ಆಂಡ್ರೆ ರಸೆಲ್ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ 54 ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಪುಣೆಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 177 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಗೆ 123 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಂಡ್ರೆ ರಸೆಲ್ 28 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ ಅಜೇಯ 49 ರನ್ ಸಿಡಿಸಿದರೆ, ಬೌಲಿಂಗ್ ನಲ್ಲಿ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಹೈದರಾಬಾದ್ ತಂಡದ ಪರ ಅಭಿಷೇಕ್ ವರ್ಮಾ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 43 ರನ್ ಗಳಿಸಿದರೆ, ಏಡಿಯನ್ ಮರ್ಕರಂ 25 ಎಸೆತಗಳಲ್ಲಿ 3 ಸಿಕ್ಸರ್ ಒಳಗೊಂಡ 32 ರನ್ ಬಾರಿಸಿ ಹೋರಾಟ ನಡೆಸಿದರು. ಆದರೆ ಉಳಿದ ಬ್ಯಾಟ್ಸ್ ಮನ್ ಗಳು ಅಲ್ಪ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದರು.
ಈ ಗೆಲುವಿನೊಂದಿಗೆ ಕೆಕೆಆರ್ ಆಡಿದ 13 ಪಂದ್ಯಗಳಿಂದ 6 ಜಯ ಹಾಗೂ 7 ಸೋಲಿನೊಂದಿಗೆ 12 ಅಂಕ ಸಂಪಾದಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ 13 ಪಂದ್ಯಗಳಿಂದ 5 ಜಯ ಹಾಗೂ 7 ಸೋಲಿನೊಂದಿಗೆ 10 ಅಂಕ ಗಳಿಸಿದ್ದು, ಪ್ಲೇಆಫ್ ಹಾದಿ ದುರ್ಗಮಗೊಂಡಿದೆ.