ಜಾಗತಿಕ ಮಟ್ಟದಲ್ಲಿ ಮತ್ತೆ ಕರೋನಾ ವೈರಸ್ ಹಾವಳಿ ಶುರುವಾಗುತ್ತಿದೆ. ಆದರೆ, ವೈರಸ್ನ ಮಾರಣಾಂತಿಕ ರೂಪಾಂತರವು ಹೊರಹೊಮ್ಮದ ಹೊರತು, ದೇಶವು ಮತ್ತೊಂದು ಅಲೆಗೆ ಸಾಕ್ಷಿಯಾಗುವ ಸಾಧ್ಯತೆಯಿಲ್ಲ ಎಂದು ಭಾರತೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2021ರ ಕೋವಿಡ್ನ ಎರಡನೇ ಅಲೆಯ ಸಂದರ್ಭದಲ್ಲಿ ದೇಶದ ಬಹುತೇಕ ಜನ ಸೋಂಕಿಕೆ ಒಳಗಾಗಿದ್ದರು. ಇದು ಅವರಿಗೆ ಹೆಚ್ಚಿನ ರೋಗ ನಿರೋಧಕಶಕ್ತಿ ಒದಗಿಸಿರಬಹುದು ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳುತ್ತಾರೆ. ಅಲ್ಲದೆ ವ್ಯಾಪಕವಾಗಿ ಮಾಡಲಾದ ವ್ಯಾಕ್ಸಿನೇಷನ್ ಸಹ ಇಲ್ಲಿ ರೋಗ ಹೆಚ್ಚಳವಾಗದಿರಲು ಕಾರಣವಾಗಿದೆ. ಇಲ್ಲಿನ ಜನಸಂಖ್ಯೆಯ ಶೇ. 80% ಕ್ಕಿಂತ ಹೆಚ್ಚು ಜನರು ಕೋವಿಡ್ -19 ಲಸಿಕೆಗಳ ಎರಡೂ ಡೋಸ್ಗಳನ್ನು ಪಡೆದಿದ್ದಾರೆ.
ಮಾರ್ಚ್ 18 ರಂದು, ಭಾರತವೂ ಸಹ 2,528 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಆದರೆ ಭಾರತದ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಇಳಿಮುಖವಾಗುತ್ತಿದ್ದರೆ, ಹಲವಾರು ಇತರ ದೇಶಗಳು ಪ್ರಕರಣಗಳ ಹೆಚ್ಚಳವನ್ನು ವರದಿ ಮಾಡುತ್ತಿವೆ. ಚೀನಾವು ಸೋಂಕಿನಲ್ಲಿ ದಾಖಲೆಯ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದು ಈಗ ಅಲ್ಲಿ ವದಿಯಾಗುತ್ತಿರುವ ಪ್ರಕರಣಗಳು ಡಿಸೆಂಬರ್ 2019 ರಲ್ಲಿ ವುಹಾನ್ ನಗರದಲ್ಲಿ ಸಾಂಕ್ರಾಮಿಕ ರೋಗವು ಮೊದಲ ಬಾರಿಗೆ ಭುಗಿಲೆದ್ದ ನಂತರದ ಅತಿ ಹೆಚ್ಚು ಪ್ರಕರಣಗಳಾಗಿವೆ.
ಎಎಫ್ಪಿ ಪ್ರಕಾರ, ಚೀನಾದ ಮೇನ್ಲ್ಯಾಂಡ್ನಲ್ಲಿ ಮಂಗಳವಾರ ಪ್ರಕರಣಗಳ ಸಂಖ್ಯೆ ಗರಿಷ್ಠ 5,280 ಕ್ಕೆ ಏರಿದೆ. 2020 ರ ಆರಂಭದಲ್ಲಿ ಚೀನಾವು ಪ್ರತಿದಿನ 3,000 ರಿಂದ 5,000 ಪ್ರಕರಣಗಳನ್ನು ದಾಖಲಿಸುತ್ತಿತ್ತು.
ಶೂನ್ಯ-ಕೋವಿಡ್ ನೀತಿಯನ್ನು ಅನುಸರಿಸುತ್ತಿರುವ ಚೀನಾ, ದೇಶದ ಅನೇಕ ಭಾಗಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಚೀನಾದಲ್ಲಿನ ಉಲ್ಬಣಗೊಂಡಿರುವ ರೋಗವು ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳೆಂದು ಗುರುತಿಸಲಾಗಿದೆ. ಓಮಿಕ್ರಾನ್ನ ಉಪ-ವಂಶಾವಳಿ, BA.2 ಅನ್ನು ಸ್ಟೆಲ್ತ್ ಓಮಿಕ್ರಾನ್ ಎಂದೂ ಕರೆಯಲಾಗುತ್ತಿದ್ದು ಇದು ಪ್ರಸ್ತುತ ಚೀನಾದಲ್ಲಿ ವೇಗವಾಗಿ ಹರಡುತ್ತಿದೆ. ಇತ್ತ ಜರ್ಮನಿಯಲ್ಲಿ ಸಾಂಕ್ರಾಮಿಕ ರೋಗವನ್ನು ಮೇಲ್ವಿಚಾರಣೆ ಮಾಡುತ್ತಿರುವ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್, ಮಾರ್ಚ್ 17 ರಂದು ದೇಶವು 2,94,931 ಹೊಸ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಹೇಳಿದೆ.
ಫಿನ್ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್, ನೆದರ್ಲ್ಯಾಂಡ್ಸ್, ಇಟಲಿ ಮತ್ತು ಯುನೈಟೆಡ್ ಕಿಂಗ್ಡಮ್ನಂತಹ ಇತರ ಯುರೋಪಿಯನ್ ರಾಷ್ಟ್ರಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಓಮಿಕ್ರಾನ್ BA.2 ನ ಉಪ-ವಂಶಾವಳಿಯು ಹರಡುತ್ತಿದೆ ಎಂದು ವರದಿ ಮಾಡಿದೆ. ‘ಅವರ್ ವರ್ಲ್ಡ್ ಇನ್ ಡೇಟಾ’ ಪ್ರಕಾರ, ಯುರೋಪ್ನ ಜನಸಂಖ್ಯೆಯ ಸುಮಾರು 65% ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದೆ. ಆದರೂ ಅಲ್ಲಿ ಒಮಿಕ್ರಾನ್ನ ರೂಪಾಂತರ ವೇಗವಾಗಿ ಹರಡುತ್ತಿದೆ.
ಸೋಂಕನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಕ್ಕೆ ಪ್ರಶಂಸೆ ಗಳಿಸಿದ ದಕ್ಷಿಣ ಕೊರಿಯಾ, ಮಾರ್ಚ್ 17 ರಂದು ಆರು ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ, ಇದು ಜನವರಿ 2020 ರಿಂದ ಅತಿ ಹೆಚ್ಚು ಪ್ರಕರಣಗಳಾಗಿವೆ. ದಕ್ಷಿಣ ಕೊರಿಯಾದ ಜನಸಂಖ್ಯೆಯ ಕನಿಷ್ಠ 87% ರಷ್ಟು ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ, ಮತ್ತು ಹಲವರಿಗೆ ಬೂಸ್ಟರ್ ಲಸಿಕೆಗಳನ್ನೂ ನೀಡಲಾಗಿದೆ.
ಈ ಬಗ್ಗೆ ಮಾರ್ಚ್ 17 ರಂದು ಮಾತಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಹಲವಾರು ವಾರಗಳ ಕುಸಿತದ ನಂತರ ಜಾಗತಿಕವಾಗಿ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿವೆ ಎಂದು ಹೇಳಿದರು. ಹೆಚ್ಚಿನ ವ್ಯಾಕ್ಸಿನೇಷನ್ ಮತ್ತು ಬೂಸ್ಟರ್ ಡೋಸ್ ದರಗಳನ್ನು ಹೊಂದಿರುವ ದೇಶಗಳಲ್ಲಿ ಪ್ರಕರಣಗಳ ಹೆಚ್ಚಳವು ಕಳವಳವನ್ನು ಹುಟ್ಟುಹಾಕಿದೆ.
ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗಣಿತ ಮತ್ತು ಅಂಕಿಅಂಶ ವಿಭಾಗದ ಅಧ್ಯಯನವೊಂದನ್ನು MedRxiv ಪ್ರಕಟಿಸಿದ್ದು ಭಾರತದಲ್ಲಿಯೂ, ಜೂನ್ ಅಂತ್ಯದಲ್ಲಿ ನಾಲ್ಕನೇ ಅಲೆಯು ಉಂಟಾಗಲಿದೆ ಎಂದು ಅಂದಾಜಿಎನ್ನುತ್ತಾರೆ. ‘ಸೂತ್ರ’ ಎಂಬ ಗಣಿತದ ಮಾದರಿಯನ್ನು ಆಧರಿಸಿದ ಸಂಶೋಧನೆಗಳು, ನಾಲ್ಕನೇ ತರಂಗದ ಸಂಭವನೀಯ ಘಟನೆಯಲ್ಲಿ ಆರೋಗ್ಯ ಮೂಲಸೌಕರ್ಯದ ಮೇಲೆ ಒತ್ತಡವಿರಲಾರದು ಎಂದಿದೆ. ಅಲ್ಲದೆ, ಭಾರತದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಇಳಿಮುಖವಾಗುತ್ತಿರುವ ಪ್ರವೃತ್ತಿ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.
ಭಾರತೀಯ ಜನಸಂಖ್ಯೆಯಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿ
ವೈರಾಲಜಿಸ್ಟ್ ಡಾ ಟಿ ಜಾಕೋಬ್ ಜಾನ್ ಅವರು ಈಗ ಜಗತ್ತಿನಲ್ಲಿ ದಾಖಲಾಗುತ್ತಿರುವ ಹೆಚ್ಚಿನ ಪ್ರಕರಣಗಳು ಒಮಿಕ್ರಾನ್ನ ರೂಪಾಂತರಿ ಎನ್ನುತ್ತಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುರುವಾರ ಹಂಚಿಕೊಂಡ ಮಾಹಿತಿಯ ಪ್ರಕಾರ, 42 ದಿನಗಳಲ್ಲಿ ಕಾಲದ ಮೂರನೇ ಅಲೆಯಲ್ಲಿ ಭಾರತದಲ್ಲಿ 77.42 ಲಕ್ಷ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಸಚಿವಾಲಯದ ಪ್ರಕಾರ ಫೆಬ್ರವರಿ 14 ರ ವೇಳೆಗೆ ಮೂರನೇ ತರಂಗ ಕೊನೆಗೊಂಡಿತು.
ಮೂರನೇ ಅಲೆಯ ಪ್ರಾರಂಭದಲ್ಲಿ, ಭಾರತದಲ್ಲಿ ಒಟ್ಟು ಜನಸಂಖ್ಯೆಯ ಸುಮಾರು 90.8% ರಷ್ಟು ಜನರು ಲಸಿಕೆಯ ಮೊದಲ ಡೋಸನ್ನು ಮತ್ತು 65.4% ಜನರು ಎರಡೂ ಡೋಸ್ಗಳನ್ನು ಸ್ವೀಕರಿಸಿದ್ದರು. ಮೂರನೇ ಅಲೆಯ ಸಮಯದಲ್ಲಿ, 27,118 ಸಾವುಗಳು ದಾಖಲಾಗಿವೆ. ಕಳೆದ ವರ್ಷ ಏಪ್ರಿಲ್ ಮತ್ತು ಮೇನಲ್ಲಿ ಎರಡನೇ ಅಲೆಯಲ್ಲಿ ಅಧಿಕೃತ ದಾಖಲೆಗಳ ಪ್ರಕಾರ 2.52 ಲಕ್ಷ ಸಾವುಗಳು ಸಂಭವಿಸಿದ್ದವು. ಎರಡನೇ ಅಲೆ ಪ್ರಾರಂಭವಾದಾಗ ಇಲ್ಲಿ ಕೇವಲ 10% ಜನ ಮಾತ್ರ ಮೊದಲ ಡೋಸ್ ಪಡೆದಿದ್ದರು.
“ನೈಸರ್ಗಿಕವಾಗಿ ಮತ್ತು ಲಸಿಕೆಯಿಂದ ಉತ್ಪತ್ತಿಯಾಗುವ ರೋಗನಿರೋಧಕ ಶಕ್ತಿಯಿಂದಾಗಿ ಅಭಿವೃದ್ಧಿಗೊಂಡ ರೋಗನಿರೋಧಕ ಶಕ್ತಿಯು ವೈರಸ್ ವಿರುದ್ಧ ಬಲವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಲಹರಿಯಾ ಹೇಳುತ್ತಾರೆ.
ಕಳೆದ ವರ್ಷ ಬೇಸಿಗೆಯಲ್ಲಿ ಭಾರತವು ಡೆಲ್ಟಾ ರೂಪಾಂತರದಲ್ಲಿ ಅನೇಕ ಕಷ್ಟ ನಷ್ಟ ಅನುಭವಿಸಿದ್ದು ಇಲ್ಲಿನ ಬಹುತೇಕರು ಸೋಂಕಿಗೆ ಒಳಗಾಗಿದ್ದರು. ಇದು ಈಗ ಸೋಂಕಿನ ವಿರುದ್ಧ ಹೋರಾಡಲು ನೆರವಾಗುತ್ತಿದೆ ಎಂದ ಅವರು “ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕವು ಮುಗಿದಿದೆ” ಎನ್ನುವ ಆಶಾವಾದ ವ್ಯಕ್ತಪಡಿಸುತ್ತಾರೆ.
ಚೀನಾವು ಭಾರತದಂತೆ ವ್ಯಾಪಕವಾಗಿ ಸೋಂಕಿಗೆ ಒಳಗಾಗಿರಲಿಲ್ಲ. ಆದ್ದರಿಂದ ಅಲ್ಲಿ ಇನ್ನೂ ಹೆಚ್ಚು ಸಂಖ್ಯೆಯ ಜನರು ಸೋಂಕಿಗೆ ಒಳಗಾಗಲಿದ್ದಾರೆ ಎನ್ನುವ ಲಹರಿಯವರ ಪ್ರಕಾರ ಚೀನಾ ತಯಾರಿಸಿದ ಕೊರೊನಾವ್ಯಾಕ್ ಮತ್ತು ಸಿನೊಫಾರ್ಮ್ ಗಳೆಂಬ ಎರಡೂ ವ್ಯಾಕ್ಸಿನ್ಗಳು ಎಲ್ಲಾ ಇತರ ಲಸಿಕೆಗಳಿಗೆ ಹೋಲಿಸಿದರೆ ಕಡಿಮೆ ಪರಿಣಾಮಕಾರಿತ್ವವನ್ನು ಹೊಂದಿವೆ. ಕೊರಿಯಾದಲ್ಲೂ ಇದೇ ಪರಿಸ್ಥಿತಿ ಇದ್ದು ಮೊದಲೆರಡು ಅಲೆಗಳಲ್ಲಿ ಹೆಚ್ಚಿನ ಜನ ಸೋಂಕಿಗೆ ಒಳಗಾಗದೇ ಇದ್ದುದರಿಂದ ಅಲ್ಲೂ ನೈಸರ್ಗಿಕ ರೋಗ ನಿರೋಧಕ ಶಕ್ತಿ ಬೆಳೆದಿಲ್ಲ.
ಅಪಾಯದಲ್ಲಿರುವ, ವಯಸ್ಸಾದ ನಾಗರಿಕರು ಸೋಂಕಿಗೆ ಬೇಗ ಒಳಗಾಗುತ್ತಾರೆ. ಈ ಬಗ್ಗೆ ಮಾತನಾಡಿರುವ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಮೈಕ್ರೋಬಯಾಲಜಿಸ್ಟ್ ಡಾ.ಗಗನ್ದೀಪ್ ಕಾಂಗ್, ಐರೋಪ್ಯ ದೇಶಗಳಲ್ಲಿ ವಯಸ್ಸಾದ ನಾಗರಿಕರು ಹೆಚ್ಚಿನ ಪಾಲನ್ನು ಹೊಂದಿದ್ದಾರೆ ಮತ್ತು ಆದ್ದರಿಂದ ಭಾರತಕ್ಕಿಂತ ಹೆಚ್ಚಿನ ಸೋಂಕುಗಳು ಕಂಡುಬರುತ್ತಿದೆ ಮತ್ತು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ ಪ್ರಕಾರ, ಸೋಂಕಿನಿಂದ ಚೇತರಿಸಿಕೊಂಡ ನಂತರ ಕೋವಿಡ್ -19 ಲಸಿಕೆಯ ಎರಡೂ ಡೋಸ್ಗಳನ್ನು ಪಡೆಯುವ ವ್ಯಕ್ತಿಯು ಎರಡು ಡೋಸ್ ಮತ್ತು ಬೂಸ್ಟರ್ ಶಾಟ್ ಪಡೆದ ವ್ಯಕ್ತಿಗೆ ಹೋಲಿಸಿದರೆ ಬಲವಾದ ರಕ್ಷಣೆಯನ್ನು ಹೊಂದಿರುತ್ತಾನೆ.
“ಜನಸಂಖ್ಯೆಯ ಹೆಚ್ಚಿನ ಭಾಗವು ವೈರಸ್ಗೆ ಒಡ್ಡಿಕೊಂಡಿರುವುದರಿಂದ ಮತ್ತು ಲಸಿಕೆಯನ್ನು ಪಡೆದಿರುವುದರಿಂದ, ಜನರು ಬಲವಾದ ರಕ್ಷಣೆಯನ್ನು ಹೊಂದಿದ್ದಾರೆಂದು ಭಾವಿಸಬಹುದು” ಎಂದು ಅವರು ಹೇಳಿದರು.ಡೆಲ್ಟಾಕ್ಕಿಂತ ಹೆಚ್ಚು ತೀವ್ರವಾದ ಮತ್ತು ಓಮಿಕ್ರಾನ್ಗಿಂತ ಹೆಚ್ಚು ಹರಡುವ ಹೊಸ ರೂಪಾಂತರವು ಹೊರಹೊಮ್ಮದ ಹೊರತು, ದೇಶದಲ್ಲಿ ಮತ್ತೊಂದು ಅಲೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದೂ ಕಾಂಗ್ ಹೇಳುತ್ತಾರೆ.
ಕರೋನಾ ಹೆಚ್ಚಳ ಹಿನ್ನಲೆ, ಕೇಂದ್ರದಿಂದ ರಾಜ್ಯಗಳಿಗೆ ಅಲರ್ಟ್
ಈ ಕುರಿತಾಗಿ ವಿವಿಧ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಪತ್ರದಲ್ಲಿ, ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಮತ್ತು COVID-19 ವಿರುದ್ಧ ಲಸಿಕೆ ಹಾಕಲು ಜನರನ್ನು ಪ್ರೇರೇಪಿಸಲು ಮಾದರಿಗಳ ಸಾಕಷ್ಟು ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಕೋರಿದ್ದಾರೆ.
ರಾಜ್ಯವು ಅಗತ್ಯವಾದ ಜಾಗೃತಿಯನ್ನು ಮೂಡಿಸಬೇಕು ಮತ್ತು ಮುಖವಾಡಗಳನ್ನು ಧರಿಸುವುದು, ಎಲ್ಲಾ ಸಾರ್ವಜನಿಕ ಪ್ರದೇಶಗಳು / ಸಭೆಗಳಲ್ಲಿ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಪರಿಣಾಮಕಾರಿ ಕೈ ಮತ್ತು ಉಸಿರಾಟದ ನೈರ್ಮಲ್ಯದ ಅಭ್ಯಾಸದಂತಹ COVID ಸೂಕ್ತ ನಡವಳಿಕೆಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅದು ಹೇಳಿದೆ.