ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಂಸಖಾಲಿಯಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ನಂತರ ಅಪ್ರಾಪ್ತ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ಸ್ಥಳೀಯ ಮುಖಂಡನ ಮಗ ಎಂದು ಬಾಲಕಿಯ ಕುಟುಂಬ ಹೇಳಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ನಾಲ್ಕು ದಿನಗಳ ನಂತರ ಅಪ್ರಾಪ್ತ ಬಾಲಕಿಯ ಪೋಷಕರು ಶನಿವಾರ ಹಂಸಖಾಲಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಹುಡುಗಿ ಸೋಮವಾರ ಮಧ್ಯಾಹ್ನ ಆರೋಪಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಅವರ ಮನೆಗೆ ಹೋಗಿದ್ದಳು, ಆದರೆ ಮನೆಗೆ ಮರಳುವಾಗ ಆಕೆ ತೀವ್ರ ಅಸ್ವಸ್ಥವಾಗಿದ್ದಳು, ಮನೆಗೆ ತಲುಪಿದ ಕೆಲವೇ ಘಳಿಗೆಯಲ್ಲಿ ಆಕೆ ಸಾವನ್ನಪ್ಪಿದ್ದಾಳೆ.
“ನಮ್ಮ ಮಗಳು ಸ್ಥಳೀಯ ಟಿಎಂಸಿ ನಾಯಕನ ಮಗನ ನಿವಾಸದಲ್ಲಿ ಪಾರ್ಟಿಯಿಂದ ಹಿಂತಿರುಗಿದ ನಂತರ ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದಳು ಮತ್ತು ತೀವ್ರವಾದ ಹೊಟ್ಟೆ ನೋವನ್ನು ಹೊಂದಿದ್ದಳು ಮತ್ತು ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಅವಳು ಸಾವನ್ನಪ್ಪಿದಳು.” ಎಂದು ಮೃತಳ ತಾಯಿ ಆರೋಪಿಸಿದ್ದಾರೆ.
” ಪಾರ್ಟಿಯಲ್ಲಿ ಹಾಜರಿದ್ದ ಜನರೊಂದಿಗೆ ಮಾತನಾಡಿದ ಬಳಿಕ, ಆರೋಪಿ ಮತ್ತು ಅವನ ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ನಮಗೆ ಖಚಿತವಾಗಿದೆ” ಎಂದು ಹುಡುಗಿಯ ತಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಕೆಯ ಮರಣ ಪ್ರಮಾಣ ಪತ್ರ ನೀಡುವ ಮುನ್ನವೇ ಜನರ ಗುಂಪೊಂದು ಅಪ್ರಾಪ್ತ ಬಾಲಕಿಯ ಶವವನ್ನು ಶವಸಂಸ್ಕಾರಕ್ಕೆ ಬಲವಂತವಾಗಿ ಕೊಂಡೊಯ್ದಿದೆ ಎಂದು ಅವರು ಆರೋಪಿಸಿದ್ದಾರೆ.
ಸದ್ಯ, 9 ನೇ ತರಗತಿಯ ಬಾಲಕಿಯ ಸಾವು ಬಂಗಾಳ ರಾಜಕಾರಣದಲ್ಲಿ ಹೊಸ ತಿರುವು ಪಡೆದಿದೆ. ಬಿಜೆಪಿಯು ಈ ಸಾವನ್ನು ಬಳಸಿ ಆಡಳಿತ ಪಕ್ಷದ ಮೇಲೆ ತೀವ್ರ ಟೀಕೆಗಳನ್ನು ಮಾಡುತ್ತಿದೆ. ಸರ್ಕಾರವು ಬಾಲಕಿಯ ಸಾವಿಗೆ ಸಂಬಂಧಪಟ್ಟ ಆರೋಪಿಗಳ ರಕ್ಷಣೆಯಲ್ಲಿ ತೊಡಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ.
ಈ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದು, ಬಾಲಕಿ ಸಾವಿಗೆ ಕಾರಣ ಏನು ಎಂದು ಪೊಲೀಸರಿಗೆ ಇನ್ನೂ ಅರ್ಥವಾಗುತ್ತಿಲ್ಲ. ನಾನು ಅವರನ್ನು ಕೇಳಿದೆ. ನೀವು ಇದನ್ನು ಅತ್ಯಾಚಾರ ಎಂದು ಕರೆಯುತ್ತೀರಾ ಅಥವಾ ಅವಳು ಗರ್ಭಿಣಿಯೇ? ಇದು ಪ್ರೇಮ ಪ್ರಕರಣವೇ? ನೀವು ಈ ಬಗ್ಗೆ ವಿಚಾರಿಸಿದ್ದೀರಾ? ಇದು ದುರದೃಷ್ಟಕರ ಘಟನೆಯಾಗಿದೆ. ಬಾಲಕಿ ಮತ್ತು ಆರೋಪಿಯ ನಡುವಿನ ಸಂಬಂಧ ಆಕೆಯ ಕುಟುಂಬ ಸದಸ್ಯರಿಗೆ ಮತ್ತು ಸ್ಥಳೀಯರಿಗೆ ತಿಳಿದಿತ್ತು ಎಂದು ಅವರು ಹೇಳಿದ್ದಾರೆ.
ಹುಡುಗಿಯ ಕುಟುಂಬದವರು ಮೃತದೇಹದ ಅಂತಿಮ ಸಂಸ್ಕಾರವನ್ನೂ ನಡೆಸಿದ್ದೀರಿ, ನಾನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಮಾತನಾಡುತ್ತಿದ್ದೇನೆ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆಯೇ ಅಥವಾ ಅವಳು ಗರ್ಭಿಣಿಯಾಗಿದ್ದಾಳೆಯೇ ಅಥವಾ ಸಾವಿಗೆ ಬೇರೆ ಯಾವುದೇ ಕಾರಣವಿದೆಯೇ ಎಂಬುದಕ್ಕೆ ಪುರಾವೆಯನ್ನು ಪೊಲೀಸರು ಎಲ್ಲಿಂದ ಪಡೆಯುತ್ತಾರೆ? ಯಾರೋ ಕಪಾಳಮೋಕ್ಷ ಮಾಡಿದ ನಂತರ ಅವಳು ಅಸ್ವಸ್ಥಳಾದಳೋ ತಿಳಿಯುವುದು ಹೇಗೆ ಎಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಈ ಹೇಳಿಕೆ ಸದ್ಯ ವಿವಾದವನ್ನು ಸೃಷ್ಟಿಸಿದೆ. ಪ್ರತಿಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಬ್ಯಾನರ್ಜಿ ವಿರುದ್ಧ ಛೀಮಾರಿ ಹಾಕಿದ್ದಾರೆ.