ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದಾರೆ. ಕೃಷಿ ಕಾನೂನುಗಳನ್ನು ವಿರೋಧಿಸುವ ಬದಲು, ಬಿಜೆಪಿ ನೆತೃತ್ವದ ಸರ್ಕಾರವು ಅದನ್ನು ಜಾರಿಗೆ ತಂದಿರುವುದಕ್ಕೆ ಹೆಮ್ಮೆ ಪಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
“ದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ಏಕರೂಪಿ ಮಾರುಕಟ್ಟೆ ವ್ಯವಸ್ಥೆಯ ಅಗತ್ಯವಿದೆ ಎಂದು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದರು. ಈಗ ಈ ಕಾಯ್ದೆಗಳನ್ನು ವಿರೋಧಿಸುತ್ತಿರುವವರು, ಮೋದಿಯ ಚಿಂತನೆಗಳನ್ನು ಒಪ್ಪುದಿಲ್ಲವಾದರೆ, ಮನಮೋಹನ್ ಸಿಂಗ್ ಚಿಂತನೆಗಳನ್ನು ಒಪ್ಪಿಕೊಳ್ಳಲೇಬೇಕು,” ಎಂದು ಪ್ರಧಾನಿ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಕನಿಷ್ಟ ಬೆಂಬಲ ಬೆಲೆ ಖಂಡಿತವಾಗಿಯೂ ಮುಂದುವರೆಯುತ್ತದೆ. ದೇಶದ 80 ಕೋಟಿ ಜನರಿಗೆ ಪ್ರತೀ ತಿಂಗಳು ಪಡಿತರವನ್ನೂ ನೀಡಲಾಗುವುದು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಮಂಡಿಗಳನ್ನು ಅಭಿವೃದ್ದಿಪಡಿಸಲಾಗುವುದು,” ಎಂದಿದ್ದಾರೆ.
ರೈತರ ಪ್ರತಿಭಟನೆಯ ಕುರಿತು ಮಾತನಾಡಿರುವ ಪ್ರಧಾನಿ ಅವರು , ಈ ಸಮಸ್ಯೆಯನ್ನು ಶಾಂತಿಯಿಂದ ಬಗೆಹರಿಸಲು ರೈತರು ಮಾತುಕತೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ.