಕ್ಷೆ ನೀಡುವ ಮೂಲಕ ಹಳೆಯ ಸಂಪ್ರದಾಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದರು.  ಸಾಂಕೇತಿಕವಾಗಿ ಕಡಿಮೆ ಪ್ರಮಾಣದಲ್ಲಿದ್ದ ಈ ಭಿಕ್ಷೆಯಲ್ಲಿ ಒಂದು ಒಣಗಿದ ತೆಂಗಿನ ಕಾಯಿ, ಒಂದು ಮೇಲಂಗಿ, ಗುಲಾಬಿ ಹೂಗಳು ಮತ್ತು ಒಂದು ಹಿಡಿ ಸಕ್ಕರೆಯನ್ನು ನೀಡಲಾಯಿತು. ಆದರೆ ಈ ಸಂಪ್ರದಾಯವು ತನ್ನದೇ ಆದ ಇತಿಹಾಸವನ್ನೂ ಹೊಂದಿದೆ. ಹಲವು ಶತಮಾನಗಳಿಂದ ಅನುಸರಿಸಿಕೊಂಡು ಬರಲಾಗುತ್ತಿರುವ ಈ ವೈವಿಧ್ಯಮಯ ಆಚರಣೆಗಳು, ಬಹಮನಿ ಸುಲ್ತಾನರಲ್ಲಿ ಅತ್ಯಂತ ಹೆಚ್ಚು ಖ್ಯಾತಿ ಹೊಂದಿದ್ದ  ಅಹಮದ್‌ ಶಾಹ್‌ (ಆಳ್ವಿಕೆಯ ಅವಧಿ ಕ್ರಿಶ 1422-36)ನ ಗೋರಿಯ ಬಳಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಆರು ದಿನಗಳ ಕಾಲ ನಡೆಯುವ ಈ ಆಚರಣೆಗಳಲ್ಲಿ (ಈ ವರ್ಷ ಮಾರ್ಚ್‌ 24 ರಿಂದ 29ರವರೆಗೆ ನಡೆದಿತ್ತು) ಈ ದೊರೆಯ ವಾರ್ಷಿಕ ಪುಣ್ಯ ತಿಥಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನಡೆಯುವ ಅಷ್ಟೂರು ಜಾತ್ರೆಯಲ್ಲಿ ಸಾವಿರಾರು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ಅತ್ಯುತ್ಸಾಹದೊಂದಿಗೆ ಪಾಲ್ಗೊಳ್ಳುತ್ತಾರೆ.

ADVERTISEMENT

ಅಹಮದ್‌ ಶಾಹ್‌ನ ಬೃಹತ್‌ ಗೋರಿಯು ಕರ್ನಾಟಕದ ಈಶಾನ್ಯದಲಿರುವ ಬೀದರ್‌ನ ಹೊರವಲಯದಲ್ಲಿರುವ ಪ್ರಶಾಂತ ಭೂಮಿಯಲ್ಲಿ ಅಷ್ಟೂರ್‌ ಎಂಬ ಸ್ಥಳದಲ್ಲಿ ಸ್ಥಾಪಿತವಾಗಿದೆ. ಈ ಸಾಮ್ರಾಟನ ಗೋರಿಯು ಇಲ್ಲಿರುವ ಇತರ ದೊರೆಗಳ ಗೋರಿಗಳಲ್ಲಿ ಮೊದಲನೆಯದಾಗಿದ್ದು, ನಂತರದಲ್ಲಿ ಬಹಮನಿ ಸಂಸ್ಥಾನವನ್ನು ಆಳಿದ ಒಂಬತ್ತು ದೊರೆಗಳ ಗೋರಿಗಳನ್ನೂ ಇಲ್ಲಿ ನಿರ್ಮಿಸಲಾಗಿದೆ. ಅಷ್ಟೂರ್‌ನಲ್ಲಿ ಒಂದು ಶತಮಾನದ ಕಾಲಾವಧಿಯಲ್ಲಿ ನಿರ್ಮಿಸಲಾದ ಈ ಗೋರಿಗಳು ಒಂದೊಂದೂ ವಿಭಿನ್ನ ವಾಸ್ತು ಶೈಲಿಯನ್ನು ಹೊಂದಿದ್ದು ಇದು ವಾಸ್ತುಶಿಲ್ಪದ ವೈವಿಧ್ಯತೆಗೆ ಸಾಕ್ಷಿಯಾಗಿದೆ.  ವರ್ಷದ ಬಹುತೇಕ ಸಮಯದಲ್ಲಿ ಈ ಪ್ರದೇಶ  ಪ್ರಶಾಂತವಾಗಿಯೇ ಇರುತ್ತದೆ. ಇಲ್ಲಿಗೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರು ಈಲ್ಲಿನ ಬೃಹತ್‌ ಗೋರಿಗಳನ್ನು ಕಣ್ತುಂಬಿಕೊಂಡು ಹೋಗುವುದೇ ಅಲ್ಲದೆ, 15ನೆಯ ಶತಮಾನದಲ್ಲಿ ಬಹಮನಿ ಸಂಸ್ಥಾನದ ವೈಭವವನ್ನೂ ಕೊಂಡಾಡುತ್ತಾ ಹೋಗುತ್ತಾರೆ. ಇದರೊಟ್ಟಿಗೇ ಜಾತ್ರೆಯ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುವ ಸಂಪ್ರದಾಯವೂ ಅನೂಚಾನವಾಗಿ ನಡೆದುಕೊಂಡುಬಂದಿದೆ. ಜಾತ್ರೆಗೆ ಬರುವವರಲ್ಲಿ ವಿಭಿನ್ನವಾದ ಮನಸ್ಥಿತಿ ಇರುವುದನ್ನೂ ಗಮನಿಸಬಹುದು. ಇತಿಹಾಸ ಮತ್ತು ಮಿಥ್ಯೆಯನ್ನು ಮೇಳೈಸುವ ಒಂದು ಸಾಂಪ್ರದಾಯಿಕ ವಾತಾವರಣವನ್ನು ಕಾಣಬಹುದು.

ಈ ಜಾಗಕ್ಕೆ ಪ್ರವೇಶಿಸುವುದೇ ಒಂದು ಗ್ರಾಮೀಣ ಸಂತೆಗೆ ಪ್ರವೇಶಿಸಿದಂತಿರುತ್ತದೆ. ಅಷ್ಟೂರಿನ ಎದುರಿನಲ್ಲಿರುವ ಮಸಣಗಳನ್ನು ಬಹುತೇಕವಾಗಿ ಮನರಂಜನೆಯ ಉದ್ಯಾನಗಳನ್ನಾಗಿ ಮಾಡಲಾಗಿದೆ. ಇಲ್ಲಿ ರಂಕಲ್‌ ರಾಟೆ, ಹಸ್ತಸಾಮುದ್ರಿಕೆ ಹೇಳುವ ಜ್ಯೋತಿಷಿಗಳು, ತಿಂಡಿ ತಿನಿಸುಗಳ ಮಳಿಗೆಗಳು, ಕಾಟನ್‌ ಕ್ಯಾಂಡಿ ಗಾಡಿಗಳು, ಆಟಿಕೆಗಳು, ಉಡುಪುಗಳು ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುವವರು, ಅಹಮದ್ ಶಾಹ್ ಗೋರಿಗೆ ನಮನ ಸಲ್ಲಿಸಲು ಇಲ್ಲಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ತೊಡಗಿರುತ್ತಾರೆ.‌ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವವರೂ ಸೇವಂತಿಕೆ ಹೂವು, ಗುಲಾಬಿ, ಗಂಧದ ಕಡ್ಡಿ, ವಿಭೂತಿ, ಎಣ್ಣೆ ದೀಪಗಳನ್ನು ಮಾರುವವರೂ ಇರುತ್ತಾರೆ. ಈ ವ್ಯಾಪಾರಿ ಮಳಿಗೆಗಳು ಗೋರಿಯ ಸುತ್ತಲೂ ಆವರಿಸಿರುತ್ತವೆ.  ಒಂದೇ ಗ್ರಾಮಕ್ಕೆ ಸೇರಿದವರಾದ ನಿವಾಸಿಗಳು ಅಥವಾ ದೊಡ್ಡ ಕುಟುಂಬಗಳು ಮೆರವಣಿಗೆಯಲ್ಲಿ ಬಂದು, ಡೋಲು ಬಾರಿಸುತ್ತಾ ಗೋರಿಯ ಪ್ರದಕ್ಷಿಣೆ ಹಾಕುತ್ತಾರೆ. ಹೆಣ್ಣಮಕ್ಕಳು ಗೋರಿಯ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುವುದು ಸಾಮಾನ್ಯವಾಗಿ ಕಾಣಬಹುದಾದ ದೃಶ್ಯ.

ಗೋರಿಯ ಒಳಗೆ ಬೆಳಕು ಮಂದವಾಗಿದ್ದರೂ ಗೋಡೆಗಳ ಮೇಲಿರುವ ಚಿತ್ರ ವಿನ್ಯಾಸಗಳು, ಬಣ್ಣಬಣ್ಣದ ಭಿತ್ತಿಚಿತ್ರಗಳು, ಇಸ್ಲಾಮಿಕ್‌ ಶ್ಲೋಕಗಳು ಕಾಣುತ್ತವೆ. ವಾಸ್ತುಶಾಸ್ತ್ರ ಇತಿಹಾಸಕಾರ ಹೆಲೆನ್‌ ಫಿಲೋನ್‌ ಅವರ ಪ್ರಕಾರ ಈ ಇಸ್ಲಾಮಿಕ್‌ ಶ್ಲೋಕಗಳು ಅಹಮದ್‌ ಶಾಹ್‌ನಲ್ಲಿದ್ದ ಆಧ್ಯಾತ್ಮಿಕ ಚಿಂತನೆ ಮತ್ತು ಕಲಾತ್ಮಕತೆಯ ಸಂಕೇತವಾಗಿದೆ.  ಗುಮ್ಮಟದ ಕೆಳಗೆ ಇರುವ ಅಹಮದ್‌ ಶಾಹ್‌ನ ಸಮಾಧಿಗೆ ಸಾವಿರಾರು ಜನರು ಭಕ್ತಿಪೂರ್ವಕವಾಗಿ ಭೇಟಿ ನೀಡುತ್ತಾರೆ. ಸಾಲುಗಟ್ಟಿ ನಿಲ್ಲುವ ಈ ಭಕ್ತಾದಿಗಳ ಪೈಕಿ ಹಿಂದೂಗಳು, ಮುಸ್ಲಿಮರು ಇರುತ್ತಾರೆ. ಗೋರಿಯ ಒಳಗೆ ಪ್ರವೇಶ ನಿರಾಕರಿಸಲಾಗುವುದರಿಂದ ಮಹಿಳೆಯರು ಗೋರಿಯ ಮೂರೂ ದಿಕ್ಕುಗಳ ಬಾಗಿಲುಗಳ ಬಳಿಯೇ ತಮ್ಮ ನಮನಗಳನ್ನು ಸಲ್ಲಿಸುತ್ತಾರೆ. ಒಳಗೆ ಪ್ರವೇಶಿಸುವ ಪುರುಷರು ಸಮಾಧಿಯ ಮುಂದೆ ತೆಂಗಿನಕಾಯಿ ಒಡೆದ ನಂತರ ಪ್ರದಕ್ಷಿಣೆ ಹಾಕಿ ಮೌನವಾಗಿ ಅತ್ಯಂತ ಏಕಾಗ್ರತೆಯೊಂದಿಗೆ ಧ್ಯಾನಸ್ಥ ಸ್ಥಿತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕೆಲವರು ಹೂ ಹಾರಗಳನು ಅಥವಾ ಬಣ್ಣಬಣ್ಣದ ವಸ್ತ್ರಗಳನ್ನು ಸಮಾಧಿಗೆ ಅರ್ಪಿಸುತ್ತಾರೆ. ಅವುಗಳನ್ನು ಸಮಾಧಿಯ ಮೇಲೆ ಹರಡುವ ಖಲೀಲ್‌ ಶಾಹ್‌ ಹರಡುವ ಮುನ್ನ ಓಹ್‌ ಸುಲ್ತಾನನ ಸ್ನೇಹಿತನೇ ನಿನ್ನಲ್ಲಿ ಶ್ರದ್ಧಾಭಕ್ತಿಗಳು ಮೇಳೈಸಲಿ ಎಂದು ಉಚ್ಚರಿಸುತ್ತಾರೆ. ತದನಂತರ ಭಕ್ತಾದಿಗಳು ಹೊರ ಹೋಗಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಏಕೆಂದರೆ ಕಿರಿದಾದ ಏಕೈಕ ಬಾಗಿಲಿನಲ್ಲಿ ಒಳಗೆ ಬರಲು ಉತ್ಸುಕವಾಗಿರುವವರು ಸಾಲುಗಟ್ಟಿ ನಿಂತಿರುತ್ತಾರೆ.

ಮಧ್ಯಕಾಲೀನ ಯುಗದ ಈ ದೊರೆ ತನ್ನ ಆಡಳಿತಾವಧಿಯಲ್ಲಿ ಅತ್ಯಂತ ಶಿಸ್ತುಬದ್ಧವಾದ ರಾಜಕೀಯ ವ್ಯವಸ್ಥೆಯನ್ನು ಹೊಂದಿದ್ದನೆಂದು ಇತಿಹಾಸ ಹೇಳುವುದಾದರೂ, ಶತಮಾನಗಳ ನಂತರವೂ , ಎಲ್ಲ ಧರ್ಮೀಯರ ನಡುವೆಯೂ ಒಬ್ಬ ಸಂತನಂತೆ ಆರಾಧಿಸಲ್ಪಡುವುದು ಹೇಗೆ ಸಾಧ್ಯವಾಯಿತು ? ಅಹಮದ್‌ ಶಾಹ್‌ ಬಹಮನಿ ಸುಲ್ತಾನ ವಂಶದ ಒಂಬತ್ತನೆಯ ದೊರೆ. ದೆಹಲಿ ಸುಲ್ತಾನೇಟ್‌ ಭಾರತದ ಕೆಲವು ಪ್ರಾಂತ್ಯಗಳಿಂದ ಹಿಮ್ಮೆಟ್ಟಿದ ನಂತರ ಕ್ರಿಶ 1347ರಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಸ್ಥಾಪನೆಯಾದ ಸಂಸ್ಥಾನಗಳಲ್ಲಿ ಬಹಮನಿ ಸುಲ್ತಾನರ ಸಂತತಿಯೂ ಒಂದು. ಕೆಲ ಕಾಲ ದೌಲತಾಬಾದ್‌ ( ಇದನ್ನು ದೇವಗಿರಿ ಎಂದೂ ಕರೆಯಲಾಗುತ್ತದೆ) ರಾಜಧಾನಿಯಾಗಿ ಆಳುತ್ತಿದ್ದ ಈ ಸಂಸ್ಥಾನವು 1350ರಲ್ಲಿ ಗುಲ್ಬರ್ಗಕ್ಕೆ (ಈಗ ಕಲಬುರ್ಗಿ) ಬಂದು ನೆಲೆಸಿತ್ತು. ಗುಲ್ಬರ್ಗದಿಂದಲೇ ಎಂಟು ಬಹಮನಿ ಸುಲ್ತಾನರು ಆಳ್ವಿಕೆ ನಡೆಸಿದ್ದರು, 15ನೆಯ ಶತಮಾನದ ಆರಂಭದ ವೇಳೆಗೆ ಒಳಸಂಘರ್ಷ ಮತ್ತು ಕಲಹಗಳ ಆಗರವಾಗಿದ್ದ ಗುಲ್ಬರ್ಗ ಇವರ ಕೇಂದ್ರ ಸ್ಥಾನವಾಗಿ ಪರಿಣಮಿಸಿತ್ತು. ಫೆರೋಜ್‌ ಶಾಹ್‌ ( ಆಳ್ವಿಕೆಯ ಅವಧಿ ಕ್ರಿಶ 1397-1422) ನಂತರದಲ್ಲಿ ಅಹಮದ್‌ ಶಾಹ್‌ 1422ರಲ್ಲಿ ಪಟ್ಟಾಭಿ಼ಷಿಕ್ತನಾದಾಗ ಅವನಿಗೆ ಗುಲ್ಬರ್ಗದ ರಾಜಪ್ರಭುತ್ವದಲ್ಲಿದ್ದ ಒಳಗುದಿಗಳು ಮತ್ತು ಪಿತೂರಿಗಳ ಅರಿವಾಗಿ , ಕೆಲವೇ ವರ್ಷಗಳ ನಂತರ, ರಾಜಧಾನಿಯನ್ನು ಬೀದರ್‌ಗೆ ವರ್ಗಾಯಿಸಿದ್ದ.

ತನ್ನ ಪೂರ್ವಜರಂತೆಯೇ ಸೂಫಿ ಸಂತರನ್ನು ಪ್ರೋತ್ಸಾಹಿಸಿದ್ದ ಅಹಮದ್‌ ಶಾಹ್‌ ಬಹಮನಿ ಸುಲ್ತಾನರ ಸಾಮ್ರಾಜ್ಯ ವಿಸ್ತರಣೆಯಲ್ಲೂ ತೊಡಗಿದ್ದ. ಸೂಫಿ ಸಂತರೊಡನೆ ಅವಿನಾಭಾವ ಸಂಬಂಧ ಹೊಂದಿದ್ದ ಅಹಮದ್‌ ಶಾಹ್‌ ಆ ಕಾಲದ ಪ್ರಸಿದ್ಧ ಸೂಫಿ ಸಂತರಾದ ಕ್ವಾಜಾ ಬಂದೇ ನವಾಜ್‌ ಗೇಸುದರಾಜ್‌ ಅವರಿಗೆ ಭಕ್ತಿಪೂರ್ವಕವಾಗಿ ಉತ್ತೇಜನ, ಪ್ರೋತ್ಸಾಹವನ್ನು ನೀಡಿದ್ದ. ಇಂದಿಗೂ ಈ ಸೂಫಿ ಸಂತನ ಮಂದಿರವು ಕಲಬುರ್ಗಿಯಲ್ಲಿ ಸಾವಿರಾರು ಮುಸ್ಲಿಂ ಮತ್ತು ಹಿಂದೂಗಳ ಭಕ್ತಿ ಕೇಂದ್ರವಾಗಿದೆ. ಇರಾನ್‌ ಮೂಲದ ನೀಮತುಲ್ಲಾ ವಂಶಜರನ್ನು ಬೀದರ್‌ಗೆ ಬರುವಂತೆ ಆಹ್ವಾನಿಸಿದ ಅಹಮದ್‌ ಶಾಹ್‌ ಪರ್ಷಿಯನ್‌ ಕೊಲ್ಲಿಯ ಮೂಲಕ ಅವರನ್ನು ಕರೆತರುವ ವ್ಯವಸ್ಥೆಯನ್ನು ಮಾಡಿದ್ದ. ಅಷ್ಟೂರ್‌ನಲ್ಲಿರುವ ಗೋರಿಗಳ ಬಳಿಯೇ ಚೌಕಂಡಿ ಎಂದು ಕರೆಯಲಾಗುವ ನಾಲ್ಕುಮಹಡಿಗಳ ಕಟ್ಟಡವಿದ್ದು ಇದರಲ್ಲಿ, ಅಹಮದ್‌ ಶಾಹ್‌ನ ಆಧ್ಯಾತ್ಮಿಕ ಗುರುಗಳಾಗಿದ್ದ  ನೀಮತುಲ್ಲಾ ಸಂತರ ಗೋರಿಯನ್ನು ನಿರ್ಮಿಸಲಾಗಿದೆ. ಹೀಗಾಗಿ ಸಾಧು ಸಂತರೊಡನೆ ಅಹಮದ್‌ ಶಾಹ್‌ ಹೊಂದಿದ್ದ ಆಪ್ತ ಸಂಬಂಧಗಳು ಇತಿಹಾಸದಲ್ಲಿ ದಾಖಲಾಗಿದ್ದು ಅತನಿಗೆ ಒಂದು ಆಧ್ಯಾತ್ಮಿಕ ವ್ಯಕ್ತಿತ್ವವನ್ನೂ ಕಲ್ಪಿಸಲಾಗಿದೆ. ಅಹಮದ್‌ ಶಾಹ್‌ನ ಜೀವನದ ಅಧಿಕೃತ ಇತಿಹಾಸವನ್ನು 16ನೆಯ ಶತಮಾನದ ಅಂತ್ಯದಲ್ಲಿ ಆದಿಲ್‌ ಶಾಹ್‌ನ ಆಸ್ಥಾನದಲ್ಲಿದ್ದ ಇತಿಹಾಸಕಾರ ಫೆರಿಶ್ತಾ ರಚಿಸಿದ್ದು, ಈ ಕೃತಿಯಲ್ಲಿ ಆಹಮದ್‌ ಶಾಹ್‌ ಸ್ವತಃ ತಾನು ಭಗವಂತನ ಸ್ನೇಹಿತ ಅಥವಾ ವಲಿ ಎಂದು ಏಕೆ ಕರೆಯಲ್ಪಟ್ಟ ಎನ್ನುವುದು ದಾಖಲಾಗಿದೆ.

ಫೆರಿಶ್ತಾ ಹೇಳುವಂತೆ ಅಹಮದ್‌ ಶಾಹ್‌ ಗುಲ್ಬರ್ಗವನ್ನು ಆಳುತ್ತಿರುವಾಗ “ ಇಡೀ ಡೆಕ್ಕನ್‌ ಪ್ರಾಂತ್ಯದಲ್ಲಿ ಭೀಕರ ಕ್ಷಾಮ ಆವರಿಸಿತ್ತು. ನೀರಿಲ್ಲದೆ, ಮೇವಿಲ್ಲದೆ ಸಾವಿರಾರು ಜಾನುವಾರುಗಳು ಒಣಗಿದ ಭೂಮಿಯಲ್ಲಿ ಸಾವನ್ನಪ್ಪಿದ್ದವು. ಇದರ ಪರಿಣಾಮವಾಗಿ ದೊರೆಯು ತನ್ನ ಸೇನಾ ಸಿಬ್ಬಂದಿಯ ವೇತನವನ್ನು ಹೆಚ್ಚಿಸಿ, ಬಡ ಜನತೆಗೆ ದವಸ ಧಾನ್ಯ ಒದಗಿಸಲು ಸಾರ್ವಜನಿಕ ಮಳಿಗೆಗಳನ್ನು ತೆರೆದಿದ್ದ. ಅದರ ಮರು ವರ್ಷವೂ ಮಳೆಯಾಗದೆ ಇದ್ದುದರಿಂದ ಜನರಲ್ಲಿ ಆಕ್ರೋಶ ಹೆಚ್ಚಾಗತೊಡಗಿತ್ತು. ಆಡಳಿತ ವ್ಯವಸ್ಥೆಯು ಸಮರ್ಪಕವಾಗಿಲ್ಲ, ಅದೃಷ್ಟಹೀನವಾಗಿದೆ, ದೇವರು ದೊರೆಯ ಬಗ್ಗೆ ಅಸಮಾಧಾನ ಹೊಂದಿದ್ದಾನೆ ಎಂದೆಲ್ಲಾ ಜನರು ಮಾತನಾಡತೊಡಗಿದರು. ಇದರಿಂದ ತೀವ್ರ ಆಘಾತಕ್ಕೊಳಗಾದ ದೊರೆಯು ರಾಜ್ಯದಲ್ಲಿನ ಮಸೀದಿಗಳನ್ನು ದುರಸ್ತಿಗೊಳಿಸಿ ತನ್ನ ಪ್ರಜೆಗಳನ್ನು ರಕ್ಷಿಸುವಂತೆ ದೇವರ ಮೊರೆ ಹೋಗಿದ್ದ. ಆತನ ಪ್ರಾರ್ಥನೆಯನ್ನು ದೇವರು ಆಲಸಿದ್ದನೇನೋ ಎನ್ನುವಂತೆ ಕೆಲ ಕಾಲದ ನಂತರವೇ ಎಲ್ಲೆಡೆ ಉತ್ತಮ ವರ್ಷಧಾರೆ ಆಯಿತು. ಅಲ್ಲಿಯವರೆಗೂ ದೊರೆಯನ್ನು ನಿಂದಿಸುತ್ತಿದ್ದ, ದೂಷಿಸುತ್ತಿದ್ದ ಜನತೆ ಅವನನ್ನು ಹೊಗಳಲಾರಂಭಿಸಿದರು. ಅವನನ್ನು ಪವಾಡ ಪುರುಷ, ವಲಿ ಅಥವಾ ಸಂತ ಎಂದು ಕರೆಯಲಾರಂಭಿಸಿದರು. ಹರ್ಷಭರಿತನಾಗಿ ತನ್ನ ಪ್ರಜೆಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಅರಮನೆಗೆ ಹಿಂದಿರುಗಿದ ದೊರೆಯು ಪ್ರಜೆಗಳ ಪ್ರಶಂಸೆಗೊಳಗಾಗಿದ್ದ. ತಮ್ಮ ಒರಟು ವರ್ತನೆಗಾಗಿ ಜನರು ತಮ್ಮನ್ನು ತಾವೇ ಶಪಿಸಿಕೊಳ್ಳಲಾರಂಭಿಸಿದ್ದರು ” (ಹಿಸ್ಟರಿ ಆಫ್‌ ದ ರೈಸ್‌ ಆಫ್‌ ಮೊಹಮದನ್‌ ಪವರ್‌ ಇನ್‌ ಇಂಡಿಯಾ –ಲೇಖಕ ಮೊಹಮ್ಮದ್‌ ಕಾಸಿಮ್‌ ಫೆರಿಶ್ತಾ –ಅನುವಾದ ಜಾನ್‌ ಬ್ರಿಗ್ಸ್‌ ಸಂಪುಟ ೨).

ಈ ಕಾರಣಗಳಿಗಾಗಿಯೇ ಅಹಮದ್‌ ಶಾಹ್‌ನನ್ನು ಡೆಕ್ಕನ್‌ ಪ್ರಾಂತ್ಯದ ಹಲವು ಸಂತರಲ್ಲಿ ಒಬ್ಬನನ್ನಾಗಿ ಇತಿಹಾಸ ಗುರುತಿಸಿದೆ. ಅಹಮದ್‌ ಶಾಹ್‌ನನ್ನು ಏಕೆ ಆರಾಧಿಸಲಾಗುತ್ತದೆ ಎನ್ನುವುದಕ್ಕೆ ಸೂಕ್ತ ವಿವರಣೆ ಕೊಡುವ ಖಲೀಲ್‌ ಶಾಹ್‌ ಫೆರಿಶ್ತಾ ಹೇಳಿದ ಪ್ರಸಂಗವನ್ನೇ ಉಲ್ಲೇಖಿಸುತ್ತಾ ಬೀದರ್‌ನಲ್ಲಿ ನಡೆದ ಕೆಲವು ಬೆಳವಣಿಗೆಗಳನ್ನು ಕುರಿತು ಹೇಳುತ್ತಾರೆ. “ ಅಹಮದ್‌ ಶಾಹ್‌ 1426ರಲ್ಲಿ ಬೀದರ್‌ಗೆ ಬಂದು ತನ್ನ ರಾಜಧಾನಿಯನ್ನೂ ಅಲ್ಲಿಗೇ ವರ್ಗಾಯಿಸುತ್ತಾನೆ. ಅಲ್ಲಿ ಮೂರು ವರ್ಷಗಳ ಕಾಲ ಕ್ಷಾಮ ಬರಗಾಲ ಕಾಡುತ್ತದೆ.  ಈ ಅವಧಿಯಲ್ಲಿ, ಈ ಸಂತನು, ಮನುಷ್ಯರಲ್ಲೇ ಅತ್ಯಂತ ಪವಿತ್ರನಾದ ದೊರೆಯು, ತನ್ನೆಲ್ಲಾ ಸಂಪತ್ತನ್ನು ಎಲ್ಲ ಜಾತಿ, ಧರ್ಮಗಳ ಜನರಿಗೂ ಹಂಚುತ್ತಾನೆ. ತನ್ಮೂಲಕ ಜನರಿಗೆ ತಮ್ಮ ಕಷ್ಟಕಾಲದಿಂದ ವಿಮೋಚನೆ ಪಡೆಯಲು ನೆರವಾಗುತ್ತಾನೆ. ಒಂದು ದಿನ ತನ್ನೆಲ್ಲಾ ಕುಲೀನರನ್ನೂ, ಹಿಂದೂಗಳು ಮತ್ತು ಮುಸ್ಲಿಮರನ್ನು, ಒಂದೆಡೆ ಸೇರಿಸಿ ತಮ್ಮದೇ ಆದ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಆದೇಶಿಸುತ್ತಾನೆ. ನಮಾಜ್‌ ಮಾಡಲು ಅವನು ನೆಲಕ್ಕೆ ಬಾಗಿದಾಗ ಮಳೆ ಬರುತ್ತದೆ. ಅವನು ನಮಾಜ್‌ ಮುಗಿಸುತ್ತಲೇ ಅವನು ಅಸುನೀಗುತ್ತಾನೆ. ಆದರೆ ಅವನ ನಂತರ ಬೀದರ್‌ ಸಂಪದ್ಭರಿತವಾಗುತ್ತದೆ ”. ಈ ಪ್ರಸಂಗದಲ್ಲಿ ಕೆಲವು ತಪ್ಪಾದ ಮಾಹಿತಿಗಳನ್ನೂ ಗುರುತಿಸಬಹುದು. ಏಕೆಂದರೆ ಅಹಮದ್‌ ಶಾಹ್‌ 1436ರವರೆಗೂ ಜೀವಿಸುತ್ತಾನೆ. ಆದರೆ ಅಹಮದ್‌ ಶಾಹ್‌ ತನ್ನ ರಾಜಧಾನಿಯನ್ನು ವರ್ಗಾಯಿಸಿದ ನಂತರ ಬೀದರ್‌ ಸಂಪದ್ಭರಿತವಾಯಿತು ಎನ್ನುವುದು ಸತ್ಯ.

ಅಹಮದ್‌ ಶಾಹ್‌ನ ಗೋರಿ ಎದುರು ರಸ್ತೆಯಲ್ಲಿ ಕೊಂಚ ದೂರ ನಡೆದರೆ ಅಲ್ಲಿ ಸೋಮಶೇಖರ್‌ ಶಿವರಾಯನ ಸ್ಥಳ ಸಿಗುತ್ತದೆ. ಈ ಗೋರಿಗೆ ಬರುವ ಮುಸ್ಲಿಮೇತರ ಭಕ್ತಾದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಶಿವರಾಯ ಆದಿಲ್‌ ಶಾಹ್‌ ಕುರಿತ ಮತ್ತೊಂದು ಪ್ರಸಂಗವನ್ನೂ ಹಂಚಿಕೊಳ್ಳುತ್ತಾರೆ. ಸೂಫಿ ಮಂದಿರಗಳನ್ನು ನಿರ್ವಹಿಸುವ ಸೂಫಿ ಸಂತರ ವಾರಸುದಾರರು, ಸಜ್ಜಾದಾ ನಶೀನ್‌ಗಳು, ಧರಿಸುವಂತಹ ನಿಲುವಂಗಿಯನ್ನು ಧರಿಸಿರುವ ಶಿವರಾಯ ಅವರ ತ್ರಿಕೋನಾಕಾರದ ಟೊಪ್ಪಿಯ ಮೇಲೆ ಓಂ ಸಂಕೇತ ಇರುವುದರಿಂದ ಭಿನ್ನವಾಗಿ ಕಾಣುತ್ತಾರೆ. ಇವರ ತಂದೆ, ಶಿವರಾಯ ಸೋಮಣ್ಣ ಒಡೆಯರ್‌ ಪಕ್ಕದಲ್ಲೇ ಕುಳಿತಿರುತ್ತಾರೆ ಆದರೆ ಸರಳವಾದ ಉಡುಪು ಧರಿಸಿರುತ್ತಾರೆ. ಕಾರಣ ದೇವಾಲಯದ ಉಸ್ತುವಾರಿಯನ್ನು ತಮ್ಮ ಪುತ್ರನಿಗೆ ವಹಿಸಿಕೊಟ್ಟಿರುತ್ತಾರೆ. ಸೋಮಶೇಖರ್‌ ಶಿವರಾಯ ಕಲಬುರ್ಗಿ  ಜಿಲ್ಲೆಯ ಅಲಂದ್‌ ತಾಲ್ಲೂಕಿನ ತಮ್ಮ ಮಡಿಯಾಳ ಗ್ರಾಮದ ದೇವಾಲಯದಿಂದ 170 ಕಿಲೋಮೀಟರ್‌ ದೂರದಲ್ಲಿರುವ ಅಹಮದ್‌ ಶಾಹ್‌ನ ಗೋರಿಗೆ 500 ಭಕ್ತಾದಿಗಳೊಡನೆ ಪಾದಯಾತ್ರೆ ನಡೆಸುತ್ತಾರೆ. ಯಾವುದೋ ಒಂದು ನಿಗೂಢ ಸಂದೇಶಕ್ಕೆ ಅನುಗುಣವಾಗಿ ಈ ಪಾದಯಾತ್ರೆಯನ್ನು ರಾತ್ರಿ ವೇಳೆಯಲ್ಲೇ ಕೈಗೊಳ್ಳುತ್ತಾರೆ.

“ಉರುಸ್‌ ಪ್ರತಿ ವರ್ಷ ಹೋಳಿ ಹಬ್ಬದ ನಂತರ ಐದನೆಯ ದಿನ ಆರಂಭವಾಗುತ್ತದೆ. ನಾನು ಮಡಿಯಾಳ ದೇವಾಲಯದ ಉಸ್ತುವಾರಿ ವಹಿಸಿಕೊಂಡಾಗಿನಿಂದ, 2015ರಿಂದ ಪ್ರತಿ ವರ್ಷವೂ ಈ ಪಾದಯಾತ್ರೆಯನ್ನು ಕೈಗೊಳ್ಳುತ್ತಿದ್ದೇನೆ.  ಎಲ್ಲ ಜಾತಿಯ ಜನರು, ಪುರುಷರು, ಮಹಿಳೆಯರು, ಮುಸ್ಲಿಮರು ಇಲ್ಲಿಗೆ ಬರುತ್ತಾರೆ, ಇದು ಲಿಂಗಾಯತ ಕೂಡು ಒಕ್ಕಲಿಗ ಸಮುದಾಯಕ್ಕೆ ಬಹುಮುಖ್ಯವಾದ ಒಂದು ಆಚರಣೆಯೂ ಆಗಿದೆ ” ಎನ್ನುತ್ತಾರೆ ಶಿವಾಚಾರ್ಯ. ಈ ಸಂಪ್ರದಾಯದ ಪ್ರಾಚೀನತೆಯ ಬಗ್ಗೆ ಹೇಳುತ್ತಾ ಶಿವರಾಯ ಸೋಮಣ್ಣ “ ನಾನು ಇದನ್ನು 46 ವರ್ಷಗಳ ಕಾಲ ಮಾಡಿದ್ದೇನೆ. ನನ್ನ ಅಜ್ಜ ಮತ್ತು ತಂದೆ ಈ ಮೆರವಣಿಗೆಯ ನೇತೃತ್ವ ವಹಿಸುವುದನ್ನು ನೋಡಿದ್ದೇನೆ. ಅವರ ಅಜ್ಜನೂ ಹೀಗೆಯೇ ಭಕ್ತಾದಿಗಳೊಡನೆ ನಡೆಯುತ್ತಿದ್ದ ಎಂದು ನನ್ನ ತಂದೆ ಹೇಳುತ್ತಿದ್ದರು ” ಎಂದು ಹೇಳುತ್ತಾರೆ. ಕಲಬುರ್ಗಿಯಲ್ಲಿರುವ ಸಾಮಾಜಿಕ ಕಾರ್ಯಕರ್ತ ಮತ್ತು ಆಯುರ್ವೇದ ವೈದ್ಯ ಡಾ ರಾಜಶೇಖರ್‌ ಪಾಟಿಲ್‌ ಹೆಬ್ಳಿ, ಲಿಂಗಾಯತರ ಈ ಶಿಬಿರದಲ್ಲಿ ಪಾಲ್ಗೊಳ್ಳುವವರ ಪೈಕಿ ಒಬ್ಬರಾಗಿದ್ದು 2000ದಿಂದಲೂ ಪ್ರತಿ ವರ್ಷ ಈ ಜಾತ್ರೆಗೆ ಬರುವವರಲ್ಲಿ ಒಬ್ಬರಾಗಿದ್ದಾರೆ. ಇವರು ಇನ್ನೂ ಹೆಚ್ಚಿನ ವಿವರಗಳನ್ನು ಒದಗಿಸುತ್ತಾರೆ.

ಪಾಟಿಲ್‌ ಅವರ ಹೇಳುವಂತೆ, ಲಿಂಗಾಯತ ಕೂಡು ಒಕ್ಕಲಿಗರು ಅಲ್ಲಮ ಪ್ರಭುವಿನ ಅನುಯಾಯಿಗಳು. ಅಲ್ಲಮ ಪ್ರಭು, ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣನ ಅನುಯಾಯಿಗಳು/ಸಂಗಡಿಗರಾಗಿದ್ದ ಶರಣರಲ್ಲಿ ಪ್ರಮುಖರು. (ಎ ಕೆ ರಾಮಾನುಜನ್‌ ತಮ್ಮ ಕೃತಿ ಸ್ಪೀಕಿಂಗ್‌ ಶಿವ ಪುಸ್ತಕದಲ್ಲಿ ಅಲ್ಲಮ ಪ್ರಭು ಕುರಿತು ಸವಿವರವಾಗಿ ಚರ್ಚೆ ಮಾಡುತ್ತಾರೆ ಮತ್ತು ಇತರ ವಚನಕಾರರು ಅಲ್ಲಮ ಪ್ರಭುವನ್ನು ತಮ್ಮ ನಾಯಕ ಎಂದು ಭಾವಿಸುತ್ತಿದ್ದುದನ್ನು ದಾಖಲಿಸುತ್ತಾರೆ). ಪಾಟೀಲ್‌ ಹೇಳುವಂತೆ “ ಕಲ್ಯಾಣದ ಪತನದ ನಂತರ, ಶರಣರು ಎಲ್ಲೆಡೆ ಚದುರಿ ಹೋದಾಗ ಅವರು ಅಷ್ಟೂರಿನಿಂದಲೂ ಚದುರಿಹೋಗಿ ಬಸವಣ್ಣನ ಸಂದೇಶವನ್ನು ಪ್ರಚಾರ ಮಾಡಿದ್ದರು (12ನೆಯ ಶತಮಾನದಲ್ಲಿ). ಅಲ್ಲಮ ಪ್ರಭು ಅಷ್ಟೂರಿನಿಂದ  ಹೊರಟು ಶ್ರ‍್ರೀಶೈಲಕ್ಕೆ ತಮ್ಮ ಅಂತಿಮ ಪಯಣ ಬೆಳೆಸಿದ್ದರು. ಅಹಮದ್‌ ಶಾಹ್‌ ನನ್ನು ಆತನ ಸೋದರ ಫೆರೋಜ್‌ ಶಾಹ್‌ (15ನೆಯ ಶತಮಾನದಲ್ಲಿ) ಬೆಂಬತ್ತಿದಾಗ ಅವನು ಈ ಜಾಗಕ್ಕೆ ಬಂದು ಈ ಸ್ಥಳದಲ್ಲೇ ತನ್ನ ಆಧ್ಯಾತ್ಮಿಕ ಕೇಂದ್ರವನ್ನು ಸ್ಥಾಪಿಸುತ್ತಾನೆ. ಅಲ್ಲಿಯೇ ತನ್ನ ಶವವನ್ನು ಹೂಳಬೇಕು ಎಂದು ಕೋರಿಕೊಳ್ಳುತ್ತಾನೆ. ಈ ಕಾರಣಕ್ಕಾಗಿಯೇ ನಾವು ಅವನನ್ನು ಆರಾಧಿಸುತ್ತೇವೆ ” ಎನ್ನುತ್ತಾರೆ ಪಾಟೀಲ್.‌ (ಆಧುನಿಕ ಬಸವ ಕಲ್ಯಾಣ, ಕಲ್ಯಾಣ ರಾಜ್ಯವಾಗಿ 12ನೆಯ ಶತಮಾನದಲ್ಲಿ ಪತನಗೊಂಡ ನಂತರದಲ್ಲಿ ಲಿಂಗಾಯತ ಸಮುದಾಯದ ನಡುವೆ ಪವಿತ್ರವಾದ ಸ್ಮರಣಾರ್ಹ ಘಟನೆಯಾಗಿ ನೆನಪಿನಲ್ಲುಳಿದಿದೆ. ಏಕೆಂದರೆ ಈ ಘಟನೆಯ ನಂತರ ಶರಣರು ದಕ್ಷಿಣ ಭಾರತದೆಲ್ಲೆಡೆ ಚದುರಿಹೋಗುತ್ತಾರೆ- ರಿಲಿಜಿಯಸ್‌ ಫಾಲ್ಟ್‌ ಲೈನ್ಸ್‌ ಫ್ರಂಟ್‌ ಲೈನ್‌ ಮೇ 11 2018 ನೋಡಿ.)

ತಮ್ಮ ಅದ್ಭುತ ನಿರೂಪಣೆಯ ನಡುವೆಯೇ ಪಾಟೀಲರು ಅಹಮದ್‌ ಶಾಹ್‌ ಬಿಜಾಪುರದ ಆದಿಲ್‌ ಶಾಹಿಗಳಿಂದ ಎದುರಿಸಿದ ಅಪಾಯವನ್ನು ಕುರಿತೂ ಪ್ರಸ್ತಾಪಿಸಿದರು. ಆದರೆ ಅಹಮದ್‌ ಶಾಹ್‌ ಮೃತನಾದ 70 ವರ್ಷಗಳ ನಂತರವಷ್ಟೇ ಬಹಮನಿ ಸುಲ್ತಾನರ ಆಳ್ವಿಕೆಯ ಅವಸಾನ ಹೊಂದಿದ್ದು ಈ ಹಂತದಲ್ಲೇ ಡೆಕ್ಕನ್‌ ಸುಲ್ತಾನರ ನಡುವೆ ಉಗಮಿಸಿದ ಐವರು ಸುಲ್ತಾನ್‌ಗಳಲ್ಲಿ ಆದಿಲ್‌ ಶಾಹಿ ಸಹ ಒಬ್ಬನಾಗಿದ್ದ. ಈ ಚಾರಿತ್ರಿಕ ಅಂಶಗಳನ್ನು ಪರಿಗಣಿಸಿದರೆ ಪಾಟೀಲರು ಉಲ್ಲೇಖಿಸಿದ ಚಾರಿತ್ರಿಕ ಅಂಶ ವಿಶ್ವಾಸಾರ್ಹ ಎನಿಸುವುದಿಲ್ಲ. ಆದರೆ ಇತಿಹಾಸ ಮತ್ತು ಪುರಾಣವನ್ನು ಬಹಳ ಸುಂದರವಾಗಿ ಪೋಣಿಸುವ ಪರಂಪರೆಯೇ ಇರುವ ನಮ್ಮ ದೇಶದ ಚರಿತ್ರೆಯನ್ನು ಗಮನಿಸಿದಾಗ, ಹೇಗೆ ನಂಬಿಕೆ ಮತ್ತು ವಿಶ್ವಾಸಗಳು ಒಂದು ಪರಸ್ಪರ ಹಂಚಿಕೊಳ್ಳುವಂತಹ ಸಾಂಸ್ಕೃತಿಕ ಶ್ರದ್ಧೆಯನ್ನು, ವ್ಯತಿರಿಕ್ತ ಇತಿಹಾಸದ ಹೊರತಾಗಿಯೂ, ಮೂಡಿಸಬಹುದು ಎನ್ನುವುದನ್ನು ಪಾಟೀಲರು ನೀಡಿದ ಉಲ್ಲೇಖಗಳಿಂದ ಅರ್ಥಮಾಡಿಕೊಳ್ಳಲು ಸಾಧ್ಯ. ಸೋಮಶೇಖರ್‌ ಶಿವರಾಯ ಅವರ ಸುತ್ತಲೂ ನೆರೆದಿದ್ದ ಇತರರೂ ಸಹ ದನಿಗೂಡಿಸಿ, ಅವರಿಗೆ ಅಲ್ಲಮ ಪ್ರಭು ಮತ್ತು ಅಹಮದ್‌ ಶಾಹ್‌ ನಡುವೆ ಯಾವುದೇ ಅಂತರ ಕಾಣುವುದಿಲ್ಲ, ಇಬ್ಬರನ್ನೂ ಸಮಾನರಾಗಿ ಕಾಣುತ್ತೇವೆ ಎಂದು ಹೇಳಿದರು. ಅಹಮದ್‌ ಶಾಹ್‌ನ ಗೋರಿಯಲ್ಲಿ ಪೂಜೆ ಸಲ್ಲಿಸುವ ಲಿಂಗಾಯತ ಭಕ್ತಾದಿಗಳ ದೃಷ್ಟಿಯಲ್ಲಿ ತಾವು ಪಾಲ್ಗೊಳ್ಳುತ್ತಿರುವ ಜಾತ್ರೆಯು ಶ್ರೀ ಶ್ರೀ ಶ್ರೀ ಅಲ್ಲಮ ಪ್ರಭು ಅವರ ಜಾತ್ರೆ ಎಂಬ ಭಾವನೆಯೇ ಇರುತ್ತದೆ. ಇದು ಅಲ್ಲಿ ಮುದ್ರಿಸಲಾಗಿರುವ ಕರಪತ್ರಗಳಲ್ಲೂ ಕಂಡುಬರುತ್ತದೆ.

ಅಂದು ಅಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಲಿಂಗಾಯತರು ಮತ್ತು ಇತರ ಜಾತಿಗಳಾದ ದಲಿತರು ಮತ್ತು ಕುರುಬರನ್ನು ಗಮನಿಸಿದಾಗ , ಯಾವುದೋ ಒಂದು ರೀತಿಯಲ್ಲಿ ಪರೋಕ್ಷವಾಗಿಯಾದರೂ ಅಹಮದ್‌ ಶಾಹ್ ನನ್ನು ಲಿಂಗಾಯತ ಸಮುದಾಯದ, ಅದರಲ್ಲೂ ವಿಶೇಷವಾಗಿ ಲಿಂಗಾಯತ ಕೂಡು ಒಕ್ಕಲಿಗ ಸಮುದಾಯದ, ದೈವಾಂಶ ಸಂಭೂತರ ಸ್ಥಾನದಲ್ಲಿ ಸ್ಥಾಪಿಸಿರುವುದು ಕಂಡುಬರುತ್ತದೆ. ಹಾಗಾಗಿ ಒಂದು ಸಂಕೀರ್ಣ ರೀತಿಯಲ್ಲಿ ಮಧ್ಯಕಾಲೀನ ಯುಗದ ಒಬ್ಬ ಮುಸ್ಲಿಂ ದೊರೆ, ಕ್ರಿಶ 1436ರಿಂದಲೂ, ಶತಮಾನಗಳ ಕಾಲ,  ಇಲ್ಲಿನ ಸ್ಥಳೀಯ ಲಿಂಗಾಯತ ಸಮುದಾಯದ ಶ್ರದ್ಧಾಭಕ್ತಿಗೆ ಪಾತ್ರನಾಗಿ ಅವರ ಸಂಸ್ಕೃತಿಯ ಒಂದು ಭಾಗವಾಗಿರುವುದು ಕಂಡುಬರುತ್ತದೆ. ಇತರ ಸೂಫಿ ಸಂತರ ದರ್ಗಾಗಳಿಗಿಂತಲೂ ಭಿನ್ನವಾಗಿ ಇಲ್ಲಿ, ಸಂತರು ಮರಣಹೊಂದಿದ ದಿನವನ್ನು ಆಚರಿಸಲು ಒಂದು ದಿನದ ಉರುಸ್‌ ನಡೆಸದೆ, ಎರಡು ಪ್ರತ್ಯೇಕ ಉರುಸ್‌ಗಳನ್ನು ನಡೆಸಲಾಗುತ್ತದೆ. ಮೊದಲನೆಯದು ಇಸ್ಲಾಮಿಕ್‌ ಕ್ಯಾಲೆಂಡರ್‌ ಅನುಸಾರ ನಡೆಸಲಾಗುತ್ತದೆ. ( ಇದು ಈ ವರ್ಷದ ಮಾರ್ಚ್‌ 19ರಂದು ನಡೆದಿತ್ತು). ಎರಡನೆಯದು ಪ್ರತಿ ವರ್ಷ ಹೋಳಿ ಹಬ್ಬದ ಐದು ದಿನದ ನಂತರ ನಡೆಯುತ್ತದೆ.

ಓರ್ವ ಮುಸ್ಲಿಂ ದೊರೆಯನ್ನು ಲಿಂಗಾಯತರು ಆರಾಧಿಸುವುದು ಅನೇಕರಿಗೆ ಅಚ್ಚರಿದಾಯಕವಾಗಿ ಕಾಣಬಹುದು. ಹಲವಾರು ವಿದ್ವಾಂಸರ ಅಭಿಪ್ರಾಯದಲ್ಲಿ ಇದು ಮಧ್ಯಕಾಲೀನ ಯುಗದಲ್ಲಿ ಜನಪ್ರಿಯ ಶ್ರದ್ಧಾನಂಬಿಕೆಗಳ ಸಮ್ಮಿಳಿತವು ಸಾಧ್ಯವಾಗಿದ್ದುದರ ಸಂಕೇತವಾಗಿದ್ದು ಈ ಆಚರಣೆಗಳು ಅಂತಹ ಸಮನ್ವಯತೆಯ ಲಕ್ಷಣಗಳನ್ನೇ ಸೂಚಿಸುತ್ತವೆ. ಬಹುಭಾಷಿಕ ಹಾಗೂ ಬಹು ಜನಾಂಗೀಯ ಸಾಮ್ರಾಜ್ಯವೊಂದನ್ನು ಡೆಕ್ಕನ್‌ ಪ್ರಾಂತ್ಯದಲ್ಲಿ ಆಳಿದ ಬಹಮನಿ ದೊರೆಗಳ ಇತಿಹಾಸವನ್ನೂ ಇದು ಸಾರುತ್ತದೆ. ಬಹಮನಿ ದೊರೆಗಳು ಆಳಿದ ಪ್ರದೇಶಗಳು ಉತ್ತರ ಮತ್ತು ದಕ್ಷಿಣ ಭಾರತ ಸಂಧಿಸುವ ಭೂ ಪ್ರದೇಶದಲ್ಲಿ ವಿಸ್ತರಿಸಿದ್ದು ಡೆಕ್ಕನ್‌ ಪ್ರಸ್ಥಭೂಮಿಯನ್ನು ಹಾದು, ಅರೇಬಿಯನ್‌ ಸಮುದ್ರದಿಂದ ಬಂಗಾಲಕೊಲ್ಲಿಯವರೆಗೆ ವಿಸ್ತರಿಸುತ್ತಿತ್ತು. ಇಂದಿನ ಭಾರತದಲ್ಲಿ ಈ ಪ್ರದೇಶಗಳನ್ನು ಮಹಾರಾಷ್ಟ್ರ, ಉತ್ತರ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹರಡಿಕೊಂಡಿರುವುದನ್ನು ಕಾಣಬಹುದು. 15ನೆಯ ಶತಮಾನದ ಕೊನೆಯ ಅವಧಿಯಲ್ಲಿ ಬಹಮನಿ  ರಾಜಸಂಸ್ಥಾನದಲ್ಲಿ ತಲೆದೋರಿದ ಭಿನ್ನಾಭಿಪ್ರಾಯಗಳಿಂದ ಅವರಲ್ಲೇ ಸ್ಥಳೀಯ ಮತ್ತು ವಿದೇಶಿ ಗುಂಪುಗಳು ಹುಟ್ಟಿಕೊಂಡವು. ಈ ಹಂತದಲ್ಲೇ ಬಹಮನಿ ಸಂಸ್ಥಾನದ ಆಳ್ವಿಕೆಯೂ ಅವಸಾನ ಕಂಡಿತ್ತು ಮತ್ತು ನಂತರ ಸುಲ್ತಾನೇಟ್‌ಗಳು ಉಗಮಿಸಿದ್ದವು. ಬಿಜಾಪುರ, ಅಹಮದ್‌ನಗರ, ಬೀದರ್‌, ಬೇರಾರ್‌ ಮತ್ತು ಗೋಲ್ಕೊಂಡಾ ಸಂಸ್ಥಾನಗಳನ್ನು ಒಟ್ಟಾಗಿ ಡೆಕ್ಕನ್‌ ಸುಲ್ತಾನೇಟ್‌ ಎಂದು ಗುರುತಿಸಲಾಗಿದೆ. ಇವುಗಳ ಪೈಕಿ ಬಿಜಾಪುರ, ಗೋಲ್ಕೊಂಡ ಮತ್ತು ಅಹಮದ್‌ನಗರ ಸುಲ್ತಾನರು 17ನೆಯ ಶತಮಾನದವರೆಗೂ ಪ್ರಬಲವಾಗಿ ಮುಂದುವರೆದಿದ್ದವು, ನಂತರದಲ್ಲಿ ಮೊಘಲರು ಈ ಸುಲ್ತಾನೇಟ್‌ಗಳನ್ನು ಆಕ್ರಮಿಸಿದ್ದರು. ( ಬಹಮನಿ ರಿಮೈನ್ಸ್‌ , ಫ್ರಂಟ್‌ ಲೈನ್‌ ಪತ್ರಿಕೆ, ನವಂಬರ್‌ 9 2018).

ಡೆಕ್ಕನ್‌ ಸುಲ್ತಾನರು ಆಳ್ವಿಕೆಯಲ್ಲಿರುವವರೆಗೂ ಉಪಖಂಡದಲ್ಲಿ ವಿಸ್ತಾರವಾಗಿ ಚಾಚಿಕೊಂಡಿದ್ದ ಬಹು ಜನಾಂಗೀಯ ಸಮಾಜವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಷ್ಟೇ ಅಲ್ಲದೆ ಇಡೀ ಪ್ರದೇಶದಲ್ಲಿ ಸಮನ್ವಯದ ಸಂಸ್ಕೃತಿಯನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿದ್ದರು. ಈ ಸಮನ್ವಯ ಸಂಸ್ಕೃತಿಯೇ ಶತಮಾನಗಳ ಕಾಲ ಜೀವಂತಿಕೆಯಿಂದಿದೆ. ಇಸ್ಲಾಂ ಮತ್ತು ಹಿಂದೂ ಧರ್ಮಗಳೆರಡೂ ಈ ಶತಮಾನಗಳಲ್ಲಿ ಹಲವು ರೀತಿಯಲ್ಲಿ ಪರಸ್ಪರ ರೂಪಾಂತರಗೊಂಡಿದ್ದು ಅಷ್ಟೂರ್‌ ಜಾತ್ರೆಯಂತಹ ಸಮ್ಮಿಶ್ರ ಸಾಮುದಾಯಿಕ ಆಚರಣೆಗಳು ಇಂದಿನ ಸಾಂಸ್ಥಿಕ ಧರ್ಮಗಳ ಅಂಚಿನಲ್ಲಿ ತಮ್ಮ ಜಾಗವನ್ನು ಕಾಪಾಡಿಕೊಂಡುಬಂದಿವೆ. ಆದರೆ ಸ್ಥಳೀಯ ಜನರ ನಡುವೆ ಇದು ಅಷ್ಟೇ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿರುವುದೂ ವಾಸ್ತವ. ಈ ಪ್ರದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಅದ್ದೂರಿಯಿಂದ ಮುಹರ್ರಮ್‌ ಆಚರಿಸುವುದು ಇಂದಿಗೂ ವಾಡಿಕೆಯಾಗಿದ್ದು, ಇದರ ಮೂಲವನ್ನೂ ಡೆಕ್ಕನ್‌ ಸುಲ್ತಾನರ ಇತಿಹಾಸದಲ್ಲೇ ಗುರುತಿಸಬಹುದಾಗಿದೆ. ( ಫೆಸ್ಟಿವಲ್‌ ಆಫ್‌ ಹಾರ್ಮೊನಿ , ಫ್ರಂಟ್‌ ಲೈನ್‌ ಪತ್ರಿಕೆ ಅಕ್ಟೋಬರ್‌ 11 2019), ಬಹಮನಿ ದೊರೆಗಳೊಡನೆ ಮತ್ತು ಇತರ ಡೆಕ್ಕನ್‌ ದೊರೆಗಳೊಡನೆ  ನಿಕಟ, ಆಪ್ತ ಸಂಬಂಧ ಹೊಂದಿದ್ದ ಅನೇಕ ಸೂಫಿ ಸಂತರು, ಜನಸಾಮಾನ್ಯರ ನಡುವೆಯೂ ಅಷ್ಟೇ ಜನಪ್ರಿಯತೆಯನ್ನು ಹೊಂದಿದವರಾಗಿದ್ದು, ಸುಲ್ತಾನರ ಆಳ್ವಿಕೆಗೆ ನ್ಯಾಯಯುತ ಸಮ್ಮತಿಯನ್ನೂ ಸೂಚಿಸುವಂತಿದ್ದರು. ಹಾಗಾಗಿ, ದಕ್ಷಿಣ ಮಹಾರಾಷ್ಟ್ರ, ಉತ್ತರ ಕರ್ನಾಟಕ ಮತ್ತು ತೆಲಂಗಾಣ ರಾಜ್ಯದಲ್ಲಿ ಹರಡಿರುವ ಪ್ರದೇಶಗಳಲ್ಲಿನ ಮಧ್ಯಕಾಲೀನ ಯುಗದ ಎಲ್ಲ ಪ್ರಮುಖ ದರ್ಗಾಗಳೂ ( ಸೂಫಿ ಸಂತರನ್ನು ಸಮಾಧಿ ಮಾಡುವ ಸ್ಥಳಗಳು) ತಮ್ಮ ಅಸ್ತಿತ್ವವನ್ನು ಈ ಸುಲ್ತಾನರಿಗೇ ಆರೋಪಿಸುತ್ತವೆ.

ಈ ಸಂದರ್ಭದಲ್ಲಿ ಡೆಕ್ಕನ್‌ ಪ್ರಾಂತ್ಯದಲ್ಲಿ ಸೂಫಿಗಳು ವಹಿಸಿದ ಪಾತ್ರ ಮತ್ತು ಈ ಪ್ರದೇಶದಲ್ಲಿ ಒಂದು ಪರಸ್ಪರ ಸಮನ್ವಯದ ಹಂಚಿಕೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಅವರು ನಿರ್ವಹಿಸಿದ ಪಾತ್ರವನ್ನು ಅರ್ಥಮಾಡಿಕೊಳ್ಳಲು ಇತಿಹಾಸಕಾರ ಯೋಗಿಂದರ್‌ ಸಿಕಂದ್ ಅವರ ಮಾತುಗಳನ್ನು ಗಮನಿಸಬೇಕು. ಸಿಕಂಡ್‌ ಅವರು ಹೇಳುವಂತೆ  “ ಕರ್ನಾಟಕದಲ್ಲಿ ಇಸ್ಲಾಂ ತನ್ನ ಬಾಹುಗಳನ್ನು ಚಾಚಿರುವುದೇ ಮೂಲತಃ ಸೂಫಿಗಳ ಮುಖಾಂತರ, ಈ ಚಾರಿತ್ರಿಕ ಪ್ರಕ್ರಿಯೆಯನ್ನು ರಿಚರ್ಡ್‌ ಎಮ್‌ ಈಟನ್‌ ಅವರು ತಮ್ಮ ಸೂಫಿ ಅಧ್ಯಯನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ( ಸೂಫಿಸ್‌ ಆಫ್‌ ಬಿಜಾಪುರ 1300-1700 ಸೋಷಿಯಲ್‌ ರೋಲ್‌ ಆಫ್‌ ಸೂಫೀಸ್‌ ಇನ್‌ ಮೆಡಿವಲ್‌ ಇಂಡಿಯಾ – 1978).ಸ್ಥಳೀಯ ನುಡಿಗಟ್ಟುಗಳನ್ನು ಮತ್ತು ಅಲಂಕಾರಿಕ ಲಕ್ಷಣಗಳನ್ನು ಬಳಸಿಕೊಂಡು ಸೂಫಿಗಳು ಜನಸಾಮಾನ್ಯರಿಗೆ ಪ್ರಬಲವಾದ ಸಂದೇಶವನ್ನು ರವಾನಿಸುತ್ತಿದ್ದರು. ಈ ಪ್ರಕ್ರಿಯೆಯಲ್ಲೇ ಮತಾಂತರಗೊಂಡ ಸ್ಥಳೀಯರನ್ನು ಸ್ಥಳೀಯ ಪ್ರಭಾವಗಳಿಗೇ ಒಳಗಾದ ಇಸ್ಲಾಂ ಧರ್ಮವನ್ನು ಅನುಸರಿಸುವಂತೆ ಮಾಡಿದ್ದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಹಿಂದೂಗಳು ಇಸ್ಲಾಂ ಧರ್ಮದೆಡೆಗೆ ಆಕರ್ಷಿತರಾದರು. ಇದಕ್ಕೆ ಸೂಫಿ ಸಂತರ ವರ್ಚಸ್ಸು ಮತ್ತು ದೇವರೊಡನೆ ಸಂಪರ್ಕ ಸಾಧಿಸುವ ಮಧ್ಯವರ್ತಿಗಳಾಗಿ ಅವರಲ್ಲಿದೆ ಎಂದು ಭಾವಿಸಲಾಗಿದ್ದ ಅಪಾರ ಶಕ್ತಿಯೂ ಕಾರಣವಾಗಿತ್ತು. ಇದರ ಪರಿಣಾಮವಾಗಿ ಈ ಹಲವು ಸೂಫಿ ಸಂತರ ಸುತ್ತಲೂ ಹುಟ್ಟಿಕೊಂಡ ಅನೇಕ ಸಂಪ್ರದಾಯಗಳನ್ನು ಹಿಂದೂಗಳು ಮತ್ತು ಮುಸ್ಲಿಮರು ಸಮಾನವಾಗಿ ಅನುಸರಿಸಲಾರಂಭಿಸಿದರು. ಆದರೆ ಈ ಬೆಳವಣಿಗೆಯಿಂದ, ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ನೋಡುವುದರಲ್ಲಿದ್ದ ವ್ಯತ್ಯಾಸಗಳು, ಭಿನ್ನಮತಗಳೇನೂ ನಶಿಸಿಹೋಗಲಿಲ್ಲ. ಶತಮಾನಗಳ ಕಾಲ ಒಟ್ಟಾಗಿ ಬಾಳಿದ ಉತ್ತರಕರ್ನಾಟಕದ ಅನೇಕ ಹಿಂದೂಗಳು ಮತ್ತು ಮುಸ್ಲಿಮರು ಅನಿವಾರ್ಯವಾಗಿ ಬಹಳಮಟ್ಟಿಗೆ ಸಮಾನ ಸಾಂಸ್ಕೃತಿಕ ಜಗತ್ತನ್ನು ಹಂಚಿಕೊಳ್ಳಲಾರಂಭಿಸಿದ್ದರು  ” (‌ Shared Hindu Muslim Shrines in Karnataka, Challenges to Liminality inf lived islam in south Asia – Adoptatioooons, Accomodations and conflicts. ಶೇರ್ಡ್‌ ಹಿಂದೂ ಮುಸ್ಲಿಂ ಶ್ರೈನ್ಸ್‌ ಇನ್‌ ಕರ್ನಾಟಕ, ಚಾಲೆಂಜಸ್‌ ಟು ಲಿಮಿನಾಲಿಟಿ ಇನ್‌ ಲೀವ್ಡ್‌ ಇಸ್ಲಾಮ್‌ ಇನ್‌ ಸೌತ್‌ ಏಷಿಯಾ- ಅಡಾಪ್ಟೇಷನ್‌, ಅಕಾಮಡೇಷನ್‌ ಅಂಡ್‌ ಕಾನ್‌ಫ್ಲಿಕ್ಟ್‌ – ಸಂಪಾದಕರು ಇಮ್ತಿಯಾಜ್‌ ಅಹಮದ್‌ ಮತ್ತು ಹೆಲ್ಮಟ್‌ ರೀಫೆಲ್ಡ್).‌

ಮೂಲ : ವಿಖಾರ್ ಅಹಮದ್‌ ಸಯೀದ್‌ – ಫ್ರಂಟ್‌ ಲೈನ್‌

ಸಮಾಜಮುಖಿ ಮಾಸಪತ್ರಿಕೆ

ಅನುವಾದ : ನಾ ದಿವಾಕರ

Previous Post

ರಾಜಧಾನಿಯಲ್ಲಿ ಆಪರೇಷನ್ ಬುಲ್ಡೋಜರ್ 2.O ಆರಂಭ : ಆರಂಭದಲ್ಲೇ ಬಡವರ ಮನೆ ಮೇಲೆ ಪೌರುಷ!

Next Post

RAHUL GANDHI | ಮಳೆಯನ್ನೂ ಲೆಕ್ಕಿಸದೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ

Related Posts

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..
Top Story

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..

by ಪ್ರತಿಧ್ವನಿ
April 17, 2026
0

ಬೆಂಗಳೂರು : ಧಾರವಾಡದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನಿನ್ನೆಯಷ್ಟೇ ಶಾಸಕ ಸೇರಿದಂತೆ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

April 16, 2026
ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

April 16, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
Next Post
RAHUL GANDHI | ಮಳೆಯನ್ನೂ ಲೆಕ್ಕಿಸದೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ

RAHUL GANDHI | ಮಳೆಯನ್ನೂ ಲೆಕ್ಕಿಸದೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada